ಹೃದಯ ಕದ್ದ ಶ್ರೀದೇವಿಯ ಭಾರತದಲ್ಲಿ ಮಧು

0
2651

    ಎರಡು ಸಾವುಗಳು ಕಳೆದವಾರ ರಾಷ್ಟ್ರೀಯ ಗಮನವನ್ನು ಸೆಳೆದುವು. ಒಂದು- ಸಿನಿಪ್ರೇಮಿಗಳ ಹೃದಯವನ್ನು ಕದ್ದ ನಟಿ ಶ್ರೀದೇವಿಯದ್ದಾದರೆ, ಇನ್ನೊಂದು- ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಒಂದಿಷ್ಟು ಅಕ್ಕಿಯನ್ನು ಕದ್ದ ಮಧು ಎಂಬ ಆದಿವಾಸಿಯದ್ದು. ಒಬ್ಬರ ಸಾವು ಹೃದಯಾಘಾತದಿಂದಾದರೆ (ಸ್ಪಷ್ಟತೆ ಇಲ್ಲ) ಇನ್ನೊಬ್ಬರ ಸಾವು ಹೃದಯ ವಿದ್ರಾವಕ ಕ್ರೌರ್ಯದ ಮೂಲಕವಾಯಿತು. ಶ್ರೀದೇವಿ ಬಾಲ್ಯದಲ್ಲೇ ಚೆಲುವೆ. 4 ವರ್ಷವಿರುವಾಗಲೇ ಅವರು ಸಿನಿಮಾ ಪ್ರವೇಶಿಸಿದರು. ಚೆಲುವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡರು.  ಅವರ ಕಣ್ಣು, ಮೂಗು, ತುಟಿ, ಕೇಶ ರಾಶಿ, ದೈಹಿಕ ಆಕಾರ, ಪ್ರತಿಭೆ ಎಲ್ಲವೂ ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. ದಕ್ಷಿಣ ಭಾರತದ ಹೆಣ್ಣೊಬ್ಬಳು ಹಿಂದಿ ಚಿತ್ರರಂಗದಲ್ಲಿ ಮೇಲುಗೈ ಪಡೆದದ್ದು ಹೇಗೆ ಎಂಬ ಬಗ್ಗೆ ಅನೇಕ ಬರಹಗಳು ಪ್ರಕಟವಾಗಿವೆ. ಸಾವಿಗಿಂತ ಮೊದಲೂ ಮತ್ತು ಸಾವಿನ ಬಳಿಕವೂ ದೊಡ್ಡ ಮಟ್ಟದಲ್ಲಿ ಚರ್ಚೆಗೀಡಾದ ನಟಿ ಶ್ರೀದೇವಿ. ಇವರಿಗೆ ಹೋಲಿಸಿದರೆ ಮಧು ಏನೇನೂ ಅಲ್ಲ. ಶ್ರೀದೇವಿಯ ಫೋಟೋದ ಹತ್ತಿರ ಮಧುವಿನ ಫೋಟೋವನ್ನು ಇಟ್ಟರೆ ಯಾವ ಪ್ರತಿಕ್ರಿಯೆ ಲಭ್ಯವಾದೀತು ಎಂಬುದು ಎಲ್ಲರಿಗೂ ಗೊತ್ತು. ಚಿತ್ರರಂಗದ ತಿರಸ್ಕೃತ ಪಟ್ಟಿಯಲ್ಲಿರುವ ಹಲವು ಕೊರತೆಗಳು ಆತನಲ್ಲಿವೆ. ಆತನ ಮೈಬಣ್ಣ, ಕಣ್ಣು, ಮುಖ, ದೇಹರಚನೆ, ಎತ್ತರ.. ಯಾವುದೂ ಆ ಕ್ಷೇತ್ರಕ್ಕೆ ಹೊಂದಿಕೆಯಾಗುವುದಿಲ್ಲ. ಮಾತ್ರವಲ್ಲ, ಆ ಕ್ಷೇತ್ರದಲ್ಲಿ ಈ ಚಹರೆ ಒಂದು ರೀತಿಯ ಅವಮಾನಕ್ಕೆ ಒಳಗಾಗುತ್ತಲೇ ಬಂದಿದೆ. 

