ಕುರ್‌ಆನಿನ ಸಾಮಾಜಿಕ ಚಿಂತನೆಗಳು- “ಮಾದಕ ವ್ಯಸನ: ಒಂದು ಸಾಮಾಜಿಕ ಪಿಡುಗು”

0
593

ಕುರ್‌ಆನಿನ ಸಾಮಾಜಿಕ ಚಿಂತನೆಗಳು

✒ಅಶೀರುದ್ದೀನ್ ಆಲಿಯಾ ಮಂಜನಾಡಿ

“ಮದ್ಯಪಾನ ಮತ್ತು ಜೂಜಾಟದ ಬಗ್ಗೆ ಏನು ಆದೇಶವಿದೆಯೆಂದು ಕೇಳುತ್ತಾರೆ. ಹೇಳಿರಿ! ಅವೆರಡರಲ್ಲೂ  ಮಹತ್ತರವಾದ ಕೇಡಿದೆ. ಅವುಗಳಲ್ಲಿ ಜನರಿಗೆ ಕೆಲವು ಪ್ರಯೋಜನಗಳು ಇದ್ದರೂ ಅವುಗಳಿಂದಾಗುವ ಹಾನಿಯು  ಪ್ರಯೋಜನಗಳಿ ಗಿಂತ ಬಹಳಷ್ಟು ಹೆಚ್ಚು. ನಾವು ದೇವಮಾರ್ಗದಲ್ಲಿ ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ.  ನಿಮ್ಮ ಆವಶ್ಯಕತೆಗಿಂತ ಮಿಕ್ಕಿರುವುದನ್ನು ಎಂದು ಹೇಳಿರಿ.” (ಅಲ್ ಬಕರ: 219)

ಮದ್ಯಪಾನ ಅಥವಾ ಮಾದಕ ವ್ಯಸನಗಳಿಗೆ ತುತ್ತಾಗುವುದರಿಂದ ಮಾನವನು ಸಮಾಜದಲ್ಲಿ ಎಲ್ಲ ರೀತಿಯ ಅಗೌರವ  ಮತ್ತು ಹೀಯಾಳಿಕೆಗೆ ಒಳಗಾಗುತ್ತಾನೆ. ಮತ್ತು ಬರಿಸುವ ಬುದ್ಧಿಯನ್ನು ನಿಷ್ಕ್ರಿಯಗೊಳಿಸುವ ಎಲ್ಲ ರೀತಿಯ ಅಮಲು  ಪದಾರ್ಥಗಳನ್ನೂ ಕುರ್‍ಆನ್ ವಿರೋಧಿಸಿದೆ. ಮದ್ಯಪಾನ, ಸಾರಾಯಿ, ಶರಾಬು, ಅಮಲು ಪಾನೀಯ, ಬಿಯರ್,  ಗಾಂಜಾ, ಪಾನ್ ಪರಾಗ್, ಗುಟ್ಕಾ, ಬ್ರೌನ್ ಶುಗರ್, ಡ್ರಗ್ಸ್, ಕೊಕೆನ್, ಹೆರಾಯಿನ್ ಇತ್ಯಾದಿ ಹೆಸರು ಪಟ್ಟಿ ಮಾಡಿದರೆ  ಮುಗಿಯದಷ್ಟು ಅಮಲೇರಿಸುವ ತರತರದ ಪದಾರ್ಥಗಳು ಇಂದು ವ್ಯಾಪಕವಾಗಿ ಹರಡಿ ಕೊಂಡಿದೆ. ಇದು  ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ವ್ಯಾಪಿಸಿಕೊಂಡಿದೆ. ಇಂತಹವುಗಳನ್ನು ಪ್ರತಿ ಧರ್ಮವೂ ವಿರೋಧಿಸುತ್ತದೆ.  ವೇದಗಳಲ್ಲಿ ಈ ರೀತಿ ಹೇಳಲಾಗಿದೆ.

