ಪರೀಕ್ಷಾ ತಯಾರಿ: ಅವಳ ಮನಸ್ಸಿನಲ್ಲಿ ಮೀನುಗಳು ಎಲ್ಲೆಲ್ಲೋ ಇದ್ದವು

0
2215

ಸಾಲಿಹಾ ಸಾದಿ

ಈಗ ಶಾಲಾ ಕಾಲೇಜುಗಳಲ್ಲಿ ಪರೀಕ್ಷಾ ಸಮಯ, ಪರೀಕ್ಷಾ ತಯಾರಿಯ ಕಾಲ, ಪರೀಕ್ಷೆಯನ್ನು ಹೇಗೆ ಎದುರಿಸಬೇಕು?, ಯಾವ ರೀತಿ ತಯಾರಿ ನಡೆಸಬೇಕು? ಎನ್ನುವ ಹಲವಾರು ಮೆಸೇಜುಗಳು. ಮಕ್ಕಳಲ್ಲಿ ಪರೀಕ್ಷಾ ಭಯವನ್ನು ಹುಟ್ಟಿಸಬೇಡಿ,  ಅಗ್ರ ಶ್ರೇಣಿಯೇ ಸಿಗಬೇಕೆಂಬ ಒತ್ತಡವನ್ನು ಹಾಕಬೇಡಿ,  ಎನ್ನುವಂತಹ ಹತ್ತಾರು ಮೆಸೇಜುಗಳನ್ನು ಓದುತ್ತಲೇ, ಮಕ್ಕಳ ಮೇಲೆ ಇನ್ನಷ್ಟು ಒತ್ತಡವನ್ನು ಹೇರುವ ಹೆತ್ತವರು . ಒಟ್ಟಿನಲ್ಲಿ ಹಲವಾರು ಮನೆಯಲ್ಲಿ ನಿದ್ದೆ ಇಲ್ಲದೆ, ಮಕ್ಕಳನ್ನು ಓದಲು ಹೇಳುತ್ತಾ, ಪಕ್ಕದಲ್ಲಿ ತಾಯಂದಿರು ಮೊಬೈಲ್ ನೋಡುತ್ತಾ , ಅರ್ಧ  ರಾತ್ರಿಯವರೆಗೂ ಕೋಣೆಯ ಬೆಳಕು ಆರದ ದಿನಗಳು.

ವಿದ್ಯಾರ್ಥಿಗಳಿಗೆ ಹೆತ್ತವರ ಭಯ, ಹೆತ್ತವರಿಗೆ ಅಕ್ಕ ಪಕ್ಕದವರ, ಸಂಬಂಧಿಕರ, ಸ್ನೇಹಿತರೆಲ್ಲರೂ “ಮಗಳಿಗೆ ಅಥವಾ ಮಗನಿಗೆ ಎಷ್ಟು ಮಾರ್ಕು?” ಎಂದು ಕೇಳುವ ಪ್ರಶ್ನೆಗಳ ಭಯ. ವಿದ್ಯಾರ್ಥಿಗಳು ತಮ್ಮಿಷ್ಟದೊಂದಿಗೆ  ಉತ್ತಮ ಅಂಕಗಳ ಕನಸಿನೊಂದಿಗೆ ಕ್ರಮ ಬದ್ಧವಾಗಿ ಪರೀಕ್ಷೆಗೆ ತಯಾರಿ ನಡೆಸಬೇಕು. ಅದರಲ್ಲಿ ಯಾರ ಒತ್ತಡವೂ ಇರಬಾರದು. ನಿನ್ನಿಂದ ಉತ್ತಮ ಫಲಿತಾಂಶ ಸಾಧ್ಯವಾದುದರಿಂದ ನಿನ್ನಲ್ಲಿ ಉತ್ತಮ ನಿರೀಕ್ಷೆ ಇದೆ, ಎನ್ನುವ ಅಧ್ಯಾಪಕರ, ಹೆತ್ತವರ ಪ್ರೋತ್ಸಾಹ ಇರಬೇಕೇ ಹೊರತು ನೀನು ಇಂತಿಷ್ಟು ಅಂಕಗಳನ್ನು ಗಳಿಸಿಯೇ ತೀರಬೇಕು ಎನ್ನುವ ಒತ್ತಡವಿರಬಾರದು.

