ಪ್ರವಾದಿ(ಸ) ಪ್ರತಿಪಾದಿಸಿದ ಮಾರುಕಟ್ಟೆ

0
1831

🖋ಸಈದ್ ಇಸ್ಮಾಈಲ್

ಪ್ರವಾದಿ ಮುಹಮ್ಮದ್(ಸ) ತಮ್ಮ ಪ್ರವಾದಿತ್ವಕ್ಕಿಂತ ಮುಂಚೆ, ತನ್ನ ಸಮಾಜ ವನ್ನು ಸರ್ವ ಕೆಡುಕುಗಳಿಂದ ಪಾರು ಗೊಳಿಸಿ ಜನರನ್ನು ಒಳಿತಿನೆಡೆಗೆ ಹೇಗೆ ಕೊಂಡೊಯ್ಯುವುದು ಎಂಬುದರ ಬಗ್ಗೆ ಸದಾ ಚಿಂತಿತರಾಗಿದ್ದರು. ಅಲ್ಲಾಹನು ಅವರನ್ನು ತನ್ನ ಪ್ರವಾದಿಯಾಗಿ ನೇಮಕ ಗೊಳಿಸಿದನು. ಅಲ್ಲಾಹನು ತನ್ನ ವಾಣಿ ಯನ್ನು (ಕುರ್‍ಆನ್) ಅವತೀರ್ಣಗೊಳಿಸಿ ದನು. ಆ ಮೂಲಕ ಜನರನ್ನು ಸಂಸ್ಕರಿ ಸುವ, ಜನರಿಗೆ ಕುರ್‍ಆನಿನ ಜ್ಞಾನವನ್ನೂ, ಯುಕ್ತಿಯನ್ನೂ, ಬೋಧಿಸುವ ಮೂಲಕ, ಜನಮನದಲ್ಲಿ ಏಕದೇವತ್ವ, ಪ್ರವಾದಿತ್ವ, ಪರಲೋಕದ ಸತ್ಯತೆಯನ್ನು ಬಿತ್ತಿ ಬೆಳೆಸಿ ದರು. ಜನರು ಸತ್ಯವಿಶ್ವಾಸದ ಬೆಳಕಿನಲ್ಲಿ ಜೀವನ ನಡೆಸಲು ಆರಂಭಿಸಿದಾಗ, ದೇಹೇಚ್ಛೆಯನ್ನು ತೊರೆದು ದೇವೇಚ್ಛೆ ಯನ್ನು ತಮ್ಮದಾಗಿಸಿದರು. ಹಂತ ಹಂತ ವಾಗಿ ಪ್ರವಾದಿಗೆ ಒಂದೊಂದಾಗಿ ಅವತೀರ್ಣಗೊಳ್ಳುತ್ತಿದ್ದ ಪವಿತ್ರ ಕುರ್‍ಆನಿನ ಸೂಕ್ತ ಗಳು ಜನರಲ್ಲಿ ರಕ್ತದಂತೆ ಸಂಚರಿಸುತ್ತಿದ್ದ ಕೆಡುಕುಗಳನ್ನು ತೊರೆಯಲು ಕಾರಣ ವಾಯಿತು.

ಸತ್ಯವನ್ನಾಡುತ್ತಿದ್ದ ಜನರಿಗೆ ಸರ್ವ ಕೆಡುಕಿನ ಜನನಿಯಾಗಿದ್ದ ಶರಾಬನ್ನು, ಆಶ್ಲೀಲತೆ, ವ್ಯಭಿಚಾರ, ಕಳ್ಳತನ, ಕೊಲೆ, ದರೋಡೆ, ಸುಲಿಗೆ, ಹೆಣ್ಣು ಮಕ್ಕಳನ್ನು ಜೀವಂತ ಹೂಳುತ್ತಿದ್ದ ಅರೇಬಿಯಾದ ಆ ಜನತೆಯ ಒಂದು ಭಾಗ ಸರ್ವ ಕೆಡಕಿನಿಂದಲೂ ಹೊರಬಂದು ಕೆಡುಕು ಮುಕ್ತವಾದ ಒಂದು ನವ ಜೀವನವನ್ನು ಆರಂಭಿಸಿದರು. ಕೆಲವೇ ಕೆಲವು ಮಂದಿ ಪ್ರವಾದಿಯವರ ಅನುಯಾಯಿಗಳಾದರು. ಅವರ ಜೀವನ ಶೈಲಿ, ವ್ಯವಹಾರ, ಆರಾಧನೆ, ಅರೇಬಿಯದ ಪಾರಂಪರಿಕ ರೀತಿ ರಿವಾಜುಗಳಿಗೆ ಭಿನ್ನವಾಗಿತ್ತು. ತಮ್ಮ ಹಳೆಯ ಸಂಪ್ರದಾಯವನ್ನೇ ಜೀವಾಳವಾಗಿಸಿದ್ದ ಜನರು, ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಅನುಯಾಯಿಗಳಿಗೆ ವಿವಿಧ ಕಾರಣಗಳನ್ನೊಡ್ಡಿ ಪೀಡಿಸ ತೊಡಗಿದರು. ಮರ್ದನ ತಾಳಲಾರದೆ, ಪ್ರವಾದಿ ಮತ್ತು ಅನುಯಾಯಿಗಳು ತಮ್ಮ ಜನ್ಮನಾಡಾದ ಮಕ್ಕಾ ತೊರೆದು ಯಸ್ರಿಬ್‍ಗೆ (ಮದೀನಾಕ್ಕೆ) ವಲಸೆ ಹೋದರು.

