ವಲೀಮ ಶಿಷ್ಟಾಚಾರ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿರುವ ನಮ್ಮ ವಿವಾಹಗಳು

0
600

🖋ಖದೀಜ ನುಸ್ರತ್, ಅಬು ಧಾಬಿ

ವೈವಾಹಿಕ ಜೀವನ ಸುಗಮವಾಗಲು ಅದರ ಆರಂಭವು ಸಮೃದ್ಧಿದಾಯಕವಾಗಿರಬೇಕು. ವಿವಾಹವೆಂಬುದು ಸಾಮಾಜಿಕ ಕಾರ್ಯಕ್ರಮವಲ್ಲ. ಅದೊಂದು ಪವಿತ್ರವಾದ ಧಾರ್ಮಿಕ ಕಾರ್ಯಕ್ರಮವಾಗಿದೆ. ಇಸ್ಲಾಮ್ ಧರ್ಮದಲ್ಲಿ ವಿವಾಹವೆಂಬುದು ಅತ್ಯಂತ ಸರಳ ಕರ್ಮವೂ ವಿಚ್ಛೇದನೆ ಕಷ್ಟಕರವೂ ಆದ ಕಾರ್ಯವಾಗಿದೆ. ಆದರೆ ಇಂದು ಜನರು ವಿವಾಹವನ್ನು ಅತ್ಯಂತ ಕಷ್ಟಕರ ಕೆಲಸವನ್ನಾಗಿ ಮತ್ತು ವಿಚ್ಛೇದನೆಯನ್ನು ಸರಳ ಕರ್ಮವನ್ನಾಗಿ ಮಾಡಿದ್ದಾರೆ. ವಿವಾಹಕ್ಕಾಗಿ ಲಕ್ಷಾಂತರ ಹಣ, ವಸ್ತ್ರಾಭರಣಗಳಿಗಾಗಿ ಅನೇಕ ದಿನಗಳ ಮುಂಚೆಯೇ ತಯಾರಿಯನ್ನು ನಡೆಸುತ್ತಾ ಸಮಯವನ್ನೂ ವ್ಯರ್ಥಮಾಡಲಾಗುತ್ತದೆ.

ವಿವಾಹವೆಂಬುದು ಹಾಲ್ ನಲ್ಲಿಯೇ ನಡೆಯಬೇಕೆಂದಿಲ್ಲ. ಉತ್ತಮ ಸೌಕರ್ಯವಿದ್ದರೆ ಮನೆಯಲ್ಲಿಯೂ ನಡೆಸಬಹುದಾಗಿದೆ. ದಾಂಪತ್ಯ ಜೀವನವು ಸಮೃದ್ಧಿದಾಯಕವಾಗಲು ನಿಕಾಹ್ ಗೆ ಅಲ್ಲಾಹನ ಭವನಕ್ಕಿಂತ ಅತ್ಯುತ್ತಮ ಸ್ಥಳ ಬೇರೆ ಇಲ್ಲ. ನಿಮಗೆ ಅತಿ ಹೆಚ್ಚು ಜನರಿಗೆ ವಲೀಮದ ಔತಣ ನೀಡಬೇಕೆಂದಿದ್ದರೆ ಹತ್ತಿರದ ಸಂಬಂಧಿಕರಿಗೆ, ಅನಾಥಾಲಯದ ಮಕ್ಕಳಿಗೆ ಮತ್ತು ಬಡವರಿಗೆ ಉಣಿಸಿ ವಿವಾಹವನ್ನು ಅನುಗ್ರಹೀತಗೊಳಿಸಿರಿ. ಅವರು ನಿಮಗಾಗಿ ಪ್ರಾರ್ಥನೆ ಮಾಡುತ್ತಾರೆ. ಬದಲಾಗಿ ಸಾವಿರಾರು ಜನರನ್ನು ವಿವಾಹಕ್ಕೆ ಆಮಂತ್ರಿಸಿ ರಸ್ತೆಗಳನ್ನು ಬ್ಲಾಕ್ ಮಾಡಿ ಕಿರುಕುಳ ನೀಡಿದರೆ ಸಾರ್ವಜನಿಕರರು ನಿಮ್ಮ ವಿವಾಹಕ್ಕೆ ಶಾಪ ಹಾಕುತ್ತ ಹೋಗುತ್ತಾರೆ.

