ಶ್ರೀಲಂಕಾ ಮತ್ತೆ ಕಲುಷಿತವಾಗುತ್ತಿದೆ

0
166

ಶ್ರೀಲಂಕಾ ಮತ್ತೊಮ್ಮೆ ಕಲುಷಿತವಾಗುತ್ತಿದೆ. ಚುನಾಯಿತ ಪ್ರಧಾನಿ ರನಿಲ್ ವಿಕ್ರಮಸಿಂಘೆಯನ್ನು ಹೊರದಬ್ಬಿ ಮಾಜಿ ಅಧ್ಯಕ್ಷ ಮಹೀಂದ ರಾಜ ಪಕ್ಷೆಯನ್ನು ಈಗಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಹೊಸ ಪ್ರಧಾನಿಯನ್ನಾಗಿ ನೇಮಕಗೊಳಿಸಿದ್ದಾರೆ. ಅಧ್ಯಕ್ಷರ ಹಸ್ತಕ್ಷೇಪಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೊಧ ವ್ಯಕ್ತವಾಗಿದೆ. ಆದರೆ ಚೀನ ಹೊಸ ಬೆಳವಣಿಗೆಯನ್ನು ಸ್ವಾಗತಿಸಿ ಹೇಳಿಕೆ ನೀಡಿತು. ಜಗತ್ತಿನೆಲ್ಲೆಡೆ ಶ್ರೀಲಂಕಾ ಅಧ್ಯಕ್ಷರ ಕ್ರಮವನ್ನು ವಿರೋಧಿಸಿ ಖಂಡನೆಯಾಗುತ್ತಿದ್ದರೆ ಚೀನಕ್ಕೆ ಮಾತ್ರ ಸಂತೋಷವಾಗಿದೆ. ಚೀನದ ಮಧ್ಯ ಪ್ರವೇಶವೇ ರನಿಲ್‍ರನ್ನು ಹೊರಹಾಕಿ ರಾಜಪಕ್ಷೆ ಯವರನ್ನು ಒಳಗೆ ತರಲು ಕಾರಣ ಎನ್ನಲಾಗುತ್ತಿದೆ. ಈಗ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತವಾಗಿದ್ದ ಪಾರ್ಲಿಮೆಂಟು ಅಮಾನತುಗೊಂಡಿದೆ. ಶ್ರೀಲಂಕ ದಲ್ಲಿ ಪ್ರಜೆಗಳು ನೆಮ್ಮದಿಯ ನಿಟ್ಟುಸಿರಿಟ್ಟರು ಎನ್ನುವಾಗ ಇಂತಹದೆಲ್ಲ ಕಂಟಕಗಳು ಮತ್ತೆ ಸುತ್ತಿಕೊಳ್ಳುತ್ತಿದೆ. ಹಲವು ವರ್ಷಗಳ ಕಾಲ ಅಲ್ಲಿ ಆಂತರಿಕ ಯುದ್ಧ ನಡೆದಿತ್ತು. ಈ ಇತಿಹಾಸ ಪುನಃ ಮರಕಳಿಸುತ್ತಿದೆಯೇ ಎನ್ನುವ ಸಂದೇಹದ ಜೊತೆಗೆ ಭೀತಿಯೂ ಸೃಷ್ಟಿಯಾಗಿದೆ.

ತನ್ನನ್ನು ಕೊಲ್ಲುವ ಕುರಿತ ಗೂಢಾಲೋಚನೆ ನಡೆದದ್ದು ಮತ್ತು ಆರ್ಥಿಕ ಅಸ್ಥಿರತೆ ರನಿಲ್‍ರನ್ನು ಕೆಳಗಿಸಲು ಕಾರಣವಾಗಿದೆ ಎಂದು ಅಧ್ಯಕ್ಷ ಸಿರಿಸೇನೆ ಹೇಳುತ್ತಾರೆ. ಆದರೆ ರಾಜಪಕ್ಷೆಗೆ ಜನಮತವಿಲ್ಲ. ಚುನಾವಣೆಯಲ್ಲಿ ಗೆದ್ದಿರುವ ತಾನೇ ಈಗಲೂ ಪ್ರಧಾನಿ ಎಂದು ಪದಚ್ಯುತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳುತ್ತಿದ್ದಾರೆ. ಶ್ರೀಲಂಕದಲ್ಲಿ ತಾನು ಶಾಂತಿ, ನ್ಯಾಯಯುತ ಕಾನೂನು ವ್ಯವಸ್ಥೆಯನ್ನು ಮರಳಿ ಸುಸ್ಥಿತಿಗೆ ತರುವೆ ಎಂದು ಹೊಸ ಪ್ರಧಾನಿ ರಾಜಪಕ್ಷೆ ಹೇಳುತ್ತಿದ್ದಾರೆ. ಎಲ್ಲ ಜನಪ್ರತಿನಿಧಿಗಳು ತನಗೆ ಬೆಂಬಲ ನೀಡಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ.

