ಹಾಗೆ ಥಳಿಸುವುದಕ್ಕಿಂತ ತ್ರಿವಳಿ ತಲಾಕ್ ಹೇಳಬಹುದಿತ್ತೇನೋ?

0
1374

ಆ ವೀಡಿಯೋವನ್ನು ನೀವು ಈಗಾಗಲೇ ನೋಡಿರುತ್ತೀರಿ. ವೃತ್ತಾಕಾರದಲ್ಲಿ ನಿಂತು ನೋಡುತ್ತಿರುವ ಒಂದು ದೊಡ್ಡ ಗುಂಪು. ಮಧ್ಯದಲ್ಲಿ ಓರ್ವ ಮಹಿಳೆ. ಆ ಇಡೀ ಗುಂಪಿನಲ್ಲಿರುವ ಏಕೈಕ ಮಹಿಳೆ ಆಕೆ. ಬಾಗಿರುವ ಮರದ ಗೆಲ್ಲಿಗೆ ಆಕೆಯ ಕೈಯನ್ನು ಬಿಗಿದು ಕಟ್ಟಲಾಗಿದೆ. ಆಕೆಯ ಪತಿ ಬೆಲ್ಟ್‍ನಿಂದ ಹೊಡೆಯುತ್ತಿದ್ದಾನೆ. ತನ್ನ ಬಲವನ್ನೆಲ್ಲ ಹಾಕಿ ಆತ ಹೊಡೆಯುವುದೂ ಪ್ರತಿ ಹೊಡೆತಕ್ಕೂ ಆಕೆ ಚೀರುವುದೂ ನಡೆದೇ ಇರುತ್ತದೆ. ಆ ದೃಶ್ಯ ಎಷ್ಟು ಕಟುಕ ತನದಿಂದ ಕೂಡಿದೆ ಎಂದರೆ, ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಆ ಕ್ರೌರ್ಯಕ್ಕೆ ನೆರೆದ ಗುಂಪಿನ ಮೌನ ಸಮ್ಮತಿ ಮತ್ತೆ ಮತ್ತೆ ಮನಸ್ಸನ್ನು ಕಾಡುತ್ತದೆ..

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಲವುಂಗಾ ಗ್ರಾಮದಲ್ಲಿ ಮಾರ್ಚ್ 10ರಂದು ನಡೆದ ಘಟನೆ ಇದು. ಪತಿ ಯನ್ನು ತ್ಯಜಿಸಿ ಪ್ರಿಯಕರನೊಂದಿಗೆ ಓಡಿ ಹೋದ ತಪ್ಪಿಗಾಗಿ ಕಟ್ಟೆ ಪಂಚಾಯತು ಆಕೆಗೆ ಈ ಶಿಕ್ಷೆ ವಿಧಿಸಿದೆ. ಅಚ್ಚರಿ ಏನೆಂದರೆ, ಮಾಧ್ಯಮ ಕ್ಷೇತ್ರ ಈ ಇಡೀ ಘಟನೆಗೆ ಯಾವ ಟ್ವಿಸ್ಟನ್ನೂ ಕೊಡದೇ ಮತ್ತು ಇದರ ಸುತ್ತ ಪ್ಯಾನೆಲ್ ಚರ್ಚೆಯನ್ನೂ ಏರ್ಪಡಿಸದೆ ಬರೇ ಸುದ್ದಿಯಾಗಿ ಬಿತ್ತರಿಸಿರುವುದು. ಒಂದೆರಡು ಚಾನೆಲ್‍ಗಳು ಪುಟ್ಟ ವರದಿಯನ್ನೂ ಮಾಡಿದುವು. ಇದು ಬಿಟ್ಟರೆ ಉಳಿದಂತೆ ಈ ಘಟನೆಯನ್ನು ಮಾಧ್ಯಮಗಳಂತೆಯೇ ರಾಜಕಾರಣಿಗಳೂ ಸಾಮಾನ್ಯವಾಗಿ ಕಂಡರು. ಒಂದು ವೇಳೆ, ಆ ಮಹಿಳೆಗೆ ಪತಿಯಿಂದ ಥಳಿಸುವುದರ ಬದಲು ಇಶ್ರತ್ ಜಹಾನ್‍ಳಿಗೆ ಆಕೆಯ ಪತಿ ನೀಡಿದಂತೆ ತ್ರಿವಳಿ ತಲಾಕ್ ನೀಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನಿಸಿತು. ತ್ರಿವಳಿ ತಲಾಕನ್ನು ಪ್ರಶ್ನಿಸಿ ಕೋರ್ಟಿಗೆ ಹೋದವರಲ್ಲಿ ಇಶ್ರತ್ ಜಹಾನ್ ಕೂಡ ಒಬ್ಬರು. ಸುಪ್ರೀಮ್ ಕೋರ್ಟು ತೀಪು ನೀಡಿದ ಬಳಿಕ ಆಕೆ ಬಿಜೆಪಿ ಸೇರಿದರು. ಇಶ್ರತ್ ಜಹಾನ್‍ಳ ಮೇಲಿದ್ದ ಆರೋಪವೂ ವೀಡಿಯೋದಲ್ಲಿ ಥಳಿತಕ್ಕೊಳಗಾದ ಮಹಿಳೆಯ ಮೇಲಿದ್ದ ಆರೋಪವೂ ಒಂದೇ ಆಗಿತ್ತು. ಇಶ್ರತ್ ಜಹಾನ್‍ಳ ಪತಿ ಮಾಧ್ಯಮಗಳ ಮುಂದೆ ಅದನ್ನು ಬಹಿರಂಗವಾಗಿಯೇ ಹೇಳಿದ್ದರು.

ಒಂದಕ್ಕಿಂತ ಹೆಚ್ಚು ಬಾರಿ ತನ್ನನ್ನು ತ್ಯಜಿಸಿ ಪ್ರಿಯಕರನೊಂದಿಗೆ ಆಕೆ ತೆರಳಿರುವುದನ್ನು ಆತ ಹೇಳಿದ್ದ. ಇಷ್ಟಿದ್ದೂ, ಸಾರ್ವಜನಿಕರೆದುರು ಮರಕ್ಕೆ ಕಟ್ಟಿಹಾಕಿ ಥಳಿಸುವುದು ಸಾಮಾನ್ಯವೂ ವಿಚ್ಛೇದನ ನೀಡುವುದು ಅಸಾಮಾನ್ಯವೂ ಆಗಿ ಗುರುತಿಸಿಕೊಳ್ಳುತ್ತದಲ್ಲ, ಏನಿದರ ಮರ್ಮ? ವೀಡಿಯೋದ ಮಹಿಳೆ ಪತಿಯನ್ನು ತ್ಯಜಿಸಿ ಹೋಗಿರುವುದು ಓರ್ವ ಪುರುಷ ನೊಂದಿಗೆ. ಆದ್ದರಿಂದ ಆಕೆಯಂತೆಯೇ ಆತನೂ ತಪ್ಪಿತಸ್ಥನಾಗ ಬೇಕಾದುದು ಸಹಜ ನ್ಯಾಯ. ಆದರೆ ಆತ ಆ ವೀಡಿಯೋದಲ್ಲಿ ಎಲ್ಲೂ ಇಲ್ಲ. ಆತನಿಗೆ ಥಳಿಸಲಾದ ವೀಡಿಯೋ ಈವರೆಗೂ ಬಂದಿಲ್ಲ. ಮಾತ್ರವಲ್ಲ, ವೀಡಿಯೋದ ಮಹಿಳೆಗೆ ಥಳಿಸುವ ಶಿಕ್ಷೆ ನೀಡಿದ ಕಟ್ಟೆ ಪಂಚಾಯತ್ ಆ ಪ್ರಿಯಕರನ ಕುರಿತು ಏನನ್ನಾದರೂ ಹೇಳಿರುವುದು ಈವರೆಗೂ ಬಹಿರಂಗವಾಗಿಲ್ಲ. ಒಪ್ಪೋಣ. ಒಂದೇ ಏಟಿಗೆ ತಲಾಕ್ ತಲಾಕ್ ತಲಾಕ್ ಎಂದು ಹೇಳುವುದು ತಪ್ಪು. ಅದು ಪ್ರಕೃತಿ ವಿರೋಧಿ ಮಾತ್ರವಲ್ಲ, ಇಸ್ಲಾಮ್ ಧರ್ಮವೂ ಒಪ್ಪದ ಪದ್ಧತಿ. ಆದರೆ ಇದು ಏನು? ಸಾರ್ವಜನಿಕರೆದುರು ಓರ್ವ ಮಹಿಳೆಯನ್ನು ಥಳಿಸುವುದು ಯಾಕೆ ಅನಾಗರಿಕ ಅನ್ನಿಸಿಕೊಳ್ಳುವುದಿಲ್ಲ ಅಥವಾ ಪ್ರೈಮ್ ಟೈಮ್ ಚರ್ಚೆಯಾಗಿ ಯಾಕೆ ಪರಿಗಣಿತವಾಗುವುದಿಲ್ಲ? ಇಂಥ ಕಟ್ಟೆ ಪಂಚಾಯತುಗಳನ್ನೇ ನಿಷೇಧಿಸುವಂತೆ ಯಾಕೆ ರಾಜಕಾರಣಿಗಳು ಆಗ್ರಹಿಸುವುದಿಲ್ಲ? ತಲಾಕನ್ನು ನಿಷೇಧಿಸಬೇಕೆಂದು ದಿನಕ್ಕೊಬ್ಬರಂತೆ ಆಗ್ರಹಿಸುತ್ತಿದ್ದ ಕೇಂದ್ರ ಮಂತ್ರಿಗಳಲ್ಲಿ ಒಬ್ಬರಿಗೂ ಕಟ್ಟೆ ಪಂಚಾಯತು ನಾಗರಿಕ ಸಮಾಜಕ್ಕೆ ಕಳಂಕ ಎಂದೂ ಯಾಕೆ ಅನಿಸಿಲ್ಲ? ಮಹಿಳೆ ಶೋಷಣೆಗೊಳಗಾಗಬಾರದು ಅನ್ನುವುದೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ ಕಟ್ಟೆ ಪಂಚಾಯತ್ ನಿಷೇಧವೂ ಈ ಉದ್ದೇಶಗಳಲ್ಲಿ ಸೇರಿಕೊಳ್ಳಬೇಕಲ್ಲವೇ? ಹಾಗಂತ, ಇದು ಬಿಡಿ ಪ್ರಕರಣವಲ್ಲ. ತ್ರಿವಳಿ ತಲಾಕನ್ನು ಪ್ರಶ್ನಿಸಿ ಕೋರ್ಟಿಗೆ ಹೋದ ಅದೇ ಉತ್ತರ ಭಾರತದಲ್ಲಿ ಇಂಥ ಅಸಂಖ್ಯ ಪ್ರಕರಣಗಳು ನಡೆಯುತ್ತಲೇ ಇವೆ ಮತ್ತು ಮಾಧ್ಯಮಗಳಲ್ಲಿ ವರದಿ ಯಾಗುತ್ತಲೂ ಇವೆ. ಇಷ್ಟಿದ್ದೂ, ಈ ಅಸಮತೋಲನ ಏಕೆ?

