ವರ್ಷದ ಬಳಿಕ ಜಮ್ಮು-ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಪರೀಕ್ಷಾರ್ಥ 4G ಇಂಟರ್ನೆಟ್ ಸೌಲಭ್ಯ

0
300

ಸನ್ಮಾರ್ಗ ವಾರ್ತೆ

ಶ್ರೀನಗರ,ಆ.17: ಜಮ್ಮು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಪರೀಕ್ಷಾರ್ಥ 4ಜಿ ಮೊಬೈಲ್ ಇಂಟರ್ನೆಟ್ ಸೇವೆ ಮರು ಆರಂಭವಾಗಿದೆ. ಗಂದೆರ್ಭಲ್, ಉಧಂಪುರ ಜಿಲ್ಲೆಗಳಲ್ಲಿ ರವಿವಾರ ರಾತ್ರೆ ಒಂಬತ್ತು ಗಂಟೆಯಿಂದ ಇಂಟರ್ನೆಟ್ ಸೇವೆ ಮರು ಆರಂಭವಾಗಿದೆ ಎಂದು ಜಮ್ಮು ಕಾಶ್ಮೀರದ ಜಿಲ್ಲಾಡಳಿತ ತಿಳಿಸಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದು ಪಡಿಸಿದ ಬೆನ್ನಿಗೆ ಪ್ರದೇಶದ ಇಂಟರ್ನೆಟ್ ಸೇವೆ ನಿಷೇಧಿಸಲಾಗಿತ್ತು.

ಕಾಶ್ಮೀರದಲ್ಲಿ ಇಂಟರ್ನೆಟ್ ಮರುಸ್ಥಾಪಿಸುವ ಕುರಿತು ಕೇಂದ್ರ ಸರಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟು ಕೇಳಿತ್ತು. ಇದಕ್ಕೆ ನಿಯೋಜಿಸಿದ ವಿಶೇಷ ಸಮಿತಿಯ ಶಿಫಾರಸು ಪ್ರಕಾರ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಪರೀಕ್ಷಾರ್ಥ ಲಭ್ಯಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಕೋರ್ಟಿಗೆ ತಿಳಿಸಿತ್ತು.

ಕಾಶ್ಮೀರ ವಿಭಾಗ ಜಮ್ಮು ವಿಭಾಗದ ತಲಾ ಒಂದು ಜಿಲ್ಲೆಗಳನ್ನು ಈಗ ಆಯ್ಕೆ ಮಾಡಲಾಗಿದೆ. ಎರಡು ಜಿಲ್ಲೆಗಳಲ್ಲಿ ನಿಯಂತ್ರಿತವಾಗಿ 4ಜಿ ಇಂಟರ್ನೆಟ್ ಲಭ್ಯಗೊಳಿಸಿದ ಬಳಿಕ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು.

ಪೋಸ್ಟ್‌ಪೈಡ್ ಮೊಬೈಲ್ ಚಂದಾದಾರರಿಗೆ ಮಾತ್ರ ಅತಿವೇಗದ ಇಂಟರ್ನೆಟ್ ಲಭ್ಯವಾಗಲಿದೆ. ಪ್ರೀಪೆಯ್ಡ್ ಬಳಕೆದಾರರಿಗೆ ವೆರಿಫಿಕೇಶನ್ ಪೂರ್ತಿಯಾದ ಬಳಿಕವೇ ಲಭ್ಯವಾಗಲಿದೆ.

4ಜಿ ಇಂಟರ್ನೆಟ್ ಮರು ಸ್ಥಾಪಿಸುವ ಕುರಿತು ಜಮ್ಮು-ಕಾಶ್ಮೀರ ಸರಕಾರ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಕಳೆದ ವಾರ ಸುಪ್ರೀಂಕೋರ್ಟು ಸೂಚಿಸಿತ್ತು. 4ಜಿ ಸೇವೆ ಲಭ್ಯಗೊಳಿಸುವುದರಲ್ಲಿ ವಿರೋಧ ವಿಲ್ಲ ಎಂದು ಜಮ್ಮು-ಕಾಶ್ಮೀರ ಸರಕಾರವು ಗೃಹ ಇಲಾಖೆಗೆ ತಿಳಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.