1996 ರಲ್ಲೇ ಕತರ್ ಆಡಳಿತವನ್ನು ಬುಡಮೇಲುಗೊಳಿಸಲು ವಿಫಲ ಯತ್ನ ನಡೆಸಲಾಗಿತ್ತು: ಅಲ್ ಜಜೀರಾ ಡಾಕ್ಯುಮೆಂಟರಿ

0
844

ಕತರ್ ಆಡಳಿತವನ್ನು ಬುಡಮೇಲುಗೊಳಿಸಲು 1996 ರಲ್ಲಿ ನಡೆದ ವಿಫಲ ದಂಗೆಗೆ ಸೌದಿ ಅರೇಬಿಯಾ, ಬಹರೇನ್ ಮತ್ತು ಯು ಏ ಇ ಬೆಂಬಲ ನೀಡಿತ್ತಲ್ಲದೆ ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು ಎಂಬುದನ್ನು ಅಲ ಜಜೀರಾ ಚಾನೆಲ್ ನ ಡಾಕ್ಯುಮೆಂಟರಿಯೊಂದು ಬಹಿರಂಗಪಡಿಸಿದೆ. ಈ ಡಾಕ್ಯುಮೆಂಟರಿಯ ಪ್ರಥಮ ಭಾಗವು ಕಳೆದ ಬಾನುವಾರ ಪ್ರಸಾರಗೊಂಡಿದ್ದು, ನಿವೃತ್ತ ಬ್ರಿಗೇಡಿಯರ್ ಜನರಲ್ ಶಾಹೀನ್ ಅಲ್ ಸುಲೈತಿಯೂ ಸೇರಿದಂತೆ ಹಲವು ನಾಯಕರ ಸಂದರ್ಶನವನ್ನೊಳಗೊಂಡಿದೆ. ಈ ಬುಡಮೇಲು ಕೃತ್ಯದಲ್ಲಿ ಸೌದಿ ಗುಪ್ತಚರ ವಿಭಾಗ ಮತ್ತು ರಾಜಕುಟುಂಬ ಭಾಗಿಯಾಗಿರುವುದಾಗಿ ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ. ಈ ಕೃತ್ಯವನ್ನು ಜಾರಿಗೆ ತರಲು ಸಮಿತಿಯೊಂದನ್ನು ರೂಪಿಸಲಾಗಿತ್ತು. ಅದರಲ್ಲಿ ಅಬುಧಾಬಿಯ ಈಗಿನ ರಾಜಕುಮಾರ ಶೈಖ್ ಮುಹಮ್ಮದ್ ಬಿನ್ ಜಾಯೆಜ್, ಬಹರೇನ್ ನ ರಾಜಕುಮಾರ ಶೈಖ್ ಹಮದ್ ಬಿನ್ ಇಸ್ಸಾ ಅಲ್ ಖಲೀಫಾ, ಸೌದಿಯ ರಕ್ಷಣಾ ಮಂತ್ರಿ ಶೈಖ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಮತ್ತು ಈಜಿಪ್ಟ್ ನ ಮಾಜಿ ಉಪಾಧ್ಯಕ್ಷ ಮತ್ತು ಗುಪ್ತರ ವಿಭಾಗದ ಮುಖ್ಯಸ್ಥರಾಗಿದ್ದ ಉಮರ್ ಸುಲೈಮಾನ್ ಇದ್ದರು ಎಂದು ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ.
ಬುಡಮೇಲು ಕೃತ್ಯ ನಡೆದು ಭದ್ರತಾಪಡೆಗಳು ಮತ್ತು ಮಿಲಿಟರಿಯ ಮೇಲೆ ನಿಯಂತ್ರಣ ಸಾಧ್ಯವಾದ ಬಳಿಕ ಸೌದಿ ಗಡಿಯಿಂದ ಮಿಲಿಶಿಯವನ್ನು ಕರೆಸುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಈ ಬುಡಮೇಲು ಕೃತ್ಯ ಬಹಿರಂಗಗೊಂಡಿತಲ್ಲದೆ, ಅದನ್ನು ವಿಫಲಗೊಳಿಸಲಾಯಿತು.
ಕತರ್ ವಿರುದ್ಧ ಸೌದಿ, ಯುಎಇ, ಬಹರೈನ್ ಮತ್ತು ಈಜಿಪ್ಟ್ ಗಳು ನಿರ್ಬಂಧ ಹೇರಿದ 8 ತಿಂಗಳ ಬಳಿಕ ಈ ಡಾಕ್ಯುಮೆಂಟರಿ ಪ್ರಸಾರವಾಗಿದೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಈ ಡಾಕ್ಯುಮೆಂಟರಿಯ ಕುರಿತಂತೆ ಪರ- ವಿರುದ್ಧ ಅಭಿಪ್ರಾಯಗಳು ಕೇಳಿಬಂದಿವೆ.