ವ್ಯಾಪಾರವಾಗುತ್ತಿರುವ ಧಾರ್ಮಿಕ ಪ್ರವಚನಗಳು

0
448

✒ಅಬ್ದುಸ್ಸಲಾಮ್ ದೇರಳಕಟ್ಟೆ

ಧಾರ್ಮಿಕ ಪ್ರವಚನಗಳ ಕುರಿತಂತೆ ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಅಧ್ಯಕ್ಷ ಜಿಫ್ರಿ ಮುತ್ತುಕೋಯ  ತಂಙಳ್ ಅವರು ಇತ್ತೀಚೆಗೆ ಆಡಿದ ಮಾತುಗಳು ವೈರಲ್ ಆಗಿದೆ. ಹಣಕ್ಕಾಗಿ ಧಾರ್ಮಿಕ ಪ್ರವಚನ ಮಾಡುವುದನ್ನು  ಅವರು ಟೀಕಿಸಿದ್ದರು. ಏಜೆಂಟ್‍ಗಳನ್ನು ಮಾಡಿಕೊಂಡು ಮತ ಪ್ರಭಾಷಣಕ್ಕಾಗಿ ಹಣ ಸಂಗ್ರಹಿಸುವುದು ತಪ್ಪು  ಅಂದಿದ್ದರು. ಆಲತ್ತೂರು ಪಡಿಯ ದರ್ಸ್‍ನ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಆಡಿರುವ ಈ ಮಾತುಗಳು  ಚರ್ಚೆಗೆ ಕಾರಣವಾಗಿದೆ.

ಮತ ಪ್ರವಚನವೆಂಬುದು ನಾಡಿನಾದ್ಯಂತ ವ್ಯಾಪಕ ಪ್ರಚಾರದಲ್ಲಿರುವ ಒಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ.  ಹಿಂದಿನ ಕಾಲದಲ್ಲಿ ಪ್ರವಚನಗಳನ್ನು ಧಾರ್ಮಿಕ ಜ್ಞಾನವನ್ನು ಗಳಿಸುವ ಒಂದು ಮಾಧ್ಯಮವಾಗಿ ಬಳಸುತ್ತಿದ್ದರು.  ಮಾತ್ರವಲ್ಲ ಪ್ರವಚನಗಳು ವಿಷಯಾಧಾರಿತವಾಗಿರುವುದ ಕ್ಕಿಂತಲೂ ಮುಖ್ಯವಾಗಿ ಪ್ರವಚನದ ಶೈಲಿಗೆ ಹೆಚ್ಚು ಜನರು  ಆಕರ್ಷಿತರಾಗುತ್ತಿದ್ದರು. ಹಿಂದಿನ ಕಾಲದಲ್ಲಿ ಇಂತಹ ಕಾರ್ಯಕ್ರಮಗಳನ್ನು ರಾತ್ರಿಗೆ ಮಾತ್ರ ಸೀಮಿತಗೊಳಿಸುತ್ತಿದ್ದರೆ  ಇಂದು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಹಗಲೂ ರಾತ್ರಿಯೂ ನಡೆಯುತ್ತವೆ. ವಾಸ್ತವದಲ್ಲಿ ಹಲವು ದಿನಗಳವರೆಗೆ  ನಡೆಯುವ ಇಂತಹ ಕಾರ್ಯಕ್ರಮಗಳ ಮೂಲಕ ಮುಸ್ಲಿಮ್ ಸಮುದಾಯಕ್ಕೆ ಧಾರ್ಮಿಕ ತಿಳುವಳಿಕೆ ಯನ್ನು  ನೀಡುವ ವಿದ್ವಾಂಸರ ಶ್ರಮ ಮತ್ತು ಕಾಳಜಿಯನ್ನು ಮೆಚ್ಚಲೇಬೇಕು. ಆದರೆ ದುರದೃಷ್ಟ ವಶಾತ್ ಇಂತಹ  ಪ್ರವಚನಗಳಿಂದ ಸಮುದಾಯ ದಲ್ಲಿ ತಪ್ಪು ಕಲ್ಪನೆಗಳು ಕೂಡ ವ್ಯಾಪಕವಾಗಿ ಬೆಳೆದವು ಎನ್ನುವುದನ್ನು  ಅಲ್ಲಗಳೆಯುವಂತಿಲ್ಲ. ಅದಕ್ಕೆ ಆಧಾರ ರಹಿತವಾದ ಕೆಲವು ಕಟ್ಟು ಕಥೆಗಳನ್ನು ಇಸ್ಲಾಮಿನ ಖಾತೆಗೆ ಸೇರಿಸಿದ್ದು ಮುಖ್ಯ  ಕಾರಣ.