ಮದೀನಾದ ಜನತೆ ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಅನುಯಾಯಿಗಳನ್ನು ಸ್ವಾಗತಿಸಿದರು. ಮದೀನಾದ ಜನರಿಗೆ ಪ್ರವಾದಿ ಮತ್ತು ಅನುಯಾಯಿಗಳು ಮತ್ತು ಅವರು ಆಚರಿಸುತ್ತಿದ್ದ ಧರ್ಮದ ವಿಧಾನಗಳು ತುಂಬಾ ಆಕರ್ಷಣೀಯವಾದವು. ಏಕೆಂದರೆ ಪ್ರವಾದಿ ಮುಹಮ್ಮದ್(ಸ) ಮೊತ್ತ ಮೊದಲಾಗಿ ಮದೀನಾದ ಯಹೂದಿ ಗಳನ್ನೂ, ನಸಾರಾಗಳನ್ನೂ, ಮಜೂಸಿಗಳನ್ನೂ (ಆಗ್ನಿ ಆರಾಧಕರು) ಮದೀನಾದ ಇತರ ಗೋತ್ರಗಳ ಸರದಾರರನ್ನೂ, ಅನ್ಸಾರ್ ಗಳನ್ನೂ (ಪ್ರವಾದಿಗೆ ಸಹಾಯ ಮಾಡಿ ದವರು) ಮತ್ತು ಮುಹಾಜಿರ್‍ಗಳನ್ನೂ (ವಲಸೆ ಹೋದವರು) ಒಟ್ಟು ಸೇರಿಸಿ ಒಂದು ಐಕ್ಯ ವೇದಿಕೆಯನ್ನು ಸ್ಥಾಪಿಸಿದರು. ಆ ವೇದಿಕೆಯಲ್ಲಿ ತೆಗೆದುಕೊಂಡ ನಿರ್ಧಾರ ಗಳು ಮದೀನಾದ ಮಟ್ಟಿಗೆ ಹಿತಕಾರಿ ಯಾಗಿದ್ದವು.

