ನ್ಯೂಝಿಲೆಂಡ್‌ನ ಎರಡು ಮಸೀದಿಗಳ ಮೇಲೆ ಭಯೋತ್ಪಾದಕ ದಾಳಿ; 49 ಮಂದಿ ಸಾವು

0
1108

ಕ್ರೈಸ್ಟ್‌ಚರ್ಚ್: ಇಲ್ಲಿನ ಎರಡು ಮಸೀದಿಯಲ್ಲಿ ಬಂದೂಕು ಧಾರಿವ್ಯಕ್ತಿಯೊಬ್ಬ ಗುಂಡು ಹಾರಿಸಿ 49 ಮಂದಿಯನ್ನು ಕೊಂದು ಹಾಕಿದ್ದಾನೆ. ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ. ನ್ಯೂಝಿಲೆಂಡಿನ ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರದ ನಮಾಝ್‌ನ ವೇಳೆ ಘಟನೆ ನಡೆದಿದೆ. ದೇಶದ ಇತಿಹಾಸದಲ್ಲಿಯೇ ಅತಿ ಕ್ರೂರ ಘಟನೆಯಿದು ಎನ್ನಲಾಗಿದೆ.

ನ್ಯೂಜಿಲೆಂಡಿನ ಪ್ರಧಾನಿ ಜಸಿಂಡಾ ಆರ್ಡೆರನ್ ಇದೊಂದು ಪೂರ್ವಯೋಜಿತ ಭಯೋತ್ಪಾದನಾ ದಾಳಿಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಇದು ನ್ಯೂಜಿಲೆಂಡಿನ ಕರಾಳ ದಿನಗಳಲ್ಲೊಂದಾಗಿ ಎಂದು ಅರ್ಡೆರನ್ ಹೇಳಿದರು. ಎರಡು ಸ್ಫೋಟಕ ಡಿವೈಸ್‍ನ್ನು ಅಳವಡಿಸಲಾಗಿದ್ದ ವಾಹನಗಳನ್ನು ಪತ್ತೆಹಚ್ಚಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಮಧ್ಯ ಕ್ರೈಸ್ಟ್ ಚರ್ಚಿನ ಅಲ್ ನೂರ್ ಮಸೀದಿ ಮತ್ತು ಲಿನ್‍ವುಡ್ ನಗರದ ಇನ್ನೊಂದು ಮಸೀದಿಯಲ್ಲಿ ಬಂದೂಕು ಧಾರಿಗಳು ಗುಂಡು ಹಾರಿಸಿದ್ದಾರೆ.

ಟಿವಿ ನ್ಯೂಝಿಲೆಂಡ್‍ನ ವರದಿಗಾರ ಸಾಮ್‍ಕ್ಲಾರ್ಕ್ ನೂರಾರು ಮಂದಿ ಮಸ್ಜಿದ್ ಅಲ್‍ನೂರಿನೊಳಗೆ ಇದ್ದರು. ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ವರದಿಮಾಡಿದ್ದಾರೆ. ವ್ಯಕ್ತಿಯೊಬ್ಬ ಮೆಷಿನ್ ಗನ್‌ನನ್ನು ಮಸೀದಿಯೊಳಗೆ ತಂದು ಗುಂಡು ಹಾರಿಸತೊಡಗಿದ ಎಂದು ಅಲ್‍ಜಝೀರಕ್ಕೆ ಅವರು ತಿಳಿಸಿದ್ದಾರೆ.

“ಬಂದೂಕುಧಾರಿ ಕಪ್ಪು ಬಟ್ಟೆ ಧರಿಸಿದ್ದ. ಹೆಲ್ಮೆಟ್ ಕೂಡ ಧರಿಸಿದ್ದ. ಅವನ ಕೈಯಲ್ಲಿ ಮೆಷಿನ್ ಗನ್ ಇತ್ತು. ಮಸೀದಿಯ ಹೊರಗೆ ಬಂದ ಈತ ಜನರು ಪ್ರಾರ್ಥನೆ ನಿರತರಾಗಿದ್ದ ಮಸೀದಿಯೊಳಗೆ ಗುಂಡು ಹಾರಿಸಿದ್ದಾನೆ. ಎಂದು ಕ್ಲಾರ್ಕ್ ತಿಳಿಸಿದರು.

ನಂತರ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಮೂವತ್ತು ಮಂದಿ ಮಸೀದಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯಿತು. ಲಿನ್‍ವುಡ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಿರತರಾಗಿದ್ದ ಮುಸ್ಲಿಮರ ಮೇಲೆ ಗುಂಡಿನ ಮಳೆಗೆರೆದ ಪರಿಣಾಮ ಹತ್ತು ಮಂದಿ ಮೃತಪಟ್ಟಿದ್ದಾರೆ. ಎರಡು ಮಸೀದಿಗಳಲ್ಲಿ ಗುಂಡು ಹಾರಾಟ ನಡೆಸಿದ ಘಟನೆಯಲ್ಲಿ ಓರ್ವ ಮಹಿಳೆಯ ಸಹಿತ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.