ಸಾಮಾನ್ಯವಾಗಿ, ಪುರುಷ ಮತ್ತು ಮಹಿಳೆ ಸಮಾನ ಅಪ ರಾಧ ಎಸಗಿದ್ದರೂ ಮಹಿಳೆ ಗಂಭೀರ ಶಿಕ್ಷೆ ಒಳಗಾಗುವುದು ಮತ್ತು ಪುರುಷ ತಪ್ಪಿಸಿಕೊಳ್ಳುವುದು ನಡೆಯುತ್ತಲೇ ಇದೆ. ಇತ್ತೀ ಚಿನ ದಶಕಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಕಾರ್ಯ ಕ್ರಮಗಳೂ ನಡೆಯುತ್ತಿವೆ. ಆಫ್ರಿಕನ್ ಮೂಲದ ಅಮೇರಿಕನ್ ಮಹಿಳೆ ತರಾನಾ ಬುರ್ಕೆ ಎಂಬವರು 2006ರಲ್ಲಿMe too ಎಂಬ ಚಳವಳಿಯನ್ನು ಆರಂಭಿಸಿದರು. ಸಾಮಾಜಿಕ ಕಾರ್ಯಕರ್ತೆ ಯಾಗಿರುವ ಆಕೆಯಲ್ಲಿ ಮಹಿಳಾ ದೌರ್ಜನ್ಯದ ಕುರಿತಂತೆ ಸಾಕಷ್ಟು ಅನುಭವಗಳಿದ್ದುವು. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯವನ್ನು ಈ ಚಳವಳಿಯ ಮೂಲಕ ತೆರೆದಿಡಬೇಕು ಮತ್ತು ಆ ಬಗ್ಗೆ ಸಾಮಾಜಿಕ ಜಾಗೃತಿ ನಡೆಯಬೇಕು ಎಂಬುದು ಅವರ ಬಯಕೆಯಾಗಿತ್ತು. ಇದಾಗಿ, ಒಂದು ದಶಕದ ಬಳಿಕ 2017ರಲ್ಲಿ ಈ ಚಳವಳಿಯು ಜಾಗತಿಕ ಪ್ರಚಾರ ಪಡೆಯಿತು. ಹಾಲಿವುಡ್ ನಟಿ ಅಲಿಸ್ಸಾ ಮಿಲಾನೋ #Metoo ಎಂಬ ಹೆಸರಲ್ಲಿ ಟ್ವಿಟರ್ ಚಳವಳಿ ಆರಂಭಿಸಿದರು. ಹಾಲಿವುಡ್‍ನ ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕನ ಮೇಲೆಯೇ ಸುಮಾರು ಎರಡು ಡಝನ್ ನಟಿ ಯರು ಆರೋಪ ಹೊರಿಸಿದರು. ಜೆನೆತ್ ಪಾಲ್ಟೊ, ಆ್ಯಶ್ಲೆ ಜುಡ್, ಜೆನಿಫರ್ ಲಾರೆನ್ಸ್, ಉಮಾ ತುಮಾನ್ ಸಹಿತ ಪ್ರಸಿದ್ಧ ನಟಿ ಯರು #Metoo ಚಳವಳಿಯ ಮೂಲಕ ತಮ್ಮ ಮೇಲಾದ ದೌರ್ಜನ್ಯವನ್ನು ತೆರೆದಿಟ್ಟರು. #Metoo ವಿನಿಂದ ಪ್ರೇರಿತಗೊಂಡABC News ಮತ್ತು The Washington Post ಪತ್ರಿಕೆಗಳು ಜನಾಭಿಪ್ರಾಯ ಸಂಗ್ರಹಿಸಿದುವು. ಆ ಜನಾಭಿಪ್ರಾಯದ ಫಲಿತಾಂಶ ಎಷ್ಟು ಆಘಾತಕಾರಿಯಾಗಿತ್ತೆಂದರೆ, 54% ಅಮೇರಿಕನ್ ಮಹಿಳೆಯರು ತಾವು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವುದನ್ನು ಒಪ್ಪಿಕೊಂಡರು. ತರಾನಾ ಬುರ್ಕೆಯವರ ಒeಣoo ಚಳವಳಿಯು ಮಿಲಿಯಾಂತರ ಮಂದಿಯನ್ನು ಆಕರ್ಷಿಸಿತಲ್ಲದೆ 2017ರಲ್ಲಿ ದಿ ಟೈಮ್ ಪತ್ರಿಕೆಯು ‘2017ರ ವರ್ಷದ ವ್ಯಕ್ತಿ’ ಎಂದು ಅವರನ್ನು ಗುರುತಿಸಿ ಗೌರವಿಸಿತು.

ಅಂದಹಾಗೆ,
ಈ ವಿಷಯವನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಎರಡು ಕಾರಣಗಳಿವೆ.
