ಝಕರಿಯ್ಯಾ: ಒಂದು ನ್ಯಾಯ ನಿರಾಕರಣೆಯ ಕರುಣಾಜನಕ ವ್ಯಥೆ

0
1727

✒ಸಲೀಮ್ ಬೋಳಂಗಡಿ

ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಆರೋಪದಲ್ಲಿ ಬಂಧಿತನಾದ ಕೇರಳದ ಕೋಝಿಕೋಡ್ ಜಿಲ್ಲೆಯ ಪರಪ್ಪನಂಗಾಡಿ ನಿವಾಸಿ ಝಕರಿಯ್ಯ ಕಳೆದ ಹತ್ತು ವರ್ಷಗಳಿಂದ ಪರಪ್ಪನ ಅಗ್ರಹಾರ  ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ನ್ಯಾಯದ ವಿಳಂಬದಿಂದ ಓರ್ವ ಯುವಕನ ಬದುಕು ಹರಣವಾಗುತ್ತಿದೆ.

2009ರ  ಫೆಬ್ರವರಿ ಐದರಂದು ಹತ್ತೊಂಬತ್ತರ ಹರೆಯದ ಝಕರಿಯ್ಯಾನನ್ನು ರಾಷ್ಟ್ರೀಯ ತನಿಖಾ ಅಧಿಕಾರಿಗಳು  ತಿರೂರಿನಿಂದ  ಯು.ಎ.ಪಿ.ಎ ಪ್ರಕರಣದಡಿಯಲ್ಲಿ ಕೇಸು ದಾಖಲಿಸಿ ಬಂಧಿಸಿದ್ದರು. ಬಂಧಿಸುವಾಗ ಪಾಲಿಸಬೇಕಾದ  ಸಾಮಾನ್ಯವಾದ ನ್ಯಾಯ ಕೂಡಾ ಪಾಲಿಸಿಲ್ಲ. ತೀರೂರಿನ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದಾತನನ್ನು ಏಕಾಏಕಿ  ಬಂಧಿಸಲಾಗಿತ್ತು. ಆಗ ಈತನಿಗೆ ಹತ್ತೊಂಬತ್ತರ ಹರೆಯ. ಈತನ ಬಂಧನದ ವಿಚಾರ ಕೂಡಾ ಮನೆಯವರಿಗೆ  ಮೂರು ದಿನಗಳ ಬಳಿಕ ಮಾಧ್ಯಮದ ಮೂಲಕ ತಿಳಿಯಿತು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಚಿಪ್  ತಯಾರಿಸಿಕೊಟ್ಟಿದ್ದಾನೆಂಬ ಆರೋಪ ಈತನ ಮೇಲಿದೆ. ಪ್ರಕರಣದಲ್ಲಿ ಒಂಬತ್ತನೇ ಆರೋಪಿಯಾಗಿ  ದಾಖಲಿಸಲ್ಪಟ್ಟಿರುವ ಈತನ ವಿರುದ್ದ ನಕಲಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಕರ್ನಾಟಕ ಪೋಲೀಸರು ಸಲ್ಲಿಸಿದ್ದಾರೆಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಯಾಕೆಂದರೆ ಸಾಕ್ಷಿಗಳು ಕೂಡಾ ನಾವು ಅಂತಹ ಹೇಳಿಕೆ ನೀಡಿಲ್ಲವೆಂದು  