ಶ್ರೀಲಂಕದ ಮೂಲಕ ಉಪಖಂಡದಲ್ಲಿ ನಿಯಂತ್ರಣ ಗಳಿಸುವ ಹೆಬ್ಬಯಕೆಯನ್ನು ಚೀನ ಹೊಂದಿದೆ. ಆ ಯೋಜನೆಯ ಪ್ರಕಾರದಂತೆ ರನಿಲ್ ವಿಕ್ರಮಸಿಂಘೆಯನ್ನು ಅಧಿಕಾರದಿಂದ ಕೆಳಗಿಳಿಸಿಸಲಾಯಿತು ಎಂದು ಶ್ರೀಲಂಕದ ರಾಜ ಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಮಹಿಂದಾ ರಾಜಪಕ್ಷೆ ಅಧ್ಯಕ್ಷರಾಗಿದ್ದಾಗ ಮಾನವಹಕ್ಕು ಉಲ್ಲಂಘನೆಗಳಿಗಾಗಿ ಹಲವರು ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಸುಮಾರು ನಲ್ವತ್ತು ಸಾವಿರ ತಮಿಳರನ್ನು 2005-2009ರ ಗೃಹ ಯುದ್ಧದಲ್ಲಿ ಕೊಲ್ಲಲಾಗಿತ್ತು. ಮಾತ್ರವಲ್ಲ ಮತಹಾಕುವ ಯಂತ್ರವನ್ನು ತಿರುಚಿ ಎರಡನೆ ಬಾರಿಯೂ ಅವರೇ ಅಧ್ಯಕ್ಷರಾಗಿ ಆಯ್ಕೆಗೊಂಡಿ ದ್ದರು ಎಂದು ವರದಿಗಳು ತಿಳಿಸುತ್ತಿವೆ. 2005-2009ರ ಎಲ್‍ಟಿಟಿಇ ವಿರುದ್ಧ ಕಾರ್ಯಾಚರಣೆ ಯಲ್ಲಿ ಅದರ ಕಮಾಂಡರ್ ಪ್ರಭಾಕರನ್ ಹತ್ಯೆ ಯಾಗಿದ್ದರು. ಅವರ ಪುತ್ರನ ಹತ್ಯೆಯೂ ನಡೆದಿತ್ತು. ಪ್ರಭಾಕರನ್ ವಿರುದ್ಧ ಕಾರ್ಯಾಚರಣೆ ಗಿಂತ ಮೊದಲು ಭಾರತದಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಶ್ರೀಲಂಕಾಕ್ಕೆ ಶಾಂತಿ ಸೇನೆ ಕಳುಹಿಸಿದ್ದರು. ಈ ಆಕ್ರೋಶ ಮತ್ತೆ ರಾಜೀವ್ ಗಾಂಧಿ ಹತ್ಯೆಯವರೆಗೂ ಬೆಳೆದು ಬಂದಿತ್ತು.

ಆದರೆ ತಮಿಳರ ವಿರುದ್ಧ ಕಾರ್ಯಾಚರಣೆ ನಡೆಸಿದ 2005-2015ರ ಅವಧಿಯಲ್ಲಿ ಶ್ರೀಲಂಕದ ಅಧ್ಯಕ್ಷರಾಗಿದ್ದ ರಾಜಪಕ್ಷೆ ಭಾರತದೊಂದಿಗೆ ಅಂತಹ ನಿಕಟ ಬಾಂಧವ್ಯವನ್ನು ಇಟ್ಟುಕೊಂಡಿರಲಿಲ್ಲ. ಬದಲಾಗಿ ಅವರು ಹೆಚ್ಚು ಚೀನಕ್ಕೆ ನಿಕಟವಾಗಿದ್ದರು. ಈಗ ಸಿರಿಸೇನೆ ಮಹೀಂದಾ ರಾಜಪಕ್ಷೆಯನ್ನು ಪ್ರಧಾನಿಯಾಗಿಸಿರುವುದಕ್ಕೆ ಇದನ್ನೇ ದೊಡ್ಡ ಗುಣವಾಗಿ ಎತ್ತಿತೋರಿಸಲಾಗುತ್ತಿದೆ. ಮಹಿಂದಾ ರಾಜಪಕ್ಷೆ ಮೂರನೆ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಾಗ ಒಂದು ಸೈನಿಕ ಬುಡಮೇಲು ಕೃತ್ಯಕ್ಕೂ ಯತ್ನಿಸಿದರೆನ್ನಲಾಗುತ್ತಿದೆ. ಆದರೆ ನಾಲ್ಕನೆ ಬಾರಿ ಹಿಂಬಾಲಿ ನಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರವೇಶಿಸುವ ಅವರ ಆಶೆ ಕೈಗೂಡಲಿಲ್ಲ. ಸೇನೆಯ ಮುಖ್ಯಸ್ಥರೇ ಅವರ ಬೇಡಿಕೆಯನ್ನು ನಿರಾಕರಿಸಿದ್ದರಿಂದ ಶ್ರೀಲಂಕ ದಲ್ಲಿ ಸೈನಿಕ ಕ್ಷಿಪ್ರಕ್ರಾಂತಿ ನಡೆಯಲಿಲ್ಲ ಅಷ್ಟೇ.

