ಪ್ರವಾದಿಯನ್ನು(ಸ) ನಾವೇಕೆ ನೆನೆಯಬೇಕು

0
2114

ಸಂಪಾದಕೀಯ

ಇಸ್ಲಾಮಿನ ಅಂತಿಮ ಪ್ರವಾದಿಯವರ(ಸ) ಮಾನವ ಕಲ್ಯಾಣದ ಮಹಾನ್ ಕಾರ್ಯಗಳು ಒಂದು ಲೇಖನದಲ್ಲಿ ತುಂಬಿಡಲು ಸಾಧ್ಯವಿಲ್ಲ. ಆದರೂ ಸರಳವಾಗಿ ಹೇಳುವುದಾದರೆ ಮನುಷ್ಯರ ಬದುಕನ್ನು ಇಹಪರದಲ್ಲಿ ಬೆಳಗಿದರು ಎಂದು ಹೇಳಬಹುದು. ಪ್ರವಾದಿ ಮುಹಮ್ಮದರು ಅರೇಬಿಯದ ಮಕ್ಕಾ ನಗರದಲ್ಲಿ 570ನೇ ಇಸವಿಯಲ್ಲಿ ಜನಿಸಿದರು.  ಅವರ ಜೀವನ ಎಲ್ಲರಿಗಾಗಿತ್ತು ಮತ್ತು ಅದು ಈಗಲೂ ಎಲ್ಲರಿಗಾಗಿಯೇ ನಮ್ಮ ಮುಂದಿದೆ. ಮಹಿಳೆ-ಪುರುಷ, ಬಾಲ-ಬಾಲೆಯರು, ಮುದುಕರು, ದುರ್ಬಲ-ಅನಾಥರು, ಅಸಹಾಯಕರು ನಿರ್ಗತಿಕರು, ಕಾರ್ಮಿಕರು, ಶ್ರೀಮಂತರು ಹೀಗೆ ಪ್ರವಾದಿ(ಸ) ಎಲ್ಲರ ಹಿತೈಷಿಯಾಗಿದ್ದಾರೆ. ಅವರ ಇಡೀ ಜೀವನ ಸರಳ ಮತ್ತು ಉಚ್ಚ ವಿಚಾರಗಳನ್ನೊಳಗೊಂಡಿದೆ.  ಅವರು ನುಡಿದಂತೆ ನಡೆದವರು. ಅವರು ನೀಡಿದ ಉಪದೇಶವನ್ನು ಅವರ ಜೀವನದಲ್ಲಿ ಕಾಣಬಹುದಾಗಿತ್ತು.