ವೇದಿಕೆ ತಳೆದ ತೀರ್ಮಾನಗಳು ಆ ಪ್ರದೇಶದಲ್ಲಿ ಶಾಂತಿಯ ವಾತಾವರಣ ನೆಲೆಸುವಂತೆ ಮಾಡಿತು. ಪ್ರವಾದಿ ಮುಹಮ್ಮದ್(ಸ)ರವರು ಸಂದೇಶ ನೀಡು ತ್ತಿದ್ದ ಧರ್ಮವು ಕೇವಲ ರೀತಿ ರಿವಾಜಿನ, ಸಂಪ್ರದಾಯದ ಪುರೋಹಿತ ಧರ್ಮವಾಗಿ ರಲಿಲ್ಲ. ಬದಲಾಗಿ ಆ ಧರ್ಮವು ಸಮಾಜದಲ್ಲಿ ಒಳಿತನ್ನು ಸಂಸ್ಥಾಪಿಸುವ ಕೆಡುಕನ್ನು ವಿರೋಧಿಸುವ ಧರ್ಮವಾಗಿತ್ತು. ಪ್ರವಾದಿ ಅಂದರೆ ಕೇವಲ ಪೀಠವನ್ನು ಅಲಂಕರಿಸುವ, ಜನರ ಜೈಕಾರಗಳನ್ನು ಬಯಸುವ ವ್ಯಕ್ತಿಯಾಗಿರಲಿಲ್ಲ. ಬದಲಾಗಿ ಜನ ಸಮೂಹದ ಮಧ್ಯೆ ಜೀವಿಸುವ ವ್ಯಕ್ತಿಯಾಗಿದ್ದರು. ಪ್ರವಾದಿಯವರು(ಸ) ರೋಗಿಗಳನ್ನು ಸಂದರ್ಶಿಸಿದರೆ, ಮರಣದ ಮನೆಗೆ ಭೇಟಿ ನೀಡಿದರೆ, ಮದುವೆಯ ಮನೆಗೆ ಭೇಟಿ ನೀಡಿದರೆ, ಶ್ಮಶಾನದಲ್ಲಿ ಮೃತ ವ್ಯಕ್ತಿಗಳನ್ನು ದಫನ ಮಾಡುವ ಸಂದರ್ಭದಲ್ಲಿ, ಮಾರುಕಟ್ಟೆಯಲ್ಲಿ ಸಂದ ರ್ಭೋಚಿತವಾಗಿ ಜನರಿಗೆ ಮನಮುಟ್ಟುವ ಶೈಲಿಯಲ್ಲಿ ಉಪದೇಶ ನೀಡುತ್ತಿದ್ದರು.

ಒಮ್ಮೆ ಮಾರುಕಟ್ಟೆಯಲ್ಲಿ ಒಬ್ಬ ಅನು ಯಾಯಿಯ ಅಂಗಡಿಗೆ ಭೇಟಿ ನೀಡಿದ್ದಾಗ, ಅಲ್ಲಿನ ಧಾನ್ಯದ ರಾಶಿಗೆ ಪ್ರವಾದಿ ಕೈ ಹಾಕಿದರು. ರಾಶಿಯ ಮೇಲಿನ ಧಾನ್ಯ ಒಣಗಿ ಶುಭ್ರವಾಗಿದ್ದರೆ, ಒಳಭಾಗದ ಧಾನ್ಯ ಒದ್ದೆಯಾಗಿತ್ತು. ಈ ಬಗ್ಗೆ ಪ್ರವಾದಿ ವಿಚಾರಿಸಿದಾಗ ಆ ಅನುಯಾಯಿ ಅದನ್ನು ಸಮರ್ಥಿಸಿದರು. ನಿನ್ನೆ ದಿನ ಮಳೆ ಬಂದ ಕಾರಣ ಒದ್ದೆಯಾಗಿತ್ತು. ಒದ್ದೆ ಧಾನ್ಯವನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಆ ಕಾರಣದಿಂದ ಅದರ ಮೇಲೆ ಒಣಗಿದ, ಶುಭ್ರವಾಗಿರುವ ಧಾನ್ಯ ವನ್ನು ಹಾಕಿದೆ ಎಂದು ಹೇಳಿದರು. “ವಂಚನೆ ಮಾಡುವವ ನನ್ನವನಲ್ಲ” ಎಂದು ಪ್ರವಾದಿ(ಸ) ಹೇಳಿದರು.

ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಪರಲೋಕದ ಮೇಲಿನ ವಿಶ್ವಾಸದ ಬೆಳಕಿನಲ್ಲಿ ಒಂದು ಉತ್ತಮ ವ್ಯಾಪಾರಸ್ಥರನ್ನು ಸೃಷ್ಟಿಸುವ ಮೂಲಕ ಬಡ್ಡಿ ಆಧಾರಿತ, ವಂಚನೆ, ತೂಕ ಅಳತೆಗಳು ವಂಚನೆಗಳಿಂದ ಕೂಡಿದ ಮದೀನಾದ ಮಾರುಕಟ್ಟೆಯನ್ನು ಜಗತ್ತಿಗೇ ಮಾದರಿಯಾದ ಮಾರುಕಟ್ಟೆಯನ್ನಾಗಿ ಪ್ರತಿಪಾದಿಸಿದರು. ಪ್ರವಾದಿಯ ಹೆಚ್ಚಿನ ಅನುಯಾಯಿಗಳು ವ್ಯಾಪಾರಿಗಳಾಗಿದ್ದರು.
“ಸತ್ಯಸಂಧನಾದ ವ್ಯಾಪಾರಿ ನನ್ನೊಂದಿಗೆ ನಾಳೆ ಪರಲೋಕದಲ್ಲಿ ಸ್ವರ್ಗದಲ್ಲಿರುವನು” ಎಂದು ತನ್ನ ಅನು ಯಾಯಿಗಳಿಗೆ ಬೋಧಿಸಿದರು. ಒಟ್ಟಿನಲ್ಲಿ ಸತ್ಯವಿಶ್ವಾಸಿಯಾದ ಮದೀನಾದ ವ್ಯಾಪಾರಿ ಗಳ ಹೃದಯದಲ್ಲಿ ದೇವಭಯ, ಸತ್ಯ ಸಂಧತೆ, ಕರುಣೆಯನ್ನು ಮೂಡಿಸಿದರು.

