ಒಮನ್‍ನಲ್ಲಿ ಸ್ವದೇಶೀಕರಣ ಪ್ರಭಾವ: ಬಾಡಿಗೆ ಮನೆಗಳಿಗೆ ಗಿರಾಕಿಗಳಿಲ್ಲ!

0
1656

ಮಸ್ಕತ್: ಒಮನ್‍ನಲ್ಲಿ ಸ್ವದೇಶೀಕರಣ ಏರುಗತಿಯಲ್ಲಿದ್ದು ವಿದೇಶಿಯರು ಕೆಲಸ ಕಳಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಜತೆಗೆ ಹಲವಾರು ಅನಿವಾಸಿಗಳು ಅವರವರ ಊರಿಗೆ ಮರಳುತ್ತಿದ್ದಾರೆ. ಆದ್ದರಿಂದ ಒಮನ್‍ನಲ್ಲಿ ಬಾಡಿಗೆ ಮನೆಯನ್ನು ಪಡೆಯುವವರ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದ್ದು, ಮನೆ ಮಾಲಿಕರು ಕೂಡ ಕಂಗಾಲಿದ್ದಾರೆ. ಇದರಿಂದಾಗಿ ಗಿರಾಕಿಗಳನ್ನು ಆಕರ್ಷಿಸಲು ಕಡಿಮೆ ಬಾಡಿಗೆ ನಿಗದಿ ಪಡಿಸಲು ಮನೆಮಾಲಕರು ನಿರ್ಧರಿಸಿದ್ದಾರೆ.

ಒಮನ್‍ನ ಕೆಲವು ಕಡೆಗಳಲ್ಲಿ ಹಿಂದಿಗಿಂತ ಶೇ.60ರಷ್ಟು ಕಡಿಮೆ ಬಾಡಿಗೆ ದರದಲ್ಲಿ ಮನೆಗಳು ಬಾಡಿಗೆಗೆ ಸಿಗುತ್ತಿವೆ. ಕೆಲಸ ಕಳೆದು ಕೊಂಡು, ಜತೆಗೆ ಆರ್ಥಿಕ ಮುಗ್ಗಟ್ಟು ಇತ್ಯಾದಿ ಕಾರಣಗಳಿಂದ ವಿದೇಶಿ ಕುಟುಂಬಗಳು ಊರಿಗೆ ತೆರಳುತ್ತಿವೆ. ಒಂದೆಡೆ ಬಾಡಿಗೆ ಪಡೆಯುವವರಿಲ್ಲ. ಇನ್ನೊಂದೆಡೆ ವಾಸದ ವಿಲ್ಲಾಗಳ ನಿರ್ಮಾಣ ಕಾರ್ಯ ಮುಂದುವರಿಯುತ್ತಲೇ ಇದೆ. ಈ ಎಲ್ಲ ಕಾರಣಗಳಿಂದಾಗಿ ಒಮನ್‍ನಲ್ಲಿ ಮನೆಬಾಡಿಗೆ ದರ ಇಳಿಮುಖವಾಗಿದೆ.

ಮಸ್ಕತ್‍ನ ಪ್ರಭಾವಿ ವಾಸ ಪ್ರದೇಶವಾದ ರೂವಿಗಳಲ್ಲಿ ಹಲವು ಅಪಾರ್ಟ್‍ಮೆಂಟ್ ಕಟ್ಟಡಗಳು ಖಾಲಿ ಬಿದ್ದಿವೆ. ಇದೇ ವೇಳೆ ಇಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ ಕೆಲಸದ ಸಮಸ್ಯೆಯಿಂದಾಗಿ ವಿದೇಶಿ ಕುಟುಂಬಗಳು ಅವರವರ ಊರಿಗೆ ತೆರಳುವುದು ಹೆಚ್ಚಳವಾಗಿದೆ. ಅಲ್ ಅಮಿರಾತ್, ಅಲ್ ಮಬೇಲಾಗಳಲ್ಲಿಯೂ ಬಾಡಿಗೆ ದರ ಇಳಿಕೆಯಾಗಿದೆ.

ರೂವಿಯಲ್ಲಿ ಹೆಚ್ಚು ಏಷ್ಯನ್ ಕುಟುಂಬಗಳು ವಾಸಿಸುತ್ತಿದ್ದು ಹೆಚ್ಚಿನವರು ಊರಿಗೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಬಾಡಿಗೆ ದರ ಶೇ. 20ರಷ್ಟು ಕಡಿಮೆ ಮಾಡಿದರೂ ಬಾಡಿಗೆಗೆ ಬರುವವರಿಲ್ಲ. ಒಮನ್‍ನ ಪ್ರತಿಷ್ಠಿತ ವಾಸ್ತವ್ಯ ಪ್ರದೇಶವಾದ ಮದೀನಾ ಖಾಬೂಸ್, ಶಾತ್ತಿ ಅಲ್‍ಖುರಂನಲ್ಲಿ ಕೂಡ ಬಾಡಿಗೆ ಕಡಿಮೆ ಮಾಡಲಾಗಿದೆ. ಒಂದು ಮಲಗುವ ಕೋಣೆಯ ಅಪಾರ್ಟಮೆಂಟಿಗೆ ಈಗ ಕೇವಲ ನಾಲ್ಕು ನೂರು ರಿಯಾಲ್ ಮಾತ್ರ ಬಾಡಿಗೆ ಇದೆ.

ಖಾಸಗಿ ಕ್ಷೇತ್ರದ ಸ್ವದೇಶೀಕರಣ ಮತ್ತು ಜನವರಿಯಿಂದ ವೀಸಾ ಅಲಭ್ಯತೆ ಇತ್ಯಾದಿ ಕಾರಣಗಳು ಮನೆಗಳಿಗೆ ಬೇಡಿಕೆ ಇಳಿಮುಖಗೊಳ್ಳಲು ಕಾರಣವಾಗಿದೆ. ಮುಂಬರುವ ವರ್ಷದಲ್ಲಿ ಇನ್ನಷ್ಟು ವಿದೇಶಿಗರು ತಮ್ಮ ಊರಿಗೆ ತೆರಳಲಿದ್ದು, ಇದರೊಂದಿಗೆ ಮನೆ ಬಾಡಿಗೆ ಒಮನ್‍ನಲ್ಲಿ ಇನ್ನಷ್ಟು ಕಡಿಮೆಯಾಗಲಿದೆ.