ಸಿಮಿ ರಹಸ್ಯ ಶಿಬಿರ ಪ್ರಕರಣದ ಎಲ್ಲ ಆರೋಪಿಗಳು ಕೇರಳ ಹೈಕೋರ್ಟಿನಲ್ಲಿ ಖುಲಾಸೆ

0
354

ಕೊಚ್ಚಿ,ಎ.12: ಪಾನಾಯಿಕುಳಂ ಎಂಬಲ್ಲಿ ಸಿಮಿ ಸಂಘಟನೆಯ ಶಿಬಿರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳ ಹೈಕೋರ್ಟು ಎನ್‍ಐಎ ಕೋರ್ಟಿನಿಂದ ಶಿಕ್ಷೆಗೊಳಗಾಗಿದ್ದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಇದೇ ವೇಳೆ ಹೈಕೋರ್ಟು ಈ ಹಿಂದೆ ವಿಚಾರಣಾ ಕೋರ್ಟಿನಲ್ಲಿ ಖುಲಾಸೆಯಾದ ಇತರ ಎಂಟು ಆರೋಪಿಗಳ ವಿರುದ್ಧ ಎನ್‍ಐಎ ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿಹಾಕಿದೆ. ಸಿಮಿ ಪಾನಾಯಿಕುಳಂನಲ್ಲಿ ರಹಸ್ಯ ಶಿಬಿರ ನಡೆಸಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟು ತಿಳಿಸಿದೆ. ಜಸ್ಟಿಸ್, ಎಎಂ ಶಫೀಖ್, ಜಸ್ಟಿಸ್ ಅಶೋಕ್ ಮೆನನ್‍ರಿದ್ದ ಇಬ್ಬರು ಸದಸ್ಯರ ಹೈಕೋರ್ಟು ಪೀಠ ತೀರ್ಪು ನೀಡಿದೆ.

ಈರಾಟ್ಟು ಪೇಟೆಯ ಹಾರಿಸ್ ಯಾನೆ ಪಿಎ ಶಾದುಲಿ, ಅಬ್ದುಲ್ ರಾಸಿಕ್, ಆಲುವದ ಅನ್ಸಾರ್ ನದ್ವಿ, ಪಾನಾಯಿಕುಳಂನಿಝಾಮುದ್ದೀನ್, ಈರಾಟ್ಟುಪೇಟೆ ಶಮ್ಮಿಯಾನೆ ಶಮ್ಮಾಝ್‍ರಿಗೆ ಎನ್‍ಐಎ ಕೋರ್ಟು ನಿಷೇಧಿತ ಸಂಘಟನೆ ಸಿಮಿಯ ಶಿಬಿರ ನಡೆಸಿದ್ದಾರೆಂದು ಶಿಕ್ಷೆ ನೀಡಿತ್ತು. ರಾಸಿಕ್ ಮತ್ತು ಶಾದುಲಿಗೆ ಹದಿನಾಲ್ಕು ವರ್ಷ ಜೈಲು, ಉಳಿದವರಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಕರಣದ ಎರಡನೆ ಮತ್ತು ಮೂರನೆ ಆರೋಪಿಗಳಾದ ಅಬ್ದುಲ್ ರಾಸಿಕ್, ಅನ್ಸಾರ್ ನದ್ವಿ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಎನ್‍ಐಎ ಕೇಸುದಾಖಲಿಸಿಕೊಂಡಿತ್ತು. ಪ್ರಥಮ, ನಾಲ್ಕನೆ ಮತ್ತು ಐದನೆ ಆರೋಪಿಗಳಾದ ಶಾದುಲಿ, ನಿಝಾಮುದ್ದೀನ್ , ಶಮ್ನಾಝ್ ವಿರುದ್ಧ ಯುಎಪಿಎ ಕಾನೂನಿಡಿಯಲ್ಲಿ ಸಂಚು ಹೆಣೆದಿರುವ ಆರೋಪ ಹೊರಿಸಲಾಗಿತ್ತು. ಮಾಫಿ ಸಾಕ್ಷಿಯಾದ ರಶೀದ್ ಮೌಲವಿಗೆ ಶಿಕ್ಷೆಯಿಂದ ವಿನಾಯತಿ ನೀಡಲಾಯಿತು.

2006 ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನದಂದು ಬಹಿರಂಗವಾಗಿ ನಡೆದ ಕಾರ್ಯಕ್ರಮವನ್ನು ರಹಸ್ಯ ಮತ್ತು ದೇಶವಿರೊಧಿ ಸಂಚನ್ನಾಗಿ ಚಿತ್ರೀಕರಿಸಲಾಗಿತ್ತು. ಭಾಷಣಗಳ ವಿರುದ್ಧ ದೇಶವಿರೋಧಿ ಆರೋಪಕ್ಕೆ ಕೇಸು ದಾಖಲಿಸಿಕೊಳ್ಳಲಾಗಿತ್ತು.ಆದರೆ ಕಾರ್ಯಕ್ರಮ ಪೊಲೀಸ್, ಸರಕಾರಿ ಉದ್ಯೋಗಿಗಳ ಉಪಸ್ಥಿತಿಯಲ್ಲಿ ನಡೆದಿತ್ತು. ಜನರು ಒಟ್ಟುಗೂಡುವ ಸ್ಥಳದಲ್ಲಿನ ಆಡಿಟೋರಿಯಂನ್ನು ಗೊತ್ತುಪಡಿಸಿ ಅದರಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ರಹಸ್ಯ ಶಿಬಿರವೆಂದು ಬಿಂಬಿಸಲಾಗಿತ್ತು ಮತ್ತು ಈ ಆಧಾರದಲ್ಲಿ ಎನ್‍ಐಎ ಕೋರ್ಟು ಶಿಕ್ಷೆ ನೀಡಿತ್ತು ಎನ್ನಲಾಗಿದೆ.