      ವಿಷಾದ ಏನೆಂದರೆ, ಶ್ರೀದೇವಿಯ ಭಾರತ, ಮಧುವಿನ ಭಾರತದ ಮೇಲೆ ಬಹಳ ಹಿಂದಿನಿಂದಲೂ ದಾಳಿ ಮಾಡುತ್ತಲೇ ಬಂದಿದೆ. ಶ್ರೀದೇವಿ ಪ್ರತಿನಿಧಿಸುವ ಭಾರತ ಬಹಳ ಚಿಕ್ಕದು. ಮಧು ಪ್ರತಿನಿಧಿಸುವ ಭಾರತವಾದರೋ ಬಹಳ ವಿಸ್ತಾರವಾದುದು. ಆ ಭಾರತ ಬಡತನದ್ದು. ದುಡಿಮೆಗಾರರದ್ದು. ಇಂಗ್ಲಿಷು, ಜರ್ಮನ್, ಚೀನಿ ಇತ್ಯಾದಿ ಭಾಷೆಗಳನ್ನು ಮಾತಾಡಲಾಗದ ಮತ್ತು ಗ್ರಾಮೀಣ ಭಾಷೆಯನ್ನಷ್ಟೇ ಮಾತಾಡಬಲ್ಲವರದ್ದು. ಟೈ-ಕೋಟು-ಬೂಟು ಧರಿಸಿ ಗೊತ್ತಿಲ್ಲದವರದ್ದು. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಅದರ ದುಪ್ಪಟ್ಟು ಗಳಿಸುವ ಸಾಮರ್ಥ್ಯ ಇಲ್ಲದವರದ್ದು. ಬ್ಯಾಂಕಿನಿಂದ ಜುಜುಬಿ ಸಾವಿರದಷ್ಟು ಸಾಲ ಪಡೆದುಕೊಳ್ಳುವುದಕ್ಕೂ ತಿಂಗಳುಗಟ್ಟಲೆ ಕಾದು ಬರಿಗೈಲಿ ವಾಪಸಾಗುವವರದ್ದು. ಅಗ್ಗದ ರೇಶನ್ ಅಕ್ಕಿಗಾಗಿ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲುವವರದ್ದು. ಈ ಪಟ್ಟಿ ತುಂಬಾ ಉದ್ದ ಇದೆ. ಪೊಲೀಸು ಠಾಣೆ, ಸರಕಾರಿ ಕಚೇರಿ, ನ್ಯಾಯಾಲಯ ಎಲ್ಲೆಡೆಯೂ ಕೈ ಮುಗಿದು ಕಾಯುವ ಗುಂಪು ಇದು. ಲಕ್ಪಣವಾಗಿ ಮಾತಾಡಲು ಮತ್ತು ಉಡುಪು ಧರಿಸಲು ಬರದ ಹಾಗೂ ಯಾವ ಆಕರ್ಷಕ ಚಹರೆಯೂ ಇಲ್ಲದ ದುರ್ಬಲ ವರ್ಗ ಇದು. ಆದರೆ ಶ್ರೀದೇವಿ ಪ್ರತಿನಿಧಿಸುವ ಭಾರತ ಇದಕ್ಕೆ ತೀರಾ ವಿರುದ್ಧ. ಅದಕ್ಕೆ ಮಾತಾಡಲು ಬರುತ್ತೆ. ಲಕ್ಪಣವಾಗಿ ಉಡುಪು ಧರಿಸಲು ಬರುತ್ತೆ. ಎಲ್ಲೆಡೆಯೂ ಕೆಂಪು ಹಾಸಿನ ಸ್ವಾಗತ ಸಿಗುತ್ತೆ. ಬ್ಯಾಂಕುಗಳು ಕರೆದೂ ಕರೆದೂ ಸಾಲ ಕೊಡುತ್ತವೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರೇ ಕೇಂದ್ರ ಬಿಂದುವಾಗಿರುತ್ತಾರೆ. ಪಡಕೊಂಡ ಸಾಲವನ್ನು ಮರುಪಾವತಿಸದೇ ವಂಚಿಸುವುದಕ್ಕೂ ಆ ಗುಂಪಿಗೆ ಗೊತ್ತಿದೆ. ದುರಂತ ಏನೆಂದರೆ, ಈ ಗುಂಪಿಗೆ ಸಿಗುವ ಗೌರವ ಮತ್ತು ಮಾನ್ಯತೆ ಮಧು ಪ್ರತಿನಿಧಿಸುವ ಜನ ಸಮೂಹಕ್ಕೆ ಸಿಗುವುದೇ ಇಲ್ಲ.
