ಮ್ಯಾನ್ಮಾರ್ ಗೆ ಗಡೀಪಾರು ಮಾಡುವುದಕ್ಕಿಂತ ‘ಭಾರತದಲ್ಲೇ ನಮ್ಮನ್ನು ಕೊಲ್ಲುವುದು ಲೇಸು’

0
2024

ನವದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿರುವ ಜಾಫರ್ ಆಲಂ ,”ಇಂದು ನಮ್ಮೊಂದಿಗೆ ನೀವು ಸಹಕರಿಸದಿದ್ದರೆ ನಾಳೆ ನಿಮ್ಮೊಂದಿಗೆ ನಾವು ಸಹಕರಿಸುವುದಿಲ್ಲ,” ಎಂಬ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ, ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಆರು-ಪುಟಗಳ “ವೈಯಕ್ತಿಕ ಅಂಕಿ ಅಂಶಗಳ”ಅರ್ಜಿಯನ್ನು ತುಂಬಲು ನಿರಾಕರಿಸುತ್ತಾರೆ.

“ಅವರು ಪ್ರತಿ ವಾರ ಶಿಬಿರಕ್ಕೆ ಬರುತ್ತಾರೆ. ನಾವು ಈ ಅರ್ಜಿಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸುತ್ತಾರೆ ” ಎಂದು 2012 ರಿಂದ ಭಾರತದಲ್ಲಿ ನೆಲೆಸಿರುವ 27 ವರ್ಷದ ರೋಹಿಂಗ್ಯ ನಿರಾಶ್ರಿತರೊಬ್ಬರು ಹೇಳಿದ್ದಾರೆ.

“ನಾವು ಯಾವುದೇ ವೈಯುಕ್ತಿಕ ದಾಖಲೆಯನ್ನು ಕೊಡುವುದಿಲ್ಲ, ಅರ್ಜಿಯನ್ನು ತುಂಬುವುದಿಲ್ಲ ಎಂದು ಹಲವು ಬಾರಿ ಅವರಿಗೆ ತಿಳಿಸಿದ್ದೇವೆ, ಭಾರತ ಸರ್ಕಾರವು ಈ ದಾಖಲೆಗಳನ್ನು ಮ್ಯಾನ್ಮಾರ್ ದೂತಾವಾಸಕ್ಕೆ ಕಳುಹಿಸುತ್ತದೆ ಮತ್ತು ನಂತರ ನಮ್ಮನ್ನು ಬಲವಂತವಾಗಿ ಗಡೀಪಾರು ಮಾಡಲಾಗುತ್ತದೆ”.

ರೋಹಿಂಗ್ಯ ನಿರಾಶ್ರಿತರನ್ನು ಗುರುತಿಸಲು ಮತ್ತು ಅವರ ವೈಯುಕ್ತಿಕ ವಿವರಗಳನ್ನು ಸಂಗ್ರಹ ಮಾಡಿ ಅವುಗಳನ್ನು ವರದಿ ಮಾಡುವ೦ತೆ ರಾಜ್ಯ ಸರಕಾರಕ್ಕೆ ಕೇಂದ್ರವು ಆದೇಶ ನೀಡಿದೆ.

ಅಕ್ಟೋಬರ್ 4 ರಂದು, ಮೊಹಮ್ಮದ್ ಜಲಾಲ್, ಮಕ್ಬೂಲ್ ಖಾನ್, ಜಲಾಲುದ್ದೀನ್ , ಮೊಹಮ್ಮದ್ ಯೂನಸ್ , ಸಬೀರ್ ಅಹಮದ್, ರಹೀಮುದ್ದೀನ್ ಮತ್ತು ಮೊಹಮ್ಮದ್ ಸಲಾಮ್ ಎಂಬ ಏಳು ರೋಹಿಂಗ್ಯರನ್ನು ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ಆರೋಪದಲ್ಲಿ ಮಯನ್ಮಾರ್ ಗೆ ಗಡೀಪಾರು ಮಾಡಲಾಯಿತು.

ದೇಶದಲ್ಲಿ ಉಳಿಯಲು ಅವರಿಗೆ ಅವಕಾಶ ನೀಡಬೇಕೆಂದು ವಕೀಲ ಪ್ರಶಾಂತ್ ಭೂಷಣ್ ರ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಗಡೀಪಾರು ಮಾಡಲಾಯಿತು.

