“ರೈತ” ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಬಹುದೇ?

0
141

ಚುನಾವಣಾ ಆಯೋಗ ಹದಿನೇಳನೆಯ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಸಿದ್ದು ಚುನಾವಣೆಗಾಗಿ ಕಸರತ್ತುಗಳು ಭರದಿಂದ ಸಾಗುತ್ತಿದೆ. ಹಿಂದಿನೆಲ್ಲ ಚುನಾವಣೆಗಳಂತೆ ಈ ಸಲವು ಬಹಳಷ್ಟು ವಿಷಯಗಳು ಚರ್ಚೆಯಾಗಬಹುದು. ಇದರಲ್ಲಿ ಕೃಷಿ, ರೈತ, ನಿರುದ್ಯೋಗ ಮುಖ್ಯ ವಿಷಯವಾಗುವ ಸಾಧ್ಯತೆ ದಟ್ಟವಾಗಿದೆ. ನಿಜಕ್ಕೂ ಈ ಸಲ ರೈತರು ಮತ್ತು ಕೃಷಿಯು ಪ್ರಬಲ ಚರ್ಚೆಗೆ ಸಜ್ಜಾಗಬಹುದು. ಕಳೆದ ಎರಡು ವರ್ಷದಿಂದ ಪರಿಸ್ಥಿತಿ ಗಂಭೀರವಾಗಿದೆ. ಇದೂ ಅಲ್ಲದೆ ಕೃಷಿಗೆ ಸಂಬಂಧಸಿದ ಇತರ ವಿಷಯಗಳಾದ ಆಹಾರ ಕ್ಷೇತ್ರ, ನಗದು ಬೆಳೆ, ತೋಟಗಾರಿಕೆ, ಗೋವು ಅರ್ಥ ವ್ಯವಸ್ಥೆಯ ಬಿಕ್ಕಟ್ಟು ಇತ್ಯಾದಿ ಬಹಳ ಮೇಲ್ತರದಲ್ಲಿ ಚರ್ಚೆಗೊಳ್ಳಬೇಕಾಗಿದೆ. ಅದಾಗ್ಯೂ ಈ ಎಲ್ಲ ಕ್ಷೇತ್ರಗಳ ಸಮಸ್ಯೆಗೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಇಂದು ರಾಜಕೀಯ ಕಾರಣಗಳಿಂದ ಕೃಷ್ಟಿ ಅರ್ಥವ್ಯವಸ್ಥೆಯನ್ನು ತಳಮಟ್ಟಕ್ಕೆ ಕುಸಿಯುವಂತೆ ಮಾಡಲಾಗಿದೆ.

ಸಮಸ್ಯೆ ಕೃಷಿಯದ್ದು ಮಾತ್ರವಲ್ಲ. ಕೃಷಿ ಕ್ಷೇತ್ರದಲ್ಲಿ ಸೃಷ್ಟಿಯಾದ ಸಮಸ್ಯೆ ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ವೇತನದಿಂದ ಹಿಡಿದು ಕೃಷಿ ಅರ್ಥವ್ಯವಸ್ಥೆ ಕಳೆದ ಆರು ತಿಂಗಳಲ್ಲಿ ಹೆಚ್ಚು ಸೊರಗಿದೆ. ಕೂಲಿಯ ದರ ಕಳೆದ ಮೂರು ದಶಗಳಿಂದ ತೀವ್ರ ಕೆಟ್ಟ ಸ್ಥಿತಿಯಲ್ಲಿದೆ. ಸಂಬಳ, ಕೂಲಿ, ವೇತನಗಳಲ್ಲಿ ಹೆಚ್ಚಳವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ವೇತನದಿಂದಾಗಿ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇದು ಕೂಡ ಕೃಷಿಆಧಾರಿತ ಅರ್ಥವ್ಯವಸ್ಥೆಗೆ ದೊಡ್ಡ ಮಟ್ಟದ ಹಾನಿಯನ್ನು ತಂದಿದೆ. ರೈತರು ಸರಕಾರದ ನೀತಿಯಿಂದ ಬೆಂಡೆದ್ದು ಬಾಗಿದ್ದಾನೆ. ದೇಶಾದ್ಯಂತ ರೈತ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ.

ದೇಶದ ವಿವಿಧ ಕಡೆಗಳಲ್ಲಿ ಸಾಲ ಮನ್ನಾ, ಬೆಂಬಲ ಬೆಲೆಗಾಗಿ ಕೂಗು ಕೇಳಿ ಬರುತ್ತಿದೆ. ಕೃಷಿ ಕ್ರಾಂತಿಯ ನಂತರ ಸಾವಯವ ಅಥವಾ ನೈಸರ್ಗಿಕ ವಿಧಾನದಲ್ಲಿ ಬೆಳೆ ಬೆಳೆಯುತ್ತಿದ್ದ ರೈತನನ್ನು ಸರಕಾರದ ಗೋಬರ್ ನೀತಿ ವಂಚಿಸಿದೆ. ದುಬಾರಿ ರಾಸಾಯನಿಕಗಳಿಂದ ಫಲವತ್ತಾದ ಮಣ್ಣಿನ ಆರ್ಗಾನಿಕ್ ಅಂಶಗಳು ಬರಬರುತ್ತಾ ಇಲ್ಲವಾಗುತ್ತಿದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ರೈತನಿಗೆ ಬೆಳೆ ಬೆಳೆಯುವುದು ಕೂಡ ಕಷ್ಟವಾಯಿತು. ರೈತನ ಬದುಕು ಜಂಜಾಟದಿಂದ ಕೂಡಿ ಹೋಗಿದೆ. ಈ ಎಲ್ಲ ಸಮಸ್ಯೆಗೆ ರಾಜಕೀಯ ಪರಿಹಾರ ಮಾತ್ರ ಸಾಧ್ಯ ಎಂಬಲ್ಲಿಗೆ ಪರಿಸ್ಥಿತಿ ಇಂದು ಬಂದು ಮುಟ್ಟಿದೆ. ಅಂದರೆ ರೈತರಿಗೆ ಸರಕಾರ ಬೆಂಬಲವಿಲ್ಲದೆ ನೆಟ್ಟಗೆ ನಿಲ್ಲಲಾಗದು ಎನ್ನುವ ಪರಿಸ್ಥಿತಿಯಾಯಿತು. ಇದುವೇ ದೇಶದಲ್ಲೆಲ್ಲ ಕಡೆ ರೈತರ ಪ್ರತಿಭಟನೆ, ಹೋರಾಟ, ಚಳವಳಿಗೆ ಕಾರಣವಾಗಿದ್ದು. ಇತ್ತೀಚಿಗಿನ ಪರಿಸ್ಥಿತಿಯನ್ನೆ ತೆಗೆದುಕೊಂಡರೂ ಛತ್ತೀಸ್‍ಗಡ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಸೋಲಿಗೆ ರೈತನ ಕೋಪ ಮುಖ್ಯ ಕಾರಣವಾಯಿತು. ನಂತರ ನಿರುದ್ಯೋಗ, ಯುವಜನರ ಆಕ್ರೋಶವೂ ಕಾರಣವಾಗಿದೆ. ಇದೇ ವೇಳೆ ತೆಲಂಗಾಣ ಸರಕಾರ ರೈತರ ಬೆಂಬಲಕ್ಕೆ ಬಂತು ಕಳೆದ ಚುನಾವಣೆಯಲ್ಲಿ ತೆಲಂಗಾಣ ಸರಕಾರ ಪ್ರತಿ ಎಕರೆಗೆ ಋತು ಬಂಧು ಯೋಜನೆ ಯಡಿಯಲ್ಲಿ ರೈತನಿಗೆ ಪ್ರತಿ ಎಕರೆಗೆ 4000ರೂಪಾಯಿ ಸಹಾಯಧನ ಘೋಷಿಸಿತು. ಅಲ್ಲಿ ಮತ್ತೇ ಅದೇ ಆಳುವ ಪಕ್ಷ ಅಧಿಕಾರಕ್ಕೆ ಬಂದ ಕತೆ ಇದು.

