2019ರ ಬಳಿಕ ಪ್ರಧಾನಿ ಮೋದಿ ಎಲ್ಲಿ?

0
1864
  ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ ಕುಸಿಯುತ್ತಿರುವುದು ಬಿಜೆಪಿಯ ಒಳಗೂ ಅದರ ಬೆಂಬಲಿಗ ಸಂಘಟನೆಗಳಲ್ಲೂ ಗಂಭೀರ ಅವಲೋಕನಕ್ಕೆ ಒಳಗಾಗುತ್ತಿದೆ ಅನ್ನುವ ಸುದ್ದಿಯಿದೆ. 2019 ಲೋಕಸಭಾ ಚುನಾವಣೆಯನ್ನು 2018ರಲ್ಲೇ ನಡೆಸಿದರೆ ಹೇಗೆ ಎಂದು ಚಿಂತಿಸುವ ಹಂತಕ್ಕೆ ಪಕ್ಷದ ಚಿಂತಕ ಛಾವಡಿ ತಲುಪಿ ಬಿಟ್ಟಿದೆ ಎಂಬ ಮಾತೂ ಕೇಳಿಬರುತ್ತಿದೆ. 2014ರಲ್ಲಿ ನರೇಂದ್ರ ಮೋದಿಯವರು ದೆಹಲಿ ರಾಜಕಾರಣಕ್ಕೆ ಹೊರಗಿನವರಾಗಿದ್ದರು. ಸತತ ಮೂರನೇ ಬಾರಿಗೆ ಆಡಳಿತ ನಡೆಸುತ್ತಿದ್ದ ಪ್ರಧಾನಿ ಮನ್‍ಮೋಹನ್ ಸಿಂಗ್ ಸರಕಾರವಂತೂ ಪ್ರಮಾದಗಳ ಸುಳಿಯಲ್ಲಿತ್ತು. ಅಣ್ಣಾ ಹಜಾರೆ ಮತ್ತು ನಿರ್ಭಯ ಇಬ್ಬರೂ ಸೇರಿ ಆಡಳಿತ ವಿರೋಧಿ ಅಲೆಯೊಂದನ್ನು ದೇಶದಾದ್ಯಂತ ಎಬ್ಬಿಸಲು ಶಕ್ತರಾಗಿದ್ದರು. ನರೇಂದ್ರ ಮೋದಿ ಅದನ್ನು ಸಮರ್ಥವಾಗಿ ಬಳಸಿಕೊಂಡರು. ಅವರ ವಾಗ್ವೈಖರಿ ವಿಶಿಷ್ಟವಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರ ಶಾಂತ ಧ್ವನಿಯು ಮೋದಿಯವರ ನಿರ್ಭಿಡೆಯ ಧ್ವನಿಯೆದುರು ಮಂಕಾದಂತೆ ಕಂಡಿತು. ಮನ್‍ಮೋಹನ್ ಸಿಂಗ್ ಅವರು ಮಾತಿಗೆ ಮೊದಲು ಪದಗಳನ್ನು ಅಳೆದೂ ತೂಗಿ ನೋಡುತ್ತಿದ್ದರೆ ಮೋದಿಯವರು ಪದಗಳಿಗೆ ಜರಡಿ ಹಿಡಿಯದೇ ಆಡುತ್ತಿದ್ದರು. ಅವರ ಮಟ್ಟಿಗೆ ಯಾವ ಪದಗಳೂ ಅಸ್ಪೃಶ್ಯ ಆಗಿರಲಿಲ್ಲ. ಆಡಿದ್ದೆಲ್ಲವೂ ಮಾತು, ಹೇಳಿದ್ದೆಲ್ಲವೂ ಪ್ರಣಾಳಿಕೆಯಾಗಿ ಬಿಟ್ಟಿತು. ನರೇಂದ್ರ ಮೋದಿಯವರಿಗೆ ಇದ್ದ ಅನುಕೂಲ ಏನೆಂದರೆ, ಅವರಿಗೊಬ್ಬ ಶತ್ರು ಇದ್ದ. ಯುಪಿಎ ಎಂಬ ಆ ಶತ್ರುವನ್ನು ಜನರ ಮುಂದೆ ನಿಲ್ಲಿಸಿ ಝಾಡಿಸುವುದು ಸುಲಭವೂ ಆಗಿತ್ತು. ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆಯುವಲ್ಲಿಂದ ಹಿಡಿದು ಪಾಕಿಸ್ತಾನದ ವರೆಗೆ ಅವರ ಕದನ ಕ್ಷೇತ್ರ ತುಂಬಾ ವಿಶಾಲವಾಗಿತ್ತು. ಅವರಿಗೆ ತಾನೇನು ಮಾಡಿದೆ ಎಂದು ಹೇಳಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಎದುರಿನ ಶತ್ರು ಏನೆಲ್ಲ ಮಾಡಲಿಲ್ಲ ಎಂದು ಹೇಳುವ ಅಗತ್ಯವಷ್ಟೇ ಇತ್ತು. ಈ ಬಗೆಯ ಸನ್ನಿವೇಶ ಚುನಾವಣಾ ರಂಗಸ್ಥಳದಲ್ಲಿ ವಿರೋಧ ಪಕ್ಪಗಳಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ. ನರೇಂದ್ರ ಮೋದಿಯವರು ಈ ವಾತಾವರಣವನ್ನು ಚೆನ್ನಾಗಿ ಬಳಸಿಕೊಂಡರು. ತಾನು ಏನು ಅನ್ನುವುದಕ್ಕಿಂತ ಎದುರಿನವರು ಏನಲ್ಲ ಅನ್ನುವುದಕ್ಕೆ ಒತ್ತು ಕೊಟ್ಟರು. ತಾನು ದಮನಿತ ಸಮುದಾಯದವ ಎಂದು ಬಿಂಬಿಸಿಕೊಂಡರು. ಚಾಯ್‍ವಾಲಾ ಮತ್ತು ಶೆಹೆಝಾದ (ರಾಜಕುಮಾರ)- ಈ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರಾಗಬಹುದು ಎಂಬ ಪ್ರಶ್ನೆಯನ್ನೂ ಮುಂದಿಟ್ಟರು. ಅವರ ಭಾಷೆ, ಶತ್ರುವಿನ ದೌರ್ಬಲ್ಯಗಳನ್ನು ಹುಡುಕಿ ಎತ್ತಿ ಹೇಳುವ ಶೈಲಿ, ಚುರುಕುತನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಮಾಮೂಲಿ ಮುಖಕ್ಕಿಂತ ಅಪರಿಚಿತವಾದ ಹೊಸ ಮುಖವು ಜನರನ್ನು ಕ್ಪಣ ಆಕರ್ಷಿಸಿತು. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನ್ಯಾಯಾಂಗೀಯ ಸುಧಾರಣೆಗಳ ಬಗ್ಗೆ ಅವರಲ್ಲಿ ಖಚಿತ ನಿಲುವುಗಳೇನೂ ಇರದೇ ಇದ್ದರೂ ಮತ್ತು ಆರ್ಥಿಕತೆಯ ಒಳಹೊಕ್ಕು ಮಾತಾಡುವ ಸಾಮಥ್ರ್ಯ ಶೂನ್ಯವಾಗಿದ್ದರೂ ಮಾತಿನ ಓಘದಲ್ಲಿ ಅವನ್ನೆಲ್ಲ ನಗಣ್ಯವಾಗಿಸಲು ಅವರು ಯಶಸ್ವಿಯಾದರು. ಆದ್ದರಿಂದಲೇ, 2009ರ ಚುನಾವಣೆಗೆ ಹೋಲಿಸಿದರೆ 2014ರ ಚುನಾವಣೆಯಲ್ಲಿ ಒಟ್ಟು 8% ಹೆಚ್ಚುವರಿ ಮತದಾನವಾಯಿತು. ದೊಡ್ಡ ಸಂಖ್ಯೆಯಲ್ಲಿ ಯುವ ಮತದಾರರು 2014ರಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ನಿಜವಾಗಿ, ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ನರೇಂದ್ರ ಮೋದಿಯಾಗಿಸಿದ್ದೇ  ಈ ಯುವ ಮತದಾರರು. ಅವರು ಚಲಾಯಿಸಿದ ಮತವು ಫಲಿತಾಂಶವನ್ನು ನಿರ್ಧರಿಸಿತು. 2009ರಲ್ಲಿ ಚಲಾವಣೆಯಾದ ಮತಕ್ಕಿಂತ 15% ಹೆಚ್ಚುವರಿ ಮತ ಚಲಾವಣೆಯಾದ 70 ಲೋಕಸಭಾ ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತು. 2009ರಲ್ಲಿ ಚಲಾವಣೆಯಾದುದಕ್ಕಿಂತ 10ರಿಂದ 15 ಶೇಕಡಾದಷ್ಟು ಹೆಚ್ಚು ಮತದಾನವಾದ 145 ಕ್ಷೇತ್ರಗಳ ಪೈಕಿ 125 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. 