ಖಿನ್ನತೆಗೆ ಒಳಗಾಗುತ್ತಿರುವ ಮನಶ್ಯಾಂತಿಯ ಕೇಂದ್ರಗಳು

0
643

✒ಖದೀಜ ನುಸ್ರತ್. ಅಬುಧಾಬಿ

ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಜನರು ಅನುಭವಿಸುವ ಅತಿ ದೊಡ್ಡ ರೋಗ  ಕ್ಯಾನ್ಸರ್. ಆ ಬಳಿಕ ಅತಿ ಹೆಚ್ಚು ಮಂದಿ ಬಳಲುತ್ತಿರುವ ಸಮಸ್ಯೆ ಮಾನಸಿಕ ಖಿನ್ನತೆಯಗಿರುತ್ತದೆ.  ತಲೆನೋವು, ಚಿಂತೆ, ಆತಂಕ, ಭಯ, ನಿರಾಶೆ, ನಿರುತ್ಸಾಹ, ಹಸಿವಿಲ್ಲ, ನಿದ್ರಾಹೀನತೆ, ಮರೆವು, ಏಕಾಗ್ರತೆಯ ಕೊರತೆ   ಇದರ ಪ್ರಮುಖ ಲಕ್ಷಣವಾಗಿದೆ. ಜೀವನದಲ್ಲಿ  ಶಾಂತಿ ಮತ್ತು ಮಾನಸಿಕ ನೆಮ್ಮದಿಯ ಕೊರತೆಯೇ ಇದಕ್ಕೆ ಮೂಲ ಕಾರಣ.

ನಮ್ಮಲ್ಲಿ  ಇಂದು  ಬಡವರು  ಮಾತ್ರವಲ್ಲ ಮನೆ, ಹಣ, ಸಂಪತ್ತು  ಸೌಕರ್ಯವಿರುವವರೂ  ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿವುದನ್ನು ಕಾಣುತ್ತಿದ್ದೇವೆ. ಅಸಮತೋಲನ ಜೀವನ ಶೈಲಿ, ನಿರುದ್ಯೋಗ, ತಂದೆತಾಯಿಗಳಿಂದ ಮಕ್ಕಳು ನಿರ್ಲಕ್ಷಿಸಲ್ಪಡುವುದು, ಒಂಟಿ ಜೀವನ, ವೀಡಿಯೋ ಗೇಮ್, ವಾಟ್ಸಾಪ್, ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳ ಮತ್ತು ಗ್ಯಾಜೆಟ್  ದಾಸರಾಗುವುದು,  ಅತಿಯಾದ ಲೌಖಿಕ ಮೋಹ, ಇನ್ನೂ ಸ್ವಲ್ಪ ಹೆಚ್ಚಿರುತ್ತಿದ್ದರೆ ಸುಖವಾಗಿ ಜೀವಿಸಬಹುದಿತ್ತು ಎಂಬ ಭಾವನೆ, ಹಣದಿಂದ ನೆಮ್ಮದಿಯನ್ನು ಗಳಿಸಬಹುದೆಂಬ ತಪ್ಪು ಕಲ್ಪನೆ, ನಮ್ಮಲ್ಲಿ ಇರುವುದನ್ನು ಅಥವಾ ಇಲ್ಲದ್ದನ್ನು ಜನರಿಗೆ ಪ್ರದರ್ಶಿಸುತ್ತಾ ತೋರಿಕೆಯ ಜೀವನ ನಡೆಸುವುದು ಮತ್ತು ಜನರನ್ನು ಸಂತೃಪ್ತ ಪಡಿಸಲು ಪ್ರಯತ್ನಿಸುವುದು ,  ಮನುಷ್ಯರೇ ಸೃಷ್ಟಿಸಿರುವಂತಹ ಹಲವಾರು ಸಮಸ್ಯೆಗಳು, ಸಂಬಂಧಗಳ ದೌರ್ಬಲ್ಯ ಇದಕ್ಕೆ ಮುಖ್ಯ ಕಾರಣ.