“ಯಾರು ಮದ್ಯಪಾನ (ಸುರಾಪಾನ) ಮಾಡುತ್ತಾರೋ ಅವರು ನೈತಿಕ ಪಾಪ ಕೃತ್ಯವೆಸಗಿದವರ ಸಾಲಿಗೆ  ಸೇರುತ್ತಾರೆ.” (ಮನುಸ್ಮೃತಿ- 9:235) ಮದ್ಯಪಾನವು ಒಬ್ಬ ವ್ಯಕ್ತಿಯು ತನ್ನಲ್ಲಿರುವ ನೈತಿಕ ಮೌಲ್ಯಗಳನ್ನು  ಕಳೆದುಕೊಳ್ಳುವಂತೆ ಮಾಡುತ್ತ ದೆಂದು ಬೈಬಲ್ ಸಾರಿದೆ. ಹಾಗೆಯೇ ಮಿತಿಮೀರಿ ಮದ್ಯಪಾನ ಮಾಡುವುದು  ನಮ್ಮನ್ನು ದೈಹಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕತ್ತಲೆಗೆ ತಳ್ಳುತ್ತದೆ. ಅದೇರೀತಿ ಕುರ್‍ಆನ್ ಹೀಗೆ ಸಂದೇಶ  ವನ್ನು ನೀಡುತ್ತದೆ: “ಮದ್ಯವು ಪೈಶಾಚಿಕ ಕೃತ್ಯಗಳಲ್ಲಿ ಸೇರಿದೆ. ಅದನ್ನು ವರ್ಜಿಸಿದರೆ ನಿಮಗೆ ಯಶಸ್ಸು ಲಭಿಸುವುದು.”  (ಅಲ್ ಮಾಇದ: 90) ಸತ್ಯದಲ್ಲಿ ವಿಶ್ವಾಸವಿಡುವ ಯಾರೂ ಮದ್ಯವನ್ನು ಸೇವಿಸಲಾರ ಎಂದು ಪ್ರವಾದಿ(ಸ)  ನುಡಿದಿದ್ದಾರೆ. ಮಾದಕ ವ್ಯಸನದಿಂದಾಗಿ ನಿಮ್ಮೊಳಗೆ ವೈರತ್ವ ಬೆಳೆಯುತ್ತದೆ ಎಂದು ಪ್ರವಾದಿ(ಸ) ಹೇಳಿರುವ ತನ್ನ  ಅನು ಯಾಯಿಗಳು ಮದ್ಯ ಸೇವಿಸುವುದನ್ನು ಬುದ್ಧನು ವಿರೋಧಿಸಿದ್ದಾನೆ. ಅದು ಮಾನಸಿಕ ಸ್ಥಿರತೆಯನ್ನು  ತಪ್ಪಿಸುತ್ತದೆ ಎಂದಿದ್ದಾನೆ. ಪ್ರವಾದಿ(ಸ)ರು ಹೀಗೆ ಹೇಳಿರುವರು: “ಮದ್ಯಪಾನ ಮಾಡುವವನನ್ನು, ಅದನ್ನು  ಕುಡಿಸುವವನನ್ನು, ಮಾರುವವನನ್ನು, ಅದರ ಭಟ್ಟಿ ಇಳಿಸುವವನನ್ನು, ಹೊತ್ತು ಕೊಂಡೊಯ್ಯುವವನನ್ನು ಮತ್ತು  ಯಾರಿಗಾಗಿ ಅದನ್ನು ಒಯ್ಯಲಾಗುತ್ತದೋ ಅವರನ್ನು ಅಲ್ಲಾಹನು ಶಪಿಸಿರುತ್ತಾನೆ.”