ಬಹಿರಂಗಪಡಿಸಿದ್ದಾರೆ, ಹೇಗೆಂದರೆ ನಿಝಾಮುದ್ದೀನ್ ಎಂಬ ಓರ್ವ ಸಾಕ್ಷಿಯಿಂದ ಕನ್ನಡದಲ್ಲಿ ಬರೆದ ಪತ್ರವೊಂದಕ್ಕೆ  ಕರ್ನಾಟಕ ಪೋಲೀಸರು ಸಹಿ ಹಾಕಿಸಿಕೊಂಡಿದ್ದಾರೆಂದೂ, ನಾನು ಇದುವರೆಗೂ ಝಕರಿಯ್ಯಾನನ್ನು ಸಂಪರ್ಕಿಸಿಯೇ ಇಲ್ಲವೆಂದು ಇನ್ನೋರ್ವ ಸಾಕ್ಷಿದಾರ ಹರಿದಾಸ್ ಕೂಡಾ ಬಹಿರಂಗ ಪಡಿಸಿದ್ದಾರೆ. ಇದು ಈ  ಪ್ರಕರಣದ ಸತ್ಯಾಸತ್ಯತೆಯನ್ನು ಮನಗಾಣಿಸುತ್ತದೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ಮನಗಾಣಿಸಿದರೂ ಅದನ್ನು  ನ್ಯಾಯಾಲಯ ಪರಿಗಣಿಸಿಲ್ಲ. ಝಕರಿಯ್ಯಾನ ಬಿಡುಗಡೆ ಆಗ್ರಹಿಸಿ ಆತನ ಕುಟುಂಬದ ಸದಸ್ಯರು, ಯುವ  ಸಂಘಟನೆಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಕಳೆದ ಕೆಲ ವರ್ಷಗಳಿಂದ ವಿವಿಧ ಅಭಿಯಾನವನ್ನು ನಡೆಸುತ್ತಿದ್ದಾರೆ. ಫ್ರೀ ಆಕ್ಷನ್ ಝಕರಿಯ್ಯಾ ಫಾರಮ್ ಎಂಬ ಸಂಘಟನೆಯೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಕಳೆದ ಕೆಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆದರೆ ಆಡಳಿತ ಅದನ್ನು ಕಿವಿಗೆ ಹಾಕಿ ಕೊಳ್ಳುತ್ತಿಲ್ಲ.  ಝಕರಿಯ್ಯಾ ತಪ್ಪಿತಸ್ಥನೆಂದಾದರೆ ಆತನಿಗೆ ಶಿಕ್ಷೆ ವಿಧಿಸಲಿ, ಅನ್ಯಾಯವಾಗಿ ಕಾಲ ಹರಣ ಮಾಡಿ ಅವರ ಬದುಕನ್ನು  ಹರಣ ಮಾಡಬೇಡಿ ಎಂದು ಮಾನವ ಹಕ್ಕು ಸಂಘಟನೆಗಳು ಆಗ್ರಹಿಸುತ್ತಿವೆ. ಇಷ್ಟಕ್ಕೂ ಪ್ರಕರಣದ ತನಿಖೆ ಅಂತಿಮ  ಹಂತದಲ್ಲಿರುವಾಗ ಸರಕಾರಿ ವಕೀಲರು ಹಠಾತ್ತನೆ ರಾಜಿನಾಮೆ ನೀಡಿದ್ದು ಪ್ರಕರಣ ಮತ್ತಷ್ಟು ವಿಳಂಬವಾಗಲು  ಕಾರಣ ವಾಯಿತು. ಇದು ಕೂಡಾ ವ್ಯವಸ್ಥಿತ ಷಡ್ಯಂತ್ರದ ಭಾಗ ಎಂದು ಹೋರಾಟಗಾರ ಸಂಘಟನೆಗಳ  ಅಭಿಪ್ರಾಯವಾಗಿದೆ.