ಧರ್ಮ ಬಾಹಿರವಾದ ವಸ್ತುಗಳನ್ನು ಮಾರುವುದಾಗಲೀ ಪಡಕೊಳ್ಳುವುದಾಗಲೀ ನಿಷಿದ್ಧವೆಂದರು. ವ್ಯಾಪಾರ ಮಾಡುವಾಗ ಬಾರಿ ಬಾರಿಗೂ ಆಣೆ ಹಾಕಬೇಡಿರಿ ಎಂದರು. “ಆಣೆ ಹಾಕುವ ಮೂಲಕ ಸರಕನ್ನು ಮಾರಾಟ ಮಾಡಬಹುದು. ಆದರೆ ಅದರಲ್ಲಿ ಸಮೃದ್ಧಿ ಇರಲಾರದು.” ವ್ಯಾಪಾರದಲ್ಲಿ ಆಣೆ ಹಾಕುವುದನ್ನು ವರ್ಜಿಸಿರಿ. ಅದರಿಂದ ವ್ಯಾಪಾರ ವೃದ್ಧಿಯಾಗ ಬಹುದು. ನಂತರ ಅದು ನಶಿಸುವುದು. ಆಣೆ ಹಾಕುವ ವ್ಯಾಪಾರಿ ಗಳು ಕೆಟ್ಟವರು ಎಂದೂ ಪ್ರವಾದಿರವರು(ಸ) ಹೇಳಿರುವರು.
ಒಬ್ಬನು ವ್ಯಾಪಾರ ಮಾಡುವಾಗ ಮತ್ತು ಖರೀದಿಸುವಾಗ ಮೃದು ನೀತಿ ಮತ್ತು ಸದಾಚಾರವನ್ನು ಪಾಲಿಸಲಿ. ಧಾನ್ಯಗಳಾಗಿದ್ದರೆ, ತೂಕ ಅಳತೆ ಸರಿಯಾಗಿ ಮಾಡಿರಿ. ಇಂತಹ ವ್ಯಾಪಾರದಲ್ಲಿ ಸಮೃದ್ಧಿ ಇದೆ ಎಂದು ಹೇಳಿದರು.
ಒಬ್ಬನು ತಾನು ಮಾರಿದ ವಸ್ತುಗಳನ್ನು ಬೇಡವೆಂದು ಮರಳಿಸಿದರೆ, ಮಾರಿದವನು ಮರಳಿ ಪಡೆದರೆ ಅಲ್ಲಾಹನು ಅಂತ್ಯ ದಿನದಂದು ಅವನ ತಪ್ಪು ಮತ್ತು ಪಾಪಗಳನ್ನು ಕ್ಷಮಿಸುವನು ಎಂದು ಹೇಳಿದರು.

ಒಬ್ಬನು ತನ್ನಲ್ಲಿಲ್ಲದ (ತನ್ನ ಒಡೆತನದಲ್ಲಿಲ್ಲದ) ವಸ್ತುವನ್ನು ಇನ್ನೊಬ್ಬನಿಗೆ ಮಾರುವುದರಿಂದ ಪ್ರವಾದಿ(ಸ) ತಡೆದಿರುವರು. ಇದರಿಂದ ನಮಗೆ ಒಂದು ವಸ್ತು ಮಾರಾಟ ಮಾಡುವಾಗ ಪಡೆಯುವಾತನ ಮುಂದೆ ಅದು ಇರಬೇಕಾದುದು ಕಡ್ಡಾಯ ವೆಂದು ತಿಳಿದು ಬರುತ್ತದೆ. ಖರೀದಿಸಿದ ಧಾನ್ಯ ಅಥವಾ ಇತರ ವಸ್ತುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಇತರರಿಗೆ ಮಾರುವುದನ್ನು ಪ್ರವಾದಿ(ಸ) ತಡೆದಿರುವರು.
ಒಬ್ಬನ ವ್ಯವಹಾರದ ಮೇಲೆ ಇನ್ನೊಬ್ಬನು ವ್ಯವಹಾರ ಮಾಡಬಾರದು. ತೋರಿಕೆಯ ಗ್ರಾಹಕನಾಗಿ ಸರಕಿನ ಬೆಲೆ ಏರಿಸುವುದನ್ನು ಪ್ರವಾದಿವರ್ಯರು(ಸ) ತಡೆದಿರುವರು.