ಮಾದಕಕ್ಕೆ ಕುರ್‍ಆನ್ ‘ಖಮ್ರ್’ ಎಂಬ ಪದವನ್ನು ಪ್ರಯೋಗಿಸಿದೆ. ದ್ರಾಕ್ಷೆಯಿಂದ ತಯಾ ರಿಸಿದ ಅಮಲು ಪದಾರ್ಥ  ಎಂತಲೂ ಇದನ್ನು ಕರೆಯುತ್ತಾರೆ. ಆದರೆ ಕುರ್‍ಆನಿನ ಪ್ರಕಾರ, ‘ಖಮ್ರ್’ ಎಂದರೆ ಬುದ್ಧಿಯನ್ನು ಭ್ರಂಶಗೊಳಿಸುವ  ಸಕಲ ತರದ ಅಮಲು ವಸ್ತುಗಳಾಗಿವೆ. ಅಮಲು ಉಂಟು ಮಾಡುವ ಪ್ರತಿಯೊಂದು ವಸ್ತುವನ್ನೂ ಕುರ್‍ಆನ್  ವಿರೋಧಿಸಿದೆ. ಇದರಿಂದ ಕೆಲವು ಪ್ರಯೋಜನಗಳಿವೆ ಎಂದು ಕುರ್‍ಆನ್ ಹೇಳಿದ್ದನ್ನ ನುಸರಿಸಿ ಪ್ರವಾದಿ(ಸ)ರ ಬಳಿ  ಅವರ ಅನು ಯಾಯಿಗಳು: `ಮದ್ಯಪಾನದಲ್ಲಿ ಔಷಧಿಯಿದೆ, ನಾವು ಅದನ್ನು ಚಳಿಯ ಸಂದರ್ಭದಲ್ಲಿ ಹೆಚ್ಚಾಗಿ  ಉಪಯೋಗಿಸುತ್ತೇವೆ’ ಎಂದಾಗ ಪ್ರವಾದಿ(ಸ) ಹೇಳಿದರು, ಅದು ಔಷಧಿಯಲ್ಲ, ಅದೊಂದು ರೋಗ. ಅದರಲ್ಲಿ  ಅಮಲು ಉಂಟಾಗುವುದಾದರೆ ಅದು ನಿಮಗೆ ನಿಷಿದ್ಧವಾಗಿದೆ. ಯಾವ ಸಮಾಜ ಮದ್ಯವನ್ನು ತ್ಯಜಿಸಲು  ತಯಾರಾಗಿಲ್ಲವೋ ಅವರೊಂದಿಗೆ ಯುದ್ಧಕ್ಕೂ ಸಜ್ಜಾಗಿರಿ ಎಂದು ಆಲಂಕಾರಿಕವಾಗಿ ಪ್ರವಾದಿ(ಸ) ಹೇಳಿರುವರು.  ಅದೇ ರೀತಿ ಮದ್ಯಪಾನವಿರುವ ಔತಣ ಕೂಟ ಗಳಲ್ಲಿ ಭಾಗವಹಿಸುವುದು, ಅದಕ್ಕಾಗಿ ಉಪಯೋಗಿ ಸಿದ  ಪಾತ್ರೆಗಳನ್ನು ಮತ್ತೆ ಬಳಸುವುದು ವಿಶ್ವಾಸಿಗಳ ಪಾಲಿಗೆ ನಿಷಿದ್ಧವಾಗಿದೆ ಎಂದು ಪ್ರವಾದಿ(ಸ)ರು ಹೇಳಿದ್ದಾರೆ. ಬೈಬಲ್  ಈ ರೀತಿ ಹೇಳುತ್ತದೆ; ದ್ರಾಕ್ಷಾ ಮದ್ಯಕ್ಕೆ ದಾಸರಾಗಬೇಡಿ. (ತೀತ 2:3) ಅದೇ ರೀತಿ ದ್ರಾಕ್ಷಾರಸವು ಹಿಯಾಳಿಕೆ ಯಾಗಿದೆ. ಮದ್ಯವು  ಕೂಗಾಟವಾಗಿದೆ. ಇವುಗಳಿಂದ ಓಡಾಡುವವನು ಜ್ಞಾನಿಯಲ್ಲ. (ಜ್ಞಾನೋಕ್ತಿ 20:1) ಕುಡುಕರಿಗೆ ಅನಂತ ಜೀವನವಿಲ್ಲ. (ಕೂರಿಂಧ: 6:9) ಹೀಗೆ ಎಲ್ಲ ಧರ್ಮಸಾರಗಳು ಮದ್ಯಪಾನ ವನ್ನು  