ರಸ್ತೆಯಲ್ಲಿ ಅಪ್ಪ, ಪೊದೆಯಲ್ಲಿ ಶಿಶು ಮತ್ತು ನಾವು

0
395

ಘಟನೆ 1:

ಧಾರಾವಾಡ ಜಿಲ್ಲೆಯ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಟೆಸ್ಸಾ ಕಾರೊಂದು ಬಂದು ನಿಲ್ಲುತ್ತದೆ. ಅದರಿಂದ ವೃದ್ಧರೊಬ್ಬರನ್ನು ಕೆಳಗಿಳಿಸಲಾಗುತ್ತದೆ. ಕಾರು ಹೊರಟು ಹೋಗುತ್ತದೆ. ಹಾಗೆ ಇಳಿದ ವೃದ್ಧರು ಗೊತ್ತು-ಗುರಿಯಿಲ್ಲದೇ ಪರಿಸರವನ್ನು ವೀಕ್ಷಿಸುತ್ತಿರುವುದನ್ನು ಕಂಡು ಸ್ಥಳೀಯರು ಮಾತನಾಡಿಸುತ್ತಾರೆ. ಆ ವೃದ್ಧರಿಗೆ ತಾನೆಲ್ಲಿ ಇಳಿದಿದ್ದೇನೆ ಅನ್ನುವುದು ಗೊತ್ತಿಲ್ಲ. ಇಳಿಸಿರುವುದು ಮಗ. ದೇಹ ಗಟ್ಟಿಯಿರುವವರೆಗೆ ಮೆಕ್ಯಾನಿಕ್ ಆಗಿ ದುಡಿದವರು. ಈಗ ದೇಹ ಸೊರಗಿದೆ. ಮರೆಗುಳಿತನ ಹತ್ತಿರ ಬಂದಿದೆ. ಬೆಂಗಳೂರಿನ ಮತ್ತಿನಕೆರೆಯಲ್ಲಿ ಮಗನ ಜೊತೆ ವಾಸವಿದ್ದೇನೆ, ಅಲ್ಲಿಗೆ ತಲುಪಿಸಿ ಎಂದು ಆ ವೃದ್ಧರು ಕೇಳಿಕೊಳ್ಳುತ್ತಾರೆ. 5 ದಿನಗಳು ಬಳಿಕ ಆಸ್ಪತ್ರೆಯಲ್ಲಿ ಸಾವಿಗೀಡಾಗುತ್ತಾರೆ. ಅವರ ವಿಳಾಸ ಇನ್ನೂ ಪತ್ತೆಯಾಗಿಲ್ಲ.

ಘಟನೆ 2:
ತ್ರಿಪುರ ರಾಜ್ಯದ ಅಗರ್ತಲಾದ ಸಮೀಪ ಪೊದೆಯೊಂದರಲ್ಲಿ ಇರುವೆಗಳ ದಂಡನ್ನು ಸ್ಥಳೀಯ ಮಹಿಳೆ ನೋಡುತ್ತಾಳೆ. ಸಂದೇಹದಿಂದ ಹತ್ತಿರ ಹೋದಾಗ ನವಜಾತ ಶಿಶು ಕಾಣಿಸುತ್ತದೆ. ಎರಡು ದಿನಗಳ ಪ್ರಾಯದ ಮಗು. ಇರುವೆ ಕಚ್ಚಿದುದರಿಂದ ಕಣ್ಣು ಮತ್ತು ಮುಖದಲ್ಲಿ ಸೋಂಕು ಉಂಟಾಗಿದೆ.

