ಢಾಕ: ಬಾಂಗ್ಲಾದೇಶದ ರಾಜಧಾನಿ ಢಾಕದಲ್ಲಿ ರಾಸಾಯನಿಕ ವಸ್ತು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಕನಿಷ್ಟ 70 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಬಾಂಗ್ಲಾ ರಾಜಧಾನಿ ಢಾಕದ ಹಳೆ ಭಾಗದ ಅಪಾರ್ಟ್ಮೆಂಟಿನಲ್ಲಿ ರಾಸಾಯನಿಕ ವಸ್ತುಗಳ ಗೋದಾಮಿನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಈ ದುರ್ಘಟನೆಯು ನಡೆದಿದೆ.
ಹಲವಾರು ಮಂದಿ ಕಟ್ಟಡದೊಳಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಹೊರತರಲು ರಸ್ತೆಗಳು ಕಿರಿದಾಗಿದ್ದು ಟ್ರಾಫಿಕ್ನಿಂದಾಗಿ ತೆರವು ಕಾರ್ಯಾಚರಣೆ ವಿಳಂಬವಾಗಿದೆ. ಪ್ರಖರವಾಗಿ ಉರಿಯಬಲ್ಲ ರಾಸಾಯನಿಕಗಳು, ಸ್ಪ್ರೇಗಳು ಮತ್ತು ಪ್ಲಾಸ್ಟಿಕ್ ವಸ್ತುಗಳಿಂದ ಬೆಂಕಿಯ ಕೆನ್ನಾಲಿಗಳು ಹರಡಿಕೊಂಡಿದೆ.
ಅಗ್ನಿಶಮನ ದಳದ ಅಧಿಕಾರಿ ಮಹ್ಫೂಝ್ ರಿಬೆನ್ 70 ಮಂದಿ ಸಾವನ್ನಪ್ಪಿದ್ದಾರೆಂದು ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶ ಅಗ್ನಿ ಶಾಮಕ ದಳದ ಮುಖ್ಯಸ್ಥರಾದ ಅಲಿ ಅಹ್ಮದ್ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವನೀಯತೆ ಇದೆ ಎಂದು ಹೇಳಿದರು. ಹಲವು ಮೃತದೇಹಗಳು ಸಿಗಬಹುದು, ಹುಡುಕಾಟ ಕಾರ್ಯಚರಣೆ ಮುಂದುವರಿಯುತ್ತಿದೆ ಎಂದು ಎಫ್ಪಿ ಸುದ್ದಿ ಸಂಸ್ಥೆಗೆ ಅವರು ಹೇಳಿದರು.
ಢಾಕದ ಹಳೆ ಪ್ರದೇಶವಾದ ಚೌಕ ಬಝಾರ್ ನಲ್ಲಿ ಅನಿಲ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿತು. ನಂತರ ಅದು ತೀವ್ರವಾಗಿ ರಾಸಾಯನಿಕಗಳಿರಿಸಿದ್ದ ಇಡೀ ಕಟ್ಟಡಕ್ಕೆ ಹಬ್ಬಿಕೊಂಡಿತು ಎಂದು ಅಲಿ ಅಹ್ಮದ್ ತಿಳಿಸಿದ್ದಾರೆ.
“ಬೆಂಕಿ ಕಾಣಿಸಿಕೊಂಡಾಗ ಟ್ರಾಫಿಕ್ ಜಾಮ್ ಆಗಿದೆ. ಬೆಂಕಿ ತೀವ್ರಗತಿಯಲ್ಲಿ ಹಬ್ಬಿದ್ದರಿಂದ. ಜನರಿಗೆ ಪಾರಾಗಲು ಸಾಧ್ಯವಾಗಲಿಲ್ಲ” ಎಂದು ಅಲಿ ಅಹ್ಮದ್ ತಿಳಿಸಿದರು. ದುರಂತ ಸಂಭವಿಸಿದ ಸ್ಥಳದ ರಸ್ತೆಗಳು ಇಕ್ಕಟ್ಟಾಗಿದ್ದು. ದುರಂತ ಸಂಭವಿಸಿದ ಸ್ಥಳಕ್ಕೆ ಕೆಲವೇ ಇಂಚು ದೂರದಲ್ಲಿ ಜನವಾಸವಿರುವ ಅಪಾರ್ಟ್ಮೆಂಟ್ಗಳಿವೆ.