ಜುನೈದ್ ಹತ್ಯೆ ಪ್ರಕರಣ: ಮುಖ್ಯ ಆರೋಪಿಗೆ ಜಾಮೀನು

0
1575

ಚಂಡಿಗಡ: ದೇಶದಲ್ಲಿ ನಡೆದ ಮೊದಲ ರೈಲು ಗುಂಪು ಹತ್ಯೆ ಪ್ರಕರಣದ ಮುಖ್ಯ ಆರೋಪಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜಾಮೀನು ನೀಡಿದೆ. ಕಳೆದ ವರ್ಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 16ರ ಹರೆಯದ ಹಾಫೀಝ್ ಜುನೈದ್ ಖಾನ್‍ನನ್ನು ಸಹ ಪ್ರಯಾಣಿಕರ ಗುಂಪೊಂದು ಧಾರ್ಮಿಕವಾಗಿ ನಿಂದಿಸಿ ಚೂರಿ ಇರಿದು ಬರ್ಬರವಾಗಿ ಥಳಿಸಿ ಕೊಂದಿತ್ತು.

ಈ ಬರ್ಬರ ಹತ್ಯೆಗೆ ಸಂಬಂಧಿಸಿ ದಂತೆ ಪೊಲೀಸರು 6 ಜನರನ್ನು 2017ರ ಜೂನ್ 22ರಂದು ಬಂಧಿಸಿದ್ದರು. ಪೊಲೀಸರು ಚಾರ್ಜ್‍ಶೀಟ್ ಬರೆಯುವ ಮುನ್ನವೇ ನಾಲ್ವರು ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದರು. ಈ ಕುರಿತು ಜುನೈದ್‍ರ ಹಿರಿಯ ಸಹೋದರ ಶಾಕೀರ್ ಪೊಲೀಸರೇ ಆರೋಪಿಗಳಿಗೆ ಫರೀದಾಬಾದ್ ಕೋರ್ಟ್‍ನಿಂದ ಜಾಮೀನು ತಡೆಯಲು ಸಹಾಯ ಮಾಡಿರುವುದಾಗಿ ಆರೋಪಿಸಿದ್ದಾರೆ.

ಇನ್ನೋರ್ವ ಮುಖ್ಯ ಆರೋಪಿಯು ಕಳೆದ ತಿಂಗಳಷ್ಟೇ ಪಂಜಾಬ್ ಮತ್ತು ಹರ್ಯಾಣ ಕೋರ್ಟ್‍ನಿಂದ ಜಾಮೀನು ಪಡೆದು ಹೊರಬಂದರೆ ಕೊನೆಯ ಮುಖ್ಯ ಆರೋಪಿಯಾದ ನರೇಶ್ ಕುಮಾರ್ ಕೂಡಾ ಅಕ್ಟೋಬರ್ 3 ರಂದು ಜಾಮೀನು ಪಡೆದು ಹೊರಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, “ನ್ಯಾಯಾಂಗದ ಮೇಲೆ ಇದ್ದ ನಮ್ಮ ನಂಬಿಕೆಗೆ ತಣ್ಣೀರೆರಚಿದೆ.

ಇನ್ನು ಆರೋಪಿಗಳು ಸರಾಗವಾಗಿ ಸಾಕ್ಷ್ಯಗಳನ್ನು ತಿರುಚುವ ಕೆಲಸಕ್ಕೆ ಮುಂದಾಗಬಹುದು. ನನ್ನ ತಮ್ಮನ ಸಾವಿಗೆ ನ್ಯಾಯವೇ ಲಭಿಸದ ದಿನಗಳು ಬರಬಹುದು” ಎಂದು ಶಾಕೀರ್ ತಿಳಿಸಿದ್ದಾರೆ. ಈ ಮೊದಲು ನರೇಶ್ ಕುಮಾರ್ ಜಾಮೀನು ಕೋರಿಕೆಯನ್ನು ಸೆಷನ್ ಜಡ್ಜ್ ತಳ್ಳಿ ಹಾಕಿದ್ದರು. ಅಲ್ಲದೇ ಸುಪ್ರೀಮ್ ಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣವು ಮುಂದುವರಿಯುವುದನ್ನು ತಡೆ ಹಿಡಿದಿತ್ತು.

ಕಳೆದ ವರ್ಷ ಹರ್ಯಾಣ ಸರಕಾರವು ಘೋಷಿಸಿದ್ದು 10 ಲಕ್ಷ ರೂ. ನಷ್ಟ ಪರಿಹಾರ ಇದುವರೆಗೂ ಕುಟುಂಬದ ಕೈ ಸೇರಿಲ್ಲ.