ಅಲ್ಲಿಂದೀಚೆಗೆ, ಉದ್ವಿಗ್ನತೆ ಮತ್ತು ಭಯವು ಕಲಿಂದಿ ಕುಂಜ್ ನ ನಿರಾಶ್ರಿತರ ಶಿಬಿರದಲ್ಲಿ ಮನೆ ಮಾಡಿದೆ. ಅಲ್ಲಿ 50 ರೋಹಿಂಗ್ಯಾ ಕುಟುಂಬಗಳು ಹಲವಾರು ವರ್ಷಗಳಿಂದ ನೆಲೆಸಿದ್ದಾರೆ.

ಮ್ಯಾನ್ಮಾರ್ ಗೆ ಗಡೀಪಾರು ಮಾಡಿದರೆ, ಅಲ್ಲಿನ ಸರ್ಕಾರವು ಅವರನ್ನು ಜೈಲಿನಲ್ಲಿ ಅಥವಾ ಸೇನಾ ಶಿಬಿರಗಳಲ್ಲಿ ಎಸೆಯಬಹುದೆಂದು ಇವರು ಭಯಪಡುತ್ತಾರೆ.

ಮ್ಯಾನ್ಮಾರ್ ಗೆ ಗಡೀಪಾರು ಮಾಡಿದ ಏಳು ಜನರು 2012 ರಿಂದಲೂ ಭಾರತದ ಜೈಲಿನಲ್ಲಿದ್ದರು. ಗಡೀಪಾರು ಮಾಡಿದ ನಂತರ ಅವರನ್ನು ತಮ್ಮ ಮನೆಗಳಿಗೆ ಕಳುಹಿಸಲಾಗಿಲ್ಲ ಬದಲಾಗಿ ಅವರನ್ನು ಮತ್ತೆ ಜೈಲಿನಲ್ಲಿ ಎಸೆಯಲಾಗಿದೆ” ಎಂದು ಆಲಂ ಅವರು ಅಲ್ ಜರಾಗೆ ತಿಳಿಸಿದರು.

ಅಂದಾಜು 40,000 ರೋಹಿಂಗ್ಯನ್ನರು ಮುಸ್ಲಿಂ ಅಲ್ಪಸಂಖ್ಯಾತರು, ಭಾರತದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯು ರೋಹಿಂಗ್ಯ ರಿಗೆ ನಿರಾಶ್ರಿತ ಸ್ಥಾನಮಾನವನ್ನು ನೀಡಲು ನಿರಾಕರಿಸಿದೆ.

ರೋಹಿಂಗ್ಯನ್ನರು ತಪ್ಪು ಮತ್ತು ಕಾನೂನುಬಾಹಿರ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ನಮಗೆ ತಿಳಿದಿದೆ” ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ.

ಆದರೆ ಕುಟುಂಬವನ್ನು ಸಾಕಲು ದಿನಗೂಲಿ ಕಾರ್ಮಿಕರಾಗಿ ಮತ್ತು ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ರೋಹಿಂಗ್ಯನ್ನರು ಆರೋಪವನ್ನು ನಿರಾಕರಿಸುತ್ತಾರೆ.

ಭಾರತ ಸರಕಾರವು ರೋಹಿಂಗ್ಯ ನಿರಾಶ್ರಿತರನ್ನು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಪರಿಗಣಿಸುತ್ತವೆ.

ಫೆಬ್ರವರಿ 2017 ರಲ್ಲಿ, ಹಿಂದೂ-ಪ್ರಾಬಲ್ಯದ ಜಮ್ಮು ಪ್ರದೇಶದ ರೋಹಿಂಗ್ಯ ನಿರಾಶ್ರಿತರ ಶಿಬಿರದಲ್ಲಿ,”ಎದ್ದೇಳು ಜಮ್ಮು, ರೋಹಿಂಗ್ಯನ್ನರು ಮತ್ತು ಬಾಂಗ್ಲಾದೇಶದವರು ಜಮ್ಮುವನ್ನು ತೊರೆಯಿರಿ ” ಎಂಬಂತಹ ಸಂದೇಶಗಳಿರುವ ಜಾಹಿರಾತುಗಳು ಕಾಣಸಿಕ್ಕಿದ್ದವು.