ಮಾನವನ ಮನಸ್ಸಿನಲ್ಲಿ ದೇವ ಸಹಭಾಗಿತ್ವ ಮತ್ತು ದೇಹೇಚ್ಛೆಗಳು  ಪರಸ್ಪರ ಹೋರಾಟದಲ್ಲಿರುತ್ತದೆ. ಇದರಿಂದ ಮನಸ್ಸಿನಲ್ಲಿ  ಲೋಭ, ಮೋಹ, ಮದ, ಮತ್ಸರ, ಸ್ವಾರ್ಥ, ಆಸೆ, ದುರಾಸೆ, ಕಾಪಟ್ಯ, ದುರುದ್ದೇಶ, ಸತ್ಯ ನಿಷೇಧ, ಅಹಂಭಾವ, ಅಪರಾಧ ಮನೋಭಾವ ಹೆಚ್ಚುತ್ತದೆ ಮತ್ತು  ಹೃದಯ ವೈಶಾಲ್ಯ, ಕ್ಷಮೆ, ಕರುಣೆ, ಸಹನೆ, ಪ್ರಾಮಾಣಿಕತೆ, ಸತ್ಯ ಸಂಧತೆ, ತ್ಯಾಗ, ನ್ಯಾಯ, ವಿಶ್ವಾಸದಂತಹ ಮೌಲ್ಯಗಳು ಕಡಿಮೆಯಾಗುತ್ತದೆ. ಮನಸ್ಸಿನ ಪರಿಪೂರ್ಣ ಭಾವನೆಯನ್ನು ಯಾವುದೇ ಓರ್ವ ಮನಶಾಸ್ತ್ರಜ್ಞನಿಂದ ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿದೆ.

ನಮ್ಮಲ್ಲಿ ಇಂದು ನೆಮ್ಮದಿಯಿಂದ ಜೀವಿಸುತ್ತಿರುವವರು ಯಾರು ಎಂದು ನಾವು ಯೊಚಿಸಬೇಕು. ಇಂಜಿನಿಯರ್, ಡಾಕ್ಟರ್ ಅಥವಾ ಇನ್ನಿತರ ಯಾವುದೇ ಪದವಿಗಳಿರುವವರೇ? ಶಾಪಿಂಗ್ ಮಾಲ್, ಹೋಟೆಲ್, ಕ್ಲಬ್ ಗಳಲ್ಲಿ ಸಮಯ ಕಳೆಯುವವರೇ?  ಅರಮನೆಯಂತಹ ಮನೆ, ತಿನ್ನಲು ಬೇಕಾದಷ್ಟು ಎಲ್ಲಾ ಸ್ವಾದಿಷ್ಟ ಆಹಾರ, ಓಡಾಡಲು ಕಾರು, ಬ್ಯಾಂಕ್ ತುಂಬಾ ಉಳಿತಾಯವಿರುವವರೇ ? ಖಂಡಿತ ಅಲ್ಲ.

“ಕೇಳಿರಿ, ಮನಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ.”  (ಅರ್ರಅದ್ :28)