ಪ್ರವಾದಿವರ್ಯರ(ಸ) ಕುರಿತು ಗಾಂಧೀಜಿಯವರ ವಿಚಾರಧಾರೆ ಅರ್ಥಪೂರ್ಣವಾಗಿದೆ. “ಪಶ್ಚಿಮದ ಜಗತ್ತು ಅಂಧಕಾರದಲ್ಲಿದ್ದಾಗ ಪೂರ್ವ ದಿಗಂತದಲ್ಲಿ ಒಂದು ಉಜ್ವಲ ನಕ್ಷತ್ರ ಬೆಳಗಿತು. ಅದರಿಂದ ವಿಕಲಗೊಂಡಿದ್ದ ಜಗತ್ತಿಗೆ ಪ್ರಕಾಶ ಮತ್ತು ಶಾಂತಿ ದೊರಕಿತು. ಇಸ್ಲಾಮ್ ಮಿಥ್ಯ ಧರ್ಮವಲ್ಲ. ನನ್ನಂತೆ ಇತರರು ಕೂಡ ಅದನ್ನು ಅಧ್ಯಯನಿಸ ಬೇಕಾಗಿದೆ. ತದನಂತರ ನನ್ನಂತೆಯೇ ಪ್ರೀತಿಸುತ್ತಾರೆ. ನಾನು ಪೈಂಗಬರ್‍ರ ಜೀವನವನ್ನು ಅಧ್ಯಯನ ಮಾಡುತ್ತಿದ್ದೆ. ನನ್ನ ಬಳಿಯಿದ್ದ ಗ್ರಂಥದ ಎರಡು ಭಾಗಗಳನ್ನು ಓದಿ ಮುಗಿಸಿದೆ. ಈ ಮಹಾನ್ ಪ್ರತಿಭಾಶಾಲಿಯ ಜೀವನದ ಅಧ್ಯಯನಕ್ಕೆ ನನ್ನ ಬಳಿ ಬೇರೆ ಪುಸ್ತಕ ಇಲ್ಲವಲ್ಲ ಎಂದು ನನಗೆ ದುಃಖವಾಯಿತು. ಅಧ್ಯಯನದ ಬಳಿಕ ನನ್ನಲ್ಲಿ ಮೊದಲಿದ್ದ ಅಭಿಪ್ರಾಯಕ್ಕಿಂತಲೂ ಹೆಚ್ಚು ಇಸ್ಲಾಮ್ ತಲವಾರಿನ ಶಕ್ತಿಯಿಂದಲ್ಲ. ಇಸ್ಲಾಮಿನ ಪ್ರವಾದಿಯ ಅತ್ಯಂತ ಸರಳ ಜೀವನ, ನಿಸ್ವಾರ್ಥತೆ, ವಚನಪಾಲನೆ ಮತ್ತು ನಿರ್ಭೀತ ನಡವಳಿಕೆಯಿಂದ ವಿಶ್ವವನ್ನು ಜಯಿಸಿದೆ ಎಂದು ದೃಢವಾಗಿದೆ…”
ಹೌದು, ಗಾಂಧೀಜಿಯ ನುಡಿ ಸತ್ಯ. ಪ್ರವಾದಿ ಮಾನವತೆಯ ಉದಾತ್ತ ಮಾದರಿಯಾಗಿದ್ದರು. ಸಚ್ಚಾರಿತ್ರ್ಯದ ನಿಧಿಯಾಗಿದ್ದರು.

ಇಹಲೋಕ ಮತ್ತು ಪರಲೋಕಗಳ ಯಶಸ್ಸಿಗೆ ಅವರ ಜೀವನದಲ್ಲಿ ಮಾದರಿಯಿತ್ತು. ಹಿಂಸೆ, ಅನ್ಯಾಯ, ದೌರ್ಜನ್ಯ, ಕಪಟತನ, ಮೋಸ ಇತ್ಯಾದಿ ಮನುಷ್ಯ ಜೀವನದ ನಕಾರಾತ್ಮ ಗುಣಗಳೆಲ್ಲವೂ ಸ್ವನಾಶದ ದಾರಿಯಾಗಿದೆ. ಸಮಾಜದ ವಿನಾಶದಾರಿಯಾಗಿದೆ ಎಂದು ಕಲಿಸಿಕೊಟ್ಟರು. ಸಚ್ಚಾರಿತ್ರ್ಯ, ಸನ್ನಡತೆ, ನಿಷ್ಕಾಪಟ್ಯಗಳಿಂದ ಮೋಕ್ಷವನ್ನು  ಮತ್ತು ಸ್ವರ್ಗಧಾಮವನ್ನು ಸೇರಬಹುದು ಎಂದು ಮಾನವ ಕೋಟಿಗೆ ಕಲಿಸಿಕೊಟ್ಟರು. ಆದುದರಿಂದ ಪ್ರವಾದಿವರ್ಯರ(ಸ) ಶಿಕ್ಷಣ ಸಾರ್ವಕಾಲಿಕವೂ ನಿತ್ಯ ನೂತನವೂ ಆಗಿದೆ ಸರ್ವರಿಗೂ ಸುಲಭ ಅನುಸರಣಾದಾಯಕವೂ ಆಗಿದೆ.