ವಿರೋಧಿಸುತ್ತವೆ. ದೇವಸ್ಥಾನ, ಮಂದಿರ, ಚರ್ಚ್, ಮಸೀದಿ, ಬಸದಿ, ಗುಡಿಗಳಿಗೆ ವ್ಯಸನಿ ಪ್ರವೇಶಿಸಕೂಡದು  ಎಂದಿದೆ. ಆದರೆ ಧರ್ಮ ಅನುಯಾಯಿಗಳು ಅವುಗಳನ್ನು ಅನುಸರಿಸುತ್ತಿಲ್ಲ. ಹಿಂದೂ ಮತ್ತು ಕ್ರೈಸ್ತರ ಹೆಚ್ಚಿನ ಯುವ  ಸಮು ದಾಯ ಮದ್ಯಪಾನಿಗಳಾಗಿ ಮಾದಕ ವ್ಯಸನಗಳಿಗೆ ಬಲಿಯಾಗಿದ್ದಾರೆ. ಮುಸ್ಲಿಮರಲ್ಲೂ ಈ ಪಿಡುಗು ಇದೆ. ‘ವರ್ಜಯೇನ್ಮಧು ಮಾಂಸಂಚ’ (ಮನು 2:177) ಎನ್ನುವುದರ ಪ್ರಕಾರ ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ  ಸತ್ಯಾರ್ಥ ಪ್ರಕಾಶನದ ದಶಮ ಸಮಿಲ್ಲಾಸದಲ್ಲಿ ಹೀಗೆ ಹೇಳಿದ್ದಾರೆ, “ಅನೇಕ ರೀತಿಯ ಮದ್ಯಗಳು, ಗಾಂಜ,  ಭಂಗಿರಸ, ಅಫೀಮು ಮೊದಲಾದ ಬುದ್ಧಿಯನ್ನು ನಾಶ ಮಾಡುವ ಯಾವ್ಯಾವ ಪದಾರ್ಥಗಳಿವೆಯೋ ಅವುಗಳ  ಸೇವನೆಯನ್ನು ಎಂದೆಂದಿಗೂ ಮಾಡಬಾರದು.” ಮಾದಕ ವಸ್ತುಗಳ ವ್ಯಸನಿಗಳಾಗುವುದೆಂದರೆ, ಸರ್ವನಾಶವಾಗುವುದು. ದೈಹಿಕವಾಗಿ ಮತ್ತು ಆರ್ಥಿಕವಾಗಿ  ದುರ್ಬಲವಾಗುತ್ತಾ ಹೋಗುವುದು. ತಮ್ಮ ಸಂಪತ್ತು, ಕುಟುಂಬ ಗೌರವಗಳನ್ನೆಲ್ಲ ನಶೆಗಾಗಿ ತ್ಯಾಗ ಮಾಡಲು ವ್ಯಕ್ತಿ  ಸನ್ನದ್ಧನಾಗುತ್ತಾನೆ. ಅನ್ಯಾಯ, ಅಕ್ರಮ, ದರೋಡೆ, ಕೊಲೆ, ಸುಲಿಗೆ, ವ್ಯಭಿಚಾರ, ಅತ್ಯಾಚಾರದಂತಹ ಹೇಯ ಕೃತ್ಯವೆಸಗಲು ಅವನು ಸನ್ನದ್ಧನಾಗುತ್ತಾನೆ. ಇವರ ಬಗ್ಗೆ ಸರ್ವಜ್ಞನು ಹಾಸ್ಯಾಸ್ಪದವಾಗಿ ಹೀಗೆ ಹೇಳಿರುವನು,

ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಡಿ
ಬಿದ್ದು ಬರುವವನ ಸದ್ದಡಗಿ ಸಂತಾನ
ಪೆದ್ದು ಹೋಗುವುದು ಸರ್ವಜ್ಞ

