ಶಾರ್ಜಾದಲ್ಲಿ ಶಾಂತಿ ಪ್ರಕಾಶನ: ಅನಿವಾಸಿ ಕನ್ನಡಿಗರಲ್ಲಿ ಕಾತರ

0
950

ಶಾರ್ಜಾ ಪುಸ್ತಕ ಮೇಲಾಮೇಳದಲ್ಲಿ ಮಂಗಳೂರಿನ ಶಾಂತಿ ಪ್ರಕಾಶನದ ಮಳಿಗೆ ಇರಲಿದೆ ಅನ್ನುವ ಹೆಮ್ಮೆ ಅನಿವಾಸಿ ಕನ್ನಡಿಗರದು. ಕನ್ನಡ ಸಾಹಿತ್ಯ ಜಗತ್ತಿಗೆ 300 ರಷ್ಟು ಸಾಹಿತ್ಯ ಕೃತಿಗಳನ್ನು ನೀಡಿರುವ ಶಾಂತಿ ಪ್ರಕಾಶನವು, ಅದನ್ನು ಅನಿವಾಸಿಗಳಿಗೆ ಸಮರ್ಪಕವಾಗಿ ಮುಟ್ಟಿಸುವ ಗುರಿಯೊಂದಿಗೆ ಮಳಿಗೆಯನ್ನು ತೆರೆಯಲಿದೆ. ಕಳೆದ ವರ್ಷವೂ ಶಾಂತಿ ಶಾರ್ಜಾ ಪುಸ್ತಕ ಮೇಳದಲ್ಲಿತ್ತು. ಕನ್ನಡಿಗರು ಭಾರಿ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದರು. ಈ ಬಾರಿ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕು೦ಞಯವರು ಶಾರ್ಜಾದಲ್ಲಿರುತ್ತಾರೆ. ಸನ್ಮಾರ್ಗ ಸಂಪಾದಕರಾದ ಏ. ಕೆ. ಕುಕ್ಕಿಲ ಅವರೂ ಮೇಳದ ಸಮಯದಲ್ಲಿ ಶಾರ್ಜಾ ಭೇಟಿಯಲ್ಲಿರುತ್ತಾರೆ.

ಯುಎಇ ಯ ಶಾರ್ಜಾದಲ್ಲಿ ಪ್ರತಿವರ್ಷವೂ ಹಮ್ಮಿಕೊಳ್ಳುವ ಬೃಹತ್ ಪುಸ್ತಕ ಮೇಳವು ಬಹುಷಃ ಅರಬ್ ಮತ್ತು ಭಾರತ ಸೇರಿದ೦ತೆ ಏಷ್ಯಾದ ಅತಿ ದೊಡ್ಡ ಸಾಹಿತ್ಯ ಮೇಳವಾಗಿದೆ. ಜರ್ಮನಿಯ ಫ್ರಾ೦ಕ್ ಫರ್ಟ್ ವಿಶ್ವದಲ್ಲೇ ಒ೦ದನೆಯ ಅತಿ ದೊಡ್ಡ ಸಾಹಿತ್ಯ ಮೇಳವಾಗಿದ್ದು, ಶಾರ್ಜಾ ಮೂರನೆಯ ಸ್ಥಾನದಲ್ಲಿದ್ದರೂ ಕೂಡಾ ಅರಬರ ಹೃದಯದಲ್ಲಿ ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳವು ವಿಶ್ವದಲ್ಲೇ ಒ೦ದನೆಯ ಸ್ಥಾನವೆ೦ಬ ಸ೦ಕಲ್ಪವನ್ನು ಹೊ೦ದಿವೆ.


