ಮುಸ್ಲಿಂ ವಿರೋಧಿ ಹೇಳಿಕೆ: ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೆ ವಿರುದ್ಧ ಜಾಮೀನು ರಹಿತ ಕೇಸು ದಾಖಲು

0
1028

ತಿರುವನಂತಪುರಂ,ಎ.18: ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೆಯ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಸಿಪಿಎಂ ನಾಯಕ ವಿ.ಶಿವನ್‍ಕುಟ್ಟಿಯ ದೂರಿನಲ್ಲಿ ಆಟ್ಟಿಂಗಲ್ ಎಂಬಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಶ್ರೀಧರನ್ ಪಿಳ್ಳೆಯ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಹೈಕೋರ್ಟಿಗೆ ನಿನ್ನೆ ತಿಳಿಸಿತ್ತು. ಶ್ರೀಧರನ್ ಪಿಳ್ಳೆಯ ವಿರುದ್ಧ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ವಿ.ಶಿವನ್‍ಕುಟ್ಟಿ ಸಲ್ಲಿಸಿದ ಇನ್ನೊಂದು ಅರ್ಜಿಯಲ್ಲಿ ಹೈಕೋರ್ಟು ಪೊಲೀಸರಿಂದ ವಿವರಣೆಯನ್ನು ಕೇಳಿತ್ತು.

ಆಟ್ಟಿಂಗಲ್ ಕಚ್ಚೇರಿ ಜಂಕ್ಷನ್ ಎನ್‍ಡಿಎ ಲೋಕಸಭಾ ಅಭ್ಯರ್ಥಿ ಶೋಭಾ ಸುರೇಂದ್ರನ್‍ರ ಪ್ರಣಾಳಿಕೆ ಬಿಡುಗಡೆ ಮಾಡಿದ ವೇಳೆ ಶ್ರೀಧರನ್ ಪಿಳ್ಳೆ, “ಬಾಲಕೋಟ್ ದಾಳಿಯಲ್ಲಿ ಕೊಲೆಯಾದವರ ಜಾತಿ,ಧರ್ಮವನ್ನು ಕೇಳುವವರಿದ್ದಾರೆ. ಇಸ್ಲಾಂ ಆಗಿದ್ದರೂ ಕೆಲವು ಚಿಹ್ನೆಗಳನ್ನು ಪರಿಶೀಲಿಸಬೇಕಾಗುತ್ತದೆ. ಡ್ರೆಸ್‍ನ್ನೆಲ್ಲ ಕಳಚಿ ನೋಡಬೇಕಲ್ಲವೇ” ಎಂದು ಶ್ರೀಧರನ್ ಪಿಳ್ಳೆ ಭಾಷಣ ಮಾಡಿದ್ದರು. ಆಟ್ಟಿಂಗಲ್ ಪೊಲೀಸರು ಮತ್ತು ಗ್ರಾಮೀಣ ಎಸ್ಪಿಗೆ ಎಲ್‍ಡಿಎಫ್ ದೂರು ನೀಡಿತು. ಐಪಿಸಿಯ 153, 153ಎ, 153(ಎ),153ಬಿ ಕಲಂ ಪ್ರಕಾರ ಶ್ರೀಧರನ್ ಪಿಳ್ಳೆ ವಿರುದ್ಧ ಕೇಸು ದಾಖಲಾಗಿದೆ.