ಮಾದಕ ಸೇವನೆಯು ವ್ಯಕ್ತಿ ಆರೋಗ್ಯದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಆಂತರಿಕವಾಗಿಯೂ  ಬಾಹ್ಯವಾಗಿಯೂ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ನಿರಾಸೆ, ನಿರುತ್ಸಾಹ, ಖಿನ್ನತೆ, ಆತ್ಮಹತ್ಯಾ ಭಾವನೆ,  ಹಿಂಜರಿಕೆ, ಹೃದ್ರೋಗ, ಬುದ್ಧಿಮಾಂದ್ಯತೆ, ಮಧುಮೇಹ, ಪಾಶ್ರ್ವವಾಯು ಹಾಗೂ ಮುಂಗೋಗಳು ಕಾಣಿಸುತ್ತವೆ. ಮತ್ತು ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಿ ಮೆದುಳಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಶರೀರದಲ್ಲಿ  ನಿರ್ಜಲೀಕರಣ ಉಂಟಾ ಗುತ್ತದೆ. (ನಿರ್ಜಲೀಕರಣ ಎಂದರೆ ದೇಹದಲ್ಲಿ ನೀರಿನಾಂಶ ಅಥವಾ ದ್ರವಾಂಶದ ಕೊರತೆ  ಯುಂಟಾಗುವುದು) ಮಾದಕದ ಗೀಳಿನಿಂದ ವಂಶವಾಹಿ ನರ ದೌರ್ಬಲ್ಯ ಉಂಟಾಗುತ್ತದೆ. ಪೌಷ್ಠಿಕಾಂಶವನ್ನು  ಬದಲಾಯಿಸಿ ಅಪೌಷ್ಟಿಕತೆ ಯುಂಟು ಮಾಡುತ್ತದೆ. ಮದ್ಯಪಾನಕ್ಕೆ ಕೆಡುಕಿನ ತಾಯಿ ಎಂಬ ವಿಶೇಷತೆಯನ್ನು ಇಸ್ಲಾಮ್  ಕೊಟ್ಟಿದೆ. ಅದೊಂದು ರೋಗ ಎಂದು ಪ್ರವಾದಿ(ಸ) ಹೇಳಿರುವರು. ಕ್ಯಾನ್ಸರ್ ಎಂಬ ಮಹಾಮಾರಿ ಪಿಡುಗಿಗೆ ಹೆಚ್ಚಿನ  ಸಂಖ್ಯೆಯ ಮಾದಕ ವ್ಯಸನಿಗಳು ಬದಲಿಯಾಗುತ್ತಿದ್ದಾರೆ. ತುಟಿ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್, ಗಂಟಲಿನ  ಕ್ಯಾನ್ಸರ್, ರಕ್ತದ ಕ್ಯಾನ್ಸರ್‍ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಇನ್ನು ಗುಟ್ಕ, ಪಾನ್, ಮಸಾಲ, ತಂಬಾಕು  ಜಗಿದವರು ರೋಗಪೀಡಿತ ರಾಗಿ ಬದುಕುತ್ತಿರುವ ಸ್ಥಿತಿಯಿದೆ. ಬದುಕೂ ಅಲ್ಲದ ಸಾವೂ ಅಲ್ಲದ ದುರಂತಮಯ ಜೀವನವನ್ನು ಸಾಗಿಸುವುದನ್ನು ನಾವು ಕಾಣು ತ್ತಿದ್ದೇವೆ. ವಿಶ್ವದಲ್ಲಿ 5.3 ಬಿಲಿಯನ್ ಸಂಖ್ಯೆಯ ಜನರು ಒಂದಲ್ಲ ಒಂದು ರೀತಿಯಲ್ಲಿ ಮದ್ಯವ್ಯಸನಿಗಳಾಗಿದ್ದಾರೆ.