ವಿವಾಹದ ನಂತರ ವಲೀಮ (ಔತಣ ಕೂಟ) ನೀಡುವುದು ಪ್ರವಾದಿಚರ್ಯೆಯಾಗಿರುತ್ತದೆ. ಅದೊಂದು ಸತ್ಕರ್ಮವಾಗಿದೆ. ಅಬ್ದುರ್ರಹ್ಮಾನ್ ಬಿನ್ ಔಫ್(ರ) ಎಂಬ ಸಹಾಬಿ ವಿವಾಹವಾದ ವಿಷಯ ತಿಳಿದಾಗ ಪ್ರವಾದಿ(ಸ) ಹೇಳಿದರು : “ವಲೀಮ ಮಾಡಿರಿ. ಒಂದು ಆಡಿನ ಮಾಂಸದಿಂದಲಾದರೂ ಸರಿ.” ಪ್ರವಾದಿ(ಸ) ಅವರು ಝೈನಬ್ ಬಿನ್ತಿ ಜಹಶ್(ರ)ರೊಂದಿಗೆ ವಿವಾಹವಾದಾಗ ರೊಟ್ಟಿ ಮಾಂಸದಿಂದ ಸಹಾಬಿಗಳಿಗೆ ವಲೀಮದ ಊಟ ನೀಡಿದ್ದರು. ಆದರೆ ಇತರ ವಿವಾಹಗಳಲ್ಲಿ ಹಾಗೆ ಮಾಡಿರಲಿಲ್ಲ. ಒಂದು ವಿವಾಹದಲ್ಲಿ ಪ್ರವಾದಿವರ್ಯರು(ಸ) ಅರ್ಧ ಸೇರು ಜೋಳದ ರೊಟ್ಟಿ ಮಾಡಿ ಬಡಿಸಿದ್ದರು. ಸಫಿಯ್ಯಾ(ರ) ರ ವಿವಾಹದ ನಂತರ ಪ್ರವಾದಿ(ಸ) ನೀಡಿದ ವಲೀಮದ ಸತ್ಕಾರವು ಸಹಾಬಿಗಳ ನೆರವಿನಿಂದಾಗಿತ್ತು. ಅದು ಖರ್ಜೂರ, ಕೆನೆ ಮತ್ತು ತುಪ್ಪವಾಗಿತ್ತು. ಹ. ಅಲೀ(ರ) ವಿವಾಹವಾದಾಗ ಕೆಲವು ಅನ್ಸಾರ್ ಗಳು ಒಂದು ಕುರಿ ಮತ್ತು ಕೆಲವು ಸೇರು ಜೋಳವನ್ನು ವಲೀಮ ಮಾಡಲಿಕ್ಕಾಗಿ ನೀಡಿದರು. ಇದರಿಂದ ನಮಗೆ ತಿಳಿಯುವುದೇನೆಂದರೆ ಯಾರಿಗಾದರೂ ಮದುವೆಯ ಬಳಿಕ ವಲೀಮ ನೀಡಲು ಸಾಧ್ಯವಾಗದಿದ್ದರೆ ಇತರರು ಅವರಿಗೆ ಸಹಾಯ ಮಾಡಬೇಕು ಮತ್ತು ವಲೀಮ ನೀಡಬೇಕಾದುದು ವರನ ಖರ್ಚಿನಿಂದಾಗಿರಬೇಕು ಹೊರತು ವಧುವಿನ ತಂದೆಯ ಜವಾಬ್ದಾರಿಯಲ್ಲ. ಆದರೆ ವಧುವಿನ ತಂದೆ ಸ್ವ ಇಚ್ಛೆಯಿಂದ ತನ್ನ ಮಗಳ ವಿವಾಹಕ್ಕಾಗಿ ಸಂಬಂಧಿಕರಿಗೆ ಸತ್ಕಾರ ನೀಡುವುದು ಧರ್ಮಸಮ್ಮತವಾಗಿದೆ. ಎರಡು ಕುಟುಂಬದವರು ಪರಸ್ಪರ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ಸಾಧ್ಯವಿಲ್ಲದ್ದನ್ನು ಖರ್ಚು ಮಾಡಲು ನಿರ್ಬಂಧಿಸಬಾರದು. ವಿವಾಹ ಸಮಾರಂಭವು ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿರಬೇಕು. ಪರಸ್ಪರರು ಕುಟುಂಬದ ಘನತೆ, ಗೌರವವನ್ನು ರಕ್ಷಿಸಬೇಕು. ಮದುವೆಯ ಖರ್ಚಿಗಾಗಿ ಇನ್ನೊಬ್ಬರೊಂದಿಗೆ ಬೇಡುವ ಅಥವಾ ಸಾಲ ಪಡೆಯುವಂತಹ ಪರಿಸ್ಥಿತಿ ಉಂಟು ಮಾಡಬಾರದು. ಪ್ರಸಕ್ತ ಆರ್ಥಿಕ ಪರಿಸ್ಥಿಯಲ್ಲಿ ವಿಶಾಲವಾದ ಮನೆ, ಅದರ ಮುಂದೆ ಒಂದು ಕಾರ್ ಇದ್ದರೂ, ಎರಡು ಮೂರು ಸಹೋದರರಿದ್ದರೂ, ಗಲ್ಫ್ ನಲ್ಲಿ ದುಡಿಯುವವರಿದ್ದರೂ ಎಲ್ಲರಿಗೂ ಅವರದ್ದೇ ಸಮಸ್ಯೆ ಇರುತ್ತದೆ.