ರೈತರನ್ನು ಯಾರೇ ಕಡೆಗಣಿಸಿದರೂ ಸೋಲು ಕಟ್ಟಿಟ್ಟದ್ದು. ಯಾಕೆಂದರೆ ಮತದಾರರಲ್ಲಿ ದೊಡ್ಡ ವರ್ಗ ರೈತರದ್ದು, ಕೃಷಿ ಕಾರ್ಮಿಕರದ್ದು. ಆದ್ದರಿಂದ ಚುನಾವಣೆ ಗೆಲ್ಲಬೇಕಾದರೆ ಬಾಬರಿಮಸೀದಿ,ರಾಮಮಂದಿರ, ಗೊಹತ್ಯೆ, ದೇಗುಲ ಪ್ರವೇಶ ಇತ್ಯಾದಿಗಳು ಈ ಸಲ ಮುಖ್ಯವಾಗದು. ಇವೆಲ್ಲ ಕೂಗು ಹಾಕಿದವರಿಗೆ ತಿರುಮಂತ್ರವಾಗಿ ಪರಿಣಮಿಸುವಂತೆ ಸದ್ಯ ದೇಶದಲ್ಲಿ ವಾತಾವರಣ ಇದೆ. ಆದರೂ ಕೃಷಿ ಬಿಕ್ಕಟ್ಟಿಗೆ ಅದರ ಆರ್ಥಿಕತೆಯಲ್ಲಿ ತಟ್ಟನೆ ಚೇತರಿಕೆ ಆದೀತು ಎನ್ನುವಂತಿಲ್ಲ. ಹೆಚ್ಚಿನ ರಾಜ್ಯಗಳು ಕೃಷಿ ಸಾಲ ಮನ್ನಾದಂತಹ ಹೆಜ್ಜೆ ಇರಿಸಿದ್ದು ನಿಜ. ಅಲ್ಲಿ ಈ ಹಿಂದೆ ಅಂದರೆ ಎರಡು ವರ್ಷಗಳ ಹಿಂದೆ ಚುನಾವಣೆ ನಡೆದಿದೆ. ಹಾಗಿದ್ದರೂ ಕೃಷಿ ಸಮಸ್ಯೆ ಕಡಿಮೆಯಾಗಿಲ್ಲ. ಒಂದು ವೇಳೆ ವಿಪಕ್ಷ ಪಾರ್ಟಿ ಕಾಂಗ್ರೆಸ್ ದೇಶದಲ್ಲಿ ಕೃಷಿಸಾಲ ಮನ್ನಾ ಮಾಡಿದ್ದಿದೆ. ಹಾಗಂತ ತಾತ್ಕಾಲಿಕ ಪರಿಹಾರ ಬಿಟ್ಟು ದೊಡ್ಡ ಮಟ್ಟದ ಬದಲಾವಣೆಯಾಗಿಲ್ಲ. ಸರಕಾರ ಸಾಲಮನ್ನಕ್ಕಲ್ಲ. ರೈತೋತ್ಪನ್ನಗಳನ್ನು ರೈತರಿಗೆ ಬೆಂಬಲ ಕೊಟ್ಟು ಹೆಚ್ಚಿಸುವುದು ಮುಖ್ಯವಾಗಿದೆ. ಆದರೆ ಆಡಳಿತಗಾರರು ಉದ್ಯಮಿಗಳ ಬೆನ್ನಲ್ಲಿ ನೇತಾಡುತ್ತಿದ್ದಾರೆ. ಸಂಪೂರ್ಣವಾಗಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ರೈತ ಚೇತರಿಕೆಯನ್ನು ಕಂಡಿಲ್ಲ; ಕಾಣುವಂತಹ ಸಾಧ್ಯತೆಯೂ ಕಂಡು ಬರುತ್ತಿಲ್ಲ.