ಭಾರತದಲ್ಲಿ 16 ಕೋಟಿ ಜನ ಮದ್ಯ ಮತ್ತು ಇತರ ವಸ್ತುಗಳ ವ್ಯಸನಿ ಗಳಾಗಿದ್ದು ಪ್ರತಿದಿನ ಹತ್ತರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಲ್ಲಿ ಶೇ. 89 ರಷ್ಟು ವಿದ್ಯಾರ್ಥಿಗಳೇ  ಹೆಚ್ಚಾಗಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನ, ಯುರೋಪ್, ಇಂಗ್ಲೆಂಡ್, ಜಪಾನ್ ಇತ್ಯಾದಿ ಬೃಹತ್ ರಾಷ್ಟ್ರಗಳಲ್ಲಿ ಮಾದಕ ವಸ್ತುಗಳ ಸೇವನೆ ಯಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 3.6ರಷ್ಟು ಜನರ ಕ್ಯಾನ್ಸರ್‍ಗೆ ಆಲ್ಕೋಹಾಲ್ ಕಾರಣವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ  ಮತ್ತು ಅಖಿಲ ಭಾರತೀಯ ವೈದ್ಯಕೀಯ ಮಂಡಳಿ (ಏಮ್ಸ್) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ದೇಶದಲ್ಲಿ ಮದ್ಯ  ಸೇವಿಸುವವರ ಪ್ರಮಾಣ 14.6%, ಗಾಂಜ ಸೇವಿಸುವವರು 2.8%, ಜನರು ಮತ್ತೇರಿಸುವ ಅಮಲು ಪದಾರ್ಥಗಳನ್ನು  1.08% ಸೇವಿಸುತ್ತಾರೆ. ದೇಶದ 16 ಕೋಟಿ ಜನರು ಮಾದಕ ವ್ಯಸನಕ್ಕೆ ಶರಣಾಗಿದ್ದಾರೆ. ಛತ್ತೀಸ್‍ಗಢ, ತ್ರಿಪುರ,  ಪಂಜಾಬ್, ಅರುಣಾಚಲ ಪ್ರದೇಶ, ಗೋವಾದಲ್ಲಿ ಅತೀ ಹೆಚ್ಚು ರೀತಿಯಲ್ಲಿ ಮದ್ಯ ಬಳಕೆಯಾಗುತ್ತಿದೆ.

1920 ರಿಂದ 1930ರ ವರೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಮಧ್ಯ ನಿಷೇಧಿಸುವ ಪ್ರಯತ್ನ ಮಾಡಿದರೂ  ಯಶಸ್ವಿ ಆಗಲಿಲ್ಲ. ಸೌದಿ ಅರೇಬಿಯಾ, ಕುವೈತ್, ಕತರ್, ಒಮಾನ್, ಲಿಬಿಯಾ, ಸುಡಾನ್ ಮೊದಲಾದ ರಾಷ್ಟ್ರಗಳು  ಮಾದಕವನ್ನು ಸಂಪೂರ್ಣ ನಿಷೇಧಿಸಿದೆ. ರಹಸ್ಯ ವಾಗಿ ಸರಬರಾಜು ನಡೆಸುವವನು ಸಿಕ್ಕಿ ಬಿದ್ದಲ್ಲಿ ಕಠಿಣ ಶಿಕ್ಷೆಯನ್ನು  ವಿಧಿಸಲಾಗುತ್ತದೆ. ಭಾರತದ ಕೆಲವೊಂದು ಪ್ರದೇಶಗಳು, ಗ್ರಾಮಗಳು, ಆಲ್ಕೋಹಾಲ್ ಮುಕ್ತವೆಂದು ಗೋಷಿಸಿವೆ.  ಕೆಲವು ರಾಜ್ಯಗಳು ನಿಷೇಧೀಸುವ ಪ್ರಯತ್ನ ಮಾಡಿದರೂ ಅದಕ್ಕೆ ನಾಗರಿಕರಿಂದಲೇ ವಿರೋಧ ವ್ಯಕ್ತವಾಗುತ್ತಿರು ವುದು  ಇಲ್ಲಿನ ದುರಾವಸ್ಥೆ. ಕೆಲವೊಮ್ಮೆ ರಾಜ್ಯಕ್ಕೆ ಸಿಗುವ ಆರ್ಥಿಕ ಲಾಭದಿಂದಾಗಿ ನಿಷೇಧಿಸುವ ಕಾರ್ಯವನ್ನು ಕೈ ಬಿಟ್ಟಿದ್ದೂ  ಇದೆ.

