ಬುಲಂದ್ ಶಹರ್ ನಿಂದ 50 ಕಿಲೋಮೀಟರ್ ದೂರದ ಇಜ್ತಿಮಾದ ಜೊತೆ ಹಿಂಸಾಚಾರವನ್ನು ಜೋಡಿಸಲು ಸುದರ್ಶನ್ ಟಿವಿ ಯತ್ನ: ಸತ್ಯ ಹೇಳಿದ ಪೊಲೀಸ್ ಟ್ವೀಟ್

0
147

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ   ಪೊಲೀಸ್ ಅಧಿಕಾರಿ  ಸುಬೋಧ್ ಕುಮಾರ್ ಸಿಂಗ್ ರನ್ನು ಬಲಪಂಥೀಯ ಗುಂಪು ಕೊಂದಿರುವುದನ್ನು ಸುದರ್ಶನ್ ಟಿವಿಯು ತಬ್ಲೀಗಿ ಜಮಾಅತಿನ ಜೊತೆ ಸೇರಿಸಲು ಯತ್ನಿಸಿ ಆ ಹಿಂಸಾಚಾರಕ್ಕೆ ಹಿಂದೂ ಮುಸ್ಲಿಂ ಬಣ್ಣ ನೀಡಲು ಪ್ರಯತ್ನಿಸಿದೆ.

ಆರೆಸ್ಸೆಸ್ ಪರವಾಗಿರುವ  ಸುದರ್ಶನ್ ಟಿವಿಯ ಸುರೇಶ್ ಚಾವಂಕೆ, ತಬ್ಲೀಗಿ ಜಮಾಅತಿನ ಇಜ್ತಿಮಾ (ಸಭೆ)ದೊಂದಿಗೆ  ತಳಕು ಹಾಕಲು ಹತಾಶ ಪ್ರಯತ್ನ ಮಾಡಿದ್ದಾರೆ.  ವರದಿಗಳ ಪ್ರಕಾರ, ಮೂರು ದಿನಗಳ ಇಜ್ತಿಮಾಕ್ಕಾಗಿ ಬುಲಂದ್ ಶಹರ್ ನಲ್ಲಿ ಸುಮಾರು 50 ಲಕ್ಷ ಮುಸ್ಲಿಮರು ಒಟ್ಟುಗೂಡಿದ್ದರು.

ಆದರೆ, ಸರಣಿ ಟ್ವೀಟ್ ಮಾಡಿರುವ  ಚಾವಂಕೆ, ಈ ಇಜ್ತಿಮಾದಲ್ಲಿ ಹಸುಗಳನ್ನು ಹತ್ಯೆಗೈಯುವುದನ್ನು ಸ್ಥಳೀಯರು ವಿರೋಧಿಸಿದ ಕಾರಣಕ್ಕೆ ಹಿಂಸಾಚಾರ ನಡೆಯಿತು ಎಂದು ಬರೆದಿದ್ದಾರೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ಸುದರ್ಶನ್ ಟಿವಿಯಲ್ಲಿ  ಪ್ರಸಾರವಾಗಲಿರುವ ಕಾರ್ಯಕ್ರಮವನ್ನು ವೀಕ್ಷಿಸಿ ಎಂದು ತನ್ನ ಅನುಯಾಯಿಗಳಿಗೆ ಕರೆಕೊಟ್ಟಿದ್ದಾರೆ.

ಇನ್ನೊಂದು  ಟ್ವೀಟ್ ನಲ್ಲಿ  “ಬುಲಂದರ್ ಶಹರ್ ನ   ಇಜ್ತಿಮಾದ ವಿವಾದದ ನಂತರ, ಅನೇಕ ಶಾಲಾ ಮಕ್ಕಳು ಅಳುತ್ತಾ ರಸ್ತೆಯಲ್ಲಿ ಸಿಲುಕಿಕೊಂಡಿದ್ದರು. ಜನರು ಕಾಡುಗಳಲ್ಲಿ ಸಿಲುಕಿಕೊಂಡಿದ್ದಾರೆ, ತಮ್ಮ ಮನೆಗಳಲ್ಲಿ ಭಯಭೀತರಾಗಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು  ನೇರ ಸಂಭಾಷಣೆಯಲ್ಲಿ  ಸುದರ್ಶನ್ ಟಿವಿಗೆ ಈ ವಿಷಯವನ್ನು ತಿಳಿಸಿದ್ದಾರೆ” ಎಂದು ಬರೆದಿದ್ದಾರೆ.

ಆದರೆ, ಈ ಟ್ವೀಟ್ ನ ಬೆನ್ನಿಗೆ,  ಬುಲಂದರ್  ಶಹರ್ ಪೊಲೀಸರು ಟ್ವೀಟ್ ಮಾಡಿದ್ದು,  “ದಯವಿಟ್ಟು ನಕಲಿ ಸುದ್ದಿಯನ್ನು ಹರಡಬೇಡಿ. ಈ ಘಟನೆಗೂ  ಇಜ್ತಿಮಾಗೂ ಯಾವುದೇ ಸಂಬಂಧವಿಲ್ಲ. ವಿಶ್ವ ಇಜ್ತಿಮಾ ಕಾರ್ಯಕ್ರಮ ಸುಂದರವಾಗಿ ಮುಕ್ತಾಯಗೊಂಡಿದೆ. ಈ ಘಟನೆಯು ಇಜ್ತಿಮಾವನ್ನು ಸಂಘಟಿಸಿದ  ಸ್ಥಳದಿಂದ 40-50 ಕಿ.ಮೀ ದೂರದಲ್ಲಿ ನಡೆದಿದೆ. ಹಿಂಸೆಯ ಹಿಂದಿನ  ಅಪರಾಧಿಗಳಿಗೆ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಬರೆದಿದ್ದಾರೆ.

ಆದರೂ, ಈತ ಈ ನಕಲಿ ಟ್ವೀಟನ್ನು ಅಳಿಸಿ ಹಾಕಿಲ್ಲ. ಈ ಹಿಂದೆ ಇವರನ್ನು ಕೋಮು ಉದ್ವಿಗ್ನತೆಯನ್ನು ಉತ್ತೇಜಿಸಿದ  ಮತ್ತು ಮಾಜಿ ಮಹಿಳಾ ಉದ್ಯೋಗಿಯ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here