ನಿಜವಾಗಿ, ಮಧು ಬಣ್ಣರಹಿತ ಭಾರತದ ಪ್ರತೀಕ. ಶ್ರೀದೇವಿ ಬಣ್ಣ ಸಹಿತ ಭಾರತದ ಸಂಕೇತ. ಈ ದೇಶದಲ್ಲಿ ಇವತ್ತು ಬಣ್ಣಕ್ಕೆ ದೊಡ್ಡ ಮಾರುಕಟ್ಟೆಯಿದೆ. ವಾಸ್ತವವನ್ನು ಮರೆಮಾಚಿ ಅವಾಸ್ತವವನ್ನು ವಾಸ್ತವವೆಂಬಂತೆ ಬಿಂಬಿಸುವುದು ಬಣ್ಣದ ಗುಣ. ಬಣ್ಣ ಇಲ್ಲದೇ ಚಿತ್ರರಂಗವೇ ಇಲ್ಲ. ಬಣ್ಣರಹಿತ ಶ್ರೀದೇವಿಯ ಫೋಟೋ ಅವರ ಅಭಿಮಾನಿಗಳಲ್ಲಿ ಇರುವ ಸಾಧ್ಯತೆಯೂ ಇಲ್ಲ. ಚಿತ್ರರಂಗದಿಂದ ಹಿಡಿದು ರಾಜಕಾರಣದವರೆಗೆ, ನೀರವ್ ಮೋದಿಯಿಂದ ಹಿಡಿದು ರಾಮ್ ರಹೀಮ್ ಬಾಬಾರ ವರೆಗೆ ಎಲ್ಲರೂ ಈ ಬಣ್ಣದ ಸಹಾಯದಿಂದಲೇ ಇವತ್ತು ಬದುಕುತ್ತಿದ್ದಾರೆ. ‘ಪ್ರತಿ ಭಾರತೀಯನ ಖಾತೆಗೂ 15 ಲಕ್ಪ ರೂಪಾಯಿ ಜಮೆ ಮಾಡುವ’ ಬಣ್ಣದ ಮಾತಿನ ಮೂಲಕವೇ ನರೇಂದ್ರ ಮೋದಿಯು ಪ್ರಧಾನಿಯಾದರು. ನೋಟ್ ನಿಷೇಧವನ್ನು ‘ಬಣ್ಣ’ದ ಮಾತಿನ ಮೂಲಕ ಸಮರ್ಥಿಸಿಕೊಳ್ಳಲಾಯಿತು. ಕುಸಿದ ಜಿಡಿಪಿಯನ್ನು ‘ಬಣ್ಣ’ದ ಮಾತಿನ ಮೂಲಕ ಮೇಲೆತ್ತಲಾಯಿತು. ಜಿಎಸ್‍ಟಿಗೆ ಬಣ್ಣ ಬಳಿದು ಚಂದಗೊಳಿಸಲಾಯಿತು. ಬ್ಯಾಂಕ್‍ನಿಂದ ಕೋಟಿ ಕೋಟಿ ಲೂಟಿಯಾಗುವುದನ್ನೂ ಬಣ್ಣದ ಮಾತುಗಳಿಂದ ಸಂತೈಸಲಾಯಿತು. ಚಿತ್ರರಂಗವಂತೂ ಬದುಕುವುದೇ ಬಣ್ಣದೊಂದಿಗೆ. ರಾಜಕಾರಣಿಗೆ ಹೊರಗೊಂದು ಮತ್ತು ಒಳಗೊಂದು ಮುಖ ಇದೆ. ಚಿತ್ರರಂಗದ ನಟ-ನಟಿಯರಿಗೂ ಇಂಥದ್ದೊಂದು ಮುಖ ಇದೆ. ಹಲವು ಬಾಬಾಗಳೂ ಈ ಎರಡು ಮುಖದೊಂದಿಗೇ ಬದುಕುತ್ತಿರುತ್ತಾರೆ. ಅವರ ಬಾಹ್ಯ ಮುಖ ಅತ್ಯಂತ ಸುಂದರವಾದುದು. ಜನರನ್ನು ಮಂತ್ರಮುಗ್ಧಗೊಳಿಸುವಷ್ಟು ಪ್ರಭಾವಶಾಲಿಯಾದುದು. ಮಧು ಪ್ರತಿನಿಧಿಸುವ ಭಾರತದ ದೊಡ್ಡ ಸಮಸ್ಯೆ ಇದು. ಆ ಭಾರತಕ್ಕೆ ಬಣ್ಣ ಹಚ್ಚಿ ಗೊತ್ತಿಲ್ಲ. ಹುಟ್ಟುವಾಗ ಯಾವ ಬಣ್ಣ ಇದೆಯೋ ಅದೇ ಬಣ್ಣದೊಂದಿಗೆ ಆ ಭಾರತ ಸಾಯುತ್ತದೆ. ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ, ಅಧಿಕಾರಕ್ಕಾಗಿ ಆಕರ್ಷಕ ಸುಳ್ಳು, ಶ್ರೀಮಂತ ಬದುಕಿಗಾಗಿ ಜಾಣ್ಮೆಯ ವಂಚನೆ.. ಇತ್ಯಾದಿಗಳಿಗೆ ಈ ಭಾರತದಲ್ಲಿ ಜಾಗ ಇಲ್ಲ. ಈ ಭಾರತದಲ್ಲಿ ಬಡತನ ಇದೆ. ಅನಾರೋಗ್ಯ ಇದೆ. ಮೂರು ಹೊತ್ತು ಊಟ ಮಾಡುವ ಅಸಾಮರ್ಥ್ಯ ಇದೆ. ಶಿಕ್ಪಣದ ಕೊರತೆಯಿದೆ. ಆಧುನಿಕ ಸೌಲಭ್ಯಗಳು ಎಟುಕದ ಸ್ಥಿತಿಯಲ್ಲಿದೆ. ಮಧು ಆ ಭಾರತವನ್ನು ಪ್ರತಿನಿಧಿಸಿದ್ದಾನೆ. ಹೊಟ್ಟೆಯ ಹಸಿವನ್ನು ತಣಿಸುವುದಕ್ಕಾಗಿ ಒಂದಿಷ್ಟು ಅಕ್ಕಿಯನ್ನು ಕದ್ದಿದ್ದಾನೆ. ನಿಜವಾಗಿ, ಆತ ಕದ್ದದ್ದಲ್ಲ. ಈ ವ್ಯವಸ್ಥೆ ಆತನನ್ನು ಕದಿಯುವಂತೆ ಮಾಡಿದೆ. ಆದರೆ ಈ ಬಣ್ಣದ ಜಗತ್ತು ಈ ಸಮಾಜವನ್ನು ಹೇಗೆ ನಂಬಿಸಿಬಿಟ್ಟಿದೆಯೆಂದರೆ, ಹೃದಯ ಕದಿಯುವ ಶ್ರೀದೇವಿಯ ಭಾರತವೇ ನಿಜ ಭಾರತ ಎಂದು ಹೇಳಿಬಿಟ್ಟಿದೆ. ಆ ಭಾರತದ ಆಚೆಗೆ ಇನ್ನೊಂದು ಬೃಹತ್ ಭಾರತ ಅಸ್ತಿತ್ವದಲ್ಲಿರುವುದನ್ನು ಅದು ಒಪ್ಪಿಕೊಳ್ಳುತ್ತಿಲ್ಲ. ಅಂಥದ್ದೊಂದು ಭಾರತವನ್ನು ಅದು ಅವಮಾನವೆಂದೇ ಭಾವಿಸಿದೆ.
ಆರ್ಯರು ತಮ್ಮ ಬಣ್ಣ, ಜ್ಞಾನ, ಶೈಕ್ಷಣಿಕ ಸಾಮರ್ಥ್ಯವನ್ನು ಬಳಸಿಕೊಂಡು ಈ ದೇಶದ ಬಹುಸಂಖ್ಯಾತ ಮೂಲ ನಿವಾಸಿಗಳ ಮೇಲೆ ಸವಾರಿ ನಡೆಸಿದರು. ಅವರ ಮೈಬಣ್ಣ ಶ್ರೇಷ್ಠವೂ ಮೂಲ ನಿವಾಸಿಗಳ ಮೈಬಣ್ಣ ಕನಿಷ್ಠವೂ ಆಗಿ ಬದಲಾಯಿತು. ಬಣ್ಣವೇ ಮನುಷ್ಯರ ಸ್ಥಾನಮಾನವನ್ನು ಅಳೆಯುವ ಹಂತಕ್ಕೆ ತಲುಪಿತು. ಸಣ್ಣ ಗುಂಪಿನ ಮೈಬಣ್ಣವು ದೊಡ್ಡ ಗುಂಪಿನ ಮೇಲೆ ಪ್ರಾಬಲ್ಯ ಸ್ಥಾಪಿಸಿತು. ಇವತ್ತಿಗೂ ಆ ಪರಂಪರೆ ಮುಂದುವರಿದಿದೆ. ಬಣ್ಣರಹಿತ ಬೃಹತ್ ಭಾರತದ ಮೇಲೆ ಬಣ್ಣ ಸಹಿತ ಪುಟ್ಟ ಭಾರತ ದೌರ್ಜನ್ಯ ನಡೆಸುತ್ತಲೇ ಇದೆ. ಮಧು ಮತ್ತು ಶ್ರೀದೇವಿಯ ಮೂಲಕ ಇದು ಮತ್ತೊಮ್ಮೆ ರುಜುವಾತುಗೊಂಡಿದೆ.