10% ಹೆಚ್ಚು ಮತದಾನವಾದ 267 ಕ್ಷೇತ್ರಗಳ ಪೈಕಿ 123 ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಪಡೆಯಿತು. ಆದರೆ 2009ಕ್ಕಿಂತ ಕಡಿಮೆ ಮತ ಚಲಾವಣೆಯಾದ 61 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಪಗಳು ಪಡೆದುಕೊಂಡಿರುವುದು ಬರೇ 21 ಕ್ಷೇತ್ರಗಳನ್ನು. ನರೇಂದ್ರ ಮೋದಿಯವರು ಪ್ರಧಾನಿಯಾಗುವಲ್ಲಿ ಯುವ ಮತದಾರರ ಪಾತ್ರ ಏನು ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷಗಳು ಸಂದ ಈ ಸಂದರ್ಭದಲ್ಲಿ ಸ್ಥಿತಿ ಹೇಗಿದೆಯೆಂದರೆ, ಅವರ ಮೇಲೆ ಭರವಸೆ ಇಟ್ಟಿದ್ದ ಯುವ ಸಮೂಹ ಗಾಢ ನಿರಾಶೆಯೆಡೆಗೆ ಸಾಗುತ್ತಿದೆ. ಒಂದು ಬಗೆಯ ಅಸಂತೃಪ್ತಿ ಮತ್ತು ಆಕ್ರೋಶ ನಿಧಾನಕ್ಕೆ ರೂಪು ಪಡೆಯುತ್ತಿದೆ. ಆದ್ದರಿಂದಲೇ, ನೋಟು ನಿಷೇಧ ಮತ್ತು ಜಿಎಸ್‍ಟಿಯನ್ನು ಒಂದು ಹಂತದ ವರೆಗೆ ಮೌನವಾಗಿ ಸಹಿಸಿಕೊಂಡ ಸಮಾಜ, ಎಸ್‍ಸಿ-ಎಸ್‍ಟಿ ಕಾಯ್ದೆಯ ವಿಷಯದಲ್ಲಿ ಮೋದಿಯವರ ನಿಲುವನ್ನು ಬೀದಿಗಿಳಿದು ಬೃಹತ್ ಮಟ್ಟದಲ್ಲಿ ಪ್ರತಿಭಟಿಸಿತು. ಇದಕ್ಕಿಂತ ಮೊದಲು ದೇಶದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮೋದಿ ನೀತಿಯ ವಿರುದ್ಧ ಬೀದಿಗಿಳಿದಿದ್ದರು. ಇತ್ತೀಚೆಗಿನ ಕಥುವಾ ಮತ್ತು ಉನ್ನಾವೋ ಅತ್ಯಾಚಾರ ಘಟನೆಗಳ ವಿಷಯದಲ್ಲಂತೂ ಯುವ ಸಮೂಹ ಬಿಜೆಪಿಯನ್ನೇ ನೇರ ಆರೋಪಿ ಸ್ಥಾನದಲ್ಲಿ ಕೂರಿಸಿತು. ಈ ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ, 2012ರಲ್ಲಿ ನಿರ್ಭಯ ಪ್ರಕರಣದಲ್ಲಿ ಎಷ್ಟಿತ್ತೋ ಅಷ್ಟು. ಅಂದು ಮನ್‍ಮೋಹನ್ ಸಿಂಗ್ ಅವರು ಆ ಪ್ರತಿಭಟನೆಗೆ ಬೆದರಿ ಹೊಸ ಕಾನೂನೊಂದನ್ನೇ ರಚಿಸುವ ಅನಿವಾರ್ಯತೆಗೆ ಸಿಲುಕಿದರೆ ಈ ಅತ್ಯಾಚಾರ ಘಟನೆಗಳಿಂದ ತತ್ತರಿಸಿದ ನರೇಂದ್ರ ಮೋದಿಯವರು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನೊಂದನ್ನು ಜಾರಿಗೊಳಿಸಿದರು. ಈ ಬೆಳವಣಿಗೆಯೇ ಮೋದಿ ಸರಕಾರದ ಸದ್ಯದ ಸ್ಥಿತಿಯನ್ನು ಹೇಳುತ್ತದೆ.