ಟೀಚರ್ ಒಬ್ಬರು ಹೇಳುವಂತೆ ಇತ್ತೀಚಿನ ದಿನಗಳಲ್ಲಿ ಎರಡು ಮತ್ತು ಮೂರನೇ ತರಗತಿಯಲ್ಲಿ ಕಲಿಯುವ ಮಕ್ಕಳ ಹೆತ್ತವರು ಪರೀಕ್ಷೆಯನ್ನು ದೊಡ್ಡ ಸವಾಲಿನಂತೆ ಕಾಣುತ್ತಾರೆ. ಎಲ್ಲದರಲ್ಲೂ ಭರ್ತಿ ಅಂಕಗಳು ಇರಬೇಕೆಂದು ಮಕ್ಕಳ ಮೇಲೆ ನಿರ್ಬಂಧವೂ ಇರುತ್ತದೆ.  ಇನ್ನು ಕೆಲವು ತಾಯಂದಿರಿಗೆ ಮಕ್ಕಳ ಜೊತೆ ಕುಳಿತು ಅವರಿಗೆ ಕಲಿಸುವುದೇ ಬಲು ದೊಡ್ಡ ಕೆಲಸ ಎಂದು ಭಾವಿಸುತ್ತಾರೆ. ಎಲ್ ಕೆ ಜಿ ಕಲಿಯುವ ಮಗುವಿಗೆ ಎ ಬಿ ಸಿ ಡಿ  ಕಲಿಸುವಾಗಲೇ ದಿನಕ್ಕೆ ನಾಲ್ಕೈದು ಪೆಟ್ಟು ಬೀಳುತ್ತದೆ.  ಕೇವಲ ನಾಲ್ಕು ಮತ್ತು  ಐದನೇ ತರಗತಿಯವರೆಗೆ ಮಾತ್ರ ಮಕ್ಕಳ ಜೊತೆ ಕುಳಿತು ಅವರಿಗೆ ಕಲಿಸುವ ಕೆಲವು ತಾಯಂದಿರು,  ಮಗ ಅಥವಾ ಮಗಳು ಒಮ್ಮೆ ಆರನೇ ತರಗತಿಗೆ ಹೋದರೆ ಸಾಕು ನಂತರ ಅವರು ಕಲಿಯುತ್ತಾರಲ್ಲವೆ,  ನಾವು ನೋಡಬೇಕೆಂದಿಲ್ಲವಲ್ಲ ಎನ್ನುವುದು ತಾಯಿಯ ಬಲು ದೊಡ್ಡ ಸೋಮಾರಿತನ.  ಶಿಕ್ಷಣವೆಂದರೆ ಕೇವಲ ಅಧ್ಯಾಪಕ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸಂಬಂಧಪಟ್ಟದ್ದಲ್ಲ ಅದರಲ್ಲಿ ಹೆತ್ತವರ ಪಾತ್ರವು ಬಹಳ ಮಹತ್ತರವಾದುದು.