ಮಾತ್ರವಲ್ಲ ಝಕರಿಯ್ಯಾ ಕುಟುಂಬದ ಸ್ಥಿತಿಯೂ ಕಳವಳಕಾರಿ ಯಲ್ಲಿದೆ. ಈತ ಹತ್ತು ವರ್ಷದವನಿದ್ದಾಗ  ತಂದೆಯನ್ನು ಕಳಕೊಂಡಿದ್ದ. ತಂದೆಯ ಮರಣಾನಂತರ ಈರ್ವರು ಮಕ್ಕಳನ್ನು ತಾಯಿ ಭೀಯಮ್ಮ ಸಾಕಿ ಸಲಹುತ್ತಿದ್ದರು. ಈರ್ವರು ಮಕ್ಕಳಲ್ಲಿ ಮತ್ತೊಬ್ಬ ಮುಹಮ್ಮದ್ ಶರೀಫ್ ಗಲ್ಫ್ ಉದ್ಯೋಗದಲ್ಲಿದ್ದ. ಆತನೂ  ಝಕರಿಯ್ಯಾ ಜೈಲಲ್ಲಿರುವಾಗಲೇ ಅಂದರೆ ಕಳೆದ 2017ರಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಹೀಗೆ ಕುಟುಂಬಕ್ಕೆ  ಆಧಾರವಾಗಿದ್ದ ಮತ್ತೊಂದು ಸ್ಥಂಬವೂ ಉರುಳಿದೆ. ಆ ಮಾತೆ ಮಗನ ಬಿಡುಗಡೆಗಾಗಿ ಹಗಲಿರುಳೂ  ಓಡಾಡುತ್ತಿದ್ದಾರೆ. ಮಾತ್ರವಲ್ಲ ದೇಶದ್ರೋಹಿಯ ಮಾತೆ ಎಂಬರ್ಥದ ದುರುಗುಟ್ಟುವಿಕೆಯನ್ನು ಆಕೆ ಸಾಕಷ್ಟು ಬಾರಿ  ಎದುರಿಸಿದ್ದಾರೆ. ಇಡೀ ಕುಟುಂಬವನ್ನೇ ಸಮಾಜ ಅನ್ಯಾಯವಾಗಿ ದೂರ ಇರಿಸಿತ್ತು. ಸಂಬಂಧಿಕರು ಕೂಡಾ  ಇವರಿಂದ ದೂರವಿರಲು ಶ್ರಮಿಸಿದ್ದರು, ಝಕರಿಯ್ಯಾನ ಬಂಧನಕ್ಕಿಂತ ಆ ಮಾತೆಯ ರೋದನ ಕರುಳು ಕಿತ್ತು  ಬರುವಂತಿತ್ತು ಎಂದು  ಝಕರಿಯ್ಯಾ ಕುಟುಂಬವನ್ನು ಭೇಟಿ ಮಾಡಿದ ಕೆ.ಕೆ. ಸುಹೈಲ್ ನೇತೃತ್ವದ ತಂಡ  ವಿವರಿಸುತ್ತಿದೆ.

