ಕಶೋಗಿ, ಸೌದಿ ಮತ್ತು ಅಮೆರಿಕ

0
1769

ಸೌದಿ ಬಂಡುಕೋರ ಪತ್ರಕರ್ತ ಜಮಾಲ್ ಕಶೋಗಿ ಟರ್ಕಿಯಲ್ಲಿ ಕಾಣೆಯಾದ ಬೆನ್ನಿಗೇ ಸೌದಿ ಅರೇಬಿಯದ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿರುವ ಕೆಲವು ಮಾತುಗಳಲ್ಲಿ ಸೌದಿ ಯೊಂದಿಗಿನ ಆಯುಧ ಒಡಂಬಡಿಕೆ ಹಿಂಪಡೆದು ಅದನ್ನು ಶಿಕ್ಷಿಸಲು ನೋಡಿದರೆ ಅಮೆರಿಕ ಅಮೆರಿಕವನ್ನೇ ಶಿಕ್ಷಿಸಿದಂತಾಗಲಿದೆ ಎಂಬುದಾಗಿದೆ. ಬ್ರಿಟನ್, ಜರ್ಮನಿ, ಯುರೋಪಿನ ದೇಶಗಳೆಲ್ಲ ಸೌದಿಯೊಂದಿಗೆ ಆರ್ಥಿಕ ಸಂಬಂಧ ನಿರಾಕರಿಸು ವಾಗಲೂ ಸೌದಿಯು ನಮ್ಮನ್ನು ನೋಡಿಕೊಂಡರೆ ನಿಮ್ಮನ್ನೂ ನೋಡಿಕೊಳ್ಳುತ್ತೇವೆ ಎಂಬ ಇರಾಕ್‍ನ ಸದ್ದಾಮ್ ಹುಸೇನ್, ಲಿ ಬಿಯದ ಮುಹಮ್ಮರ್ ಗಡ್ಡಾಫಿ ಭಾಷೆಯಲ್ಲಿ ಅಮೆರಿಕದೊಂದಿಗೆ ಮಾತಾಡುತ್ತಾರೆ.

ಹಾಗಿದ್ದರೆ ಸೌದಿ ಅಷ್ಟು ಬಲಿಷ್ಠ ರಾಷ್ಟ್ರವೇ ಅಥವಾ ಯುರೋಪ್, ಅಮೆರಿಕಗಳು ಮೇಲ್ನೋಟಕ್ಕೆ ಸೌದಿ ವಿರುದ್ಧ ಇದ್ದೇವೆ ಎಂದು ಜಗತ್ತಿನ ಮುಂದೆ ನಾಟಕ ಆಡುತ್ತಿವೆಯೇ ಬೇರೆ ಏನೇ ಆಗಿದ್ದರೂ ಇರಾನ್‍ನ ವಿರುದ್ಧದ ಕೋಪ ದಲ್ಲಿ ಯುರೋಪ್ ಮತ್ತು ಅಮೆರಿಕದ ಮೆಚ್ಚುಗೆ ಗಳಿಸಲು ಸೌದಿ ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟ. ಈ ಸ್ಪಷ್ಟತೆಯಲ್ಲಿಯೇ ಸೇರಿಗೆ ಸವ್ವಾ ಸೇರು ಎಂದು ಸೌದಿ ಬೊಬ್ಬಿರಿಯುತ್ತಿದೆ ಎಂದು ಹೇಳಬಹುದು ಅನ್ನಿಸುತ್ತಿದೆ. ಅಧ್ಯಕ್ಷ ಟ್ರಂಪ್ ಸೌದಿಯ ಎಲ್ಲ ಕ್ರೂರ ಕೃತ್ಯಗಳನ್ನೂ ಬೆಂಬಲಿಸು ತ್ತಿದ್ದಾರೆ. ಹಾಗೆಂದು ಅಮೆರಿಕದ ಮಾಧ್ಯಮಗಳೇ ಹೇಳುತ್ತಿವೆ. ಟರ್ಕಿಯ ಸೌದಿ ದೂತವಾಸ ಕೇಂದ್ರದಿಂದ ನಿಗೂಢವಾಗಿ ನಾಪತ್ತೆಯಾಗಿ ಜಗ ತ್ತನ್ನೇ ಸೌದಿ ವಿರುದ್ಧ ತಿರುಗುವಂತೆ ಮಾಡಿದ ಜಮಾಲ್ ಕಶೋಗಿಯವರು ಅಂಕಣಕಾರರಾಗಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ಅದನ್ನೇ ಹೇಳುತ್ತಿದೆ. ಟ್ರಂಪ್ ಪತ್ರಕರ್ತನೊಬ್ಬನ ಅಪಹರಣ ವನ್ನು ಅಷ್ಟು ಗಂಭೀರವಾಗಿ ತೆಗೆದು ಕೊಳ್ಳುವ ಅಸಾಮಿಯಲ್ಲ. ಅವರು ಅಭಿವ್ಯಕ್ತಿಗೆ ಗೆಟ್ ಲಾಸ್ಟ್ ಎನ್ನುವಂತಹ ಜಾಯಮಾನದವರು. ಪತ್ರಿಕೆಗಳ ಕುರಿತ ಅವರ ಉಡಾಫೆತನದ ವಿರುದ್ಧ ಇತ್ತೀಚೆಗಷ್ಟೆ ಅಮೆರಿಕದ ಪತ್ರಿಕೆಗಳು ಪ್ರತಿಭಟನೆ ಮಾಡಿದ್ದವು. ಇಂಥ ಮನುಷ್ಯ ಕಶೋಗಿ ನಾಪತ್ತೆಯ ಕುರಿತು ಒಂದೆಡೆ ಬಿಗಿ ಯೆಂಬಂತೆ ವರ್ತಿಸಿ ಇನ್ನೊಂದು ಕಡೆ ಸೌದಿ ಯೊಂದಿಗಿನ ಆಯುಧ ವ್ಯಾಪಾರದಲ್ಲಿ ಕಕ್ಕುಲತೆ ಪ್ರದರ್ಶಿಸಿದ್ದಾರೆ.