ಶಾಲೆ ಬಿಟ್ಟು ಬಂದ ಮಕ್ಕಳ ಬ್ಯಾಗ್, ಪುಸ್ತಕ ಎಲ್ಲವನ್ನೂ ತಾಯಿ ದಿನವು ಪರಿಶೀಲಿಸಬೇಕು. ತನ್ನ ಮಗುವಿನೊಂದಿಗೆ  ಕುಳಿತು ಅವರ ಹೋಮ್ ವರ್ಕ್‌ಗಳನ್ನು ಮಾಡಿಸುತ್ತಾ ಆಯಾ ದಿನದ ಪ್ರಶ್ನೋತ್ತರಗಳನ್ನು ಕಲಿಸುತ್ತಾ ಪಠ್ಯಪುಸ್ತಕದ ಪಾಠವನ್ನು ಕೂಡ ಅವರೊಂದಿಗೆ ಓದಿಸುವ ಅಭ್ಯಾಸವನ್ನು ರೂಢಿಸಿಕೊಂಡರೆ ಅವರ  ಭಾಷಾ ಜ್ಞಾನ ವೃದ್ಧಿಸುತ್ತದೆ, ಮಾತ್ರವಲ್ಲ ಅವರ  ಮಾತು, ಶಬ್ದಗಳ ಉಚ್ಚಾರಣೆ  ಬಹಳ ಸ್ಫುಟವಾಗಿರುತ್ತದೆ. ಸ್ವಲ್ಪ ಸಮಯದ ಇಂತಹ ದೈನಂದಿನ ಅಭ್ಯಾಸಗಳಿಂದ ಮಕ್ಕಳಿಗೆ ಪರೀಕ್ಷೆಗಳು ಖಂಡಿತವಾಗಿಯೂ ಕಷ್ಟವೆನಿಸುವುದಿಲ್ಲ.

ಒಂದು, ಎರಡು ತರಗತಿಗಳಲ್ಲಿ ಕಲಿಯುವ ಮಕ್ಕಳು ಪುಸ್ತಕದಲ್ಲಿ ಇರುವುದಕ್ಕಿಂತಲೂ ತಾವು ನೋಡಿದ್ದನ್ನು, ಕೇಳಿದ್ದನ್ನು ಬೇಗನೆ ಕಲಿಯುತ್ತಾರೆ.  ಆದ್ದರಿಂದ ಅವರ ಕಲಿಕೆಯಲ್ಲಿ ದೃಶ್ಯ ಮತ್ತು ಶ್ರವಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು.  ಬೇಗನೆ ಬರೆಯುವುದಕ್ಕಿಂತ ಮೊದಲು ಬೇಗನೆ ಸರಿಯಾಗಿ ಮಾತನಾಡಲು, ಕೇಳಿದ್ದನ್ನು ಆಲಿಸಿದ್ದನ್ನು ಅದೇ ರೀತಿ ತಪ್ಪಿಲ್ಲದೆ ಹೇಳಲು,  ಅಕ್ಷರಗಳನ್ನು ಜೋಡಿಸಿ ಓದಲು ಕಲಿಯಬೇಕು.

ಒಂದನೇ ತರಗತಿಯಲ್ಲಿ ಕಲಿಯುವ  ನನ್ನ ನೆರೆಮನೆಯ ಹುಡುಗಿಗೆ ವಿಜ್ಞಾನ ವಿಷಯವನ್ನು ಕಲಿಸುವ ಸಮಯದಲ್ಲಿ “ಮೀನು ಎಲ್ಲಿ ಜೀವಿಸುತ್ತದೆ ? (where do fish live) ಎನ್ನುವ ಪ್ರಶ್ನೆಗೆ, ನೀರಿನಲ್ಲಿ(in water) ಎಂದು ಉತ್ತರಿಸಬೇಕಿತ್ತು.  ಸ್ವಲ್ಪ ಕಷ್ಟದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದರೂ, ಈ ಸುಲಭದ  ಪ್ರಶ್ನೆಯನ್ನು ಕೇಳುವಾಗ ಉತ್ತರವನ್ನು ಮರೆತು ಬಿಡುತ್ತಿದ್ದಳು.  ಸರಿ, ನೀನು ಚಂದ ಚಂದದ ಸಣ್ಣ ಮೀನುಗಳನ್ನು ಎಲ್ಲಿ ನೋಡಿದ್ದೀಯಾ ಎಂದು ಕೇಳಿದೆ.   ಅದಕ್ಕವಳು ಅಕ್ವೇರಿಯಂನಲ್ಲಿ ಎಂದಳು.  ಓಕೆ ಅಕ್ವೇರಿಯಂ ನ ಒಳಗಡೆ ನೀರಿನಲ್ಲಿ ಮೀನು ಇದೆಯಲ್ಲವೇ ವೆರಿ ಗುಡ್ ! ಹಾಗಾದರೆ ಸ್ವಲ್ಪ ದೊಡ್ಡ ಮೀನುಗಳು ಎಲ್ಲಿರುತ್ತವೆ?  ಎಂದು ಕೇಳಿದೆ, ನದಿ ಸಮುದ್ರ ಎಂಬ ಉತ್ತರಕ್ಕೆ ಕಾಯುತ್ತಿದ್ದ ನನ್ನಲ್ಲಿ ಅವಳು ಬೇಗನೆ ,ಲುಲು ಹೈಪರ್ ಮಾರ್ಕೆಟ್ ನಲ್ಲಿ! ಎಂದಳು. ನನಗಂತೂ ನಗು ಬಂತು ಊರಲ್ಲಾದರೆ ಹಸನಾಕನ ಸೈಕಲ್ ಬುಟ್ಟಿಯಲ್ಲಿ ಎನ್ನುತ್ತಿದ್ದಳು, ಅನಿಸಿತು. ಎಲ್ಲವನ್ನು ಬದಿಗಿಟ್ಟು ವೇರ್ ಡು… ಎಂದು ಪುಸ್ತಕದಲ್ಲಿ ದ್ದಂತೆ ಎರಡು ಮೂರು ಬಾರಿ ಪ್ರಶ್ನೆ ಕೇಳಿದೆ ಮೆಲ್ಲನೆ ವಾಟರ್ ಎಂದು ಉತ್ತರಿಸುತ್ತಾ ಹೋದಳು. ಆದರೆ ಅವಳ ಮನಸ್ಸಿನಲ್ಲಿ ಮೀನುಗಳು ಎಲ್ಲೆಲ್ಲೋ ಇದ್ದವು.