ಔದ್ಯಮೀಕರಣದಿಂದ ರಾಜಕೀಯದ ವ್ಯಕ್ತಿಗಳಿಗೆ ದೇಶದ ಜನಸಾಮಾನ್ಯರಿಗಿಂತ ಹೆಚ್ಚು ಲಾಭವಾಗುತ್ತಿದೆ. ಚುನಾವಣೆ ಫಂಡ್ ಸಂಗ್ರಹ ಬಹಳ ಸುಲಭವಾಗಿ ನಡೆಸಬಹುದಾದ ಒಂದು ಕ್ಷೇತ್ರ ಅದು. ಉದ್ಯಮಿಗಳೇ ಹೆಚ್ಚಾಗಿ ಅಧಿಕಾರದ ಕೇಂದ್ರಗಳನ್ನು ನಿಯಂತ್ರಿಸುತ್ತಿರುವುದರಿಂದ ಕೃಷಿಗೆ ಯೋಜನೆ ರೂಪಿಸಿದರೂ ಸರಿಯಾದ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ರೈತ ಕಂಗಾಲಾಗಲು ಇದು ಕೂಡ ಒಂದು ದೊಡ್ಡ ಕಾರಣವಾಗಿದೆ. ಒಟ್ಟಿನಲ್ಲಿ ಕೃಷಿ ಆದಾಯದಲ್ಲಿ ಹೆಚ್ಚಿನ ಲಾಭವಾಗುತ್ತಿಲ್ಲ.

ನಗದು ನೇರ ಹಸ್ತಾಂತರ, ದಲ್ಲಾಳಿ ರಹಿತ ಮಾರುಕಟ್ಟೆ ಇತ್ಯಾದಿ ಘೋಷಣೆಯನ್ನು ಕೇಂದ್ರ ಸರಕಾರ ಮಾಡಿ ಬಹಳ ದಿನಗಳು ಕಳೆದಿವೆ. ಆದರೆ ರೈತನಿಗೆ ಇದರಿಂದ ಹೆಚ್ಚಿನ ಲಾಭವಾಗಿದ್ದು ಕಂಡು ಬರುತ್ತಿಲ್ಲ. ಕೇವಲ ಇದೆಲ್ಲ ಚುನಾವಣಾ ಸ್ಟಂಟ್ ಆಗಿ ಮಾತ್ರ ಉಳಿದುಕೊಳ್ಳುವಂಥದ್ದು. ಪ್ರಾಮಾಣಿಕ ವಾದದ್ದು ಎಂದು ಕರೆಯುವಂತಿಲ್ಲ. ಕೃಷಿ ಸಮಸ್ಯೆಗೆ ರೈತನ ಕಷ್ಟಕ್ಕೆ ಪರಿಹಾರ ಕಂಡು ಹುಡುಕದೆ ಏನೇನೋ ಒದರುತ್ತಾ ದೇಶದ ಬಹುದೊಡ್ಡ ರೈತ ಸಮುದಾಯವನ್ನು ಶಾಶ್ವತವಾಗಿ ವಂಚಿಸಲು ರಾಜಕಾರಣಿಗಳು ಯಶಸ್ವಿಯಾಗುವರು ಎಂದು ತಿಳಿದವರು ಈ ಸಲದ ಲೋಕ ಸಭಾ ಚುನಾವಣೆಯಲ್ಲಿ ಮಣ್ಣು ಮುಚ್ಚುವುದು ಶತ ಸಿದ್ಧ ಎನ್ನಬಹುದು.
ರಾಜಕಾರಣಿಗಳು ಕಡೆಗಣಿಸುತ್ತಿರುವ ಕೃಷಿ ಎಂದೂ ಕಡೆಗಣಿಸಲು ಸಾಧ್ಯವೇ ಇಲ್ಲದಂತಹ ಕ್ಷೇತ್ರವಾಗಿದೆ. ಕೃಷಿ ಮಾರುಕಟ್ಟೆ ಜಗತ್ತಿನಲ್ಲಿ ತಾಯಿ ಹೊಟ್ಟೆಯಿಂದ ಕೆಳಗೆ ಬೀಳುವ ಒಂದೊಂದು ಮಗುವೂ ವಿಸ್ತರಿಸುತ್ತಾ ಹೋಗುತ್ತದೆ. ಆರ್ಥಿಕ ಸುರಕ್ಷೆಗಿಂತ ಆಹಾರ ಸುರಕ್ಷೆ ಮಿಗಿಲಾದುದು ಮತ್ತು ಸದ್ಯ ದಿಗಲಾಗುತ್ತಿರುವುದು ಈ ಹಿನ್ನೆಲೆಯಲ್ಲಿ ನಿಂತು ಆಲೋಚಿಸುವಾಗ ಮಾತ್ರ. ಕೃಷಿಯುತ್ಪನ್ನಗಳನ್ನೇ ಅವಲಂಬಿಸಿ ಎಲ್ಲರೂ ನಿಲ್ಲುತ್ತಾರೆ. ಈ ಎಲ್ಲ ಜನರನ್ನು ಅವಲಂಬಿಸಿ ರೈತರು ಇರುತ್ತಾರೆ.