ಹಿಂದೆಲ್ಲ ಇದೇ ಟ್ರಂಪ್ ಸೌದಿ ಸರಕಾರದ ಮುಂದೆ ಒಬಾಮ ಮೊಣಕಾಲು ಊರುತ್ತಾರೆನ್ನು ತ್ತಿದ್ದರು. ಈಗ ಇವರು ಅಧ್ಯಕ್ಷರಾದ ಬಳಿಕ ಇವರ ಬೆನ್ನುಹುರಿಯೇ ಗಿಡ್ಡವಾಗಿದೆ ಎಂದು ಅಮೆರಿಕದ ಮಾಧ್ಯಮಗಳು ಬರೆಯುತ್ತಿವೆ.

ಕಶೋಗಿ ಜೀವಂತವಾಗಿಲ್ಲ, ಕಶೋಗಿಯನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡುತ್ತಿವೆ. ಅವರ ಬೆರಳುಗಳನ್ನು ಕತ್ತರಿಸಿ ಎಸೆದಿರಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ಬರೆದಿದೆ. ಅಮೆರಿಕದ ಅಧ್ಯಕ್ಷರು ವಿವಿಧ ಸಂದರ್ಭಗಳೂ ತಮ್ಮ ವಿರುದ್ಧ ಎದ್ದ ಭ್ರಷ್ಟಾಚಾರ, ಲೈಂಗಿಕ ಆರೋಪ ಗಳನ್ನು ಪ್ರತಿರೋಧಿಸಲು ಅಥವಾ ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ ಸೌದಿಯ ಕ್ರೌರ್ಯಗಳನ್ನು ಅಡಗಿಸಿಡಲು ಅಮೆರಿಕ ಸರಕಾರ ವನ್ನು ಟ್ರಂಪ್ ಉಪಯೋಗಿಸುತ್ತಿದ್ದಾರೆ ಎಂದು ಟೈಮ್ಸ್ ಬರೆದಿದೆ.