ಇವು ಬರೇ ಸುದ್ದಿಗಳಲ್ಲ ಮತ್ತು ಇವು ಬರೇ ಎರಡು ಬಿಡಿ ಸುದ್ದಿಗಳು ಎಂದು ನಿರಾಳವಾಗುವ ಹಾಗೂ ಇಲ್ಲ. ಈ ಸುದ್ದಿಗಳನ್ನು ಓದುವ ಸಮಯದಲ್ಲೇ ಇವುಗಳಿಗೆ ಹೋಲುವ ಇನ್ನಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟ ಆಗಿವೆ. ಅನೇಕ ಬಾರಿ ನಾವು ಅಂಥ ಸುದ್ದಿಯನ್ನು ಓದಿ ನಿರ್ಭಾವುಕತೆಯಿಂದ ಪುಟ ತಿರುಗಿಸಿ ಬಿಟ್ಟಿರುವುದೂ ಇದೆ. ಯಾಕೆ ಹೀಗೆ ಎಂದರೆ, ಈಗಿನ ತಲೆಮಾರೇ ಹಾಗೆ ಎಂಬ ನೋವು ಬೆರೆತ ಉದ್ಗಾರ ಸಿಗುತ್ತದೆ. ಅಂದಹಾಗೆ, ಯುವ ತಲೆಮಾರಿನ ಮೇಲೆ ಇಷ್ಟೊಂದು ಗಂಭೀರವಾದ ಆರೋಪವನ್ನು ಹೊರಿಸುವುದು ಎಲ್ಲಿಯ ವರೆಗೆ ನ್ಯಾಯಪೂರ್ಣ? ತಮ್ಮ ಶಿಶುತನವನ್ನು ಮರೆತಂತಾಡುವ ಮತ್ತು ಮುಂದೆ ವೃದ್ಧಾಪ್ಯಕ್ಕೆ ತಲುಪಲಿರುವುದನ್ನು ನಿರ್ಲಕ್ಷಿಸಿದಂತೆ ಬದುಕುವ ಈ ಕಲೆಯನ್ನು ಈ ತಲೆಮಾರಿಗೆ ಹೇಳಿಕೊಟ್ಟವರು ಯಾರು? ಹೆತ್ತವರೇ, ಕುಟುಂಬಸ್ಥರೇ, ಶಿಕ್ಷಕರೇ, ಸಮಾಜವೇ? ಅಥವಾ ಸ್ವತಃ ಅವರೇ ಕಲಿತರೇ? ಹಾಗೆ ಕಲಿಯುವುದಕ್ಕೆ ಪೂರಕವಾದ ವಾತಾವರಣ ಅವರ ಸುತ್ತಲೂ ಇದೆಯೇ?

ಧಾರ್ಮಿಕ ಉಪದೇಶಗಳನ್ನು ಆಲಿಸದೆಯೇ ಈ ದೇಶದಲ್ಲಿ ಮಕ್ಕಳು ಬೆಳೆಯುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ, ದೈವ ಬಸದಿ ಇತ್ಯಾದಿ ಇತ್ಯಾದಿಗಳ ಮುಂದಿನಿಂದ ಒಂದು ಮಗು ಬಯಸದಿದ್ದರೂ ಹಾದು ಹೋಗಲೇಬೇಕಾದ ಸನ್ನಿವೇಶವೊಂದು ಈ ದೇಶದಲ್ಲಿದೆ. ವಿದ್ಯಾರ್ಥಿಗಳು ಅನೇಕ ಬಾರಿ ರಸ್ತೆ ಮಧ್ಯೆಯೇ ಕೆಲವೊಮ್ಮೆ ತಾಸುಗಟ್ಟಲೆ ಶಾಲಾ ವಾಹನಗಳಲ್ಲೋ ಬಸ್ಸುಗಳಲ್ಲೋ ಕಳೆಯಬೇಕಾಗುತ್ತದೆ. ಯಾಕೆಂದರೆ, ಯಾವುದಾದರೊಂದು ಧರ್ಮದ ಧಾರ್ಮಿಕ ಮೆರವಣಿಗೆ ರಸ್ತುಯಲ್ಲಿ ಸಾಗುತ್ತಿರುತ್ತದೆ. ವರ್ಷದ 365 ದಿನಗಳೂ ಈ ದೇಶದಲ್ಲಿ ಹಬ್ಬದಂತೆ ಆಚರಣೆಯಲ್ಲಿರುವುದಕ್ಕೆ ಕಾರಣವೂ ಧರ್ಮಗಳೇ. ವಿಫುಲ ಧರ್ಮಗಳು, ಅವುಗಳ ಉಪದೇಶಗಳು, ಆಚರಣೆಗಳು, ಸಮ್ಮೇಳನಗಳು ಇತ್ಯಾದಿ ನಡೆಯುತ್ತಿರುವ ದೇಶವೊಂದರಲ್ಲಿ ಯುವ ತಲೆಮಾರು ಧಾರ್ಮಿಕ ಉಪನ್ಯಾಸಗಳಿಂದ ಅಥವಾ ಮೌಲ್ಯಗಳಿಂದ ವಂಚಿತವಾಗಿ ಬದುಕುತ್ತಿದೆ ಎಂದು ವಾದಿಸುವುದು ಅತಾರ್ಕಿಕವಾಗುತ್ತದೆ. ಬಹುಶಃ, ಇದರಾಚೆಗೆ ಏನೋ ಸಮಸ್ಯೆಯಿದೆ. ಒಂದೋ ಅಪ್ಪಟ ಧಾರ್ಮಿಕ ಪ್ರವಚನಗಳು ಕಡಿಮೆಯಾಗಿವೆ ಅಥವಾ ಅಂಥ ಪ್ರವಚನಗಳೊಂದಿಗೆ ರಾಜಕೀಯ ಬೆರೆತು ಗಂಭೀರತೆಯನ್ನು ಕಳಕೊಂಡುಬಿಟ್ಟಿದೆ ಇಲ್ಲವೇ ಪ್ರವಚನ ನೀಡುವವರು ಅಂಥ ಪ್ರವಚನ ನೀಡುವುದಕ್ಕೆ ವೈಯಕ್ತಿಕವಾಗಿ ಅನರ್ಹರಾಗಿರುವುದು ಸಮಸ್ಯೆಯಾಗಿದೆ. ಅವರ ಕಳಂಕಿತ ಚಾರಿತ್ರ್ಯವು ಅವರ ಪ್ರವಚನದ ತೂಕವನ್ನು ಅಳಿಸಿಬಿಟ್ಟಿದೆ.

ಮೇಲಿನ ಎರಡೂ ಘಟನೆಗಳು ಒಂದು ದಿನದ ಅಂತರದಲ್ಲಿ ವರದಿಯಾದಂತಹವು ಮತ್ತು ಈ ಎರಡೂ ಹುಟ್ಟು ಮತ್ತು ಅಂತ್ಯಕ್ಕೆ ಸಂಬಂಧಿಸಿದುವು. ಎರಡು ದಿನದ ಶಿಶುವನ್ನೂ ತಿರಸ್ಕರಿಸುವಷ್ಟು ಮತ್ತು ಸರಿಯಾಗಿ ನಡೆಯಲಾಗದ ವೃದ್ಧರನ್ನು ಎಸೆದು ಹೋಗುವಷ್ಟು ಸಾಮಾಜಿಕ ಮನಸ್ಥಿತಿ ಕೆಟ್ಟು ಹೋಗಿದೆ ಅನ್ನುವುದನ್ನು ಇದು ಸೂಚಿಸುತ್ತದೆ. ಹಾಗಂತ, ಈ ಮನಸ್ಥಿತಿಗೆ ವಿರುದ್ಧವಾದ ಮನಸ್ಥಿತಿ ನಮ್ಮ ನಡುವೆ ಧಾರಾಳ ಇದೆ ಎಂಬುದು ನಿಜ. ಕಾಯಿಲೆ ಪೀಡಿತ ನವಜಾತ ಶಿಶುವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಡಿ-ಬೇಡಿ ಶ್ರಮಿಸುವವರು ನಮ್ಮಲ್ಲಿದ್ದಾರೆ. ತಾವು ನಂಬುವ ದೇವರಲ್ಲಿ ಪ್ರಾರ್ಥಿಸುವವರಿದ್ದಾರೆ. ವೃದ್ಧಾಪ್ಯಕ್ಕೆ ತಲುಪಿದ ಅಪ್ಪ-ಅಮ್ಮನನ್ನು ಮಗುವಿನಂತೆ ಆರೈಕೆ ಮಾಡುವ ಮಕ್ಕಳೂ ಇಲ್ಲಿದ್ದಾರೆ. ಆದರೆ, ಇವಾವುವೂ ಮೇಲಿಗೆ ಕ್ರೌರ್ಯಕ್ಕೆ ಬದಲಿಯಾಗುವುದಿಲ್ಲ. ನಿಜವಾಗಿ, ಓರ್ವ ವ್ಯಕ್ತಿಯು ಅತಿಹೆಚ್ಚು ಕರುಣೆ ತೋರಬೇಕಾದ ಸಂದರ್ಭ ಯಾವುದೆಂದರೆ, ಹುಟ್ಟಿನ ಆದಿಯಲ್ಲಿ ಮತ್ತು ಹುಟ್ಟಿನ ಅಂತ್ಯದಲ್ಲಿ. ಹುಟ್ಟಿನ ಆದಿಯಲ್ಲಿ ಎಲ್ಲರೂ ದುರ್ಬಲರೇ. ಎಲ್ಲಿಯವರೆಗೆಂದರೆ, ತನ್ನ ಮೇಲೆ ಕುಳಿತುಕೊಳ್ಳುವ ಒಂದು ಸೊಳ್ಳೆಯನ್ನೂ ಓಡಿಸಲು ಸಾಧ್ಯವಾಗದಷ್ಟು ದುರ್ಬಲರು. ಈ ಸ್ಥಿತಿ ತಿಂಗಳುಗಟ್ಟಲೆ ಇರುತ್ತದೆ. ಅಪ್ಪನನ್ನು ರಸ್ತೆಬದಿಯಲ್ಲಿ ಇಳಿಸಿಹೋದ ಮಗನೂ ಈ ಸ್ಥಿತಿಯಲ್ಲೇ ಹುಟ್ಟಿದ್ದಾನೆ. ಈ ಅಪ್ಪನ ಹುಟ್ಟೂ ಹೀಗೆಯೇ. ಇದೇವೇಳೆ, ಪ್ರಾಣಿ ವರ್ಗದಲ್ಲಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಗಳು ನಡೆಯುತ್ತವೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ಕರುವೊಂದು ತನ್ನನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ. ಕೋಳಿ ಮರಿಗಳು ಮೊಟ್ಟೆಯಿಂದ ಹೊರಬಂದ ತಕ್ಷಣ ನಡೆಯತೊಡಗುತ್ತವೆ. ಆದರೆ ಜೀವಿ ವರ್ಗದಲ್ಲಿಯೇ ಅತ್ಯಂತ ಹೆಚ್ಚು ಪ್ರಬಲನಾಗಿ ಗುರುತಿಸಿಕೊಂಡಿರುವ ಮಾನವನು ಆದಿಯಲ್ಲಿ ಏನೂ ಆಗಿರುವುದಿಲ್ಲ. ಅಂತ್ಯದಲ್ಲೂ ಇದೇ ಸ್ಥಿತಿಗೆ ಮರಳುತ್ತಾನೆ. ಈ ಎರಡು ಸ್ಥಿತಿಗಳ ನಡುವಿನ ಬದುಕಿನಲ್ಲಿ ಆತ ಎಂತಹ ಸಾಮಥ್ರ್ಯ ಪಡೆಯುತ್ತಾನೆಂದರೆ, ಜಗತ್ತನ್ನೇ ಮುಷ್ಠಿಯಲ್ಲಿಟ್ಟುಕೊಳ್ಳಲು ತವಕಿಸುವಷ್ಟು. ಹುಟ್ಟಿನಲ್ಲೇ ಸಬಲವಾಗಿರುವ ಪ್ರಾಣಿಗಳನ್ನೂ ಆತ ಅಧೀನಗೊಳಿಸುತ್ತಾನೆ. ಭೂಮಿಯಡಿಯಲ್ಲಿರುವ ಖನಿಜ ಸಂಪತ್ತನ್ನೂ ತನ್ನದಾಗಿಸಿಕೊಳ್ಳುತ್ತಾನೆ. ಆಕಾಶದಲ್ಲಿ ಮನೆ ಮಾಡಲು ಯೋಚಿಸುತ್ತಾನೆ. ನೀರಿನಾಳಕ್ಕೆ ಇಳಿದು ಸಂಶೋಧನೆ ನಡೆಸುತ್ತಾನೆ. ಈ ಎಲ್ಲ ಸಾಮಥ್ರ್ಯ ಆತನಿಗೆ ಲಭ್ಯವಾಗುವುದು- ಶಿಶು ಪ್ರಾಯದಲ್ಲಿ ಅಮ್ಮನೋ ಅಪ್ಪನೋ ಆತ/ಕೆಯನ್ನು ಸಾಕಿದ ಕಾರಣದಿಂದ. ದುರ್ಬಲನಾಗಿದ್ದ ಆ ಸ್ಥಿತಿಯಲ್ಲಿ ಅವರು ನಿರ್ಲಕ್ಷಿಸಿರುತ್ತಿದ್ದರೆ, ಆತ ಈ ಹಂತಕ್ಕೆ ಏರುವುದಕ್ಕೆ ಸಾಧ್ಯವೇ ಇರಲಿಲ್ಲ.

ಧರ್ಮಗ್ರಂಥಗಳು ಈ ಕುರಿತಂತೆ ಧಾರಾಳ ಹೇಳಿವೆ. ಪವಿತ್ರ ಕುರ್‍ಆನ್ ಅಂತೂ ಮನುಷ್ಯನ ಹುಟ್ಟು ಮತ್ತು ಸಾವು ಹಾಗೂ ಇವುಗಳ ನಡುವಿನ ಬದುಕನ್ನು ಕೇಂದ್ರಸ್ಥಾನದಲ್ಲಿಟ್ಟುಕೊಂಡೇ ಮಾತಾಡಿದೆ. ಪ್ರಸವದ ಸಮಯದಲ್ಲಿ ತಾಯಿ ಅನುಭವಿಸುವ ನೋವಿಗೆ ಯಾವ ನೋವೂ ಸಮವಲ್ಲ ಎಂದು (ಅಧ್ಯಾಯ 31, ವಚನ 14-15) ಅದು ಹೇಳಿದೆ. ಅದೇ ವೇಳೆ, ಶಿಶು ಹತ್ಯೆಯನ್ನು ಕ್ರೌರ್ಯ ಎಂದು ಖಂಡಿಸಿದೆ. ಮಾತ್ರವಲ್ಲ, ‘ಯಾವ ಕಾರಣಕ್ಕಾಗಿ ನಿನ್ನನ್ನು ಕೊಲ್ಲಲಾಯಿತು ಮಗೂ’ ಎಂದು ನಾಳೆ ವಿಚಾರಣೆಯ ವೇಳೆ ಆ ಮಗುವಿನಲ್ಲೇ ಪ್ರಶ್ನಿಸಿ ಅದು ಕೊಡುವ ಉತ್ತರದ ಆಧಾರದಲ್ಲಿ ಕೊಂದವರಿಗೆ ದೇವನು ಶಿಕ್ಷೆ ನೀಡುತ್ತಾನೆ (ಅಧ್ಯಾಯ 81, ವಚನ 8-9) ಎಂದು ಎಚ್ಚರಿಸಿದೆ. ಮಕ್ಕಳ ಪಾಲಿನ ಸ್ವರ್ಗ ಎಂದು ಹೆತ್ತವರನ್ನು ಪರಿಚಯಿಸಿರುವ ಪವಿತ್ರ ಕುರ್‍ಆನ್, ವೃದ್ಧಾಪ್ಯದಲ್ಲಿರುವ ಹೆತ್ತವರ ಬಗ್ಗೆ ‘ಛೆ’ ಎಂಬ ಅಸಹನೆಯ ಪದ ಬಳಸುವುದನ್ನೂ ಮಕ್ಕಳ ಪಾಲಿಗೆ ನಿಷೇಧಿಸಿರುವುದು ಮಾತ್ರವಲ್ಲ ಅವರಿಗಾಗಿ ಪ್ರಾರ್ಥಿಸಬೇಕೆಂದೂ (ಅಧ್ಯಾಯ 17, ವಚನ 23-24) ಆದೇಶಿಸಿದೆ. ಹೆತ್ತವರ ಮನಸ್ಸನ್ನು ಗೆಲ್ಲದ ಮತ್ತು ಅವರಿಗೆ ನೋವುಂಟು ಮಾಡಿದ ಮಗಳು ಎಷ್ಟೇ ಧರ್ಮಿಷ್ಟನಾದರೂ ಸ್ವರ್ಗ ಪ್ರವೇಶಿಸಲಾರ ಮತ್ತು ದೇವನಿಗೆ ಆತ/ಕೆ ಅಪ್ರಿಯ ಎಂದು ಇಸ್ಲಾಮ್ ಧರ್ಮ ಹೇಳುತ್ತದೆ. ನಿಜವಾಗಿ,

ಇವತ್ತು ಹಿಂದಿನಂಥ ಸ್ಥಿತಿಯಿಲ್ಲ. ಶಿಶುತನ ಮತ್ತು ವೃದ್ಧಾಪ್ಯದ ಬಗ್ಗೆ ಯುವ ತಲೆಮಾರಿನಲ್ಲಿ ಜಾಗೃತಿ ಮೂಡಿಸಲು ಹಿಂದಿನಂತೆ ಮೈಕ್, ಪೇಪರುಗಳಿಗೆ ಮಾತ್ರ ಅಂಟಿ ಕೂರಬೇಕಿಲ್ಲ. ಸಾಮಾಜಿಕ ಜಾಲತಾಣಗಳೆಂಬ ಪ್ರಬಲ ಮಾಧ್ಯಮವು ಈ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಯುವ ಪೀಳಿಗೆಯಲ್ಲಿ ಮೌಲ್ಯವನ್ನು ತುಂಬಲು ಈ ಮಾಧ್ಯಮವನ್ನು ನಾವು ಬಳಸಿಕೊಳ್ಳಬೇಕು. ವೀಡಿಯೋಗಳು, ಭಾಷಣಗಳು, ನಾಟಕ, ಸಿನಿಮಾ ಮಾಧ್ಯಮದಲ್ಲಿ ಈ ಬಗ್ಗೆ ಬರುವ ಮೌಲ್ಯಾಧಾರಿತ ತುಣುಕುಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕು.

ದುರ್ಬಲರನ್ನು ಕಡೆಗಣಿಸುವ ಸಮಾಜಕ್ಕೆ ಎಂದೂ ಭವಿಷ್ಯವಿಲ್ಲ. ಶಿಶುತನ ಮತ್ತು ವೃದ್ಧಾಪ್ಯಕ್ಕೆ ಗೌರವ ಲಭ್ಯವಾಗದ ಸಮಾಜವನ್ನು ಪ್ರಕೃತಿಯು ಸಲಹುವುದಕ್ಕೂ ಸಾಧ್ಯವಿಲ್ಲ. ಅಗರ್ತಲಾದ ಶಿಶು ಮತ್ತು ಬೆಂಗಳೂರಿನ ವೃದ್ಧರು ಈ ನಿಟ್ಟಿನಲ್ಲಿ ನಮ್ಮೊಳಗನ್ನು ಅವಲೋಕಿಸುವುದಕ್ಕೆ ಕಾರಣವಾಗಬೇಕು.