ಅನ್ಯಜಾತಿ ವ್ಯಕ್ತಿಯನ್ನು ವಿವಾಹವಾದ ಯುವತಿಗೆ ಪತಿಯನ್ನು ಹೊತ್ತು ನಡೆಯುವ ಶಿಕ್ಷೆ ನೀಡಿದ ಗ್ರಾಮಸ್ಥರು

0
459

ಹೊಸದಿಲ್ಲಿ,ಎ.14: ಅನ್ಯಜಾತಿಯ ಯುವಕನನ್ನು ಮದುವೆಯಾದ ಯುವತಿಗೆ ಪತಿಯನ್ನು ಹೆಗಲಲ್ಲಿ ಹೊತ್ತು ನಡೆಯುವ ಶಿಕ್ಷೆ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ಅನ್ಯಜಾತಿಯವನನ್ನು ಮದುವೆಯಾದ ಯುವತಿಗೆ ಕೆಟ್ಟ ಅನುಭವವಾಗಿದೆ. ಝಾಂಡುವ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಯುವತಿ ಯುವಕನನ್ನು ಹೊತ್ತು ನಡೆಯುತ್ತಿರುವ ವೀಡಿಯೊ ವೈರಲ್ ಆದ ಬಳಿಕ ಘಟನೆ ಎಲ್ಲರ ಗಮನಕ್ಕೆ ಬಂತು. ಇಪ್ಪತ್ತು ವರ್ಷದ ಯುವತಿಗೆ ಪತಿಯನ್ನು ಹೆಗಲಲ್ಲಿ ಹೊತ್ತು ನಡೆಯುವುದಕ್ಕೆ ಗ್ರಾಮಸ್ಥರು ಹೇಳಿದ್ದಾರೆ. ಯುವತಿಗೆ ಆತನನ್ನು ಹೊತ್ತು ನಡೆಯಲು ಕಷ್ಟವಾದರೂ ಗ್ರಾಮಸ್ಥರು ಹೊತ್ತು ನಡೆಯುವಂತೆ ಬಲವಂತ ಪಡಿಸಿದ ಹಾಗೂ ಆಕೆಯನ್ನು ಥಳಿಸುವುದು ವೀಡಿಯೊದಲ್ಲಿ ಕಂಡು ಬರುತ್ತಿದೆ. ಇದೇ ವೇಳೆ, ಘಟನೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಝಾಂಡುವ ಎಸ್ಪಿ ವಿನೀತ್ ಜೈನ್ ಹೇಳಿದರು. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.