ಮೊದಲು ದೇಶ ಕೃಷಿ ಕಡಗಣೆನೆಯ ಮನಸ್ಥಿತಿಯಿಂದ ಹೊರಬರಬೇಕು. ಕೇವಲ ವೆಪನ್‍ಗಳು ಮಾತ್ರ ದೇಶವನ್ನು ರಕ್ಷಿಸಬಲ್ಲುದೆಂದು ತಿಳಿದುಕೊಂಡರೆ ಹುಚ್ಚುತ್ತನವಾಗುತ್ತದೆ. ಅದರಷ್ಟೇ ಅಲ್ಲ ಅದಕ್ಕಿಂತಲೂ ಹೆಚ್ಚು ಆಹಾರ ಸುರಕ್ಷೆ ಮತ್ತು ಕೃಷಿಯುತ್ಪನ್ನಗಳ ಪರ್ಯಾಪ್ತತೆ ದೇಶದ ಮತ್ತು ಜನರ ಹಿತ ದೃಷ್ಟಿಯಲ್ಲಿಮುಖ್ಯವಾಗುತ್ತದೆ.

ರೈತ ಎಲ್ಲ ರೀತಿಯಲ್ಲಿಯೂ ಈ ದೇಶದಲ್ಲಿಮುಖ್ಯ ಬೆನ್ನೆಲುಬು ಆಗಿದ್ದಾನೆ. ಮತ್ತು ಚುನಾವಣೆಯ ಫಲಿತಾಂಶವು ಅವನ ನಿರ್ಧಾರವನ್ನು ಹೊಂದಿಕೊಂಡಿರುತ್ತದೆ. ಹೀಗಾಗಿ ಚುನಾವಣೆಯ ವೇಳೆಯಲ್ಲಿ ರೈತ ಚರ್ಚೆಯ ಮುನ್ನೆಲೆಗೆ ಬರಬೇಕು. ಜನರು ಮತ್ತು ದೇಶ ಅಸ್ತಿತ್ವ ನೆಟ್ಟಗೆ ನಿಲ್ಲಬೇಕಾದರೆ ಕೃಷಿ ಸೌಹಾರ್ದವನ್ನು ಗೆಲ್ಲಿಸುವುದು ಅತೀ ಮುಖ್ಯವಾಗಿದೆ ಎನ್ನಬಹುದು.

ಹಿಮಾಂಶುರವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ
ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