ಭಾರತದಲ್ಲಿ ಗಾಂಧಿ ಜಯಂತಿ, ರಾಷ್ಟ್ರೀಯ ಹಬ್ಬಗಳು, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜೋತ್ಸ ವದ  ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ. ಅಲ್ಲದೆ ಮಾದಕ ಪದಾರ್ಥಗಳಾದ  ಗಾಂಜ, ಬ್ರೌನ್ ಶುಗರ್, ನಿಕೊಟಿನ್ ಡ್ರಗ್ಸ್, ಚರಸ್, ಕೊಕೆನ್, ಹೆರಾಯಿನ್, ಕೆಫೆನ್, ಮಾರ್ಫಿನ್, ಕೆನಾಬಿಸ್  ಮೊದಲಾದವು ಗಳನ್ನು ಸೇವಿಸುವುದಕ್ಕೆ ನಿಷೇಧ ಇದೆ. ಮಾದಕ ವಸ್ತುಗಳ ಸೇವಕರಿಗೂ, ಸರಬರಾಜು ಮಾಡುವವರಿಗೂ ಎನ್‍ಡಿಪಿಎಸ್ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗುತ್ತದೆ.

ವಿದ್ಯಾಕೇಂದ್ರಗಳು, ಮಂದಿರ, ಮಸೀದಿಗಳು,  ಕೋರ್ಟು, ಸರಕಾರಿ ಕಚೇರಿಗಳ ಮುಂದೆ ಮದ್ಯದಂಗಡಿಗಳನ್ನು, ಬಾರ್ ರೆಸ್ಟೊರೆಂಟ್‍ಗಳನ್ನು ನಿಷೇಧಿಸಲಾಗಿದೆ.  ಭಾರತ ವೆಂಬ ಸೆಕ್ಯೂಲರ್ ದೇಶದಲ್ಲಿ ಮದ್ಯ ಕುಡಿಯು ವುದನ್ನು ಬಾರು ಮತ್ತು ಮನೆಯಲ್ಲಿ ಮಾತ್ರ  ಅನುಮತಿಸಲಾಗಿದೆ. ಸಾರ್ವಜನಿಕವಾಗಿ ನಿಷೇಧ ಹೇರಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಾದಕ ಒಂದು  ಸಾಮಾಜಿಕ ಪಿಡುಗು ಎಂಬುವುದರಲ್ಲಿ ಸಂಶಯವಿಲ್ಲ. ಕರ್ನಾಟಕ ರಾಜ್ಯದಲ್ಲಿ ಬೀಡಿ, ಸಿಗರೇಟ್ ಬಿಟ್ಟು ಬಾಕಿ ಎಲ್ಲಾ  ಮಾದಕಗಳು ನಿಷಿದ್ಧವಾಗಿವೆ. ಆದರೂ ಸಹ ಇದಕ್ಕೆ ಬಲಿ ಯಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು  ಖೇದಕರ. ಆದ್ದರಿಂದ ಇಂತಹ ವ್ಯಸನಗಳನ್ನು ಸಾಮಾಜಿಕವಾಗಿ ಎಲ್ಲರೂ ನಿಷೇಧಿಸಬೇಕು, ವಿರೋಧಿಸಬೇಕು.  