ಭಯೋತ್ಪಾದನೆ, ಉಗ್ರವಾದ ಕುರಿತ ಪ್ರಕರಣವೆಂದರೆ ಜನರು ಮಾರುದ್ಧ ಓಡುವ ಕಾಲವಿದು.  ಮಾಧ್ಯಮಗಳಲ್ಲಿ ರಂಗುರಂಗಿನ ಮಸಾಲೆ ತುಂಬಿದ ಕತೆಗಳು ನಿರಂತರ ಬರುತ್ತಿತ್ತು. ಈ ಕತೆಗಳನ್ನು ಓದಿದ ಜನಸಾಮಾನ್ಯರಾಗಲೀ ರಾಜಕಾರಣಿಗಳಾಗಲೀ ಹತ್ತಿರ ಸುಳಿಯಲು ಹೆದರುವಂತಹ ಪರಿಸ್ಥಿತಿಯನ್ನು ಕೆಲ ಮಾಧ್ಯಮಗಳು ಆವಾಗಲೇ ಸೃಷ್ಟಿಸಿತ್ತು. ಹಾಗೆಯೇ ಈ ಪ್ರಕರಣದಲ್ಲಿಯೂ ಝಕರಿಯ್ಯಾನ ನೆರೆಮನೆಯ ಶಾಸಕರೂ, ಪತ್ರಕರ್ತರೂ ಭಾಗಿ ಯಾಗಲು ಹೆದರಿದರು. ಯಾಕೆಂದರೆ ಈತನನ್ನು ಜೈಲಿನಲ್ಲಿ ಭೇಟಿಯಾಗಬೇಕಾದರೆ ಗುರುತು ಚೀಟಿಯ ನಕಲು ಪ್ರತಿ ಮತ್ತು ಕಣ್ಣಿನ ರೆಟಿನಾವನ್ನು ಕೂಡಾ ತಪಾಸಣೆ ಮಾಡುತ್ತಾರೆ. ಇದರಿಂದಾಗಿ ಪರಪ್ಪನ  ಅಗ್ರಹಾರಕ್ಕೆ ಹೋಗಿ ನೋಡುವುದರಿಂದ ಅವರು ಹಿಂಜರಿದರು. ಆದ್ದರಿಂದ ಜನರು ಸಹಜವಾಗಿಯೇ  ಭಯಭೀತರಾದರು. ಯಾಕೆಂದರೆ ನಾಸಿರ್ ಮದನಿಯನ್ನು ಭೇಟಿ ಮಾಡಲು ತೆರಳಿದ ಪತ್ರಕರ್ತೆ ಕೆ.ಕೆ. ಶಾಹಿನಾ  ಅನುಭವಿಸಿದ ಯಾತನೆ ಇಲ್ಲಿ ಸ್ಮರಣೀಯ.

ಅಪರಾಧಿ ಎಂದಾದರೆ ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಲಿ. ಆದರೆ ಯಾವುದೇ ವಿಚಾರಣೆಯಿಲ್ಲದೇ  ಅನ್ಯಾಯವಾದ ಈ ನಡೆ ನ್ಯಾಯಾಂಗಕ್ಕೆ ಬಗೆಯುವ ದ್ರೋಹವಾಗಿದೆ. ಜನರಿಗೆ ನ್ಯಾಯಾಂಗದ ಮೇಲಿನ ನಂಬಿಕೆ ಭರವಸೆ ಕಳಕೊಳ್ಳುವಂತಹ ಈ ನಡೆ ಈ ದೇಶದ ಮಟ್ಟಿಗೆ ಅಪಾಯಕಾರಿಯಾಗಿದೆ. ಸುಪ್ರೀಮ್ ಕೋರ್ಟಿನ ಮಾಜಿ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾತ್ಜು  ನ್ಯಾಯಾಲಯದ ಈ ವಿಳಂಬ ನೀತಿಗೆ ಯಾವುದೇ  ನ್ಯಾಯವಿಲ್ಲವೆಂದೂ ಅದು ಹೇಗೆ ನ್ಯಾಯವಾಗುತ್ತದೆಯೆಂದೂ ಬಹಿರಂಗವಾಗಿ ಸವಾಲೆಸೆದಿದ್ದಾರೆ.