ವಲೀಮ ಎಂಬುದು ಧರ್ಮನಿಷ್ಠೆ, ಪ್ರತಿಷ್ಠೆ, ಘನತೆ ಗೌರವದ ಪ್ರತೀಕವಲ್ಲ. ಅತೀ ಹೆಚ್ಚು ಜನರನ್ನು ಒಟ್ಟುಗೂಡಿಸಿ ದುಬಾರಿಯಾದ ಮದುವೆ ಹಾಲ್ ನಲ್ಲಿ ಅತ್ಯುತ್ತಮ ಆಹಾರ ನೀಡಿ ವಿವಾಹವಾದರೆ ಜನಪ್ರಿಯಗಳಿಸಬಹುದೆಂದು ಭಾವಿಸಬೇಡಿರಿ. ನೀವು ನೀಡಿದ ಆಹಾರ ಒಂದು ದಿನಕ್ಕೆ ಮಾತ್ರ. ನಂತರ ಯಾರೂ ಅದನ್ನು ನೆನಪಿಡುವುದಿಲ್ಲ. ಭರ್ಜರಿ ವಲೀಮ ನೀಡಲು ಹಣ ಉಳಿತಾಯ ಮಾಡುತ್ತಾ ವಿವಾಹವನ್ನು ಮುಂದೂಡುತ್ತಾ ನಿಮ್ಮ ಅಮೂಲ್ಯವಾದ ಯೌವನವನ್ನು ಕಳೆಯಬೇಡಿರಿ. ನಿಮ್ಮಲ್ಲಿರುವ ಎಲ್ಲಾ ಉಳಿತಾಯವನ್ನು ವಿವಾಹಕ್ಕಾಗಿ ಖರ್ಚು ಮಾಡಬೇಡಿರಿ. ವಿವಾಹದ ನಂತರ ಜವಾಬ್ದಾರಿ ಹೆಚ್ಚುತ್ತಾ ಖರ್ಚು ಜಾಸ್ತಿಯಾಗುತ್ತದೆ. ನಿಮ್ಮ ಭರ್ಜರಿ ವಿವಾಹವನ್ನು ನೋಡಿ ಅಗತ್ಯದ ಸಮಯದಲ್ಲಿ ಯಾರೂ ನಿಮಗೆ ಹಣ ನೀಡುವುದಿಲ್ಲ.

