ಮುಂಬೈ ಕಾಲು ಸಂಕ ಕುಸಿತ: ಐಐಟಿ ವರದಿ ಕಡೆಗಣಿಸಿದ್ದೇ ಕಾರಣ

0
126

ಮುಂಬೈ,ಮಾ. 15: ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‍ನ ಕಾಲುಸಂಕ ಕುಸಿದು ಬಿದ್ದಿದ್ದು ಮುಂಬೈಯಲ್ಲಿ ಒಂಬತ್ತು ತಿಂಗಳಲ್ಲಿ ನಡೆದಿರುವ ಎರಡನೆಯ ದುರಂತವಿದು ಎಂದು ವರದಿಯಾಗಿದೆ. ಸಂಕದ ಸ್ಲಾಬ್ ಕುಸಿದ್ದದ್ದರಿಂದ ಆರು ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. 2018ರ ಜುಲೈ ಮೂರರಂದು ಅಂಧೇರಿ ರೈಲ್ವೆ ನಿಲ್ದಾಣದ ಕಾಲು ಸಂಕ ಕುಸಿದು ಇಬ್ಬರು ಮೃತಪಟ್ಟಿದ್ದರು.

ಮುಂಬೈ ಐಐಟಿ ನೇತೃತ್ವದಲ್ಲಿ ರೈಲ್ವೆ ಮೇಲ್ಸೇತುಗಳ ಕುರಿತು ನಡೆದ ಅಧ್ಯಯನದಲ್ಲಿ ಮುಂಬೈನಗರದ ಹೆಚ್ಚಿನ ಕಾಲು ಸಂಕಗಳು ಕುಸಿಯುವ ಭೀತಿಯಲ್ಲಿದ್ದು ಅದನ್ನು ಮುಚ್ಚಬೇಕೆಂದು ವರದಿ ನೀಡಲಾಗಿತ್ತು. ಅದರೆ ಬ್ರಹ್ಮನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈವರದಿಯನ್ನು ಕಡೆಗಣಿಸಿತ್ತು.

1988ರಲ್ಲಿ ಛತ್ರಪತಿ ಶಿವಾಜಿ ಟರ್ಮಿನಲ್‍ನಲ್ಲಿ ಕಾಲು ಸಂಕ ನಿರ್ಮಾಣವಾಗಿತ್ತು. 2018ರಲ್ಲಿ ಇದರ ದುರಸ್ತಿಕಾರ್ಯವೂ ನಡೆದಿತ್ತು. ಸಂಕದ ಭಾರ ಹೆಚ್ಚಳ ಕುಸಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. 2017-18ರಲ್ಲಿ ಬ್ರಹ್ಮನ್ ಮುಂಬೈ ಕಾರ್ಪೊರೇಷನ್ ಖಾಸಗಿ ಕನ್ಸಲ್ಟಂಟ್ ಉಪಯೋಗಿಸಿ ಸಂಕದ ಕುರಿತು ಅಧ್ಯಯನ ಮಾಡಿಸಿತ್ತು. ಅಂದು ಸಂಕಕ್ಕೆ ಚಿಕ್ಕ ಮಟ್ಟದ ರಿಪೇರಿ ಅಗತ್ಯವಿದೆ ಎಂದು ವರದಿ ನೀಡಲಾಗಿತ್ತು.

ಅಂಧೇರಿಯಲ್ಲಿ ಕಾಲುಸಂಕ ಕುಸಿತವಾದ ಬಳಿಕ 445 ಕಾಲು ಸಂಕಗಳ ಕುರಿತು ಪುನಃ ಅಧ್ಯಯನ ನಡೆಸಬೇಕೆಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಆದೇಶ ಹೊರಡಿಸಿದ್ದರು. ಮುಂಬೈ ಐಐಟಿಯ ನೇತೃತ್ವದಲ್ಲಿ ಸೆಂಟ್ರಲ್, ಪಶ್ಚಿಮ ರೈಲ್ವೆ ಮತ್ತು ಬ್ರಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಯನ ನಡೆಸಿತ್ತು. ನಗರದ ರೈಲ್ವೆ ಹಳಿಯ ಮೇಲಿನಿಂದ ಸಾಗುವ ಕಾಲು ಸಂಕಗಳು ಮತ್ತು ರಸ್ತೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಲೋವರ್ ಪರೇಲ್‍ನ ರಸ್ತೆ ಮೇಲ್ಸೇತುವೆ ಮತ್ತು ಇತರ ಕಡೆಗಳ ಕಾಲು ಸಂಕಗಳು ಸುರಕ್ಷಿತವಲ್ಲ, ಅದನ್ನು ಮುಚ್ಚಬೇಕೆಂದು ಐಐಟಿ ವರದಿ ನೀಡಿತ್ತು.