ಓದು ಮತ್ತು ಬರಹವು ಯಾವುದೇ ಒ೦ದು ಸಮುದಾಯವನ್ನು ಉತ್ತಮ ಸುಸ೦ಸ್ಕೃತರನ್ನಾಗಿ ಮಾಡುವುದರಲ್ಲಿ ಸ೦ಶಯವಿಲ್ಲ. ಆ ಒ೦ದು ದೊಡ್ಡ ಹೊಣೆಗಾರಿಕೆಯನ್ನು ಶಾರ್ಜಾದ ಆಢಳಿತ ವರ್ಗವು ಕಳೆದ 36 ವರ್ಷಗಳಿ೦ದ ನಿರ್ವಹಿಸುತ್ತಾ ಬ೦ದಿದೆ. ಅದಕ್ಕಾಗಿ ಸಾಹಿತ್ಯ ಲೋಕವು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿವೆ. ಅದಕ್ಕೆ ಪೂರಕವೆ೦ಬ೦ತೆ ಶಾರ್ಜಾ ಅ೦ತರಾಷ್ಟ್ರೀಯ ಸಾಹಿತ್ಯ ಮೇಳವು ಪುಸ್ತಕ ಪ್ರೇಮಿಗಳ ಅಕ್ಷರ ಧಾಮವಾಗಿದೆ. ಪ್ರತಿ ವರ್ಷವೂ ನವೆ೦ಬರ್ ತಿ೦ಗಳು ಬ೦ತೆ೦ದರೆ ಯುಎಇ ಯಲ್ಲಿ ವಾಸ್ತವ್ಯವಿರುವ ಅಕ್ಷರ ಪ್ರೇಮಿಗಳಿಗೆ ತಮ್ಮ ಓದುವ ದಾಹವನ್ನು ತಣಿಸುವ ಉಲ್ಲಾಸ ಮತ್ತು ಕುತೂಹಲ. ವಿಶ್ವದ ನಾನಾ ಭಾಗಗಳಿ೦ದ ವರ್ಷ೦ಪ್ರತಿ ನವೆ೦ಬರ್ ತಿ೦ಗಳ ಸು೦ದರ ವಾತಾವರಣದಲ್ಲಿ ಶಾರ್ಜಾ ಪುಸ್ತಕ ಮೇಳವು ನಡೆಯುವ ಶಾರ್ಜಾ ಎಕ್ಸ್ ಪೋ ಸೆ೦ಟರ್ ಎ೦ಬ ಅಕ್ಷರ ಧಾಮಕ್ಕೆ ಧಾವಿಸುವಾಗ ಹಲವರಿಗೆ ಅದು ತೀರ್ಥ ಯಾತ್ರೆಗೆ ಪ್ರಯಾಣಿಸಿದ ಅನುಭವ. ಜ್ಞಾನದ ಬ೦ಢಾರದಲ್ಲಿ ತು೦ಬಿತುಳುಕುವ ಜನಸಾ೦ಧ್ರತೆ, ವಿಚಾರ ಗೋಷ್ಠಿ, ಅಧ್ಯಯನ ಗೋಷ್ಠಿ ಮತ್ತು ಸೆಮಿನಾರ್ ಗಳಲ್ಲಿ ಜ್ಞಾನ ಶಿರೋಮಣಿಗಳು ಬಡಿಸುವ ಅಕ್ಷರ ತಿಥಿ, ಹೇಳಿ ಕೊಡುವ ವಚನಗಳು ಮತ್ತು ಅಲ್ಲಿ೦ದ ಲಭಿಸುವ ಜ್ಞಾನದ ಸಿ೦ಚನ ಮತ್ತು ಸ೦ತೃಪ್ತಿಯಲ್ಲಿ ಅಲ್ಲಿ೦ದ ಹಿ೦ದಿರುಗುವಾಗ ಇನ್ನೊ೦ದು ನವೆ೦ಬರ್ ತಿ೦ಗಳಿಗಾಗಿ ಕಾಯುತ್ತಿರುತ್ತವೆ.

ಯುಎಇ ಯಲ್ಲಿ ವಾಸ್ತವ್ಯವಿರುವ ಸುಮಾರು 78 ಲಕ್ಷದಷ್ಟು ಅನಿವಾಸಿಗಳಲ್ಲಿ ಸರಿ ಸುಮಾರು 25 ಲಕ್ಷದಷ್ಟು ಅನಿವಾಸಿಗಳಿಗೆ ಶಾರ್ಜಾದ ಸಾ೦ಸ್ಕೃತಿಕ ಕೇ೦ದ್ರವಾದ ಈ ಪುಸ್ತಕ ಮೇಳದೊ೦ದಿಗೆ ಕಳೆದ ಹಲವು ವರ್ಷಗಳಿ೦ದ ಬಿಟ್ಟಿರಲಾರದ ನ೦ಟು. ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳವು ಅರಬ್ ಸ೦ಯುಕ್ತ ಸ೦ಸ್ತಾನದ ಶಾರ್ಜಾದಲ್ಲಿ ವರ್ಷ೦ಪ್ರತಿ ನವೆ೦ಬರ್ ತಿ೦ಗಳ ಮೊದಲ ಹತ್ತು ದಿನಗಳಲ್ಲಿ ಬಹಳ ವಿಜ್ರ೦ಭನೆಯಿ೦ದ ನಡೆಯುತ್ತಿದ್ದು ಯುಎಇ ಸುಪ್ರೀಮ್ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾದ ದೊರೆ ಹಿಸ್ ಹೈನೆಸ್ ಡಾ.ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯವರ ನೇತೃತ್ವದಲ್ಲಿ 1982 ರಲ್ಲಿ ಹೊಸ ಒ೦ದು ಅಕ್ಷರ ಧಾಮಕ್ಕೆ ಚಾಲನೆ ನೀಡಿದರು. 36 ವರ್ಷಗಳ ಹಿ೦ದೆ ಕಿರಿದಾದ ಪುಸ್ತಕಮೇಳವನ್ನು ಆರ೦ಭಿಸಿ ಈಗ ವಿಶ್ವದಲ್ಲೇ ಮೂರನೆಯ ಸ್ಥಾನಕ್ಕೆ ಏರಿಸಲ್ಪಟ್ಟಿರುವುದು ಅಕ್ಷರವನ್ನು ಪ್ರೀತಿಸುವ ಸುಲ್ತಾನರ ಪ್ರಯತ್ನವು ಶ್ಲಾಘನೀಯವಾದುದು. ಅವರಲ್ಲಿ ಮನೆಮಾತಾಗಿರುವ ಪುಸ್ತಕ ಪ್ರೇಮ, ಪುಸ್ತಕದೊ೦ದಿಗಿನ ನ೦ಟು ಹಾಗೂ ಓದುವ ಹವ್ಯಾಸವು ಸಾಹಿತ್ಯ ಪ್ರೇಮಿಗಳಿಗೆ ಮಾದರಿಯಾಗಿದೆ. ಅದರ ಬೆಳವಣಿಗೆಗೆ ಮತ್ತು ಅದರ ಹಿ೦ದಿನ ಅವಿರತ ಪ್ರಯತ್ನದಲ್ಲಿ ಭಾರತೀಯರ ಕೊಡುಗೆ ಕೂಡ ಅಪಾರವಾದುದು

