ಜಯಪ್ರದಾ ವಿರುದ್ಧ ಕೀಳ್ಮಟ್ಟದ ಹೇಳಿಕೆ: ಆಝಂ ಖಾನ್ ವಿರುದ್ಧ ಕೇಸು

0
239

ಹೊಸದಿಲ್ಲಿ,ಎ.15: ರಾಮ್‍ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಜಯಪ್ರದಾರ ವಿರುದ್ಧ ಕೀಳ್ಮಟ್ಟದ ಹೇಳಿಕೆ ನೀಡಿದ ಸಮಾಜವಾದಿ ಪಾರ್ಟಿ ನಾಯಕ ಆಝಂಖಾನ್ ವಿರುದ್ಧ ಕೇಸು ದಾಖಲಾಗಿದೆ. ನಿನ್ನೆ ಅವರು ರಾಮ್‍ಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದರು.

“ಹತ್ತು ವರ್ಷ ಅವರು ರಾಮ್‍ಪುರಕ್ಷೇತ್ರದಲ್ಲಿ ರಕ್ತವನ್ನು ಬಸಿದು ಕುಡಿದರು. ನಾನೇ ಜಯಪ್ರದಾರನ್ನು ರಾಮ್‍ಪುರಕ್ಕೆ ಪರಿಚಯಿಸಿದೆ. ಅವರನ್ನು ಸ್ಪರ್ಶಿಸಲು, ಕೆಟ್ಟ ಹೇಳಿಕೆ ನೀಡಲು ಅವಕಾಶ ನೀಡಲಿಲ್ಲ. ಹೀಗೆ ಅವರು ನಿಮ್ಮನ್ನು ಹತ್ತು ವರ್ಷ ಕಾಲ ಪ್ರತಿನಿಧಿಸಿದರು. ಒಬ್ಬರ ನೈಜ ಮುಖ ಅರ್ಥಮಾಡಿಕೊಳ್ಳಲು ನಿಮಗೆ ಹದಿನೇಳು ವರ್ಷ ಬೇಕಾಯಿತು. ಆದರೆ ನಾನು ಹದಿನೇಳು ದಿವಸದಲ್ಲಿ ಅವರ ಒಳ ಉಡುಪಿನ ಕೇಸರಿ ಬಣ್ಣವನ್ನು ಅರ್ಥಮಾಡಿಕೊಂಡೆ” ಎಂದು ಆಝಂ ಖಾನ್ ಹೇಳಿದ್ದರು.

ಹೇಳಿಕೆ ವಿವಾದಗೊಂಡ ಬಳಿಕ ಬಿಜೆಪಿ ಆಝಂಖಾನ್ ವಿರುದ್ಧ ದೂರು ನೀಡಿತು. ಇದೇವೇಳೆ, ತನ್ನ ಹೇಳಿಕೆ ಅಹಿತಕರವಾಗಿದ್ದೆಂದು ಸಾಬೀತುಗೊಂಡರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖಾನ್ ಮಾಧ್ಯಮಗಳಿಗೆ ಹೇಳಿದ್ದಾರೆ. ತೆಲುಗುದೇಶಂ ಪಾರ್ಟಿಯ ಮೂಲಕ ಜಯಪ್ರದಾ ರಾಜಕೀಯ ಪ್ರವೇಶಿಸಿದ್ದರು. ಆಂಧ್ರದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಂತರ ಸಮಾಜವಾದಿ ಪಾರ್ಟಿಗೆ ಸೇರ್ಪಡೆಗೊಂಡಿದ್ದರು. ಎರಡು ಬಾರಿ ಸಮಾಜವಾದಿ ಟಿಕೆಟ್‍ನಲ್ಲಿ ಲೋಕಸಭೆಗೆ ಸ್ಪರ್ಧಿಸಿ ವಿಜಯಿಯಾಗಿದ್ದರು. ಈ ನಡುವೆ ತನ್ನ ನಗ್ನ ಚಿತ್ರವನ್ನು ಆಝಂ ಖಾನ್ ಪ್ರಚಾರ ಮಾಡಿದ್ದಾರೆ ಎಂದು ಜಯಪ್ರದ ಆರೋಪಿಸಿದ್ದರು. ನಂತರ ಅವರನ್ನು ಸಾಮಾಜವಾದಿ ಪಾರ್ಟಿಯಿಂದ ಹೊರಹಾಕಲಾಗಿತ್ತು.