ಕರ್ನಾಟಕ  ಪೋಲೀಸರು ದಕ್ಷತೆಗೆ ನಿಷ್ಠೆಗೆ ಹೆಸರಾದವರು. ಅದಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುವ ಪೋಲೀಸರ  ವಿರುದ್ದವೂ ಕ್ರಮ ಕೈಗೊಳ್ಳಬೇಕಾಗಿದೆ. ಝಕರಿಯ್ಯಾನ ಸೆರೆಮನೆವಾಸ ಪ್ರಜಾಪ್ರಭುತ್ವದ, ಪೌರರ ಹಕ್ಕುಗಳ ವಿರುದ್ಧದ  ಪ್ರಶ್ನಾರ್ಥಕ ಚಿಹ್ನೆ ಯಾಗಿ ಉಳಿದಿದೆ. ಪೋಲೀಸರಿಗೆ ಆಟ ಆರೋಪಿಗಳ ಕುಟುಂಬದವರಿಗೆ ಪ್ರಾಣ ಸಂಕಟ  ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ, ಜೈಲಲ್ಲಿ ಕೊಳೆಯುತ್ತಿರುವ ಝಕರಿಯ್ಯಾ ಹಲವು ರೋಗಗಳಿಗೆ ಈಡಾದ  ಬಗ್ಗೆಯೂ ವರದಿಗಳು ಕೇಳಿ ಬರುತ್ತಿವೆ. ಈಗ ಈತನಿಗೆ ಇಪ್ಪತ್ತೊಂಬತ್ತು ವರ್ಷವಾಗಿದೆ. ನ್ಯಾಯಾಲಯದ  ಖರ್ಚುವೆಚ್ಚ ಜೊತೆಗೇ ದೇಶದ್ರೋಹದ ಆರೋಪ ಎರಡೂ ಸೇರಿದಾಗ ಕಾನೂನಾತ್ಮಕವಾಗಿ ಎಲ್ಲವೂ ನಿಷೇಧಿ ಸಲ್ಪಡುತ್ತದೆ. ಒಂದು ವೇಳೆ ಈತ ನಿರಪರಾಧಿ ಯಾಗಿದ್ದರೆ ಈತ ಜೈಲಿನಲ್ಲಿ ಕಳೆದ ಹತ್ತು ವರ್ಷದ ಬದುಕನ್ನು  ನೀಡುವವರು ಯಾರು? ಆದ್ದರಿಂದ ಜೈಲಿನ ಆರೋಪಿಗಳು ನಿರಪರಾಧಿ ಯಾಗಿದ್ದರೆ ತಪ್ಪಿತಸ್ಥ ಪೋಲೀಸರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇದು ಇತರ ಪೊಲೀಸರಿಗೂ ಮಾದರಿಯಾಗಬೇಕು. ಅಂತಹ ಒಂದು ಕಾನೂನಿನ  ಅಗತ್ಯವನ್ನು ಈ ಪ್ರಕರಣ ಹೇಳುತ್ತಿದೆ. ಆದ್ದರಿಂದ ಝಕರಿಯ್ಯಾ ಕುರಿತ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿ ನ್ಯಾಯ ದೊರಕಿಸಬೇಕಾದ ಅಗತ್ಯವಿದೆ.

ಝಕರಿಯ್ಯಾ ಮಾತ್ರವಲ್ಲ ಯು.ಎ.ಪಿ.ಎ. ಮುಂತಾದ ಕಾನೂನುಗಳನ್ನು ಬಳಸಿ ಮುಸ್ಲಿಮ್ ಯುವಕರು, ದಲಿತ  ಆದಿವಾಸಿಗಳು, ಅಲ್ಪಸಂಖ್ಯಾತರು ದೇಶದ ನಾನಾ ಕಡೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅದರಲ್ಲಿ ಮಾನವ ಹಕ್ಕುಗಳ  ಕಾರ್ಯಕರ್ತರೂ ಒಳಗೊಂಡಿದ್ದಾರೆ. ಹೀಗೇ ನೂರಾರು ಮಂದಿ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಅವರ ಆಯಸ್ಸನ್ನು ಜೈಲಲ್ಲೇ ಕಳೆಯುವಂತೆ ಮಾಡಿ ಮುಸ್ಲಿಮ್ ಮತ್ತು ದಲಿತರಲ್ಲಿ ಅಭದ್ರತೆಯ ಭಾವನೆ ಸೃಷ್ಟಿಸುವ ಇಂತಹ ಭೀಕರ ಕಾನೂನುಗಳ ವಿರುದ್ಧ ಜನರು ಆತ್ಮಸಾಕ್ಷಿಗನುಗುಣವಾಗಿ ಧ್ವನಿ ಯೆತ್ತಬೇಕಾಗಿದೆ. ರಾಜಕೀಯ ಪಕ್ಷಗಳೂ  ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು.