ಮಕ್ಕಳ ಮುಖ ತೊಳಿಸದ ಹೆತ್ತವರು ಮತ್ತು ಪುಟಾಣಿ ಮಕ್ಕಳನ್ನು ರಸ್ತೆ ದಾಟಿಸುವ ಮಾದರಿ ಮದ್ರಸಾ ಅಧ್ಯಾಪಕರು

0
474

✒ಇಸ್ಮತ್ ಪಜೀರ್

ಇಂದು ವಾಟ್ಸಾಪಿನಲ್ಲಿ ಕೇರಳದ ಪೋಲೀಸ್ ಅಧಿಕಾರಿಯೊಬ್ಬರ ಭಾಷಣ ಕೇಳಿದೆ. ಆತ ಒಮ್ಮೆ ಮುಂಜಾವಿನ ಹೊತ್ತು ತನ್ನ ವಾಹನದಲ್ಲಿ‌ ಹೋಗುತ್ತಿದ್ದಾಗ ಐದೂವರೆ ವರ್ಷ ಪ್ರಾಯದ ಮಗುವೊಂದು ಆತನ ವಾಹನಕ್ಕೆ ಅಡ್ಡ ಬಂದಿತ್ತಂತೆ. ಆತ ವಾಹನ ನಿಲ್ಲಿಸಿ ವಿಚಾರಿಸಿದಾಗ ಅದು ಮದ್ರಸಾ ವಿದ್ಯಾರ್ಥಿ ಎಂದು ಅವರಿಗೆ ತಿಳಿಯಿತು.‌ಅವರು ಕೂಡಲೇ ಆ ಮಗುವನ್ನು ತನ್ನ ವಾಹನಕ್ಕೇರಿಸಿ ಆ ಮಗುವಿನ ಮನೆಗೆ ಹೋಗಿ ಅದರ ತಾಯಿಯ ಬಳಿ ವಿಚಾರಿಸಿದ್ರಂತೆ…” ನೀವು ಮಗುವಿನ ಮುಖ ತೊಳೆಸುವುದಿಲ್ವಾ…?” ಶಾಲೆಗೆ ಹೋಗುವಾಗ ಸ್ನಾನ ಮಾಡಿಸ್ತೇನಲ್ವಾ ಎಂದು ಮುಂಜಾನೆ ಮದ್ರಸಕ್ಕೆ ಹೋಗುವಾಗ ಮುಖ ತೊಳೆಸುವುದಿಲ್ಲ ಎಂದರಂತೆ.

ಇದರಲ್ಲಿ ನಾವು ಎರಡು ವಿಚಾರಗಳನ್ನು ಗಮನಿಸಬೇಕು. ಮೊದಲನೆಯದಾಗಿ ಮುಖ ತೊಳೆಯದ್ದರಿಂದ ಮಗುವಿನ ಕಣ್ಣು ಇನ್ನೂ ನಿದ್ರೆಯ ಮಂಪರಲ್ಲಿತ್ತು.

ಎರಡನೆಯದಾಗಿ ಈ ರೀತಿ ಮುಖ ತೊಳೆಸದೇ, ಹಲ್ಲುಜ್ಜಿಸದೇ ಮಗುವನ್ನು ಮದ್ರಸಕ್ಕೆ ಕಳುಹಿಸುವುದು ಮದ್ರಸಾ ಎಂದರೆ ಉಡಾಫೆ ತೋರುವ ಮನೋಭಾವ.

ನಿದ್ರೆಯ ಮಂಪರಿನಲ್ಲಿರುವ ಮಕ್ಕಳು ತೂಕಡಿಸುತ್ತಾ ರಸ್ತೆಯಲ್ಲಿ ನಡೆದಾಡುತ್ತಾರೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಎಲ್ಲೆಡೆ ಮುಂಜಾವಿನ ಹೊತ್ತು ಮಂಜು ಕವಿದಿರುತ್ತದೆ. ಕೆಲವು ಕಾಲಗಳಲ್ಲಿ ಸೂರ್ಯೋದಯವಾಗುವಾಗ ಆರು ಮುಕ್ಕಾಲರಿಂದ ಏಳು ಗಂಟೆಯವರೆಗೂ ಆಗುತ್ತದೆ. ವಾಹನ ಚಾಲಕರಿಗೆ ಮಂಜು ಕವಿದ ವಾತಾವರಣದಲ್ಲಿ, ಕತ್ತಲಲ್ಲಿ ಒಂದು ನಿರ್ದಿಷ್ಟ ಆಕೃತಿಯ ತೀರಾ ಸಮೀಪ ತಲುಪುವವರೆಗೆ ಆ ಆಕೃತಿ ಕಾಣಿಸುವುದಿಲ್ಲ.ಅಂತಹ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದಾಡುವವರ ತೀರಾ ಹತ್ತಿರ ತಲುಪಿದ ಬಳಿಕವೇ ಇಲ್ಲೊಬ್ಬರು ರಸ್ತೆ ದಾಟುತ್ತಿದ್ದಾರೆಂದೋ ನಡೆದಾಡುತ್ತಿದ್ದಾರೆಂದೋ ಗಮನಕ್ಕೆ ಬರುತ್ತದೆ. ಆದರೆ ಒಂದು ನಿರ್ದಿಷ್ಟ ವೇಗದಲ್ಲಿ ವಾಹನ ಚಲಿಸುತ್ತಿದ್ದರೆ ಬ್ರೇಕ್ ಅದುಮಿದರೂ ಕನಿಷ್ಠ ಹತ್ತು ಅಡಿ ದೂರವಾದರೂ ಸಾಗಿಯೇ ವಾಹನ ತಹಬಂಧಿಗೆ ಬರುತ್ತದೆ.

ಘನವಾಹನಗಳ ಚಾಲಕನ ಆಸನ ಎತ್ತರದಲ್ಲಿರುವುದರಿಂದ ಆತನಿಗೆ ತನ್ನ ವಾಹನದ ತೀರಾ ಹತ್ತಿರದಲ್ಲೇ ಪುಟ್ಟ ಮಕ್ಕಳು ರಸ್ತೆ ದಾಟುವುದು ಕಾಣಿಸುವುದಿಲ್ಲ. ಮಕ್ಕಳ ನಿದ್ರೆ ಬಿಡುವಂತೆ ಚೆನ್ನಾಗಿ ಮುಖ ತೊಳೆಸಿ ಕಳುಹಿಸಿದರೆ ಮಕ್ಕಳು ನಿದ್ರೆಯ ಅಮಲಲ್ಲಿ‌ ತೂಕಡಿಸುತ್ತಾ ನಡೆಯುವುದರಿಂದ ಆಗುವ ಅಪಾಯಗಳನ್ನು ತಪ್ಪಿಸಬಹುದು. ರಸ್ತೆ ದಾಟಬೇಕಾದ ಸಂದರ್ಭ ಎದುರಾಗದ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳ , ಕೊಳ್ಳ, ಗುಂಡಿಗಳಿಗೆ ನಿದ್ರೆಯ ಮಂಪರಿನಲ್ಲಿ ಮಕ್ಕಳು ಬೀಳುವ ಸಾಧ್ಯತೆಯ ಬಗ್ಗೆಯೂ ನಾವು ಯೋಚಿಸಬೇಕು. (ಕೇರಳದ ಪ್ರಸಿದ್ಧ ವಾಗ್ಮಿ ನೌಶಾದ್ ಬಾಖವಿಯವರ ಮಗುವೊಂದು ಮುಂಜಾನೆ ಮದ್ರಸಾಕ್ಕೆ ಹೋಗುವಾಗ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿ ಸ್ಮರಣಾರ್ಹ) ಇನ್ನು ಮುಖ ತೊಳೆಸದೇ, ಹಲ್ಲುಜ್ಜದೇ ಮದ್ರಸಾಕ್ಕೆ ಕಳುಹಿಸುವವರಿಗೆ ಕನಿಷ್ಠ ಶಿಷ್ಟಾಚಾರವಾದರೂ ಬೇಡವೇ…? ಇಸ್ಲಾಮ್ ಶುಚಿತ್ವಕ್ಕೆ ಅತ್ಯಂತ ಮಹತ್ವ ನೀಡಿದ ಧರ್ಮ.”ಶುಚಿತ್ವ‌ ವಿಶ್ವಾಸದ ಅವಿಭಾಜ್ಯ ಅಂಗ” ಎಂದೂ ಇಸ್ಲಾಮ್ ಸ್ಪಷ್ಟವಾಗಿ ಬೋಧಿಸುತ್ತದೆ. ಈ ನಿಟ್ಟಿನಲ್ಲಿ ಹೆತ್ತವರು ಮೇಲಿನ ಎರಡೂ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ರಸ್ತೆ ದಾಟಿಸುವ ಉಸ್ತಾದರು

ನನ್ನ ಊರು ಪಜೀರಿನ ಮದ್ರಸಕ್ಕೆ ಬರುವ 99% ಮಕ್ಕಳು ಪಜೀರಿನ ಮುಖ್ಯರಸ್ತೆ ದಾಟಿಯೇ ಬರಬೇಕು. ಮದ್ರಸಾಕ್ಕೆ ಬರುವಾಗ ತಡವಾಗುತ್ತದೆಂದು ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ತಮ್ಮ ವಾಹನಗಳಲ್ಲಿ ಡ್ರಾಪ್ ಮಾಡುವುದೂ ಇದೆ. ಕೆಲವರು ತಮ್ಮ ಮಕ್ಕಳ ಜೊತೆ ಜೊತೆಗೇ ತಮ್ಮ ಓರಗೆಯ ಮಕ್ಕಳನ್ನೂ ತಮ್ಮ ವಾಹನದಲ್ಲಿ ಕುಳ್ಳಿರಿಸಿ ತರುವುದೂ ಇದೆ.

ಆದರೆ ಮದ್ರಸಾ ತರಗತಿ ಬಿಡುವ ಹೊತ್ತಿಗೆ ನಮ್ಮೂರಿನ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗುತ್ತದೆ. ಪುಟ್ಟ ಪುಟ್ಟ ಮಕ್ಕಳು ಆಟವಾಡುತ್ತಾ ರಸ್ತೆ ದಾಟುವಾಗ ಆಗಬಹುದಾದ ಸಂಭಾವ್ಯ ಅಪಾಯಗಳನ್ನು ಗ್ರಹಿಸಿದ ನಮ್ಮೂರಿನಲ್ಲಿ ಮುಅದ್ದಿನ್ ಮತ್ತು ಮದ್ರಸಾ ಅಧ್ಯಾಪಕರೂ ಆಗಿದ್ದ ಅಡ್ಡೂರು ಬಡಕಬೈಲಿನ ಅಬ್ದುರ್ರಹ್ಮಾನ್ ಮುಸ್ಲಿಯಾರ್ ರವರು ಸುಮಾರು ಐದು ವರ್ಷಗಳ ಹಿಂದೆ ಸ್ವತಃ ತನ್ನದೇ ಮುತುವರ್ಜಿಯಿಂದ ರಸ್ತೆಯವರೆಗೆ ಬಂದು ಎಲ್ಲಾ ಮಕ್ಕಳನ್ನು ಪ್ರತೀದಿನ ರಸ್ತೆ ದಾಟಿಸುವ ಅಭ್ಯಾಸವನ್ನು ತನ್ನ ಜವಾಬ್ದಾರಿಯೆಂಬಂತೆ ಮಾಡಲು ಪ್ರಾರಂಭಿಸಿದರು.‌

ಎಲ್ಲಾ ಮಕ್ಕಳನ್ನು ಸಾಲಾಗಿ ರಸ್ತೆ ಬದಿಯವರೆಗೆ ಕರೆತಂದು ಅವರು ರಸ್ತೆಯ ಮಧ್ಯೆ ಟ್ರಾಫಿಕ್ ಪೋಲೀಸನಂತೆ ನಿಂತು ರಸ್ತೆ ದಾಟಿಸುತ್ತಿದ್ದುದನ್ನು ನೋಡುವಾಗ ಹೃದಯ ತುಂಬಿ ಬರುತ್ತಿತ್ತು. ಅವರೀಗ ಪಜೀರಿನ ಮಸೀದಿ ಬಿಟ್ಟು ಉಳ್ಳಾಲದ ಅಕ್ಕರೆಕೆರೆ ಎಂಬಲ್ಲಿ ಮದ್ರಸಾ ಅಧ್ಯಾಪಕರಾಗಿದ್ದಾರೆ.

ಅವರು ಪಜೀರಿನಿಂದ ತೆರಳಿದ ಬಳಿಕವೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಪಜೀರಿನಲ್ಲಿರುವ ಇತರ ಮದ್ರಸಾ ಅಧ್ಯಾಪಕರೂ ಅನುಸರಿಸುತ್ತಿದ್ದಾರೆ. ಅದು ಮಕ್ಕಳ ಮೇಲಿನ ಕಾಳಜಿಯಿಂದ ಮಾಡುವ ಕೆಲಸವೇ ಹೊರತು ಅವರ ಉದ್ಯೋಗದ ಭಾಗವಲ್ಲ.ಇಂತಹ ಮಾದರೀ ಸೇವೆಯನ್ನು ನೀಡಲು ಇದನ್ನು ಓದಿದ ಅಧ್ಯಾಪಕರೂ ಮಾಡಲು ಮನಸ್ಸು ಮಾಡುವರೇ..ಸ್ನೇಹಿತರೇ , ನೀವು ನಿಮ್ಮ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಡ್ರಾಪ್ ಮಾಡುವಾಗ ನಿಮ್ಮ ಓರಗೆಯ ಬಡ ಪುಟಾಣಿಗಳನ್ನೂ ಕರೆದುಕೊಂಡು ಹೋಗುವ ಹೃದಯ ವೈಶಾಲ್ಯತೆ ತೋರಿ.