ಒಂದು ತಿಂಗಳ ನಂತರ, ಜಮ್ಮುವಿನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ರಾಜ್ಯ ಸರಕಾರಕ್ಕೆ ಅಂತಿಮ ಆದೇಶ ನೀಡಿತು ಮತ್ತು ರೋಹಿಂಗ್ಯನ್ನರನ್ನು ಶೀಘ್ರದಲ್ಲೇ ಗಡೀಪಾರು ಮಾಡದಿದ್ದಲ್ಲಿ “ಗುರುತಿಸಿ ಕೊಲ್ಲುವ” ಬೆದರಿಕೆ ಹಾಕಿದೆ.

30 ವರ್ಷದ ನೂರ್ ಕಾಸಿಮ್ ಎಂಬವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕಾಳಿಂದಿ ಕುಂಜ್ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. “ನಾವು ಇಲ್ಲಿ ಯಾವ ಪರಿಸ್ಥಿತಿಯಲ್ಲಿ ಬಂದಿರುವೆವು ಎಂದು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದು ಅವರು ಅಲ್ ಜಝೀರಾಗೆ ತಿಳಿಸಿದ್ದಾರೆ. ಒಂದು ಸಿಮೆಂಟ್ ಉಗ್ರಾಣದಲ್ಲಿ ಕಾರ್ಮಿಕರಾಗಿ ಕಾಸಿಮ್ ಅವರು ದುಡಿಯುತ್ತಾರೆ. ಅವರ ತಾಯಿ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಬಾಂಗ್ಲಾದೇಶದಲ್ಲಿದ್ದಾರೆ.

“ನನ್ನ ಕುಟುಂಬವನ್ನು ನಾನು 2012 ರಿಂದ ನೋಡಿಲ್ಲ. ನಾನು ಮನೆಗೆ ಮರಳಲು ಮತ್ತು ನನ್ನ ಕುಟುಂಬದೊಂದಿಗೆ ಮತ್ತೆ ಜೀವಿಸಲು ಬಯಸುತ್ತೇನೆ. ಆದರೆ ನಮಗೆ ಯಾವುದೇ ಆಯ್ಕೆ ಇಲ್ಲ . ನಮ್ಮ ಮನೆಗಳನ್ನು, ವ್ಯವಹಾರಗಳನ್ನು, ಜಾಗಗಳನ್ನು, ಜಾನುವಾರುಗಳನ್ನು ಬಿಟ್ಟು ಬಂದು ಇಲ್ಲಿ ಗುಲಾಮರಂತೆ ಬದುಕುತ್ತಿದ್ದೇವೆ”.

“ಭಾರತ ಬಯಸಿದರೆ ನಮ್ಮನ್ನು ಗಡಿಪಾರು ಮಾಡಬಹುದು ಮತ್ತು ಇದು ನಮ್ಮ ದೇಶವಲ್ಲದ್ದರಿಂದ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಆದರೆ [ಭಾರತೀಯ ಅಧಿಕಾರಿಗಳು] ಕನಿಷ್ಠ ಒಮ್ಮೆ ಮ್ಯಾನ್ಮಾರ್ ಪರಿಸ್ಥಿತಿ ನೋಡಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ,, ನಮ್ಮನ್ನು ಗಡಿಪಾರು ಮಾಡುವ ಬದಲು ಇಲ್ಲಿಯೇ ನಮ್ಮನ್ನು ಕೊಲ್ಲುವುದು ಉತ್ತಮ, ಏಕೆಂದರೆ ನಾವು ಅಲ್ಲಿಯೂ ಕೊಲ್ಲಲ್ಪಡುತ್ತೇವೆ” ಎಂದು ಖಾಸಿಮ್ ಹೇಳಿದರು.

ಆಂಗ್ಲ ಮೂಲ: ಬಿಲಾಲ್ ಕುಚೆ
ಕನ್ನಡಕ್ಕೆ: ಆಯಿಷತುಲ್ ಅಫೀಫಾ
ಕೃಪೆ: ಅಲ್ ಜಝೀರಾ