ನಾವು ಭೂಮಿಗೆ ಬಂದ ಉದ್ದೇಶವೇನು? ನಮ್ಮ ಪಯಣದ ಅಂತ್ಯ ಎಲ್ಲಿ ಎಂಬುದರ ಬಗ್ಗೆ ನಮಗೆ ಸರಿಯಾದ ಜ್ಞಾನವಿರಬೇಕು. ಜೀವನವು ಸುಖದುಃಖಗಳಿಂದ ಕೂಡಿರುತ್ತದೆ. ಯಾವುದೇ ಸಮಯದಲ್ಲಿ ಬಂದೆರಗುವ ಆಘಾತ, ನೋವು, ಸಂಕಷ್ಟವನ್ನು ಎದುರಿಸಲು ನಾವು  ಸದಾ ಸನ್ನದ್ಧರಾಗಿರಬೇಕು. ಕುರ್ ಆನ್ ಅರ್ಥವನ್ನರಿತು ಪಾರಾಯಣ ಮತ್ತು ಅಧ್ಯಯನ ಮಾಡುವುದು, ಕುರ್ ಆನ್ ಆಲಿಸುವುದು,  ಅಲ್ಲಾಹನ ಸ್ಮರಣೆ, ಕ್ಷಮಾಯಾಚನೆ ಮಾಡುತ್ತಿರುವುದರಿಂದ ಜೀವನದಲ್ಲಿ ಎಂತಹ ಮಾನಸಿಕ ಸಮಸ್ಯೆ, ರೋಗಗಳಿದ್ದರೂ ನೆಮ್ಮೆದಿಯಿಂದ ಜೀವಿಸಲು ಸಾಧ್ಯವಾಗುತ್ತದೆ. ನಮ್ಮ ಎಲ್ಲಾ ಬೇಡಿಕೆಗಳಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸುವುದು, ಅವನ ಮೇಲೆಯೇ ಭರವಸೆಯಿರಿಸುವುದು ಮತ್ತು  ಅವನು ನೀಡಿರುವ ಅನುಗ್ರಹಗಳಿಗೆ ತೃಪ್ತರಾಗುತ್ತಾ ಮನಸ್ಸಿನಲ್ಲಿ ಕೃತಜ್ಞತೆ ಸಲ್ಲಿಸುತ್ತಿರುವುದು.

ಯಾರಿಂದಾದರೂ ಅಹಿತಕರ ಮಾತು ಅಥವಾ ಘಟನೆ ಸಂಭವಿಸಿದ್ದರೆ ಅವರನ್ನು ಕ್ಷಮಿಸುವುದು. ಮನಸ್ಸಿನಲ್ಲಿ ಯಾರ ಬಗ್ಗೆಯೂ ಅಸೂಯೆ, ದ್ವೇಷ, ಕೋಪವಿರಿಸದಿರುವುದು. ಯಾವಾಗಲೂ ಮನಸ್ಸನ್ನು ಎಲ್ಲ ದುರಾಲೋಚನೆ, ಚಿಂತೆಗಳಿಂದ ಶುದ್ಧವಾಗಿರಿಸಲು ಪ್ರಯತ್ನಿಸುವುದು. ನಮ್ಮ ಮಾತಿನಿಂದ ಇತರರ ಮನಸ್ಸು ನೋಯಿಸದಿರಲು ಪ್ರಯತ್ನಿಸಬೇಕು.  ಎಲ್ಲರೊಂದಿಗೂ ಉತ್ತಮ ಸಂಬಂಧವಿರಿಸುವುದು, ನಗುಮುಖದಿಂದ ಭೇಟಿಯಾಗುವುದು, ಇತರರಿಗೂ ಒಳಿತನ್ನೇ ಬಯಸುವುದು ಮತ್ತು ಒಳಿತಿಗಾಗಿ ಪ್ರಾರ್ಥಿಸುತ್ತಾ ಮನಸ್ಸನ್ನು ವಿಶಾಲಗೊಳಿಸುವುದು.

“ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು” (ಅಲ್ ಹಶ್ರ್: 9)