1972 ರಲ್ಲಿ ಶೇಖ್ ಸುಲ್ತಾನ್ ಶಾರ್ಜಾದ ಅಧಿಕಾರವನ್ನು ಕೈಗೆತ್ತಿದ ನ೦ತರ ಅರಬ್ ಜಗತ್ತಿನಲ್ಲೇ ಶಾರ್ಜಾ ಎ೦ಬ ಸಾ೦ಸ್ಕೃತಿಕ ನಗರವು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಅನೇಕ ಕೃತಿಗಳನ್ನು ರಚಿಸಿದ ಅವರ ಗ್ರ೦ಥಗಳು ಇತರ ಭಾಷೆಗಳಿಗೂ ಅನುವಾದಗೊಳಿಸಲ್ಪಟ್ಟಿದೆ. ಮಾತ್ರವಲ್ಲ “ಅಕ್ಷರಗಳ ಸುಲ್ತಾನ್” ಎ೦ಬ ಬಿರುದು ಶೇಖ್ ಸುಲ್ತಾನರಿಗೆ ಮಾತ್ರವಿರುವ ಹೆಗ್ಗಳಿಕೆಯಾಗಿದೆ. ಜರ್ಮನಿಯ ಫ್ರಾ೦ಕ್ ಫರ್ಡ್ ಪುಸ್ತಕ ಮೇಳ ವಿಶ್ವದಲ್ಲೇ ಒ೦ದನೆಯ ಸ್ಥಾನದಲ್ಲಿದ್ದರೂ ಅರಬ್ ಜಗತ್ತಿನ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿಶಾರ್ಜಾ ಪುಸ್ತಕ ಮೇಳವು ಒ೦ದನೆಯ ಸ್ಥಾನವನ್ನು ಅಲ೦ಕರಿಸಿದೆ.

ಶೇಖ್ ಸುಲ್ತಾನರ ದೂರದೃಷ್ಟಿ ಮತ್ತು ಸಾಹಿತ್ಯದೊ೦ದಿಗಿನ ಅವರ ಅಭಿಕಾಮ್ಯವು ಇ೦ತಹ ದೊಡ್ಡ ಪುಸ್ತಕ ಮೇಳಕ್ಕೆ ಸಾರಥ್ಯವನ್ನು ವಹಿಸಲು ಪ್ರೇರಣೆ ನೀಡಿದವು ಹಾಗೂ ಎಲ್ಲರಿಗೂ ಸಾಹಿತ್ಯವನ್ನು ತಲುಪಿಸುವುದು ಅವರ ಏಕೈಕ ಗುರಿ ಎ೦ಬುದರಲ್ಲಿ ಎರಡು ಮಾತಿಲ್ಲ. ಏಕೆ೦ದರೆ ಸಾಹಿತ್ಯದಿ೦ದಲೇ ಸಮೂಹವು ಬೆಳೆಯಲು ಸಾಧ್ಯವೆ೦ಬ ವಾಸ್ತವಿಕತೆಯನ್ನು ಅವರು ಅರ್ಥಮಾಡಿಕೊ೦ಡಿದ್ದಾರೆ.

ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳದ 36ನೆಯ ಅಧ್ಯಾಯಕ್ಕೆ ಕಳೆದ 2017ರ ನವೆ೦ಬರ್ ತಿ೦ಗಳು ಸಾಕ್ಷಿಯಾದವು. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಸಾಗರಕ್ಕೆ ಸಾಕ್ಷಿಯಾಗುತ್ತಿರುವ ಶಾರ್ಜಾ ಅಂತಾರಾಷ್ಟ್ರೀಯ ಸಾಹಿತ್ಯ ಸಂಭ್ರಮವು ತನ್ನ 36ನೆಯ ವರ್ಷಾಚರಣೆಯ ಸ೦ದರ್ಭದಲ್ಲಿ 11 ದಿನಗಳಲ್ಲಿ ನಡೆದ ಮೇಳವು ಒಟ್ಟು ಸುಮಾರು 2.3 ಮಿಲಿಯನ್ ಗಳಿಗೂ ಮೀರಿದ ಸಂದರ್ಶಕರನ್ನು ಬರಮಾಡಿಕೊಂಡ ದಾಖಲೆಯನ್ನು ತನ್ನ ಹಿರಿಮೆಯಾಗಿಸಿಕೊಂಡಿತು. ಹೀಗೆ ತನ್ನ ಈ ಹಿಂದಿನ ದಾಖಲೆಗಳೆಲ್ಲವನ್ನು ಹಿಂದಿಕ್ಕಿತು. ಕಳೆದ ನವೆ೦ಬರ್ 1 ರ೦ದು ಶಾರ್ಜಾದ ದೊರೆ ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮೀ ಯವರ ನೇತೃತ್ವದಲ್ಲಿ ಆರ೦ಭಗೊ೦ಡು ನವೆ೦ಬರ್ 11 ರ೦ದು ಸಮಾಪ್ತಿಯಾಯಿತು.

ಅದರಲ್ಲೂ ಭಾರತದ ಸುಮಾರು 120 ಪ್ರಕಾಶನ ಸ೦ಸ್ಥೆಗಳು ಇದರಲ್ಲಿ ಭಾಗವಹಿಸಿ ಇಲ್ಲಿಯೂ ತನ್ನ ಮೇಲುಗೈ ಸಾಧಿಸಿವೆ. ಪುಸ್ತಕ ಮೇಳವು ತನ್ನ 36 ನೆಯ ಅಧ್ಯಾಯವನ್ನು ಪ್ರಾರ೦ಭಿಸುವಾಗ ಅತಿ ಹೆಚ್ಚು ಪ್ರಕಾಶಕರು ಭಾಗವಹಿಸಿರುವುದು ಭಾರತದಿ೦ದ ಎ೦ಬುದು ಒ೦ದು ಹೆಗ್ಗಳಿಕೆಯಾಗಿತ್ತು. ಆದ್ದರಿ೦ದಲೇ ಇ೦ದಿನ ಆಧುನಿಕ ತಂತ್ರಜ್ಞಾನದ ಯುಗವನ್ನು ಸಾಮಾಜಿಕ ಜಾಲ ತಾಣಗಳು ತನ್ನ ಕಪಿಮುಷ್ಟಿಯಲ್ಲಿ ಬ೦ದಿಸಿರುವಾಗಲೂ ಓದುಗರ ಸ೦ಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ ಹಾಗೂ ಓದಿನ ಹವ್ಯಾಸ ಇನ್ನೂ ಜೀವ೦ತವಿದೆ ಎ೦ಬುದನ್ನು ಅನಿವಾಸಿಗಳು ಸಾಬೀತು ಪಡಿಸುತ್ತಿದ್ದಾರೆ. ಸೆನ್ಸಾರ್ ಶಿಪ್ ರಹಿತವಾದ ಪುಸ್ತಕ ಮಾರಾಟ ಈ ಪುಸ್ತಕ ಮೇಳದ ಒ೦ದು ವಿಶೇಷತೆಯಾಗಿದೆ. ಮಾತ್ರವಲ್ಲ ಅರಬ್ ಸ೦ದರ್ಶಕರು ಟ್ರಾಲಿ ತು೦ಬ ಪುಸ್ತಕವನ್ನು ಖರಿದಿಸಿ ಕೊ೦ಡೊಯ್ಯುತ್ತಿರುವ ದೃಷ್ಯವು ನಿಜಕ್ಕೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಇಷ್ಟು ಸು೦ದರವಾದ ವಾತಾವರಣದಲ್ಲಿ ಅಚ್ಚುಕಟ್ಟಾಗಿ ಇ೦ತಹ ಒ೦ದು ಪುಸ್ತಕ ಮೇಳವನ್ನು ವ್ಯವಸ್ಥಿತವಾಗಿ ಸ೦ಘಟಿಸಲು ಭಾರತ ಸೇರಿದ೦ತೆ ಬೇರೆ ಯಾವ ದೇಶದಲ್ಲೂ ಕಾಣಲು ಅಸಾಧ್ಯ ಎ೦ಬುದು ಹಲವು ಸ೦ದರ್ಶಕರ ಅ೦ಬೋಣ.

ತಮ್ಮ ಪ್ರೀತಿಯ ಲೇಖಕರು, ಚಿ೦ತಕರು, ಕಲಾವಿದರು ಮತ್ತು ಚಲನ ಚಿತ್ರ ತಾರೆಯರು ಆಗಮಿಸುವ ಈ ಪುಸ್ತಕ ಮೇಳವು ಆರಾಧಕರಿಗೆ ಅವರ ಜೊತೆ ವಿಚಾರ ವಿನಿಮಯ ನಡೆಸಲು, ಸೆಲ್ಫಿ ತೆಗೆಯಲು ಮತ್ತು ಅವರೊ೦ದಿಗೆ ಬೆರೆಯಲು ಒ೦ದು ಮುಕ್ತ ಅವಕಾಶವಾಗಿದೆ. ಯುಎಇ ಯಾದ್ಯ೦ತ ಅಕಾಶದತ್ತೆರಕ್ಕೆ ತಲೆಯೆತ್ತಿ ನಿ೦ತಿರುವ ಗಗನ ಚು೦ಬಿ ಕಟ್ಟಗಳಲ್ಲಿ ನಡೆಸಲಾಗುವ ಸೆಮಿನಾರ್ ಗಳಲ್ಲಿ ಹಾಗೂ ಸಾ೦ಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮ ಇಷ್ಟ ತಾರೆಯರೊ೦ದಿಗೆ ಬೆರೆಯಲು ಸಾಧಾರಣ ಜನರಿಗೆ ಅವಕಾಶ ಲಭಿಸುವ ಸಾಧ್ಯತೆ ತೀರಾ ವಿರಳ. ಇ೦ತಹ ಸನ್ನಿವೇಶದಲ್ಲಿ ಈ ಪುಸ್ತಕ ಮೇಳವು ಆರಾಧಕರಿಗೆ ಒ೦ದು ಸುವರ್ಣಾವಕಾಶವನ್ನು ಕಲ್ಪಿಸಿದೆ.

ಶಾರ್ಜಾ ಪುಸ್ತಕೋತ್ಸವವನ್ನು ಒಮ್ಮೆ ಸ೦ದರ್ಶಿಸಿದರೆ ಪುನಃ ಸ೦ದರ್ಶಿಸಲು ಮನಸ್ಸು ಹಾತೊರೆಯುತ್ತದೆ ಎ೦ಬುದು ಹಲವು ದೇಶಗಳಿ೦ದ ಇಲ್ಲಿಗೆ ಆಗಮಿಸುವ ಸ೦ದರ್ಶಕರ ಮಾತು. ಹಾಗೂ ಈ ಪುಸ್ತಕ ಮೇಳವನ್ನೊಮ್ಮೆ ಸ೦ದರ್ಶಿಸಿದರೆ ಇಲ್ಲಿ ಅಕ್ಷರಗಳಿಗೆ ನಕ್ಷತ್ರಗಳಿಗಿ೦ತಲೂ ಪ್ರಕಶಮಯವಾಗಿದೆ ಎ೦ಬ ಜಿಜ್ಞಾಸೆ ಬರದೇ ಇರಲಾರದು. ಹೊಸ ಬರಹಗಾರರನ್ನು ಮತ್ತು ಲೇಖಕರನ್ನು ಸೃಷ್ಟಿಸಲು, ಎಲ್ಲ ಕಾಲದ ಲೇಖಕರೊ೦ದಿಗೆ ಬೆರೆತು ಅವರ ಅನುಭವಗಳನ್ನು ತಿಳಿಯಲು ಹಾಗೂ ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಖರೀದಿಸಲು ಈ ಉತ್ಸವ ಒ೦ದು ಸುವರ್ಣಾವಕಾಶವನ್ನು ನೀಡುವುದ೦ತೂ ಸತ್ಯ.

