ಬಿಹಾರ: ಶ್ರವಣಹೀನ ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಬಾಲಕಿಯ ಕಣ್ಣನ್ನೇ ಘಾಸಿಗೊಳಿಸಿದ ದುಷ್ಟರು

0
619

ಸನ್ಮಾರ್ಗ ವಾರ್ತೆ

ಪಾಟ್ನಾ: ಆಡುಗಳನ್ನು ಮೇಯಿಸಲೆಂದು ತೆರಳುತ್ತಿದ್ದ 15 ವರ್ಷದ ಶ್ರವಣಹೀನ ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಟರು ನಂತರ ಆಕೆ ತಮ್ಮನ್ನು ಗುರುತಿಸಬಾರದೆಂದು ಕಣ್ಣುಗಳಿಗೆ ಚೂಪಾದ ವಸ್ತುವಿನಿಂದ ಕುಕ್ಕಿ ಹಾನಿಗೊಳಿಸಿದ ಬರ್ಬರ ಪ್ರಕರಣವು ಬಿಹಾರದ ಮಧುಬನಿ ಜಿಲ್ಲೆಯ ಕೌವಾಹ ಬರ್ಹಿ ಗ್ರಾಮದಲ್ಲಿ ವರದಿಯಾಗಿದೆ.

ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯದ ಕುರಿತಂತೆ ಆಕೆಯ ಜತೆಗೆ ತೆರಳಿದ್ದ ಮಕ್ಕಳಲ್ಲೊಬ್ಬರು ಆಕೆಯ ಕುಟುಂಬಕ್ಕೆ ತಿಳಿಸಿದ್ದು ಆಕೆಯ ಕುಟುಂಬ ಸದಸ್ಯರು ಧಾವಿಸಿ ಬಂದಾಗ ಹತ್ತಿರದ ಗ್ರಾಮದ ಪಾಳು ಗದ್ದೆಯಲ್ಲಿ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಬಾಲಕಿಯನ್ನು ಆರಂಭದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಧುಬನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಲಕಿಯ ಎರಡೂ ಕಣ್ಣುಗಳು ಹಾನಿಗೊಂಡಿದ್ದು ಆಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಘಟನೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು ಆರೋಪಿಗಳೆಲ್ಲರೂ ಆಕೆಯ ಗ್ರಾಮದವರೇ ಆಗಿದ್ದಾರೆ.