ವಲೀಮ ಎಂಬುವುದು ಬಿರಿಯಾನಿ ಅಥವಾ ತುಪ್ಪದನ್ನವೇ ಆಗಬೇಕೆಂದಿಲ್ಲ. ಆದಮ್(ಅ) ರ ಸಂತತಿಯಲ್ಲಿ ಪರಿಚಯವಿರುವವರೆಲ್ಲರನ್ನೂ ಆಮಂತ್ರಿಸಿ ಊಟ ಹಾಕಬೇಂದಿಲ್ಲ. ಚಹಾತಿಂಡಿ ಅಥವಾ ಸಿಹಿತಿಂಡಿ ಹಂಚಿದರೂ ಸಾಕಾಗುತ್ತದೆ.

ನಮ್ಮಲ್ಲಿ ಇಂದು ಒಮ್ಮೆ ಓದಿ ಬಿಸಾಡುವಂತಹ ವಿವಾಹದ ಆಮಂತ್ರಣ ಪತ್ರವನ್ನು ಪ್ರಕಟಿಸಲು ಎಷ್ಟು ಹಣ ಖರ್ಚು ಮಾಡಲಾಗುತ್ತದೆ. ಮೊಬೈಲ್ ಮೆಸೇಜ್, ವಾಟ್ಸಾಪ್ ಬಳಸುವ ಈ ಕಾಲದಲ್ಲಿ ಆಮಂತ್ರಣ ಪತ್ರ ಪ್ರಕಟಿಸುವ ಅಗತ್ಯವಿದೆಯೇ ಎಂದು ನಾವೇ ಆಲೋಚಿಸಬೇಕಾದಂತಹ ಕಾಲ ಸನ್ನಿಹಿತವಾಗಿದೆ.

ಪ್ರವಾದಿ(ಸ) ಹೇಳಿರುವರು: “ತೀರಾ ಕಡಿಮೆ ಪರಿಶ್ರಮವನ್ನು ಒಳಗೊಂಡ ವಿವಾಹವೇ ಅತ್ಯುತ್ತಮ ವಿವಾಹ.”

ಎಲ್ಲರ ಮೊಬೈಲ್ ನಲ್ಲಿ ಅತ್ಯಾಧುನಿಕ ಕ್ಯಾಮೆರಾ ಇರುವ ಈ ಕಾಲದಲ್ಲಿ ಫೋಟೋಗೆ ಹಣ ಖರ್ಚು ಮಾಡುವುದು ವ್ಯರ್ಥ. ಹೊರಗಿನ ಸ್ಟುಡಿಯೋಗಳಿಂದ ಫೋಟೋಗ್ರಾಫರನ್ನು ಕರೆಸಿ ಮದುಮಗಳ, ಮನೆಯ ಸ್ತ್ರೀಯರ ಸೌಂದರ್ಯವನ್ನು ಪರಪುರುಷರಿಗೆ ತೋರಿಸುತ್ತಾ ಅಲ್ಲಾಹನ ಮೇರೆಗಳನ್ನು ಮೀರುವಂತಹ ಅವಕಾಶ ನೀಡಬೇಡಿರಿ. ಅದೇ ರೀತಿ ವಿವಾಹಕ್ಕೆ ಬಂದವರಿಗೆಲ್ಲಾ ಫೋಟೋ ತೆಗೆಯಲು ಅನುಮತಿ ನೀಡಬಾರದು. ಕ್ಷಣಾರ್ಧದಲ್ಲಿ ವಾಟ್ಸಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಾ ದುರುಪಯೋಗವಾಗುವ ಸಾಧ್ಯತೆ ಇದೆ.