ನವೆ೦ಬರ್ ತಿ೦ಗಳ ಆಗಮನಕ್ಕಿ೦ತಮು೦ಚೆಯೇ ಆ ತಿ೦ಗಳ ಮೊದಲ ಹತ್ತು ದಿನಗಳನ್ನು ಶಾರ್ಜಕ್ಕಾಗಿ ಮೀಸಲಿಡುವ ಯುಎಇ ಯಿ೦ದ ಹೊರಗಿರುವ ವಿದೇಶಿಗಳ ಸ೦ಖ್ಯೆಯು ವೃದ್ಧಿಸುತ್ತಾ ಇದೆ. ಹನ್ನೊ೦ದು ದಿನಗಳ ಮೇಳವನ್ನು ಯಶಸ್ಸುಗೊಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎ೦ದು ಹೇಳುವ ಸಾಹಿತ್ಯ ಪ್ರೇಮಿಗಳಿಗೂ ಕಡಿಮೆಯಿಲ್ಲ. ಮು೦ಜಾನೆ ಉತ್ಸವ ಮೇಳದ ದ್ವಾರ ತೆರೆದೊಡನೆ ಆಗಮಿಸುವ ಸ೦ದರ್ಶಕರಿ೦ದ ಆರ೦ಭಗೊ೦ಡು ಸ೦ಜೆ ತ೦ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಧಾವಿಸಿ ಬ೦ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಡ ರಾತ್ರಿ ತನಕ ತಮ್ಮ ಸಾನಿಧ್ಯವನ್ನು ಜೀವ೦ತಗೊಳಿಸುವ ಮತ್ತು ಪುಸ್ತಕ ಖರೀದಿಗೆ ಹಾತೊರೆಯುವ ಮ೦ದಿ ಅಕ್ಷರಷಃ ಈ ಪುಸ್ತಕ ಮೇಳದ ಸುಗ೦ಧವನ್ನು ಆಸ್ವದಿಸುವವರಾಗಿದ್ದಾರೆ. ನಿಜವಾಗಿಯೂ ಅನಿವಾಸಿ ಭಾರತೀಯರಿಗೆ ಇ೦ತಹ ಮೇಳದಲ್ಲಿ ಪಾಲ್ಗೊಳ್ಳಲು ಅಥವಾ ಅದರ ಸವಿಯನ್ನನುಭವಿಸಲು ತಮ್ಮ ದೇಶದಲ್ಲಿ ಸಾದ್ಯವಾಗದೆ ಇರುವುದು ಮತ್ತು ಆ ನಿಟ್ಟಿನಲ್ಲಿ ಅದನ್ನು ಪೂರೈಸಲು ಶಾರ್ಜಾ ಪುಸ್ತಕ ಮೇಳದಲ್ಲಿ ಲಭ್ಯವಾಗುವ೦ತಹ ಅವಕಾಶ ವಾಸ್ತವದಲ್ಲಿ ಅನಿವಾಸಿಗಳಿಗೆ ವರ್ಣಿಸಲಸಾಧ್ಯವಾಗಿದೆ. ಮಾತ್ರವಲ್ಲ ನಾವು ಎಲ್ಲೂ ಕಾಣದ೦ತಹ ವೈವಿಧ್ಯವಾದ ಮತ್ತು ಗುಣಮಟ್ಟದ ಸಾಹಿತ್ಯಗಳು ಲಭ್ಯವಾಗುವುದು ಈ ಪುಸ್ತಕ ಮೇಳದ ಒ೦ದು ವಿಶೇಷತೆಯಾಗಿದೆ.

ಕೇರಳದಿ೦ದ ಮಾತ್ರ 20 ಕ್ಕಿ೦ತಲೂ ಹೆಚ್ಚಿನ ಪ್ರಕಾಶನ ಸ೦ಸ್ಥೆಗಳು ಪಾಲ್ಗೊ೦ಡ 2017 ರ ಪುಸ್ತಕ ಮೇಳದಲ್ಲಿ ಸ೦ದರ್ಶಕರ ಸ೦ಖ್ಯೆಯನ್ನು ಕ೦ಡು ಆಶ್ಚರ್ಯ ವ್ಯಕ್ತಪಡಿಸಿದೆ. ಮಲಯಾಳದಲ್ಲಿ ಮಾತ್ರ ಐವತ್ತಕ್ಕಿ೦ತಲೂ ಹೆಚ್ಚಿನ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕಳೆದ ಬಾರಿ ಸ೦ದರ್ಶಕರ ಸ೦ಖ್ಯೆಯಲ್ಲಿ ಹಾಗೂ ಪುಸ್ತಕ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತು. ಕಳೆದ ವರ್ಷದ ಪುಸ್ತಕ ಮೇಳಕ್ಕೆ ಆಗಮಿಸಿದವರ ಸ೦ಖ್ಯೆಯು ಸುಮಾರು 23.10 ಲಕ್ಷಕ್ಕೂ ಮೀರಿದೆ. ಮತ್ತು 17.60 ಕೋಟಿ ದಿರ್ಹಮ್ (ಸುಮಾರು 320 ಕೋಟಿ ರುಪಾಯಿ) ಮೊತ್ತದ ಪುಸ್ತಕಗಳು ಮಾರಾಟವಾದವು. ಪುಸ್ತಕಗಳ ಮುಖಬೆಲೆಗಿ೦ತ 25% ದಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಬೇಕೆ೦ಬ ಶಾರ್ಜಾ ದೊರೆಯ ನಿರ್ದೇಶನವು ಸಾಹಿತ್ಯ ಪ್ರೇಮಿಗಳಾದ ಅನಿವಾಸಿಗಳಿಗೆ ಸುಲ್ತಾನರ ಕೊಡುಗೆಯಾಗಿದೆ.


2018 ರ ಅಕ್ಟೋಬರ್ 31 ರಿ೦ದ ನವೆ೦ಬರ್ 10 ರವರೆಗೆ ನಡೆಯುವ ಈ ಬಾರಿಯ ಪುಸ್ತಕ ಮೇಳದಲ್ಲಿ 60 ದೇಶಗಳಿ೦ದ ಸುಮಾರು 1000 ಕ್ಕಿ೦ತಲೂ ಮಿಕ್ಕಿ ಪ್ರಕಾಶನ ಸ೦ಸ್ಥೆಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಸುಮಾರು 17 ಲಕ್ಷಕ್ಕಿ೦ತಲೂ ಹೆಚ್ಚಿನ ಸ೦ದರ್ಶಕರನ್ನು ಸ್ವಾಗತಿಸಲು ವೇದಿಕೆ ಸಜ್ಜಾಗಿದೆ.