ನಗರವಾಸಿಯು ಹಳ್ಳಿಗನ ಸರಕನ್ನು ತನ್ನ ಬಳಿಯಿರಿಸಿ ಮಾರಾಟ ಮಾಡದಿರಲಿ. ನಗರವಾಸಿಯು ತನ್ನಲ್ಲಿರಿಸಿ ಬೆಲೆಯೇರಿದ ನಂತರ ಮಾರಾಟ ಮಾಡುವೆನೆಂದು ಹೇಳಬಾರದು. ಅದರಿಂದ ಸಾಮಾನ್ಯ ಗ್ರಾಹಕನಿಗೆ ಸಂಕಷ್ಟ ಉಂಟಾಗುವುದು. ಕೃತಕ ಅಭಾವ ಉಂಟಾಗುವುದು ಹಾಗೆ ಮಾಡುವುದರಿಂದ ವಸ್ತುಗಳ ಬೆಲೆಯೂ ಏರಿಕೆಯಾಗುವುದು. ಹಳ್ಳಿಗನು ಆ ಸರಕನ್ನು ಕೂಡಲೇ ಮಾರಿದರೆ, ಅವನಿಗೆ ಕೂಡಲೇ ಹಣ ಸಿಗುತ್ತದೆ. ಅವನು ಬಾರಿ ಬಾರಿಗೂ ಸರಕನ್ನು ತಂದು ನಗರದಲ್ಲಿ ಮಾರಾಟ ಮಾಡುವುದರಿಂದ ಅವನ ವ್ಯಾಪಾರವು ಅಭಿವೃದ್ಧಿ ಹೊಂದುವುದು.
ಯಾರು ಬೆಲೆಯೇರಿಕೆಯನ್ನು ಬಯಸಿ ಆಹಾರ ಧಾನ್ಯಗಳನ್ನು ತಡೆದಿರಿಸಿ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಾನೋ ಅವನು ಅಪರಾಧಿಯಾಗಿದ್ದಾನೆ. ನಲ್ವತ್ತು ದಿನಗಳ ಕಾಲ ಧಾನ್ಯ ವನ್ನು ತಡೆದಿರಿಸಿ ನಂತರ ಅದನ್ನು ದಾನದ ರೂಪದಲ್ಲಿ ಕೊಟ್ಟರೂ, ಅದು ಅವನಿಗೆ ಪ್ರಾಯಶ್ಚಿತ್ತವಾಗಲಾರದು ಎಂದು ಹೇಳಿರುವರು.

ಉತ್ತಮವಾದ ಧಾನ್ಯವನ್ನು ಉತ್ತಮವಲ್ಲದ ಧಾನ್ಯದೊಂದಿಗೆ ಬೆರೆಸಿ ಮಾರಬಾರದೆಂದೂ, ಚಿನ್ನಕ್ಕೆ ಬದಲಾಗಿ ಚಿನ್ನ, ಬೆಳ್ಳಿಗೆ ಬದಲಾಗಿ ಬೆಳ್ಳಿಯನ್ನು, ಖರ್ಜೂರಕ್ಕೆ ಬದಲಾಗಿ ಖರ್ಜೂರವನ್ನು ಬದಲಾಯಿಸಬಾರದೆಂದು ಆದೇಶ ನೀಡಿದರು. ಮಾರಾಟ ಮಾಡುವ ಸರಕಿನಲ್ಲಿ ನ್ಯೂನತೆ ಇದ್ದರೆ ಅದನ್ನು ತಿಳಿಸಿಯೇ ಮಾರಾಟ ಮಾಡಬೇಕು. ಸರಕು ಮಾರುಕಟ್ಟೆಗೆ ತಲುಪುವುದಕ್ಕಿಂತ ಅದನ್ನು ಖರೀದಿಸಬಾರದೆಂದೂ ಪ್ರವಾದಿ(ಸ) ರವರು ಹೇಳಿದರು.