ಪ್ರವಚನಗಾರರಿಗೆ ಹಿಂದೆಯೂ ಇಂದೂ ಬಹಳ ಗೌರವ, ಸ್ಥಾನಮಾನ ಮತ್ತು ಆತಿಥ್ಯ ಇದ್ದೇ ಇದೆ. ಮಾತ್ರವಲ್ಲ  ಇಂತಹ ಕಾರ್ಯಕ್ರಮ ಗಳಿಂದ ಆಧ್ಯಾತ್ಮಿಕ ಲಾಭಕ್ಕಿಂತಲೂ ಭೌತಿಕ ಲಾಭ ನಷ್ಟಗಳ ಲೆಕ್ಕಾಚಾರಗಳನ್ನೇ  ಕಾರ್ಯಕ್ರಮದ ಸಂಘಟಕರು ಬಹಳ ಮುಖ್ಯವಾಗಿ ಪರಿಗಣಿಸಲ್ಪಡುತ್ತಿದ್ದರು ಎನ್ನುವುದಂತೂ ಸತ್ಯ. ಈಗಿನ ಕಾಲದ ಸ್ಥಿತಿಯೂ ಇದಕ್ಕೆ ಭಿನ್ನವಲ್ಲ.ಯಾವುದೇ ಬಂಡವಾಳ ಅಗತ್ಯವಿಲ್ಲದ ಮತ್ತು ಲಾಭದ ವ್ಯಾಪಾರ  ಪ್ರಾಯೋಜಕರಿಗೆ ಹಲವು ಉದ್ದೇಶಗಳಿರಬಹುದು. ಆದರೆ ಆಧ್ಯಾತ್ಮಿಕತೆಯ ಹೆಸರಿನಲ್ಲಿ ಸಾರ್ವಜನಿಕರು ಅಥವಾ  ವಿಶ್ವಾಸಿಗಳ ಜೇಬಿಗೆ ಕತ್ತರಿ ಹಾಕುವುದು ಮೂಲ ಉದ್ದೇಶ ವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಒಬ್ಬ  ಪ್ರವಚನಗಾರನ ಸಾಮರ್ಥ್ಯವನ್ನು ಅಳೆಯುವುದು ಅವನು ತನ್ನ ಪ್ರವಚನದ ಮೂಲಕ ಎಷ್ಟು ಹಣ ವನ್ನು  ಸಂಗ್ರಹಿಸಬಲ್ಲನೆಂಬುದರ ಮೇಲೆ ಹೊಂದಿ ಕೊಂಡಿದೆ. ಆದ್ದರಿಂದಲೇ ಇಂದು ಮತ ಪ್ರವಚನವೆಂಬುದು ತನ್ನ  ಅರ್ಥವನ್ನು ಕಳೆದು ಕೊಂಡಿದೆ. ಅದು ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಬದಲು ಭೌತಿಕ ವ್ಯಾಪಾರ  ವಾಗಿ ಮಾರ್ಪಟು ಹೊಂದಿದೆ.

ಪ್ರವಾದಿ(ಸ)ಯವರು ಅಥವಾ ಅನುಚರರು ಇಂದು ಕಾಣುವ ರೀತಿಯಲ್ಲಿ ಗಂಟೆಗಟ್ಟಲೆ ಪ್ರವಚನ ನೀಡಿದ ಕುರಿತು  ಹದೀಸ್ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಜನಸಾಮಾನ್ಯರಿಗೆ ಅಗತ್ಯವಿರುವ ಬೋಧನೆಯನ್ನು ಅವರಿಗೆ ಅಗತ್ಯವಿರುವ  ಆಯಾ ಸಮಯದಲ್ಲಿ ಆಯಾ ಸನ್ನಿವೇಶಕ್ಕನುಗುಣವಾಗಿ ನೀಡುತ್ತಿದ್ದರು. ಶುಕ್ರವಾರದ ಜುಮಾ ನಮಾಝಿಗಿಂತ  ಮುಂಚಿತವಾಗಿ (ಖುತ್ಬಾದ ಮೂಲಕ) ಲಘುವಾದ ಉಪದೇಶ ನೀಡುವುದನ್ನು ಬಿಟ್ಟರೆ ಇತರೆ ಸಮಯಗಳಲ್ಲಿ  ಸಾರ್ವಜನಿಕ ಪ್ರವಚನವನ್ನು ಏರ್ಪಡಿಸಿದ್ದು ಇತಿಹಾಸ ದಲ್ಲಿ ದಾಖಲಿಸಲ್ಪಟ್ಟಿಲ್ಲ. ಪ್ರವಾದಿ(ಸ) ಯವರ ವಿದಾಯ (ಕೊನೆಯ) ಭಾಷಣವು ಕೇವಲ ಹದಿನೈದು ನಿಮಿಷವಾಗಿ ತ್ತೆಂದು ಹದೀಸ್ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟಿದೆ. ಅಂದರೆ  ನೆರೆದ ಜನರನ್ನುದ್ದೇಶಿಸಿ ತಾನು ಹೇಳಬೇಕಾದ ವಿಚಾರಗಳನ್ನು ಸಂಕ್ಷಿಪ್ತವಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಲು  ಪ್ರವಾದಿ(ಸ)ಯವರಿಗೆ ಸಾಧ್ಯವಾಗಿದೆ.

ಮನುಷ್ಯನು ತನ್ನ ದೈನಂದಿನ ಬದುಕಿ ನಲ್ಲಿ ಬಹಳ ಸುಲಭದಲ್ಲಿ ಪಾಪ ಕೃತ್ಯಕ್ಕೆ ಆಕರ್ಷಿತನಾಗುತ್ತಾನೆ. ನಮಾಝ್  ಇಂತಹ ಪಾಪಕ್ಕೆ ಬೀಳದಂತೆ ತಡೆ ಯುವ ರಕ್ಷಾ ಕವಚವಾಗಿದೆ. ದೇವ ಸ್ಮರಣೆಯ ಅಭಾವದಿಂದ ಮನುಷ್ಯನು  ಪಾಪದ ಕೂಪಕ್ಕೆ ತಳ್ಳಲ್ಪಡುವಾಗ ದಿನನಿತ್ಯ ಅವನು ನಿರ್ವಹಿಸುವ ಐದು ಹೊತ್ತಿನ ನಮಾಝಿಗೆ ಸಾಧಾರಣ  ನೆಲೆಯಲ್ಲಿ ಅದನ್ನು ತಡೆಯಲು ಸಾಧ್ಯವಿದೆ. ಮಾತ್ರವಲ್ಲ ಒಬ್ಬ ವ್ಯಕ್ತಿಯು ಐದು ಹೊತ್ತು ನಿರಂತರವಾಗಿ ತನ್ನ ದೇವನ  ಮುಂದೆ ನಿಲ್ಲುವಾಗ ಅವನಿಗೆ ಪಾಪದ ಹತ್ತಿರ ಸುಳಿಯಲು ಸಮಯ ಸಿಗಲಾರದು. ನಮಾಝಿನಿಂದಲೂ ಓರ್ವ  ತನ್ನ ಪಾಪದ ಮೂಟೆಯನ್ನು ಕಡಿಮೆಗೊಳಿ ಸಲು ಸಾಧ್ಯವಾಗಿಲ್ಲವೆಂದಾದರೆ ಅವನಿಗೆ ತೌಬ ಅಥವಾ ಪಾಪ  ವಿಮೋಚನೆಯ ಮೊರೆ ಹೋಗಬಹುದಾಗಿದೆ.