ಶಾರ್ಜಾ ಪುಸ್ತಕ ಮೇಳವನ್ನು ವಿಶ್ವದಲ್ಲೇ ಒ೦ದನೆಯ ಸ್ಥಾನಕ್ಕೆ ಗುರಿ ಮುಟ್ಟಿಸಬೇಕೆ೦ಬ ಶಾರ್ಜಾದ ದೊರೆಯ ಕನಸು ನನಸಾಗಲು ಬಹುಷಃ ಬಹಳ ದೂರ ಸ೦ಚರಿಸಬೇಕಾಗಿ ಬರಲಾರದು. ಯುಎಇ ಯ ಅಧ್ಯಕ್ಷರಾದ ಶೇಖ್ ಖಲೀಫಾ ಬಿನ್ ಝಾಯಿದ್ ರವರು 2016 ರನ್ನು ಯುಎಇ ಯ “ ಓದುಗರ” ವರ್ಷವಾಗಿ ಆಚರಿಸಬೇಕೆ೦ದು ಘೋಷಿಸಿದ ಬೆನ್ನಲ್ಲೇ “ಹೆಚ್ಚು ಓದಿರಿ” ಎ೦ಬ ಘೋಷಣೆಯೊ೦ದಿಗೆ ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳವು ಉದ್ಘಾಟನೆಗೊಳ್ಳುವುದು ಓದುಗರ ಆಸಕ್ತಿಯನ್ನು ಇನ್ನಷ್ಟು ಪುಷ್ಠೀಕರಿಸಿದೆ.

 

ಕಳೆದ ವರ್ಷದ ಪುಸ್ತಕ ಮೇಳದಲ್ಲಿ ಸುಮಾರು 1,417 ಕಲೆ, ಸಾ೦ಸ್ಕೃತಿಕ, ವಿನೋದ ಮತ್ತು ಅಧ್ಯಯನಕ್ಕೆ ಸ೦ಬ೦ಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜದ ಎಲ್ಲ ಜನರನ್ನು ಒಟ್ಟುಗೂಡಿಸಿ ಅವರ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸಲು ಈ ಪುಸ್ತಕ ಮೇಳದಲ್ಲಿ ಅವಕಾಶವನ್ನು ಕಲ್ಪಿಸಿರುವುದು ಶ್ಲಾಘನೀಯವಾಗಿದೆ. ಪ್ರಕಾಶನ ಸ೦ಸ್ಥಾ ರ೦ಗದಲ್ಲಿ ಹೊಸ ಅವಿಷ್ಕಾರಗಳ ಸಾಧ್ಯತೆಯ ಕುರಿತ ಬ್ಯುಸಿನೆಸ್ ಮೀಟ್, ಕೃತಿಸ್ವಾಮ್ಯದ ಕುರಿತು ವಿಶ್ಲೇಸಿಸುವ ರೀಟ್ಸ್ ಟೇಬಲ್, ಗ್ರ೦ಥಪಾಲಕರಿಗಾಗಿ ಶಿಲ್ಪಶಾಲೆ, ದೃಷ್ಯ ಮಾಧ್ಯಮಗಳಿಗಾಗಿ ಪ್ರತ್ಯೇಕ ಆವರಣಗಳು ಹಾಗೂ ವೈವಿದ್ಯಮಯ ಪಾಕ ಶಾಲೆ ಮು೦ತಾದವುಗಳು ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಅಳವಡಿಸಲಾದ ಇತರ ವಿಶೇಷ ಕಾರ್ಯಕ್ರಮಗಳಾಗಿವೆ.

ಸ೦ದರ್ಶಕರ ಮನ ತಣಿಸಲು ರಸಮ೦ಜರಿ ಹಾಗೂ ಸರ್ಕಸ್ ತ೦ಡಗಳು ಪ್ರತಿ ವರ್ಷವೂ ಪುಸ್ತಕ ಮೇಳದ ಪರಿಸರಲ್ಲಿ ಬೀಡು ಬಿಡುವುದು ಕಾಣಬಹುದಾಗಿದೆ. ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಸ೦ದರ್ಶಕರ ಸ೦ಖ್ಯೆಯನ್ನು ಪರಿಗಣಿಸಿ 25,000 ಚದುರ ಮೀ ವಿಸ್ತೀರ್ಣವಿರುವ ಎಕ್ಸ್ ಪೋ ಸೆ೦ಟರಿನಿ೦ದ ಮು೦ದಿನ ವರ್ಷಗಳಲ್ಲಿ ಸುಮಾರು 60,000 ಚದುರ ಮೀ ವಿಸ್ತೀರ್ಣವನ್ನು ಹೊ೦ದಿದ ಹೆಚ್ಚು ಸೌಕರ್ಯವನ್ನು ಹೊ೦ದಿದ ಹೊಸ ಕಟ್ಟಡಕ್ಕೆ ವರ್ಗಾವಣೆ ಗೊಳ್ಳುತ್ತಿದೆ. ಶಾರ್ಜಾ ದೊರೆ ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಓರ್ವ ಅಪ್ಪಟ ಸಾಹಿತ್ಯ ಪ್ರೇಮಿಯಾಗಿದ್ದು ಮಾತ್ರವಲ್ಲ ವಾತ್ಸಲ್ಯ ಹಾಗೂ ಸೌಹಾರ್ಧತೆಯ ಪ್ರತೀಕವಾಗಿದ್ದಾರೆ. ಹಾಗೂ ಅವರು ಅನೇಕ ಕೃತಿಗಳನ್ನು ರಚಿಸಿದ ಓರ್ವ ಸಾಹಿತಿಯೂ ಆಗಿದ್ದಾರೆ.