ಮೂರನೇ ತರಗತಿಯ ನನ್ನ ಬಾಲ್ಯದ ಸಮಯ, ಪೆನ್ಸಿಲ್ ಅನ್ನು ಬದಿಗಿಟ್ಟು ಇನ್ನು ಪೆನ್ ನಲ್ಲಿ ಬರೆಯುವುದು, ಪ್ರಶ್ನೆ ಪತ್ರಿಕೆಗೆ ಪರೀಕ್ಷಾ ಹಾಲ್ ನಲ್ಲಿ ಉತ್ತರಿಸುವುದು ಇವೆಲ್ಲವೂ ನನಗಿಂತಲೂ ಅಣ್ಣಂದಿರಿಗೆ ಹೆಚ್ಚು ಕುತೂಹಲವೆನಿಸಿತ್ತು. ಸಮಾಜ ಪರೀಕ್ಷೆಗೆಂದು ಕಲಿಯುತ್ತಿರುವಾಗ ಭಾರತದ ನಕ್ಷೆಯನ್ನು ಬಿಡಿಸುತ್ತಾ ಅಣ್ಣ ಕೇಳಿದ “ಇನ್ನು ಹೇಳು ಮಂಗಳೂರು ಎಲ್ಲಿ, ಎಂದು (ಆ ನಕ್ಷೆಯಲ್ಲಿ ಮಂಗಳೂರು ಬೆಂಗಳೂರು ಮದ್ರಾಸ್ ನ್ನು ಗುರುತಿಸಬೇಕಿತ್ತು.) ನಾನು ಹೇಳಿದೆ, ಸೇಸಪ್ಪಣ್ಣನ ಅಂಗಡಿಯ ಆಚೆಗಿರುವ ಅಶೋಕ ಮರದಡಿಯಲ್ಲಿ ಕಾದು ನಿಂತರೆ ಮಂಗಳೂರು ಬಸ್ಸು ನಿಲ್ಲುತ್ತದೆ ಅಲ್ಲಿಂದ ನೇರವಾಗಿ ಮಂಗಳೂರಿಗೆ ಹೋಗಬಹುದು. ಇನ್ನೂ ಸರಿಯಾಗಿ ಉತ್ತರಿಸುತ್ತಾ ಹೇಳಿದೆ, ಸೀಟು ಸಿಕ್ಕಿ ಆರಾಮದಲ್ಲಿ ಹೋಗಬೇಕಾದರೆ ಬಸ್ ಸ್ಟ್ಯಾಂಡ್ ಗೆ ಹೋಗಬೇಕು. ಅಮ್ಮ ಅಣ್ಣಂದಿರನ್ನೆಲ್ಲ ನಗಿಸಿದ ನನ್ನ ಮಂಗಳೂರಿನ ಗುರುತು ಈಗಲೂ ಎಲ್ಲರಿಗೂ ನೆನಪಿದೆ.

