ಮೀರ್ವೈಝ್, ನಸೀಂ ಗಿಲಾನಿಗೆ ಪುನಃ ಎನ್‍ಐಎ ನೋಟಿಸು

0
420

ಶ್ರೀನಗರ,ಮಾ. 15: ಪ್ರಮುಖ ಪ್ರತ್ಯೇಕವಾದಿ ನಾಯಕರಾದ ಸಯ್ಯಿದ್ ಅಲಿಶಾ ಗಿಲಾನಿ ಮತ್ತು ಪುತ್ರ ನಸೀಂ ಗಿಲಾನಿಗೆ ಹಾಗೂ ಹುರಿಯತ್ ಕಾನ್ಫೆರೆನ್ಸ್ ಅಧ್ಯಕ್ಷ ಮೀರ್ವೈಝ್ ಉಮರ್ ಫಾರೂಕ್‍ರಿಗೆ ಪುನಃ ರಾಷ್ಟ್ರೀಯ ತನಿಖಾ ಸಂಸ್ಥೆ ತಮ್ಮ ಮುಂದೆ ಹಾಜರಾಗಲು ನೋಟಿಸು ಕಳುಹಿಸಿದೆ. ಭಯೋತ್ಪಾದನಾ ದಾಳಿಯ ಆರ್ಥಿಕ ಮೂಲಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಎನ್‍ಐಎ ನೋಟಿಸು ಕಳುಹಿಸಿದ್ದು ಮಾರ್ಚ್ 18,19ರಂದು ದಿಲ್ಲಿಯ ಎನ್‍ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಎನ್‍ಐಎ ಸೂಚಿಸಿದೆ.

ಮಾರ್ಚ್ 11ಕ್ಕೆ ವಿಚಾರಣೆಗೆ ಹಾಜರಾಗಲು ಇಬ್ಬರಿಗೂ ಈ ಹಿಂದೆ ನೋಟಿಸು ಕಳುಹಿಸಲಾಗಿತ್ತು. ಅವರು ಹಾಜರಾಗದ್ದರಿಂದ ಪುನಃ ಎನ್‍ಐಎ ನೋಟಿಸು ಕಳುಹಿಸಿದೆ. ಭಯೋತ್ಪಾದಕರಿಗೆ ಆರ್ಥಿಕ ಸಹಾಯ ನೀಡಿದ್ದಾರೆನ್ನಲಾದ ಪ್ರಕರಣದಲ್ಲಿ ತನಿಖೆಯ ಭಾಗವಾಗಿ ಫೆಬ್ರುವರಿ 26ಕ್ಕೆ ಮೀರ್‍ವೈಝ್ ಸಹಿತ ಕಾಶ್ಮೀರಿ ನಾಯಕರ ಮನೆಗಳಿಗೆ ಎನ್‍ಐಎ ದಾಳಿ ನಡೆಸಿತ್ತು.

ದಾಳಿಯ ವೇಳೆ ಲ್ಯಾಪ್‍ಟಾಪ್‍ಗಳು, ಮೊಬೈಲ್ ಫೋನ್‍ಗಳು, ಪೆನ್‍ಡ್ರೈವ್‍ಗಳು. ಡಿವಿಆರ್‍ಗಳು ಮತ್ತಿ ಇತರ ಸಂಪರ್ಕ ಸಾಧನಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು. ಕಾಶ್ಮೀರದ ಪೊಲೀಸರ ಸಹಾಯದಲ್ಲಿ ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್ ಅಧ್ಯಕ್ಷ ಯಾಸಿನ್ ಮಾಲಿಕ್, ಅಶ್ರಫ್ ಸೆಹ್ರಾಯ್, ಶಬೀರ್ ಶಾ, ಝಫರ್ ಭಟ್, ಮಸ್ರತ್ ಆಲಂ ಮುಂತಾದವರ ಮನೆಗಳಿಗೆ ಅಂದು ದಾಳಿ ಮಾಡಿ ತಪಾಸಣೆ ನಡೆಸಲಾಗಿತ್ತು.