ಬಾರ್ಲಿಗೆ ಬದಲಾಗಿ ಬಾರ್ಲಿಯನ್ನು, ಗೋಧಿಗೆ ಬದಲು ಗೋಧಿಯನ್ನು ಉಪ್ಪಿಗೆ ಬದಲು ಉಪ್ಪನ್ನು, ಒಂದು ನಾಣ್ಯಕ್ಕೆ ಬದಲು-ಎರಡು ನಾಣ್ಯವನ್ನು (ಅಂದರೆ ಬಡ್ಡಿಗೆ ಹಣಕೊಟ್ಟಂತೆ) ಗುಣಮಟ್ಟ ಉತ್ತಮವಲ್ಲದ ಒಂದು ವಸ್ತುವನ್ನು ಉತ್ತಮವಾದ ಅದೇ ತರಹದ (ಗೋಧಿಗೆ ಬದಲು ಗೋಧಿ) ಖರ್ಜೂರದ ಬದಲಿಗೆ ಖರ್ಜೂರ ಬದಲಾಯಿಸಿದ್ದನ್ನು ಪ್ರವಾದಿ(ಸ) ಬಡ್ಡಿಗೆ ಸಮಾನ ಎಂದು ಹೇಳಿದ್ದಾರೆ. ಆದುದರಿಂದ ಚಿನ್ನವನ್ನು ಕೊಟ್ಟು ಗೋಧಿ ಖರೀದಿಸಬಹುದು. ಬಾರ್ಲಿ ಕೊಟ್ಟು ಗೋಧಿ ಖರೀದಿಸಬಹುದು, ಖರ್ಜೂರ ಕೊಟ್ಟು ಗೋಧಿ ಖರೀದಿಸ ಬಹುದು. ಸಮಾನವಾದುದನ್ನು ಬದಲಿಸುವುದು ನಿಷಿದ್ಧವೆಂದಿರು ವರು. ಅದೇ ರೀತಿ ಯಾವುದೇ ಫಸಲುಗಳನ್ನು ಅದು ಪಕ್ವ ವಾಗದೆ, ಅದು ಮಿಡಿಯಾವಸ್ಥೆಯಲ್ಲಿರುವ ಸಂದರ್ಭದಲ್ಲಿ ಖರೀದಿಸುವುದನ್ನೂ ನಿರಂತರ ಐದು ಅಥವಾ ಹತ್ತು ವರ್ಷ ಗಳಿಗೆ ಮುಂಗಡವಾಗಿ ಫಸಲುಗಳನ್ನು ಖರೀಸುವುದನ್ನೂ ಪ್ರವಾದಿಯವರು(ಸ) ವಿರೋಧಿಸಿದ್ದಾರೆ.

ಒಟ್ಟಿನಲ್ಲಿ ಪ್ರವಾದಿ ಮುಹಮ್ಮದ್(ಸ)ರವರು ಮದೀನಾದ ಮಾರುಕಟ್ಟೆಯನ್ನು ಬಂಡವಾಳಶಾಹಿಗಳಾದ ಯಹೂದಿಗಳ ಹಿಡಿತದಿಂದ ವಿಮೋಚಿಸಿದರು. ಅದನ್ನು ದೇವಭಯ ಸತ್ಯ-ನ್ಯಾಯ, ಪ್ರಾಮಾಣಿಕತೆ, ಕರುಣೆ ಒಳಿತಿನ ಬುನಾದಿಯಲ್ಲಿ ಪ್ರತಿಪಾದಿಸಿದರು. ಮದೀನಾದ ಮಾರುಕಟ್ಟೆಯನ್ನು ಶ್ರೀಮಂತನೂ, ಬಡವನೂ, ಹಳ್ಳಿಯವನೂ, ನಗರದವನೂ, ವ್ಯಾಪಾರಿಯೂ ಗ್ರಾಹಕನೂ, ವಿದ್ಯೆ ಇರುವವನೂ ಇಲ್ಲದವನೂ, ಯಾವುದೇ ರೀತಿಯ ವಂಚನೆಯ, ಮೋಸದ ಭಯವಿಲ್ಲದೆ ಕೊಡು-ಕೊಳ್ಳುವಿಕೆಯ ಮಾರುಕಟ್ಟೆಯಾಗಿ ಪರಿವರ್ತಿಸಿದರು.