ವಿವಾಹವು ಸತ್ಯವಿಶ್ವಾಸದ ಅರ್ಧಾಂಶವನ್ನು ಪೂರ್ತಿಗೊಳಿತ್ತದೆ. ಆದರೆ ತಮ್ಮ ಮನೆಯಲ್ಲಿ ನಡೆಯುವ ಶುಭಸಮಾರಂಭದಂದು ನಮಾಝ್ ಹಾಗೂ ಇನ್ನಿತರ ಆರಾಧನಾ ಕರ್ಮಗಳ ಬಗ್ಗೆ ನಿರ್ಲಕ್ಷೆ ತೋರುವುದು ಖೇದಕರವಾಗಿದೆ. ವಿವಾಹ ಸಮಾರಂಭಗಳಲ್ಲಿ ದುಂದುವೆಚ್ಚ, ಪರಪುರುಷರ ಮುಂದೆ ಆಕರ್ಷಿತರಾಗಿ ಫೋಟೋ ತೆಗೆದು, ಸ್ತ್ರೀ ಪುರುಷರು ಬೆರೆತು, ಮ್ಯೂಸಿಕ್, ಡಾನ್ಸ್ ನಂತಹ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಾ ಒಂದು ದಿನದ ಮಟ್ಟಿಗಾದರೂ ತಮ್ಮ ಸತ್ಯ ವಿಶ್ವಾಸವನ್ನು ಕಳೆದುಕೊಳ್ಳಬೇಡಿರಿ. ಮದುವೆಯೆಂಬುದು ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವುದಲ್ಲವೇ ಎಂದು ಆಲೋಚಿಸಬೇಡಿರಿ. ನಮ್ಮ ಮನೆಯಲ್ಲಿ ಮೊದಲಿನ ಮದುವೆ ಅಥವಾ ಕೊನೆಯ ಮದುವೆ ಅಥವಾ ಒಬ್ಬಳೇ ಮಗಳಿರುವುದು ಅಥವಾ ಒಬ್ಬನೇ ಮಗನಿರುವುದು ಎಂಬ ನೆವನವನ್ನು ಬಿಟ್ಟು ಬಿಡಿರಿ.

ವಿವಾಹ ಸಮಾರಂಭಗಳು ವಸ್ತ್ರಾಭರಣಗಳ, ಆಹಾರ ಪದಾರ್ಥ, ಬೆಡ್ರೂಮ್, ಕಾರ್, ಮದುವೆ ಹಾಲ್ ಡೆಕೊರೇಶನ್ ಗಳ ಪ್ರದರ್ಶನ ವೇದಿಕೆ ಅಲ್ಲ. ವಿವಾಹದ ದಿನವು ವಧುವರರಿಗೂ ಅವರ ಕುಟುಂಬಸ್ಥರಿಗೂ ಸಂತೋಷದ ದಿನವಾಗಿರುತ್ತದೆ. ಅಂದು ಹೊಸ ಅಥವಾ ಉತ್ತಮ ವಸ್ತ್ರ ಧರಿಸಿರಿ. ಉತ್ತಮ ಆಹಾರ ತಿನ್ನಿರಿ.”ಹೇ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ವಸ್ತುಗಳನ್ನು ನೀವು ಉಣ್ಣಿರಿ. ಶೈತಾನನು ತೋರಿಸಿದ ಹಾದಿಗಳಲ್ಲಿ ನಡೆಯ ಬೇಡಿರಿ. ಅವನು ನಿಮ್ಮ ಪ್ರತ್ಯಕ್ಷ ಶತ್ರು.” (ಅಲ್ ಬಕರಃ :168)