ಆರಾಧನಾಲಯ, ಮನೆ ಮತ್ತು ಕುಟುಂಬ ಎಲ್ಲರ ಪಾಲಿಗೆ ಮನಶ್ಶಾಂತಿಯ ಕೇಂದ್ರವಾಗಬೇಕು. ದಿನಕ್ಕೆ ಐದು ಬಾರಿ ಮಸೀದಿಗೆ ಹೋಗಿ ನಮಾಝ್ ಮಾಡುವುದರಿಂದ ಎಲ್ಲಾ ಲೌಖಿಕ ಸಂಘರ್ಷಗಳು ಮನಸ್ಸಿನಿಂದ ದೂರವಾಗುತ್ತದೆ. ಮನೆಯಿಂದ ಹೊರಬಂದಾಗ ಪುನಃ ಸಾಧ್ಯವಾದಷ್ಟು ಬೇಗ ಮನೆ ತಲುಪಲು ಮನಸ್ಸನ್ನು ಕೇಂದ್ರೀಕರಿಸಬೇಕು. ಮಾತಾಪಿತರು, ಮಕ್ಕಳು, ಸಹೋದರ ಸಹೋದರಿಯರು, ಹತ್ತಿರದ ಸಂಬಂಧಿಕರು ಪರಸ್ಪರರ ಮನಶ್ಶಾಂತಿಗೆ ಕಾರಣವಾಗಬೇಕು. ಮಾನವನು ಸಮೂಹ ಜೀವಿ. ಪತಿ ಪತ್ನಿ, ಮಾತಾಪಿತರು, ಮಕ್ಕಳು ದೂರ ದೂರವಿರುವಾಗ ಒಂಟಿ ಜೀವನವು ಸಹಜವಾಗಿ ಭಯ, ಆಶಂಕೆಯ ವಾತವರಣವನ್ನುಂಟು ಮಾಡುತ್ತದೆ. ಹಣ ಸಂಪಾದನೆ ಅಥವಾ ಇನ್ನಾವುದೇ ಕೆಲಸದಲ್ಲಿ ನಿಬಿಡರಾಗಿ ಕುಟುಂಬವನ್ನು ಕಡೆಗಣಿಸುವಾಗಲೂ ನೆಮ್ಮದಿ ದೂರವಾಗುತ್ತದೆ. ನಮ್ಮನ್ನು ಪ್ರೀತಿಸದ, ಅಗತ್ಯವಿರುವಾಗ ಸಹಾಯ ಮಾಡದ, ನಮ್ಮ ಸಮಸ್ಯೆಗಳನ್ನು ಪರಿಹರಿಸದ, ನಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ನಿರ್ಜೀವ ಮೊಬೈಲನ್ನು ಸಂಗಾತಿಯನ್ನಾಗಿ ಮಾಡಬೇಡಿರಿ.

ಶ್ರೀಮಂತರಲ್ಲಿ ಕೆಲವರಲ್ಲಿ ತಮಗೆ ಆರ್ಥಿಕ ನಷ್ಟ ಸಂಭವಿಸಬಹುದೇ?, ರೋಗ ಬರಬಹುದೇ? ಅಪಘಾತವಾಗಬಹುದೇ? ತಮ್ಮ ಮಕ್ಕಳ ವಿವಾಹ, ಅವರಿಗೆ ಬಡತನ ಬರಬಹುದೇ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ. ಆದ್ದರಿಂದ ಶ್ರೀಮಂತರಾಗಿದ್ದರೂ ತಮ್ಮ ಖರ್ಚು ವೆಚ್ಚದಲ್ಲಿ ಯಾವಾಗಲು ಮಧ್ಯಮ ಧೋರಣೆಯನ್ನು ಪಾಲಿಸಬೇಕು. ಆರ್ಥಿಕ ನಷ್ಟ ಬಂದರೂ ಪರಿಸ್ಥಿತಿಗೆ ತಕ್ಕಂತೆ ಜೀವಿಸಲು ಸಾಧ್ಯವಾಗಬೇಕು. ಅದೇ ರೀತಿ ತಮ್ಮ ಸಂಪಾದನೆಯ ಒಂದು ಭಾಗವನ್ನು ಬಡವರಿಗೆ ದಾನ ಮಾಡುತ್ತಲೇ ಇರಬೇಕು. ತಮ್ಮ ಹಣದಿಂದ ಬಡವರು ಸಂತೋಷಗೊಂಡು ಅವರ ಮುಖದಲ್ಲಿ ಮುಗುಳ್ನಗು ಮೂಡಿದಾಗ ಮಾತ್ರ ಮನಶ್ಶಾಂತಿ ಸಿಗುವುದು.

“ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ  ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯಾಗಿದೆ.”ಎಂದು ಪ್ರವಾದಿ(ಸ) ಹೇಳಿರುವರು

.

ಇತರರ ಸಂಪತ್ ಸೌಕರ್ಯಗಳೆಡೆಗೆ ನಾವು ಆಕರ್ಷಿತರಾಗದಿರುವುದು. ಅದೇ ರೀತಿ ನಮ್ಮಲ್ಲಿರುವ ಸಂಪತ್ ಸೌಕರ್ಯಗಳ ಕಡೆಗೆ ಇತರರನ್ನು ಆಕರ್ಷಿಸುತ್ತಾ ಅವರ ನೆಮ್ಮದಿಯನ್ನು ಹಾಳು ಮಾಡಬಾರದು. ನಮ್ಮಲ್ಲಿರುವುದು ಅಲ್ಪವಾದರೂ ಅದರಲ್ಲಿ ಸಮೃದ್ಧಿಯಿರಬೇಕು.

“ನಾವು ಇವರ ಪೈಕಿ ನಾನಾ ವಿಧದ ಜನರಿಗೆ ನೀಡುವ ಐಹಿಕ ಭೋಗ ವಿಲಾಸಗಳತ್ತ ಕಣ್ಣೆತ್ತಿಯೂ ನೋಡಬೇಡಿರಿ. ಅವುಗಳನ್ನಂತು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿರುತ್ತೇವೆ ಮತ್ತು ನಿನ್ನ ಪ್ರಭು ನೀಡಿರುವ ಧರ್ಮಸಮ್ಮತ ಜೀವನಾಧಾರವೇ ಶ್ರೇಷ್ಠವೂ ಶಾಶ್ವತವೂ ಆಗಿರುತ್ತದೆ” . (ತಾಹಾ:131)

ಇಂದು ನಮ್ಮಲ್ಲಿ ಎರಡು ರೀತಿಯ ಸಮಸ್ಯೆಗಳಿವೆ. ಒಂದು ನಾವೇ ಸೃಷ್ಟಿಸಿರುವಂತಹ ಅಥವಾ ನಮ್ಮ ಪೂರ್ವಿಕರ ಅಂಧಾನುಕರಣೆ ಮಾಡುವುದು. ವರದಕ್ಷಿಣೆ, ಆಡಂಭರ ವಿವಾಹಗಳು, ಆಚಾರ ಮತ್ತು ಅನಾಚಾರ ಇತ್ಯಾದಿಗಳಿಗೆ ನಾವೇ ಒಂದು ಪರಿಹಾರವನ್ನು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಅದು ಪರೋಕ್ಷವಾಗಿ ಸಮುದಾಯವನ್ನು ಒಂದಲ್ಲ ಒಂದು ರೀತಿ ಬಾಧಿಸುತ್ತಿರುವುದು.

ಇನ್ನೊಂದು ಅಲ್ಲಾಹನು ಪರೀಕ್ಷಾರ್ಥವಾಗಿ ನೀಡಿರುವ ಆರ್ಥಿಕ ಸಮಸ್ಯೆ, ನಷ್ಟ, ಬಡತನ, ಅನಾರೋಗ್ಯ ಇತ್ಯಾದಿ. ಇಂತಹ ಸಂದರ್ಭದಲ್ಲಿ ಸಹನೆ ವಹಿಸುತ್ತಾ ಅಲ್ಲಾಹನೊಂದಿಗೆ ಪರಿಹಾರಕ್ಕಾಗಿ ಪ್ರಾರ್ಥಿಸಬೇಕು.

“ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ”. (ಅಲ್ ಬಕರಃ:155)