ಮಾದಕದ ವ್ಯಾಪಕತೆಯಿಂದ ದೇಶದಲ್ಲಿ ಅಹಿತಕರ ಘಟನೆಗಳು ನಡೆಯುತ್ತವೆ. ಇದು ಕೆಡುಕಿನ ಮೂಲ.  ನಿಜವಾಗಿಯೂ ಕಾನೂನು ಅರಕ್ಷಕರಿಗೆ ಮಾದಕ ವಸ್ತುಗಳನ್ನು ಜಾಲಾಡಲು ಮುಕ್ತವಾದ ಸ್ವಾತಂತ್ರ್ಯವನ್ನು ನೀಡ  ಬೇಕು. ವ್ಯಸನದಿಂದ ಮುಕ್ತರಾಗಳು ಬಯಸುವವ ರನ್ನು ಉತ್ತಮ ಆಧ್ಯಾತ್ಮಿಕ ಜ್ಞಾನದಿಂದ ಬದಲಾ ಯಿಸಬೇಕು.  ಹಂತ ಹಂತವಾಗಿ ಅವರನ್ನು ಅದರಿಂದ ಬಿಡಿಸಲು ಪ್ರೇರಣೆ ನೀಡಬೇಕು. ಮದ್ಯದ ವಿರುದ್ಧ ಕುರ್‍ಆನಿನ ಆಜ್ಞೆಯೂ  ಅದೇ ರೀತಿಯಾಗಿತ್ತು. ನೀವು ನಮಾಝ್‍ಗೆ ಬರುವಾಗ ಮದ್ಯಪಾನಿಗಳಾಗಬೇಡಿರಿ. ಅಮಲಿನಲ್ಲಿರಬೇಡಿರಿ. (ಅನ್ನಿಸಾ:  43) ಮದ್ಯ ಪೈಶಾಚಿಕ ಕೃತ್ಯವಾಗಿದೆ. ಕೊನೆಗೆ ಕುರ್‍ಆನ್ ಸಂಪೂರ್ಣವಾಗಿ ನಿಷೇಧಿಸುವ ಆಜ್ಞೆಯನ್ನು ಹೊರಡಿಸಿತು.  ನಂತರ ಅಂತಹವರಿಗೆ 40 ಚಡಿಯೇಟುಗಳನ್ನು ನೀಡಿರಿ ಎಂದಿತು.

ಮದ್ಯಪಾನಿಗೆ ಇಹದಲ್ಲೂ ಸುಖವಿಲ್ಲ, ಪರದಲ್ಲೂ ಮೋಕ್ಷವಿಲ್ಲ. ಪ್ರವಾದಿ(ಸ) ಹೇಳಿದರು, “ಯಾರಾದರೂ  ಇಹಲೋಕದಲ್ಲಿ ಮದ್ಯಪಾನ ಮಾಡಿ ತರುವಾಯ ಪಶ್ಚಾತ್ತಾಪಪಡದೆ ಇದ್ದಲ್ಲಿ ಪರಲೋಕದಲ್ಲಿ ಅದು ಅವನಿಗೆ  ನಿಷೇಧಿಸಲ್ಪಡುವುದು.” (ಬುಖಾರಿ) ಶ್ರೀ ನಾರಾಯಣ ಗುರು, ಬಸವಣ್ಣ, ಗಾಂಧೀಜಿ, ಪ್ರವಾದಿ(ಸ), ಏಸು, ಸ್ವಾಮಿ  ವಿವೇಕಾನಂದ ಮೊದಲಾದ ಗಣ್ಯರು ಮಾದಕ ವ್ಯಸನದ ವಿರುದ್ಧ ಧ್ವನಿ ಎತ್ತಿದವರು. ಅವರೊಂದಿಗೆ ಕೈ ಜೋಡಿಸಿ  ಸ್ವಸ್ಥ ಸಮಾಜವನ್ನು ನಿರ್ಮಿಸುವುದು ನಮ್ಮ ಕರ್ತವ್ಯವಾಗಿದೆ.