ತಪ್ಪು ಮಾಡುವುದು ಮನುಷ್ಯನ ಸಹಜ ಪ್ರಕ್ರಿಯೆ. ಅದನ್ನು ಸಂಪೂರ್ಣ ವಾಗಿ ನಿರ್ಮೂಲನ ಮಾಡುವುದು ಮತ್ತು  ಅದಕ್ಕೆ ಅವಕಾಶ ಒದಗಿಸುವ ಪ್ರತಿಯೊಂದು ದ್ವಾರವನ್ನು ಮುಚ್ಚುವುದು ಇಸ್ಲಾಮಿನ ಮೂಲಭೂತ ಬೋಧನೆ  ಯಾಗಿದೆ. ಆದರೆ ಕೆಲವು ಸಂದರ್ಭ ಗಳಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಮತ ಪ್ರವಚನವನ್ನು  ನೀಡುವವರೇ ಪಾಪದ ಸುಳಿಯಲ್ಲಿ ಸಿಲುಕುವ ಪ್ರಕ್ರಿಯೆ ಇತ್ತೀಚೆಗೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ  ಪ್ರವಚನಕಾರನು ತನ್ನ ಬೋಧನೆಗೆ ಪೂರಕವಾದ ಧಾರ್ಮಿಕ ಚಾರಿತ್ರ್ಯವನ್ನು ಮೈಗೂಡಿಸಿಕೊಂಡಿಲ್ಲ ಎಂದೇ ನಾವು  ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪ್ರವಚನವೆಂಬುದು ಅವರಿಗೆ ಜೀವನೋ ಪಾಯ ಅಥವಾ ಒಂದು ದೈನಂದಿನ  ಕೆಲಸ ಮಾತ್ರ ಆಗಿದೆ. ಆದರೆ ಇಂತಹ ಘಟನೆಗಳು ಒಬ್ಬ ವ್ಯಕ್ತಿಗೆ ಸೀಮಿತವಾ ದುದು. ಆದ ಕಾರಣ ಅದನ್ನು ಅವನು  ಪ್ರತಿನಿಧಿಸುವ ವ್ಯವಸ್ಥೆಗೆ ಅಥವಾ ಧರ್ಮಕ್ಕೆ ಲೇಪಿಸುವುದು ಖಂಡಿತ ಸಹ್ಯವಲ್ಲ.

ಮತ ಪ್ರವಚನ ಉದ್ಯಮ ಆಗಿ ಮಾರ್ಪಾಟು ಹೊಂದಿರುವುದು ಎಲ್ಲರಿಗೂ ತಿಳಿದ ವಿಚಾರ.  ಪ್ರವಚನಗಾರನು  ಒಂದೋ ಅಥವಾ ಎರಡೋ ಗಂಟೆಗಳಷ್ಟು ಮಾಡುವ ಪ್ರವಚನಕ್ಕೆ ಪ್ರತಿಫಲವಾಗಿ ಪಡೆಯುವ ಮೊತ್ತವು ಸಾವಿರಾರು  ರೂಪಾಯಿಗಳಿಂದ ದಾಟಿ ಈಗ ಅದು ಲಕ್ಷ ರೂಪಾಯಿವರೆಗೂ ತಲುಪಿದೆ. ಪ್ರವಚನದ ಮಧ್ಯೆ ಸ್ವರ್ಗ ಬೇಕಾದವರು  ತಮ್ಮ ಕೈಯಲ್ಲಿರುವ ಚಿನ್ನಾಭರಣಗಳನ್ನು ಎದುರಿಗೆ ಬರುವ ಬಕೆಟಿನಲ್ಲಿ ಹಾಕಿರೆಂದು ಸ್ತ್ರೀಯರಿಗೆ ಅಪ್ಪಣೆಯಾಗುತ್ತದೆ.  ಆದರೂ ಇದಕ್ಕೆ ತದ್ವಿರುದ್ಧವಾಗಿ ಯಾವುದೇ ಪ್ರತಿಫಲ ವನ್ನೂ ಪಡೆಯದ ಕೇವಲ ಪ್ರಯಾಣದ ವೆಚ್ಚವನ್ನು ಮಾತ್ರ  ಪಡೆದು ಅಲ್ಲಾಹನ ಸಂಪ್ರೀತಿಗೋಸ್ಕರ ಧಾರ್ಮಿಕ ಸೇವೆ ಯನ್ನು (ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ  ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ 76:9)  ಮಾಡುವ ಪ್ರವಚನಗಾರರು ಬೇಕಾದಷ್ಟಿದ್ದಾರೆ ಎನ್ನುವುದು  ಆಶಾದಾಯಕವಾಗಿದೆ.