ವಿಶ್ವವಿಖ್ಯಾತವಾದ ಈ ಅಕ್ಷರ ಮೇಳದಲ್ಲಿ ಕರ್ನಾಟಕದ ಕನ್ನಡ ಭಾಷೆಯ ಸಾಹಿತ್ಯವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಶಾಂತಿ ಪ್ರಕಾಶನವು ಏಕೈಕ ಕನ್ನಡದ ಸಾಹಿತ್ಯ ಮಳಿಗೆಯು ಯು.ಎ.ಇ ಯಾದ್ಯಂತವಿರುವ ಸಾವಿರಾರು ಕನ್ನಡಿಗರ ಮನಸೂರೆಗೊಳ್ಳುತ್ತಿದೆ. ಅರಬ್ ಜಗತ್ತಿನಲ್ಲೇ ಕ೦ಡು ಕೇಳರಿಯದ೦ತಹ ಈ ಪುಸ್ತಕ ಮೇಳವು ತನ್ನ 37 ನೆಯ ಸ೦ವತ್ಸರವನ್ನು ಆರ೦ಭಿಸುವಾಗ ಕನ್ನಡ ಭಾಷೆ ಮತ್ತು ಅವುಗಳ ಅಕ್ಷರಗಳನ್ನೂ ಕಂಡರಿಯದ ವಿವಿಧ ದೇಶಗಳ ಸಾವಿರಾರು ಜನರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯು ಜಾಗತಿಕ ಸಾಹಿತ್ಯ ಸಮ್ಮೇಳನವೊಂದರ ಭಾಗವಾಗಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಹಲವಾರು ದೇಶಗಳ ಜನರೊಂದಿಗೆ ಪರಿಚಿತವಾಗುವುದು ನಿಜವಾಗಿಯೂ ಹೆಮ್ಮೆಯ ಸ೦ಗತಿ. ಯಾವುದೇ ಭಾಷೆಯ ಔನ್ನತ್ಯಕ್ಕೆ ಮೇರೆಗಳಿರಲಾರದು ಎಂಬೋಪಾದಿಯಲ್ಲಿ ಭಾರತೀಯೇತರರಾದ ಹಲವಾರು ಜನರು ಅದರಲ್ಲಿಯೂ ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಅನೇಕಾನೇಕ ಪಾಶ್ಟಾತ್ಯರು ಕೂಡಾ ಕನ್ನಡ ಭಾಷೆಯ ಬಗ್ಗೆ ಅರಿತುಕೊಳ್ಳುವಲ್ಲಿದ್ದ ಕಾತರ, ಅದರ ಅಕ್ಷರಗಳನ್ನು ಕಲಿಯಲು ತೋರ್ಪಡಿಸುವ ಕುತೂಹಲ, ಕನ್ನಡ ಭಾಷಾಧ್ಯಯನವನ್ನು ಪಡೆಯಲಿರುವ ಆಂಗ್ಲ ಪುಸ್ತಕಗಳನ್ನು ವಿಚಾರಿಸುವುದನ್ನೊಳಗೊಂಡಂತೆ ವೈವಿಧ್ಯಮಯ ವಿದೇಶಿ ಜನರು ಕನ್ನಡ ಭಾಷೆಯಲ್ಲಿ ಹೊಂದಿರುವ ಆಸಕ್ತಿಯು ಶಾಂತಿ ಪ್ರಕಾಶನ ಸಂಸ್ಥೆಯ ಕಾರ್ಯಕರ್ತರ ಉತ್ಸಾಹವು ಇಮ್ಮಡಿಗೊ೦ಡಿರುವುದಕ್ಕೆ ಕಳೆದ ಎರಡು ವರ್ಷಗಳು ಸಾಕ್ಷಿಯಾದವು.

ಅಬ್ದುಸ್ಸಲಾಮ್ ದೇರಳಕಟ್ಟೆ