ಮಹಾರಾಷ್ಟ್ರ ಸ್ಫೋಟ ಪ್ರಕರಣದ ಮರುಪರಿಶೀಲನೆ: ಸನಾತನ ಸಂಸ್ಥಾಗೆ ತಟ್ಟಿದ ಬಿಸಿ!

0
353

ಹಿಂದೂ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥಾ ಸದಸ್ಯರು, ಎಡಪಂಥೀಯ ವಿಚಾರಧಾರೆಯುಳ್ಳ ಬುದ್ಧಿಜೀವಿಗಳು ಲೇಖಕರು ಮತ್ತು ತಾರ್ಕಿಕವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಮುಂತಾದವರ ಕೊಲೆಗಳಿಗೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿರುವ ಬೆನ್ನಿನಲ್ಲಿಯೇ ಹತ್ತು ವರ್ಷಗಳ ಹಿಂದೆ ಮುಂಬೈ ಮತ್ತು ಗೋವಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳ ಮರುಪರಿಶೀಲನೆಯು ಸನಾತನ್ ಸಂಸ್ಥಾಗೆ ಮತ್ತೊಂದು ಬಿಸಿ ತಟ್ಟಿಸಿದೆ.

2008 ಮತ್ತು 2009 ರಲ್ಲಿ ಮುಂಬಯಿ ಮತ್ತು ಗೋವಾದಲ್ಲಿ ನಡೆದ ಬಾಂಬ್ ಸ್ಫೋಟಗಳ ಬಗ್ಗೆ ಸನಾತನ್ ಸಂಸ್ಥಾದ ಹಿಂದಿನ ಮತ್ತು ಈಗಿನ ಸದಸ್ಯರನ್ನು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗೊಳಪಡಿಸಿದೆ. ಥಾಣೆ ಮತ್ತು ನವೀ ಮುಂಬೈಯ ಚಲನಚಿತ್ರ ಮಂದಿರಗಳಲ್ಲಿ ಕಚ್ಚಾ ಬಾಂಬುಗಳನ್ನುಇಡಲಾಗಿತ್ತು, ಈ ಸಂದರ್ಭದಲ್ಲಿ ಥಾಣೆ ಮತ್ತು ನವೀ ಮುಂಬೈಯ ಚಲನಚಿತ್ರ ಮಂದಿರಗಳಲ್ಲಿ ಸನಾತನ್ ಸಂಸ್ಥಾ ವಿರೋಧಿಸಿದ “ಜೋಧಾಅಕ್ಬರ್ ” ಚಲನಚಿತ್ರ ಪ್ರದರ್ಶನವಾಗುತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥಾದ ಇಬ್ಬರು ಸದಸ್ಯರನ್ನು ಬಂಧಿಸಲಾಗಿತ್ತಾದರೆ ತರುವಾಯ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಅದೇ ರೀತಿ 2009 ರಲ್ಲಿ ಗೋವಾದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಕಚ್ಚಾ ಬಾಂಬುಗಳನ್ನು ಸಾಗಿಸುತ್ತಿದ್ದ ಸನಾತನ್ ಸಂಸ್ಥಾದ ಇಬ್ಬರು ಸದಸ್ಯರು ಸ್ಫೋಟ ಸಂಭವಿಸಿ ಸಾವನ್ನಪ್ಪಿದರು.

ನಂತರ ಕಳೆದ ಆಗಸ್ಟ್ ನಲ್ಲಿ ಮುಂಬೈ ಬಳಿಯ ಸಂಸ್ಥಾ ಕಾರ್ಯಕರ್ತರಿಂದ ಸ್ಫೋಟಕಗಳನ್ನು ವಶಪಡಿಸಲಾಯಿತು. ಇದು ತನಿಖಾಧಿಕಾರಿಗಳು 2008 ರ ಮಹಾರಾಷ್ಟ್ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಪುಣೆಯಲ್ಲಿ ನಡೆಯುವ ಸನ್ ಬರ್ನ್ ಸಂಗೀತ ಮೇಳದಲ್ಲಿ ಬಾಂಬ್ ಸ್ಪೋಟ ನಡೆಸಲು ಸಂಸ್ಥಾ ಮತ್ತು ಹಿಂದೂ ಜಾಗೃತಿ ಸಮಿತಿಯ ಸದಸ್ಯರು ಯೋಜನೆಯನ್ನು ರೂಪಿಸಿದ್ದರೆಂಬುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ವರೆಗೆ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸ್ ತಂಡಗಳಿಂದ ವಿಚಾರಣೆಗೊಳ ಪಡಿಸಲಾಗಿದೆ

ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ರವರು ಸಂಸ್ಥಾವನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಸರಕಾರಕ್ಕೆ ಸವಿವರ ವರದಿಯನ್ನು ಕಳುಹಿಸಿದ್ದರು. ಸಚಿವ ಸುಶೀಲ್ ಕುಮಾರ್ ಶಿಂಧೆಯ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ಗೋವಾ ಸ್ಫೋಟ ಪ್ರಕರಣಗಳ ಕುರಿತು ಸಂಸ್ಥಾ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂಬ ಕಾರಣದ ಮೇರೆಗೆ ನಿಷೇಧವನ್ನು ಹೇರಿರಲಿಲ್ಲ.

ವರದಿ: ಶಿವಕುಮಾರ್
ಕನ್ನಡಕ್ಕೆ: ಆಯಿಶತುಲ್ ಅಫೀಫಾ
ಕೃಪೆ: ದಿ ಟ್ರಿಬ್ಯೂನ್ ನ್ಯೂಸ್