1. ಡೈಸಿ ಇರಾನಿ ಎಂಬ ಹಿಂದಿ ಸಿನಿಮಾ ನಟಿ ಕಳೆದವಾರ ತನ್ನ ಬಗ್ಗೆ ಹೇಳಿಕೊಂಡದ್ದು. 6ರ ಹರೆಯದಲ್ಲೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದು, ಚಿತ್ರರಂಗದ ವ್ಯಕ್ತಿಯಿಂದಲೇ ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಮತ್ತು ಯಾರೊಂದಿಗೂ ಹೇಳಲಾಗದಂಥ ಅನಿ ವಾರ್ಯ ಸ್ಥಿತಿಯೊಂದು ತನ್ನ ಸುತ್ತ ನಿರ್ಮಾಣವಾದದ್ದನ್ನು ಅವರು ಹೇಳಿಕೊಂಡಿದ್ದರು.
2. ದಕ್ಷಿಣದ ಖ್ಯಾತ ನಟ ಪ್ರಕಾಶ್ ರೈಯವರು ಚಿತ್ರರಂಗ ದೊಳಗಿನ ಕೊಳಕನ್ನು ಕಳೆದವಾರ ಅಂಕಣವೊಂದರಲ್ಲಿ ತೆರೆದಿಟ್ಟಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನ ತೀರಾ ಮುಗ್ಧೆಯಾಗಿದ್ದ ಹೆಣ್ಣೊಬ್ಬಳನ್ನು ಚಿತ್ರರಂಗದ ಸಭ್ಯರು ಹೇಗೆ ವಿಧವಿಧವಾಗಿ ಬಳಸಿಕೊಂಡರು ಎಂಬುದನ್ನು ಅದರಲ್ಲಿ ವಿವರಿಸಿದ್ದರು.

ಇಂಥ ಪ್ರಕರಣಗಳು ನಾಗರಿಕ ಸಮಾಜಕ್ಕೆ ಹೊಸತೇನೂ ಅಲ್ಲ. ಆದರೆ ತೀರಾ ತಳಮಟ್ಟದಲ್ಲಿನ ಕಟ್ಟೆ ಪಂಚಾಯತುಗಳು ಹೆಣ್ಣನ್ನು ಹಿಡಿದು ಥಳಿಸುವಾಗ ತೀರಾ ಮೇಲ್ಮಟ್ಟದ ಪ್ರಕರಣಗಳು ಸೆಲೆಬ್ರಿಟಿ ಅಫೇರ್‍ಗಳಾಗಿ ಜನಪ್ರಿಯಗೊಳ್ಳುತ್ತವೆ. ಹೆಣ್ಣು ಅತ್ಯಂತ ದೌರ್ಜನ್ಯಕ್ಕೆ ಒಳಗಾಗುವ ಕ್ಷೇತ್ರ ಯಾವುದೆಂದರೆ ಅತ್ಯಂತ ಶಿಕ್ಷಿತರು ಮತ್ತು ಸುಸಂಸ್ಕøತರು ಎಂದು ಕರೆಸಿಕೊಳ್ಳುವವರಿರುವ ಚಿತ್ರರಂಗ, ಐಟಿ-ಬಿಟಿಯಂಥ ಸಂಸ್ಥೆಗಳಲ್ಲಿ ಎಂಬುದನ್ನು ದಂಥ Me too ಚಳವಳಿಯ ಫಲಿತಾಂಶಗಳು ಎತ್ತಿ ಹೇಳುತ್ತವೆ. ಮಹಿಳೆ ಅತ್ಯಂತ ಸುರಕ್ಷಿತವಾಗಿರಬೇಕಾದ ಚಿತ್ರರಂಗ ದಲ್ಲಂತೂ ಅಸುರಕ್ಷಿತತೆಯ ವಾತಾವರಣ ಬಹಳವೇ ಇದೆ ಎಂದು ಕೇರಳದ ಚಿತ್ರನಟಿಯರ ತಂಡ ತಿಂಗಳುಗಳ ಹಿಂದೆ ಕೇರಳ ಮುಖ್ಯಮಂತ್ರಿ ಯವರನ್ನು ಭೇಟಿ ಮಾಡಿ ರಕ್ಷಣೆ ಕೋರಿದ ಬೆಳವಣಿಗೆಯೇ ಸಾಕ್ಷಿ. ಒಂದೆಡೆ, ಹೆಣ್ಣಿಗೆ ಈ ಲೋಕವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾನೂನುಗಳು ರಚನೆಯಾಗುವಾಗ ಇನ್ನೊಂದೆಡೆ, ಆ ಕಾನೂನುಗಳನ್ನೇ ವಿಡಂಬನೆಗೊಳ ಪಡಿಸುವ ಬೆಳವಣಿಗೆಗಳು ಹೀಗೆ ಬೆಳಕಿಗೆ ಬರುತ್ತಿರುತ್ತವೆ. ತ್ರಿವಳಿ ತಲಾಕ್ ಮಹಿಳಾ ವಿರೋಧಿಯೇ ಆಗಿರಬಹುದು ಮತ್ತು ಹೆಣ್ಣನ್ನು ಶೋಷಿಸುವುದಕ್ಕಾಗಿ ಅದನ್ನು ಬಳಸಿಕೊಂಡ ಪುರುಷರ ಸಂಖ್ಯೆ ಸಾಕಷ್ಟು ಇರಬಹುದು.

ಆದರೆ ಈ ಶೋಷಣೆಯಿಂದ ಯಾವ ಕ್ಷೇತ್ರ ಮುಕ್ತವಾಗಿದೆ? ತಲಾಕ್‍ನ ಬಗ್ಗೆ ಮಾಧ್ಯಮ ಜಗತ್ತು ತೋರಿದ ಅಪಾರ ಆಸಕ್ತಿಯನ್ನು ಇತರ ಕ್ಷೇತ್ರಗಳ ಶೋಷಣೆಯ ವಿಚಾರದಲ್ಲಿ ಯಾಕೆ ತೋರಿಸುತ್ತಿಲ್ಲ?
ಹೆಣ್ಣನ್ನು ಶೋಷಣೆ ಮುಕ್ತಗೊಳಿಸುವುದಕ್ಕೆ ಕಾನೂನುಗಳು ಒಂದು ಹಂತದ ವರೆಗೆ ಔಷಧವಾಗಬಹುದೇ ಹೊರತು ಕಾನೂನೇ ಎಲ್ಲವೂ ಅಲ್ಲ. ಕಾನೂನಿಗೆ ಮಿತಿಯಿದೆ. ಸಂವಿಧಾನವನ್ನು ರಚಿಸಿದ್ದು ಮನುಷ್ಯರೇ ಹೊರತು ಅತೀಂದ್ರೀಯ ಶಕ್ತಿಯಲ್ಲ. ಓರ್ವ ಮನುಷ್ಯನನ್ನು ಮೀರಿಸುವ ಬುದ್ಧಿವಂತಿಕೆ ಇನ್ನೊಬ್ಬನಲ್ಲಿರುತ್ತದೆ. ಆತನನ್ನು ಮೀರಿಸುವ ಸೂಪರ್ ಬುದ್ಧಿವಂತ ಇನ್ನೊಬ್ಬನಿರುತ್ತಾನೆ. ಆತ ಚಾಲ್ತಿಯಲ್ಲಿರುವ ಕಾನೂನಿಗೆ ತೂತು ಕೊರೆಯಬಲ್ಲ. ಕಾನೂನಿನ ಕಣ್ಣಿಗೆ ನಾಜೂಕಾಗಿ ಬಟ್ಟೆ ಕಟ್ಟಿ ವಂಚಿಸಬಲ್ಲ. ಆದ್ದರಿಂದ ಕಾನೂನಿನ ಹೊರತಾದ ಆಂತರಿಕ ಜಾಗೃತಿಯೊಂದು ಮಾನವ ಸಮೂಹದಲ್ಲಿ ಮೂಡಬೇಕು. ಮನಸ್ಸನ್ನು ತಾಕಬಲ್ಲ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಹೆಣ್ಣನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸುವುದು ಅಲ್ಲಿ ಸೇರಿರುವ ಗುಂಪಿಗೆ ಸರಿ ಅನ್ನಿಸುವಾಗ ಅದನ್ನು ವೀಡಿಯೋದ ಮೂಲಕ ವೀಕ್ಷಿಸಿದ ಈ ನಾಗರಿಕ ಜಗತ್ತಿಗೆ ತಪ್ಪಾಗಿ ಕಾಣಿಸುತ್ತದೆ. ತ್ರಿವಳಿ ತಲಾಕನ್ನು ಸರಿ ಅಂತ ನಂಬಿಕೊಂಡವರು ತೀರಾ ತೀರಾ ಸಣ್ಣ ಪ್ರಮಾಣದಲ್ಲಾದರೂ ಇರುವಂತೆಯೇ ನಾಗರಿಕ ಜಗತ್ತಿನ ಬಹುದೊಡ್ಡ ಗುಂಪು ಅದನ್ನು ತಪ್ಪೆಂದು ಪರಿಗಣಿಸುತ್ತದೆ. ತಲಾಕ್ ಮತ್ತು ಥಳಿತ- ಈ ಎರಡರಲ್ಲೂ ಅತಿರೇಕ ಮತ್ತು ಸಹಜವಲ್ಲದ ಪ್ರಕ್ರಿಯೆಗಳಿವೆ. ಹಾಗೆಯೇ ಇಲ್ಲಿ ಉಲ್ಲೇಖಗೊಳ್ಳದ ಈ ಬಗೆಯ ಅನೇಕಾರು ಬೆಳವಣಿಗೆಗಳು ಸಾಮಾಜಿಕವಾಗಿ ನಡೆಯುತ್ತಲೂ ಇವೆ.

ಇಂಥ ಸಂದರ್ಭದಲ್ಲಿ ನಾಗರಿಕ ಸಮಾಜದ ಕರ್ತವ್ಯ ಏನೆಂದರೆ, ಪ್ರತಿಕ್ರಿಯಿಸುವ ರೀತಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳು ವುದು. ಅನ್ಯಾಯವನ್ನು ಅನ್ಯಾಯ ಎಂದು ಸಾರು ವಾಗ ಗಂಟಲ ಧ್ವನಿಯಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳುವುದು. ಇದು ಅಸಾಧ್ಯ ಎಂದಲ್ಲ. ಆದರೆ ಇದಕ್ಕೆ ಪ್ರಾಮಾಣಿಕ ಮನಸ್ಸಿನ ಅಗತ್ಯವಿದೆ. ತ್ರಿವಳಿ ತಲಾಕ್‍ನಿಂದ ಶೋಷಿತಳಾದ ಹೆಣ್ಣನ್ನು ಉಲ್ಲೇ ಖಿಸಿ ಗಂಟೆಗಟ್ಟಲೆ ಚರ್ಚೆ ಮತ್ತು ಭಾಷಣ ಮಾಡುವವರಿಗೆ ವೀಡಿಯೋದ ಮಹಿಳೆಯ ಕುರಿತಂತೆಯೂ ಅದೇ ಮಟ್ಟದ ಕಾಳಜಿಯೊಂದನ್ನು ಪ್ರದರ್ಶಿಸಬೇಕಾದ ಹೊಣೆಗಾರಿಕೆ ಇರುತ್ತದೆ. ಎರಡರಲ್ಲೂ ಹೆಣ್ಣೇ ಶೋಷಿತಳು ಮತ್ತು ಎರಡರ ಹಿಂದೆಯೂ ಪುರುಷನೇ ಇದ್ದಾನೆ. ವಿಪರ್ಯಾಸ ಅಂದರೆ,
ತ್ರಿವಳಿ ತಲಾಕನ್ನು ಶೋಷಕ ಅಂದವರು ಕಟ್ಟೆ ಪಂಚಾಯತ್ ಬಗ್ಗೆ ಗಾಢ ಮೌನದಲ್ಲಿದ್ದಾರೆ..