ಸಿದ್ಧಾಂತವಾದಿ ಮಾಣಿಕ್ ಪತನ: ಚುನಾವಣಾ ತಂತ್ರವನ್ನು ಬದಲಿಸುವರೇ ಸಮಾಜವಾದಿ ಸಿದ್ದರಾಮಯ್ಯ?

0
1678

ತ್ರಿಪುರದ ಮಾಣಿಕ್ ಸರ್ಕಾರ್ ಸರಕಾರದ ಪತನದಿಂದ ನಿಜಕ್ಕೂ ಅಲುಗಾಡಿರುವುದು ಕಾಂಗ್ರೆಸ್ ಪಕ್ಷ. ಎಡಪಕ್ಷಗಳಿಗಿಂತ ಗಂಭೀರವಾಗಿ ಈ ಪತನವನ್ನು ಕಾಂಗ್ರೆಸ್ ಪರಿಗಣಿಸಿದೆಯೆಂಬ ಸುದ್ದಿಯಿದೆ. ಎಡಪಕ್ಷದ ಮಾಣಿಕ್ ಸರ್ಕಾರ್ ಗೂ ಕಾಂಗ್ರೆಸ್ ನ ಸಿದ್ದರಾಮಯ್ಯರಿಗೂ ಹಲವು ವಿಷಯಗಳಲ್ಲಿ ಹೋಲಿಕೆಯಿದೆ. ಇಬ್ಬರೂ ಪ್ರಖರ ಸಿದ್ದಾಂತವಾದಿಗಳು. ಸ್ವಚ್ಛ ವ್ಯಕ್ತಿತ್ವ, ಪ್ರಾಮಾಣಿಕತೆ, ತತ್ವ ಬದ್ಧತೆಗಳಲ್ಲಿ ಇಬ್ಬರೂ ಒಂದೇ. ಆದರೆ, ಮಾಣಿಕ್ ರನ್ನು ಇವಾವುವೂ ಕೈ ಹಿಡಿಯಲಿಲ್ಲ. ಅಭಿವ್ರದ್ಧಿ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯರನ್ನು ಮಾಣಿಕ್ ಪತನವು ಹೊಸ ಚುನಾವಣಾ ತಂತ್ರಗಾರಿಕೆಯತ್ತ ಆಲೋಚಿಸುವಂತೆ ಮಾಡಿದೆ ಎನ್ನಲಾಗುತ್ತಿದೆ. ಆದರೂ ತ್ರಿಪುರಕ್ಕೂ ಕರ್ನಾಟಕಕ್ಕೂ ಭೌಗೋಳಿಕ, ಸಾಂಸ್ಕ್ರತಿಕ, ವೈಚಾರಿಕ ವ್ಯತ್ಯಾಸ ಇದೆಯಾದರೂ ಷಾ- ಮೋದಿ ಜೋಡಿಯು ಯಾವುದೇ ಪರಿಸ್ಥಿತಿಯನ್ನು ತನಗೆ ಅನುಕೂಲಕರ ಮಾಡುವ ಸಾಮರ್ಥ್ಯ ಹೊಂದಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ತಳಮಳಕ್ಕೆ ಕಾರಣವಾಗಿದೆ.

ಬಿಜೆಪಿಗೂ ಕಾಂಗ್ರೆಸ್- ಎಡಪಕ್ಷಗಳಿಗೂ ನಡುವೆ ಇರುವ ಮುಖ್ಯ ವ್ಯತ್ಯಾಸ ಏನೆಂದರೆ, ಬಿಜೆಪಿಗೆ ಖಚಿತ ನೀತಿ ಎಂಬುದೇ ಇಲ್ಲ. ಈಶಾನ್ಯ ಭಾರತದ ಚುನಾವಣಾ ಫಲಿತಾಂಶವು ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದ. ಭಾರತದಲ್ಲಿ ಗೋ ಮಾಂಸ ವಿರೋಧಿಯಾಗಿರುವ ಅದು ಈಶಾನ್ಯ ಭಾರತದಲ್ಲಿ ಗೋಮಾಂಸದ ಪರವಾಗುತ್ತದೆ. ಪ್ರತ್ಯೇಕತಾವಾದದ ವಿರುದ್ದ ಜೋರು ದನಿಯಲ್ಲಿ ಮಾತಾಡುತ್ತಲೇ ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮತ್ತು ತ್ರಿಪುರದಲ್ಲಿ ಪ್ರತ್ಯೇಕತಾವಾದದ ಪರವಿರುವ IPFT ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ. ಆದರೆ ಈ ಎಡಬಿಡಂಗಿತನಗಳ ಹೊರತೂ ಜನರು ಬಿಜೆಪಿಯನ್ನು ಆರಿಸುತ್ತಾರೆಂದರೆ, ಅದು ಚುನಾವಣಾ ತಂತ್ರದ ಗೆಲುವೆಂದೇ ಅಭಿಪ್ರಾಯಪಡಲಾಗುತ್ತದೆ. ಎಲ್ಲ ದ್ವಂದ್ವಗಳನ್ನೂ ಮೀರಿ ಜನರನ್ನು ಆಕರ್ಷಿಸುವ ಕಲೆಯೊಂದು ಅದಕ್ಕೆ ದಕ್ಕಿದೆ. ಆಡಳಿತ ಪರ ಇರುವ ಅಲೆಯನ್ನು ಆಡಳಿತ

ವಿರೋಧಿಯಾಗಿಸುವ ಸಾಮರ್ಥ್ಯ ಅದರ ಚುನಾವಣಾ ತಂತ್ಜ್ಞರಲ್ಲಿದೆ. ಆದ್ದರಿಂದ ಬರೇ ಅಭಿವ್ರದ್ದಿಯೊಂದೇ ಸಿದ್ದರಾಮಯ್ಯರ ಕೈ ಹಿಡಿಯಲಾರದು ಎಂಬ ಮಾತು ಪಕ್ಷದ ಒಳಗಡೆಯೇ ಕೇಳಿಬರತೊಡಗಿದೆ. ಖಚಿತ ನೀತಿಯಿಲ್ಲದ ಬಿಜೆಪಿಯನ್ನು ಬರೇ ಸಿದ್ದಾಂತಕ್ಕೆ ಅಂಟಿಕೊಂಡು ನಿಲ್ಲುವ ನೀತಿಯಿಂದ ಎದುರಿಸಲು ಸಾಧ್ಯವೇ ಅಥವಾ ಬೇರೆಯದೇ ಆದ ಪ್ರತಿನೀತಿ ಮೂಲಕ ಎದುರಿಸಬೇಕೇ ಎಂಬ ಪ್ರಶ್ನೆ ಕಾಂಗ್ರೆಸ್ ಗೆ ಎದುರಾಗಿದೆ. ಸಿದ್ಧಾಂತವಾದಿ ಮಾಣಿಕ್ ಸರ್ಕಾರ್ ಸಿದ್ಧಾಂತರಹಿತ ಅಮಿತ್ ಷಾರ ಮುಂದೆ ವಿಫಲರಾಗಿರುವುದು ಚುನಾವಣಾ ರಣತಂತ್ರದಲ್ಲಿ ಬದಲಾವಣೆ ತರಬೇಕಾದ ಒತ್ತಡವೊಂದಕ್ಕೆ ಕಾಂಗ್ರೆಸನ್ನು ಬಲವಂತಪಡಿಸಿದೆ.