ಕಶೋಗಿ ಒಂದು ಕಾಲದಲ್ಲಿ ರಾಯಲ್ ವ್ಯಕ್ತಿ ಯಾಗಿದ್ದರು. ರಾಜ ಕುಟುಂಬಕ್ಕೆ ನಿಕಟ ಮತ್ತು ರಾಯಲ್ ಕೋರ್ಟಿನ ಸಲಹೆಗಾರ ಇತ್ಯಾದಿ ಅರ್ಥಪೂರ್ಣ ಉದ್ಯೋಗವನ್ನು ಹೊಂದಿದ್ದರು. ಆದರೆ ಮುಂದಿನ ದೊರೆ ಮುಹಮ್ಮದ್ ಬಿನ್ ಸಲ್ಮಾನ್ ಎಂದಾದ ಬಳಿಕ ಎಲ್ಲವೂ ಬದಲಾಯಿತು, ಕಶೋಗಿ ಸರಕಾರದ ವಿರುದ್ಧ ತಿರುಗಿದರು. ಅಲ್ಲಿಂದ ಅಮೆರಿಕಕ್ಕೆ ಹೋಗಿ ಪ್ರತಿಪಕ್ಷದಂತೆ ಕೆಲಸ ಮಾಡತೊಡಗಿದರು. ಮರಿ ಸಲ್ಮಾನರ ಧೂರ್ತತನವನ್ನು ಅವರು ನ್ಯೂಯಾರ್ಕ್ ಟೈಮ್ಸ್ ಮೂಲಕ ಜಗಜ್ಜಾಹೀರಾತು ಮಾಡುತ್ತಿದ್ದರು. ಸೌದಿಯಲ್ಲಿ ಸರಕಾರದ ವಿರುದ್ಧ ಮಾತಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಮಾತಾಡುವವರನ್ನು ಅವರು ಬಿಡುವುದೂ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂತಹದೇ ಮನಃಸ್ಥಿತಿಯ ಟ್ರಂಪ್ ಜತೆಗೂಡಿದರೆ ಏನಾಗಬಹುದು? ಆದ್ದರಿಂದ ಕಶೋಗಿಯನ್ನು ಉಪಾಯವಾಗಿ ಟರ್ಕಿಗೆ ಹೋಗುವ ಸ್ಥಿತಿ ಹುಟ್ಟುಹಾಕಿ ಸೌದಿ ಅರೇಬಿಯದ ದೂತವಾಸಕ್ಕೆ ಬರುವಂತೆ ಮಾಡಿ ಅಲ್ಲಿಂದ ಕಣ್ಮರೆ ಮಾಡಲಾಯಿತು. ಅಂದರೆ ಕಶೋಗಿ ಅಪಹರಣ, ಹತ್ಯೆಗೆ ಸೌದಿ, ಅಮೆರಿಕ ಹೊರತಾದ ಮೂರನೆ ರಾಷ್ಟ್ರವನ್ನು ಆಯ್ಕೆ ಮಾಡಲಾಯಿತು ಎಂದರ್ಥ.

ಹೀಗೂ ಇಲ್ಲಿಯೂ ಕಶೋಗಿಯ ಬಾಯಿ ಮುಚ್ಚಿಸುವಲ್ಲಿ ಅಮೆರಿಕ ಸೌದಿಗೆ ನೆರವಾಯಿತು. ಕಶೋಗಿಯ ಕೊಲೆಯನ್ನು ಪೂರ್ವಭಾವಿಯಾಗಿ ರಚಿಸಿ ಕಾರ್ಯರೂಪಕ್ಕೆ ತರಲಾಯಿತು ಎಂದು ಹೇಳುವುದು ಇವೆಲ್ಲವನ್ನು ಟರ್ಕಿ ಮಾಡಿಕೊಂಡ ಕಾರಣದಿಂದಾಗಿರಬಹುದು. ಬಹಳ ಸುಸೂತ್ರವಾಗಿ ಯೋಜನಾಬದ್ಧವಾಗಿ ಕಶೋಗಿಯನ್ನು ಕೊಲ್ಲಲಾಗಿದೆ ಎಂದು ಟರ್ಕಿ ಹೇಳುತ್ತಿದೆ. ಕೊನೆಗೆ ಈಗ ಟ್ರಂಪ್ ಕಶೋಗಿ ಮೃತಪಟ್ಟಿರಬಹುದು ಎಂದು ಹೇಳುತ್ತಾರೆ. ಆದರೆ ಸೌದಿಯ ಪತ್ರಿಕಾ ಸ್ವಾತಂತ್ರ್ಯದ ಬಲಿಪಶು `ಕಶೋಗಿ’ ಎಂದು ಅಂತಾರಾಷ್ಟ್ರೀಯ ಸಮಾಜ ಹೇಳುತ್ತಿದೆ. ಆದರೆ ಅಮೆರಿಕನ್ ಪತ್ರಿಕೆಗಳ ಆಧಾರದಲ್ಲಿ ಟ್ರಂಪ್ ಮುಂದೆ ನಿಂತು ನಡೆಸಿಕೊಟ್ಟ ಯೋಜನೆಯೆಂದು ಅರ್ಥಮಾಡಿ ಕೊಂಡು ಹೇಳುವವರೂ ಇದ್ದಾರೆ.