ಈ  ತಲೆಮಾರಿನ ಮಕ್ಕಳೆಲ್ಲ ಬಹಳ ಚುರುಕು, ಬೇಗನೆ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ಆಯಾ ತಲೆಮಾರಿನಲ್ಲಿ ಕೇಳಿ ಬಂದಂತಹ ಮಾತು. ನಮ್ಮ ಬಾಲ್ಯದಲ್ಲಿ ಕೂಡ ಹಿರಿಯರು ಅಬ್ಬಬ್ಬಾ ! ಈಗಿನ ಮಕ್ಕಳೇ ಎಂದು ಹೇಳುತ್ತಿದ್ದರು. ಮಕ್ಕಳ ಚುರುಕುತನ, ಧೈರ್ಯ ,ಬುದ್ಧಿಮತ್ತೆ ಎಲ್ಲವೂ ಅವರು ಬೆಳೆದು ಬರುವ ವಾತಾವರಣಕ್ಕೆ ಅನುಗುಣವಾಗಿರುತ್ತದೆ. ಮಕ್ಕಳು ಬೆಳೆಯುವ ವಾತಾವರಣದ ಸುತ್ತಲೂ ಪ್ರೀತಿ ವಾತ್ಸಲ್ಯ, ನಗು, ಹರಟೆ ,ಕಾಮಿಡಿ ,ಸಣ್ಣ ಸಣ್ಣ ರಾಜಕೀಯ ವಿಷಯಗಳು, ಕ್ರೀಡಾ ವಿಷಯಗಳು ,ಉತ್ತಮ ಸಿನಿಮಾ ಕಾರ್ಟೂನ್ ಗಳು , ಸಮಯಕ್ಕೆ ಸರಿಯಾದ ಆರಾಧನೆ ಇದೆಲ್ಲವನ್ನು ನೋಡುತ್ತಾ ಕೇಳುತ್ತಾ ಮಕ್ಕಳು ಬಹಳ ಚುರುಕಾಗಿರುತ್ತಾರೆ.

ಸಣ್ಣ ಮಕ್ಕಳ ಕಲಿಕೆಯೂ ಸಣ್ಣದಾಗಿರುತ್ತದೆ. ತಮಗೆ ತಿಳಿದಿರುವುದನ್ನು ಅವರು ಹೇಳುತ್ತಾರೆ, ಪರೀಕ್ಷೆ ಎಂಬ ಪೆಡಂಭೂತವನ್ನು ಅವರ ತಲೆಯ ಮೇಲಿರಿಸಬಾರದು, ಆಯಾ ದಿನ ಕಲಿತದ್ದು, ಟೀಚರ್ ಗಳು ಪುನರಾವಲೋಕನ ಮಾಡಿಸಿದ್ದು ಪರೀಕ್ಷೆಗೆ ಬರುತ್ತವೆ, ಮಕ್ಕಳು ಸ್ವಲ್ಪ ದೊಡ್ಡ ತರಗತಿಗಳಿಗೆ ಕಾಲಿರಿಸಿದಾಗ ಮಾತ್ರ ಸ್ವಲ್ಪ ಕಾಳಜಿಯ ಅವಶ್ಯಕತೆ ಇರುತ್ತದೆ. ಮಕ್ಕಳು ಇಹಲೋಕದಲ್ಲಿ ಮಾತ್ರ ಹೆಚ್ಚಿನ ಅಂಕಗಳನ್ನು ಗಳಿಸಿದರೆ ಸಾಲದು ಅವರ ಪರಲೋಕದ ಅಂಕದಲ್ಲೂ ಉತ್ತಮ ಫಲಿತಾಂಶ ವಿರಬೇಕು.