ಕೇರಳ: 7912 ಮನೆ, 1905 ಬಾವಿಗಳನ್ನು ಸ್ವಚ್ಛಗೊಳಿಸಿ ಲಕ್ಷ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಿದ ಜಮಾಅತ್

0
3723

ನೆರೆಪೀಡಿತ ಕೇರಳದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‍ನ ಅಂಗಸಂಸ್ಥೆಯಾದ ಇಸ್ಲಾಮಿಕ್ ರಿಲೀಫ್ ವಿಂಗ್ (ಐಆರ್‍ಡಬ್ಲ್ಯು) ಈವರೆಗೆ 7912 ಮನೆ ಗಳನ್ನು ಮತ್ತು 1905 ಬಾವಿಗಳನ್ನು ಸ್ವಚ್ಛಗೊಳಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಬಶೀರ್ ಶರ್ಖಿಯವರು ತಿಳಿಸಿದ್ದಾರೆ. ಬೆಂಗಳೂರಿನ ವೈಟ್ ಮನೋರ್ ಟೆರೇಸ್ ಗಾರ್ಡನ್‍ನಲ್ಲಿ ನಡೆದ ವಿವಿಧ ಸೇವಾ ಸಂಸ್ಥೆಗಳ ಜಂಟಿ ಸಭೆಯಲ್ಲಿ ಮಾತಾಡಿದ ಅವರು, ಪ್ರವಾಹಪೀಡಿತ ಪ್ರದೇಶದ ರಕ್ಷಣಾ ಕಾರ್ಯಾಚರಣೆಯಲ್ಲಿ 40 ಸಾವಿರ ಸ್ವಯಂ ಸೇವಕರನ್ನು ಐಆರ್‍ಡಬ್ಲ್ಯು ಒಟ್ಟು ಸೇರಿಸಿತಲ್ಲದೇ, 1 ಲಕ್ಷ ಜನರಿಗೆ ಆಹಾರ, ಬಟ್ಟೆಬರೆ ಮತ್ತು ಕುಡಿಯುವ ನೀರನ್ನು ಪೂರೈಸಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದೇವೇಳೆ, ‘ಕೇರಳ ಮತ್ತು ಕೊಡಗನ್ನು ಪುನರ್ ನಿರ್ಮಿಸೋಣ‘ ಎಂಬ ಯೋಜನೆಯಡಿ ಬೆಂಗಳೂರಿನ ಹಿರಾ ವೆಲ್‍ಫೇರ್ ಅಸೋಸಿಯೇಷನ್‍ನ ಜತೆಗೂಡಿ ಕೇರಳ ಪೀಪಲ್ಸ್ ಫೌಂಡೇಶನ್ 500 ಮನೆಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಫೌಂಡೇಶನ್‍ನ ಸದಸ್ಯರಾದ ಲುಕ್ಮಾನ್ ಮೊಯ್ದಿನ್ ಮತ್ತು ಸಲೀಮ್ ಮುಹಮ್ಮದ್ ಸಭೆಗೆ ಮಾಹಿತಿ ನೀಡಿದರು. ಇದಲ್ಲದೇ, 2000 ಮನೆಗಳ ದುರಸ್ತಿ, 5000 ಮಂದಿಗೆ ಉದ್ಯೋಗ ಮತ್ತು 4 ಸಾವಿರ ಮಂದಿಗೆ ವಿಮಾ ಆರೋಗ್ಯ ಕಾರ್ಡ್‍ಗಳನ್ನು ಒದಗಿಸುವ ಜವಾಬ್ದಾರಿಯನ್ನು ಫೌಂಡೇಶನ್ ನಿರ್ವಹಿಸಿದೆ ಎಂದವರು ಹೇಳಿದರು.

ಈ ಸಭೆಯಲ್ಲಿ ಮಿಲ್ಲತ್ ಟ್ರಸ್ಟ್, ಇಕ್ರಾ ವೆಲ್ಫೇರ್ ಟ್ರಸ್ಟ್, ಪ್ರೊಜೆಕ್ಟ್ ಸ್ಮೈಲ್, ಫಸ್ಟ್ ಹ್ಯಾಂಡ್, ಯುನೈಟೆಡ್ ಫೌಂಡೇಶನ್, ಲೀಡ್ ಟ್ರಸ್ಟ್, ಡಯಟ್, ಪಾಮ್ ಚಾರಿಟೇಬಲ್ ಟ್ರಸ್ಟ್, ಲೈಫ್‍ಲೈನ್ ಸಹಿತ 40 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ| ತಾಹಾ ಮತೀನ್ ಉಪಸ್ಥಿತರಿದ್ದರು.