ಕಶೋಗಿ ಸೌದಿ ಅರೇಬಿಯ, ಯಮನ್‍ನಲ್ಲಿ ಸೈನಿಕ ಕಾರ್ಯಾಚರಣೆ ನಡೆಸಿದಲ್ಲಿಂದ ರಾಜ ಕುಟುಂಬದ ಗಣ್ಯರನ್ನು ಬಂಧಿಸಿದವರೆಗೂ ಅವರು ಟೀಕಿಸಿ ವಿಮರ್ಶಿಸಿ ಬರೆದರು. ದೊರೆ ಕುಟುಂಬದ ಉತ್ತರಾಧಿಕಾರಿಯ ಕುರಿತು ಅವರ ಧ್ವನಿ ಬಲಿಷ್ಠ ವಾಗಿತ್ತು. ಅಂತಿಮವಾಗಿ ಟರ್ಕಿಯಲ್ಲಿನ ಸೌದಿ ದೂತವಾಸದೊಳಗೆ ಹೋದ ಕಶೋಗಿ ಮತ್ತೆ ಕಾಣದಂತೆ ಮರೆಯಾದರು. ಇನ್ನೊಂದು ಬಲ ವಾದ ಆರೋಪದ ಪ್ರಕಾರ, ರಾಜಕುಮಾರ ಮುಹಮ್ಮದ್ ಸಲ್ಮಾನ್ ಅವರು ಅಮೆರಿಕದ ಸರಕಾರದಲ್ಲಿ ತನ್ನ ಪ್ರಭಾವ ಬೆಳೆಸಿದ್ದಾರೆ ಎಂಬ ಪುಕಾರು ಇದೆ. ಅವರ ಆದೇಶವಿಲ್ಲದೆ ಕಶೋಗಿಯ ಕೊಲೆಯಾಗದು ಎಂದು ನ್ಯೂಯಾರ್ಕ್ ಟೈಮ್ಸ್ ಬರೆದಿದೆ. ಕೊಲೆಗಡುಕರಲ್ಲಿ ನಾಲ್ಕು ಮಂದಿ ಸೌದಿ ಸರಕಾರಕ್ಕೆ ನಿಕಟವಾಗಿರುವವರು ಎಂದೂ ಅದು ಆರೋಪಿಸಿದೆ. ಯಮನ್‍ನಲ್ಲಿ ನಡೆಯು ತ್ತಿರುವ ಸೈನಿಕ ದಾಳಿಯನ್ನು ಅಮೆರಿಕ ಬಯಸಿದರೆ ನಿಲ್ಲಿಸಲು ಸಾಧ್ಯವಿದೆ ಎಂದು ಅಮೆರಿಕದ ಮಾಧ್ಯಮಗಳೇ ಬರೆಯುತ್ತಿವೆ. ಅಂದರೆ ಯಮನ್‍ಗೆ ಹೋಗಿ ಪರಸ್ಪರ ಗುದ್ದಿಸುವುದು ಅಮೆರಿಕ ಎಂದಂತಾಯಿತು. ಹೀಗಿರುವಾಗ ಕಶೋಗಿ ವಿಷಯದಲ್ಲಿ ಆಯುಧ ಕೊಡುವುದು ನಿಲ್ಲಿಸಿದರೆ ಅಮೆರಿಕವನ್ನು ಅಮೆರಿಕವೇ ಶಿಕ್ಷಿಸಿದಂತಲ್ಲದೆ ಮತ್ತೇನು? ಅದನ್ನೆ ಟ್ರಂಪ್ ಹೇಳಿದ್ದು, ಯಮನ್ ನಲ್ಲಿನ ಯುದ್ದ ಅಮೆರಿಕದ ಆಯುಧ ಮಾರಾಟ ಕ್ಕಾಗಿಯೇ ಎಂದು ಅಮೆರಿಕದ ಮಾಧ್ಯಮಗಳು ಪರೋಕ್ಷವಾಗಿ ಜಗತ್ತಿನ ಮುಂದೆ ವಿವರಿಸುತ್ತಿವೆ.