ನಿಜವಾಗಿ, ನರೇಂದ್ರ ಮೋದಿಯವರು ಪ್ರತಿನಿಧಿಸುವ ಬಲಪಂಥೀಯ ವಿಚಾರಧಾರೆಗೆ ಭಾರತದಲ್ಲಿ ಮಾತ್ರ ಮಾನ್ಯತೆ ದಕ್ಕಿರುವುದಲ್ಲ. ಜಾಗತಿಕವಾಗಿ ಒಂದಕ್ಕಿಂತ ಹೆಚ್ಚು ರಾಷ್ಟ್ರಗಳು ಬಲಪಂಥೀಯ ವಿಚಾರಧಾರೆಗೆ ಮಾನ್ಯತೆ ನೀಡಿವೆ. ರಷ್ಯಾದ ಅಧ್ಯಕ್ಪ ವ್ಲಾದಿಮಿರ್ ಪುತಿನ್ ಮತ್ತು ಅಮೇರಿಕದ ಅಧ್ಯಕ್ಪ ಟ್ರಂಪ್ ಅವರು ಈ ವಿಚಾರಧಾರೆಯ ಈಗಿನ ಅತ್ಯಂತ ಜನಪ್ರಿಯ ಮುಖಗಳಾದರೆ, 2009ರಿಂದ ಅಧಿಕಾರದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 2010ರಿಂದ ಆಡಳಿತ ನಡೆಸುತ್ತಿರುವ ಹಂಗೇರಿಯ ಅಧ್ಯಕ್ಪ ವಿಕ್ಟರ್ ಓರ್‍ಬಾನ್, 2016ರಲ್ಲಿ ಫಿಲಿಪ್ಪೀನ್ಸ್‍ನ ಅಧ್ಯಕ್ಪರಾಗಿ ಆಯ್ಕೆಯಾದ ರೋಡ್ರಿಗೋ ಡುಟ್‍ಕೆಟ್ ಮತ್ತು ಉಗಾಂಡದಲ್ಲಿ 5ನೇ ಬಾರಿ ಅಧ್ಯಕ್ಪರಾಗಿ ಆಯ್ಕೆಯಾದ ಯೋವರಿ ಮುಸೆವೇನಿ ಮುಂತಾದವರು ನರೇಂದ್ರ ಮೋದಿಯವರಂತೆ ಬಲಪಂಥೀಯ ವಿಚಾರಧಾರೆಯನ್ನೇ ಪ್ರತಿನಿಧಿಸುವವರು. ಆದರೆ ಈ ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಎಷ್ಟು ಆಳವಾಗಿ ಬೇರೂರಿ ಬಿಟ್ಟಿವೆಯೆಂದರೆ, ಕೇವಲ ನಾಲ್ಕು ವರ್ಷಗಳಲ್ಲೇ  ಓರ್ವ ಜಾತ್ಯತೀತ ವಿರೋಧಿ ಪ್ರಬಲ ನಾಯಕ ತೆರೆಮರೆಗೆ ಸರಿಯುವ ಸೂಚನೆ ನೀಡುತ್ತಿದ್ದಾರೆ. ಅವರ ಹೊಳಪು ಮಬ್ಬಾಗತೊಡಗಿದೆ. 2014ರಲ್ಲಿ ಅವರು ಉದುರಿಸಿದ ಡಯಲಾಗ್‍ಗಳು ಹಳತಾಗಿವೆ. ಹಳತಿನ ಜಾಗದಲ್ಲಿ ಹೊಸ ಡಯಲಾಗನ್ನು ಹೆಣೆಯುವುದಕ್ಕೆ ಅವರಲ್ಲಿ ಏನೇನೂ ಇಲ್ಲ. ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣವನ್ನು ತಂದು ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಪ ತುಂಬುವಲ್ಲಿಂದ ಹಿಡಿದು ಪಾಕಿಸ್ತಾನಕ್ಕೆ ಪಾಠ ಕಲಿಸುವವರೆಗೆ 2014ರಲ್ಲಿ ಮೋದಿ ಯಾವೆಲ್ಲ ಭರವಸೆಗಳನ್ನು ಹುಟ್ಟು ಹಾಕಿದ್ದರೋ ಅವೆಲ್ಲವೂ ನಾಲ್ಕು ವರ್ಷಗಳ ಅಧಿಕಾರದ ಬಳಿಕವೂ ಈಡೇರದ ಭರವಸೆಗಳಾಗಿಯೇ ಉಳಿದುಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಯೋಧರು ಪಾಕ್ ಗಡಿಯಲ್ಲಿ ಪ್ರಾಣ ತೆತ್ತಷ್ಟು ಮನ್‍ಮೋಹನ್‍ರ ಎರಡು ಪೂರ್ಣ ಅವಧಿಗಳಲ್ಲೂ ತೆತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಯಾವೆಲ್ಲ ಸುಧಾರಣೆಗಳನ್ನು ಮತ್ತು ಬದಲಾವಣೆಗಳನ್ನು ಯುವ ಮತದಾರರು ನಿರೀಕ್ಷಿಸಿದ್ದರೋ ಅವೆಲ್ಲವೂ ನಿರಾಶೆಯಾಗಿ ಪರಿವರ್ತನೆಯಾಗತೊಡಗಿದೆ. ಮೋದಿ ವರ್ಚಸ್ಸು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಕುಸಿಯತೊಡಗಿದೆ. ಅವರ ಭಾಷಣಗಳು ಸಪ್ಪೆಯಾಗತೊಡಗಿವೆ. 2014ರಲ್ಲಿ ತಮಾಷೆಯ ವಸ್ತುವಾಗಿದ್ದ ರಾಹುಲ್ ಗಾಂಧಿಯವರು ಈಗ ಪ್ರಬಲ ಮಾತುಗಾರನಾಗಿ ಮತ್ತು ಪ್ರತಿಸ್ಪರ್ಧಿಯಾಗಿ ಬೆಳೆದಿರುವುದೇ ಮೋದಿಯವರ ಜನಪ್ರಿಯತೆ ಕುಸಿದಿರುವುದಕ್ಕೆ ಉತ್ತಮ ಪುರಾವೆ. ಈಗಿನ ಭಾರತವು ಮೋದಿಯನ್ನು ಹೊರತುಪಡಿಸಿದ ನಾಯಕನನ್ನು ಹುಡುಕತೊಡಗಿದೆ. ಒಂದು ವೇಳೆ ಯುವ ಸಮೂಹದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಈ ವಿಷಾದ ಭಾವವು ಹೀಗೆಯೇ ಮುಂದುವರಿದರೆ 2019ರ ಚುನಾವಣೆಯ ಬಳಿಕ ಮೋದಿ ಪ್ರಧಾನಿಯಾಗಿ ಉಳಿಯುವ ಸಾಧ್ಯತೆ ತೀರಾ ಕಡಿಮೆ.