ಶ್ರೀಲಂಕದಲ್ಲಿ ಪ್ರಜಾಪ್ರಭುತ್ವವಾದಿ ಮೌಲ್ಯಗಳಿಗೆ ಅಂಗೀಕಾರ ನೀಡಬೇಕೆಂದು ಯುರೋಪಿಯನ್ ಯೂನಿಯನ್ ಮತ್ತು ಭಾರತವು ಶ್ರೀಲಂಕದ ಅಧ್ಯಕ್ಷ ಸಿರಿಸೇನೆಯವರನ್ನು ಆಗ್ರಹಿಸಿದೆ. ಒಂದು ದೇಶದ ಸಚಿವ ಸಂಪುಟವನ್ನು ಬದಲಾಯಿಸುವು ದರಲ್ಲಿ ವಿದೇಶಿ ಹಸ್ತಕ್ಷೇಪ ಆ ನಾಡಿನ ದುರ್ಬಲ ಸ್ಥಿತಿಯನ್ನು ಅನಾವರಣಗೊಳಿಸುತ್ತಿದೆ. ಶ್ರೀಲಂಕದ ಅಸ್ವಾಸ್ಥ್ಯಕ್ಕೆ ಇವು ಪುನಃ ಹೇತುವಾಗ ಬಹುದು. ಹೀಗಾದರೆ ಶ್ರೀಲಂಕಕ್ಕೆ ಮಾತ್ರವಲ್ಲ ಇಡೀ ವಲಯವನ್ನೇ ಇದು ಬಾಧಿಸುತ್ತದೆ. ಆದ್ದರಿಂದ ಶ್ರೀಲಂಕಾದ ರಾಜಕೀಯ ಅರಾಜಕತೆ ನೆರೆಯ ರಾಷ್ಟ್ರಗಳ ನಿದ್ದೆಯನ್ನೂ ಕೆಡಿಸಿತು ಎಂದು ಹೇಳಬಹುದು.

ಸಚಿವರು ಕಚೇರಿಗೆ ಬಂದಾಗ ಕಚೇರಿ ಪ್ರವೇಶಿಸದಂತೆ ತಡೆಯಲಾಯಿತು. ಮಾಜಿ ಕ್ರಿಕೆಟಿಗ, ಹಿರಿಯ ರಾಜಕಾರಿಣಿ ಅರ್ಜುನ್ ರಣತುಂಗ ತನ್ನ ಕಚೇರಿ ಪ್ರವೇಶಿಸಿದಾಗ ಘರ್ಷಣೆಯಾಗಿ ಅವರ ಗನ್‍ಮೆನ್‍ನಿಂದ ಒಬ್ಬ ಕೊಲೆಯಾಗಿದ್ದಾನೆ. ಮಹಿಂದಾ ರಾಜಪಕ್ಷೆಯ ವಿರುದ್ಧ ಸ್ಪರ್ಧಿಸಿ ಈಗಿನ ಅಧ್ಯಕ್ಷ ಸಿರಿಸೇನೆ ಅಧಿಕಾರಕ್ಕೆ ಬಂದಿದ್ದರು. ಇದ್ದ ಸಚಿವ ಸಂಪುಟವನ್ನು ಬದಲಾಯಿಸಿ ಹೊಸದಾಗಿ ಒಬ್ಬರನ್ನು ಅಲ್ಲಿಗೆ ಪ್ರತಿಷ್ಠಾಪಿಸುವಂತಹ ಅನಿವಾರ್ಯ ಸ್ಥಿತಿ ಲಂಕೆಯಲ್ಲಿಲ್ಲ ಎಂದು ಅಲ್ಲಿನ ರಾಜಕೀಯ ನಿರೀಕ್ಷಕರು ಹೇಳುತ್ತಿದ್ದಾರೆ. ಚೀನದ ಮಾನಸ ಪುತ್ರ ಮಹಿಂದಾ ರಾಜಪಕ್ಷೆ ಯನ್ನು ಪುನಃ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಸಿರಿ ಸೇನೆಯ ಮೇಲೆ ಚೀನ ಹಾಕಿರುವ ಒತ್ತಡದಿಂದಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ರನಿಲ್ ವಿಕ್ರಮಸಿಂಘೆಯನ್ನು ತೆಗೆದು ಮಹಿಂದಾರನ್ನು ಪ್ರಧಾನಿ ಸ್ಥಾನಕ್ಕೆ ತರಲಾಯಿತು. ಇದೊಂದು ಅಂತಾರಾಷ್ಟ್ರೀಯ ಗೂಢಾಲೋಚನೆ. ಒಟ್ಟಿನಲ್ಲಿ ಶ್ರೀಲಂಕಕ್ಕೆ ಪ್ರಯೋಜನವಿರುವ ತೀರ್ಮಾನ ಇದ್ದಲ್ಲ. ಚೀನದ ಹಸ್ತಕ್ಷೇಪ ಭಾರತದೃಷ್ಟಿಯಲ್ಲೂ ಒಳ್ಳೆಯದಲ್ಲ.