ಸಂದೇಶ ಪ್ರಚಾರದ ಅಥವಾ ಧಾರ್ಮಿಕ ಪ್ರವಚನದ ಉದ್ದೇಶ ಸಂಪತ್ತು ಗಳಿಸುವುದು ಎಂದಾವರೇ ಅದಕ್ಕೂ  ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಮಾತ್ರವಲ್ಲ ಹೆಚ್ಚಿನವರು ಹೇಳುವುದೊಂದು ಮತ್ತು ಮಾಡುವುದು  ಇನ್ನೊಂದು (ಸತ್ಯವಿಶ್ವಾಸಿಗಳೇ ನೀವು ಮಾಡದ್ದನ್ನು ಆಡುತ್ತೀರೇಕೆ 61:2)  ಎಂಬ ತತ್ವವನ್ನು ಸ್ವೀಕರಿಸಿದಾಗ ಅವರು  ಧರ್ಮದೊಂದಿಗಿನ ಸಂಬಂಧ ಕಡಿದು ಕೊಳ್ಳುತ್ತಾರೆ. ಆದರೆ ಅಂತಹ ವ್ಯಕ್ತಿಗಳ ಪಾಪಗಳ ಭಾರವನ್ನು ಧರ್ಮದ  ಸ್ಥಂಭಕ್ಕೆ ಲೇಪಿಸಲ್ಪಡುವುದು ದೌರ್ಭಾಗ್ಯ ಕರವಾದರೂ ಸತ್ಯ.

ಆದರೆ ಇಂದಿನ ಭಾಷಣಗಳ ಬೇರನ್ನು ತದಕಿದರೆ ಧರ್ಮದ ಹೆಸರಿ ನಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ಸೃಷ್ಟಿಸಿ  ಪವಾಡಗಳ ಶೃಂಖಲೆಗಳನ್ನೇ ಪರಿಚಯಿಸುವ ಮೂಲಕ ಜನರನ್ನು ಮೂರ್ಖರನ್ನಾಗಿಸಿ ಹಣ ಕೀಳಲಾಗು ತ್ತದೆ.  ಜನರು ಇಂತಹ ಪರಂಪರೆಯನ್ನು ತಿರಸ್ಕರಿಸಬೇಕಾಗಿದೆ. ಸಾರ್ವಜನಿಕ ಮತ ಪ್ರವಚನವೆಂಬ ಪ್ರಹಸನವು ಶಬ್ದ  ಮಾಲಿನ್ಯದ ಮೂಲಕ ಸಾರ್ವಜನಿಕರ ತೊಂದರೆ ಕೊಡಬಹುದು. ಹೀಗಾದರೆ ಆ ಮೂಲಕ ಇತರ ಧರ್ಮೀಯರಿಗೆ  ಧರ್ಮದ ಬಗ್ಗೆ ತಪ್ಪು ಕಲ್ಪನೆಯನ್ನು ಸೃಷ್ಟಿಸಿದಂತಾಗುವುದು ಎನುವುದರಲ್ಲಿ ತಪ್ಪಿಲ್ಲ. ಸಂಶಯವಿಲ್ಲ.