ಹುಬ್ಬಳ್ಳಿ ಕಿಮ್ಸ್‌: ಬದುಕಿದ್ದವನನ್ನು 7 ಗಂಟೆಗಳ ಕಾಲ ಶವಾಗಾರದಲ್ಲಿಟ್ಟರೇ?

0
1191

ವರದಿ: ದಾವೂದ್ ಶೇಖ್

ಹುಬ್ಬಳ್ಳಿ: ಬದುಕಿದ್ದ ಯುವಕನನ್ನೇ ಶವಾಗಾರದಲ್ಲಿಟ್ಟ ಆರೋಪ ಕಿಮ್ಸ್‌‌ ವೈದ್ಯರ ವಿರುದ್ಧ ಕೇಳಿಬಂದಿದೆ.

ಹುಬ್ಬಳ್ಳಿಯ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ (23) ಕಾರು ಅಪಘಾತದಲ್ಲಿ ರವಿವಾರ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಪ್ರವೀಣ್‌ ರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಪ್ರವೀಣ ಸಾವನ್ನಪ್ಪಿದ್ದಾರೆ ಎಂದು ಸತತ 7 ಗಂಟೆಗಳ ಕಾಲ ಬದುಕಿದ್ದಾಗಲೇ ಶವಾಗಾರದಲ್ಲಿ ಇಟ್ಟಿದ್ದರು ಎಂಬುದು ಸಂಬಂಧಿಕರ ಆರೋಪವಾಗಿದೆ. 

ರವಿವಾರ ಸಂಜೆ 7 ಗಂಟೆ ಸುಮಾರಿಗೆ ಕಾರ್ ಅಪಘಾತದಲ್ಲಿ ಪ್ರವೀಣ ಗಾಯಗೊಂಡಿದ್ದರು. ಆಗ ಪ್ರವೀಣ್ ಸಂಬಂಧಿಗಳು ರಾತ್ರಿ 8 ಗಂಟೆಗೆ ಕಿಮ್ಸ್‌ಗೆ ದಾಖಲಿಸಿದ್ದರು. ಆದ್ರೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಶವಾಗಾರಕ್ಕೆ ಸಾಗಿಸಿದ್ದರಂತೆ. ಸೇಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಪ್ರವೀಣ್ ಬದುಕಿರುವುದು ಗೊತ್ತಾಯಿತು. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆಗ ಖಾಸಗಿ ಆಸ್ಪತ್ರೆಯ ವೈದ್ಯರು 20 ನಿಮಿಷಗಳ ಹಿಂದೆ ಪ್ರವೀಣ್‌ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದರು ಎನ್ನುವುದು ಸಂಬಂಧಿಕರ ಹೇಳಿಕೆಯಾಗಿದೆ.

ಇದರಿಂದ ಆಕ್ರೋಶಗೊಂಡ ಯುವಕನ ಸಂಬಂಧಿಗಳು ಮತ್ತು ಸ್ನೇಹಿತರು ಕಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.