ಹಾಗಿದ್ದರೆ, ಅವೆಲ್ಲ ಉಪಕಾರಕ್ಕೆ ಕಶೋಗಿ ಯನ್ನು ಕೊಲ್ಲಿಸುವಲ್ಲಿ ಅಮೆರಿಕ ತನ್ನ ಪಾತ್ರ ನಿರ್ವಹಿಸದಿರುವುದು ಹೇಗೆ ಸಾಧ್ಯ?
ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರನ್ನು ಟೀಕಿಸುತ್ತಾ ಇಸ್ಲಾಮಿಕ್ ಫೋಬಿಯ ಬೆಳೆಸಲು ಅಮೆರಿಕದ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಸೌದಿಯು ಜಗತ್ತಿನಲ್ಲಿ ನಡೆಸುತ್ತಿರುವ ಧಾರ್ಮಿಕ ಅಧ್ಯಯನ ಕೇಂದ್ರಗಳಿಂದ ಭಯೋ ತ್ಪಾದನೆ ತೀವ್ರವಾದವನ್ನು ಜಗತ್ತಿಗೆ ಹರಡುತ್ತಿದೆ ಎನ್ನುವ ಇನ್ನೊಂದು ಆರೋಪ ಕೂಡ ಇದೆ. ಯಮನ್‍ನಲ್ಲಿ ಅಲ್‍ಕಾಯಿದಕ್ಕೆ ಹೊಸ ಯುದ್ಧ ಕ್ಷೇತ್ರವನ್ನು ತೆರೆದುಕೊಟ್ಟಿದ್ದು ಸೌದಿ ಅರೇಬಿಯಾ ಎನ್ನುವ ಇನ್ನೊಂದು ಆರೋಪವೂ ಇದೆ. ಒಟ್ಟಿನಲ್ಲಿ ರಾಜಕುಮಾರ ಹುಚ್ಚು ಪ್ರವೃತ್ತಿಯವ ಮಾತ್ರ ಅಲ್ಲ ಆತ ವಿಶ್ವಾಸ ಯೋಗ್ಯರಲ್ಲ. ಅಯೋಗ್ಯ ರಾಗಿದ್ದಾರೆ. ಅವರು ನಮ್ಮ ಹಿತಾಸಕ್ತಿಗಳನ್ನು ಮುಂದೆ ಒಯ್ಯುವವನಲ್ಲ. ಬದಲಾಗಿ ನಮ್ಮನ್ನು ನಾಶಮಾಡಲು ಶ್ರಮಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‍ನಲ್ಲಿ ಬಂದ ಒಂದು ಲೇಖನದಲ್ಲಿ ಬರೆಯಲಾಗಿದೆ.

ನಮ್ಮ ಸಹಾಯ ಇಲ್ಲದೆ ಸೌದಿಗೆ ಏನೂ ಮಾಡಲು ಸಾಧ್ಯವಿಲ್ಲ. ವಿಮಾನದ ಬಿಡಿ ಭಾಗಗಳನ್ನು ಫಿಟ್ಟಿಂಗ್ ಮಾಡಲು ಕೂಡ ಅವರಿಗೆ ಗೊತ್ತಿಲ್ಲ. ಆದ್ದರಿಂದ ಯುವರಾಜನನ್ನು ನಿ ಯಂತ್ರಿಸದಿರುವುದು ಆ ಪ್ರದೇಶದ ಸ್ಥಿರತೆಯನ್ನೇ ನಾಶಪಡಿಸಲಿದೆ ಎಂದು ಲೇಖನ ಕೊನೆಯಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಆಯುಧ ವ್ಯವಹಾರಕ್ಕೆ ಅಮೆರಿಕ ಗುರಿಯಿಟ್ಟಿದೆ. ಆದ್ದರಿಂದ ಸೌದಿ ಯಮನ್‍ನಲ್ಲಿ ಗುರಿಯಿಡುತ್ತಿದೆ.

ಕಶೋಗಿಯ ವಿಷಯದಲ್ಲಿ ತನಿಖೆಯನ್ನಲ್ಲ ಸೌದಿ ಯ ವಿರುದ್ಧ ಕ್ರಮ ಜರಗಿಸಲು ಅಮೆರಿಕನ್ ಮಾಧ್ಯಮಗಳು ಧ್ವನಿಯೆತ್ತಿವೆ. ಡೊನಾಲ್ಡ್ ಟ್ರಂಪ್ ಮುಂದೆ ಈ ಮಾಧ್ಯಮಗಳ ಧ್ವನಿ ಬಲಿಷ್ಠ ಗೊಂಡಿತೇ? ಇರಾನನ್ನು ಎದುರಿಸಲು ಸೌದಿ ಮತ್ತು ಅಮೆರಿಕಕ್ಕೆ ಅನ್ಯ ದಾರಿಯಿಲ್ಲ. ಆದ್ದರಿಂದ ಅಮೆರಿಕ- ಇಸ್ರೇಲಿಗಾಗಿ ಇರಾಕ್, ಇರಾನ್ ಯುದ್ಧ ನಡೆಯಿತು. ಈಗ ಯಮನ್, ಸೌದಿ ವಾರ್. ಇದು ನಿಂತರೆ ಇನ್ನೊಂದು ವಾರ್ ಹುಟ್ಟಿಕೊಳ್ಳಬಹುದು. ಹೇಗಿದೆ ಆಯುಧ ವ್ಯಾಪಾರಕ್ಕೆ ಮಿಕಗಳನ್ನು ಸೃಷ್ಟಿಸುವ ವಿಧಾನ.