ವಿವಾಹದ ದಿನದಂದು ದಫ್ ಬಾರಿಸುತ್ತಾ ಪದ್ಯ ಹಾಡಲು ಪ್ರವಾದಿ(ಸ) ಅನುಮತಿ ನೀಡಿರುವರು. ಆದರೆ ಅದಕ್ಕಾಗಿ ಇವೆಂಟ್ ಮಾನೇಜ್ ಮೆಂಟ್ ನವರಿಗೆ ಸಾವಿರಾರು ರೂಪಾಯಿ ಹಣಖರ್ಚು ಮಾಡಬೇಕಾದ ಅಗತ್ಯವಿಲ್ಲ. ವಿವಾಹ ಸಮಾರಂಭಕ್ಕೆ ಹೋದಾಗ ಅಲ್ಲಿನ ಊಟದ ರುಚಿಯ ಕುಂದುಕೊರತೆಗಳನ್ನು ಹೇಳಬೇಡಿರಿ. ಉಚಿತವಾಗಿ ಸಿಗುತ್ತದೆಯೆಂದು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ತೆಗೆದುಕೊಂಡು ವ್ಯರ್ಥ ಮಾಡಬೇಡಿರಿ. ಮೂರು ಹೊತ್ತಿನ ಊಟಕ್ಕಾಗಿ ನಮ್ಮ ಸಮಾಜದಲ್ಲಿ ಅದೆಷ್ಟೋ ಬಡವರು ಹಾತೊರೆಯುತ್ತಿದ್ದಾರೆ ಎಂಬ ಸತ್ಯ ಸಂಗತಿ ನಮಗೆಲ್ಲಾ ತಿಳಿದಿದೆ.

ವಿವಾಹ ಸಮಾರಂಭಕ್ಕೆ ಹೋದಾಗ ವಧುವರರಿಗಾಗಿ ಶುಭಕೋರುತ್ತಾ ಪ್ರಾರ್ಥಿಸಿರಿ. “ಅಲ್ಲಾಹನು ನಿನಗೆ ಸಮೃದ್ಧಿ ನೀಡಲಿ. ನಿಮ್ಮೀರ್ವರ ಮೇಲೆ ಸಮೃದ್ಧಿಯನ್ನು ವರ್ಷಿಸಲಿ ಮತ್ತು ನಿಮ್ಮಿಬ್ಬರನ್ನು ಒಳಿತಿನಲ್ಲಿ ಜೋಡಿಸಿಡಲಿ.”

ವೈವಾಹಿಕ ಜೀವನದ ಯಶ್ಸಸ್ಸು ನಾವು ಮದುವೆಯಾಗುವ ಹಾಲ್, ಧರಿಸುವ ವಸ್ತ್ರಾಭರಣ, ವಿವಾಹದ ಫೋಟೋ ಅಥವಾ ಆಹಾರವನ್ನು ಅವಲಂಬಿಸಿರುವುದಿಲ್ಲ. ವಿವಾಹದ ಉದ್ದೇಶ ಉತ್ತಮ ಕುಟುಂಬ ನಿರ್ಮಾಣವಾಗಿರುತ್ತದೆ. ಅದಕ್ಕೆ ದೊಡ್ಡ ಮದುವೆ ಹಾಲ್, ಚಿನ್ನಾಭರಣ, ಕಲ್ಯಾಣ ಮಂಟಪ ಅಲಂಕಾರ, ಒಂದು ದಿನದ ಖರ್ಚಿಗೆ ತುಂಬಾ ಹಣದ ಅವಶ್ಯಕತೆಯೂ ಇಲ್ಲ. ಕಷ್ಟ ಸುಖವನ್ನು ಹಂಚಿಕೊಳ್ಳುತ್ತಾ ಪರಸ್ಪರ ಪ್ರೀತಿಸುವ ಎರಡು ಹೃದಯವನ್ನು ಮಾತ್ರ ವಿವಾಹಕ್ಕೆ ತಯಾರಿಸಬೇಕಾಗಿದೆ.