ಆದರೆ, ಇತ್ತೀಚೆಗಿನ ದಶಕಗಳಿಂದ ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗುತ್ತಿದೆ. ಆದರೆ ಪ್ರವಾದಿ(ಸ) ಸಂಪೂರ್ಣವಾಗಿ ಇದರ ವಿರುದ್ಧ ನಿಂತವರು. ಪ್ರವಾದಿಯ ಮೂಲಕ ಅವತೀರ್ಣಗೊಂಡ ಪವಿತ್ರ ಕುರ್‍ಆನ್ ನಿರಪ ರಾಧಿಯ ಹತ್ಯೆ ಇಡೀ ಮಾನವಕುಲದ ಹತ್ಯೆಗೆ ಸಮಾನವೆಂದು (5:32) ಸಾರಿತು. ಜೀವಹತ್ಯೆ, ಅತ್ಯಾಚಾರ, ಅಶ್ಲೀಲತೆ, ಸ್ತ್ರೀ ಅಸುರಕ್ಷಿತತೆ ಇತ್ಯಾದಿಗಳನ್ನು ಕೆಟ್ಟ ಕಾರ್ಯಗಳೆಂದು ಅದು ಘೋಷಿಸಿತು. ಈ ದೇವಾದೇಶದ ಬೆಳಕಿನಲ್ಲಿ ಅವರು ಸಮಾಜವನ್ನು ಶುಚಿಗೊಳಿಸಿದರು. ಕ್ರೂರಿಗಳು, ವ್ಯಭಿಚಾರಿಗಳು, ಅಕ್ರಮಿಗಳೆಲ್ಲರೂ ಸುಸಂಸ್ಕೃತ, ಸಭ್ಯರಾದರು. ದುರುಳ ರೆಂದು ಕರೆಯಿಸಿ ಕೊಂಡವರೆಲ್ಲ ಪರೋಪಕಾರಿ, ಸತ್ಯವಾದಿಗಳು, ನ್ಯಾಯವಂತರಾಗಿ ಒಟ್ಟಿನಲ್ಲಿ ಸಮಾಜ ಮುಖಿಯಾಗಿ ಪರಿವರ್ತನೆಯಾದರು.

ಸಮಾಜದ ನಡುವೆ ಇಂಥ ಕ್ರಾಂತಿಕಾರಿ ಬದಲಾವಣೆ ತಂದುಕೊಟ್ಟ ಶಿಕ್ಷಣ ಅವರದು. ಹೌದು, ಮಹಾಪಾಪಗಳಲ್ಲಿ ಮಹಾಪಾಪ ದೇವನೊಂದಿಗೆ ಸಹಭಾಗಿಗೊಳಿಸುವುದು ಮತ್ತು ವಿನಾಕಾರಣ ಜೀವಹತ್ಯೆ ಮಾಡುವುದು, ತಂದೆ-ತಾಯಿಯರನ್ನು ನಿರ್ಲಕ್ಷಿಸುವುದು ಮತ್ತು ಸುಳ್ಳು ಹೇಳುವುದು ಎಂದು ಪ್ರವಾದಿವರ್ಯರು(ಸ) ಕಲಿಸಿದರು.

ಈ ಶಿಕ್ಷಣಗಳು ಅಂಧಕಾರ ಕವಿದಿದ್ದ ಅರಬರ ನಡುವೆ ಪ್ರಕಾಶವನ್ನು ಬೀರಿತು. ಅವರ ಉಪದೇಶಗಳಿಂದ ಸಮಾಜ ಸರ್ವಾಂಗೀಣ ಸುಧಾರಣೆ ಕಂಡಿತು. ಮಹಿಳೆಯರಿಗೆ, ನೆರೆಯವರಿಗೆ, ನಿರ್ಗತಿಕರಿಗೆ ಎಲ್ಲ ಮಾನವರಿಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೆ ಸುರಕ್ಷೆಯೊದಗಿಸಿತು. ಅಂದು ಅವರು ತಂದ ಶಿಕ್ಷಣ ಅರೇಬಿಯಕ್ಕೆ ಪರಿವರ್ತನೆ ತಂದುಕೊಟ್ಟಿತು. ಅಲ್ಲಿಂದ ಇತರ ದೇಶಗಳಿಗೆ ಹರಡಿಕೊಂಡಿತು. ಇಂದಿಗೂ ಪ್ರವಾದಿ ಶಿಕ್ಷಣದ ಪ್ರಕಾಶ ಜಗತ್ತಿನಾದ್ಯಂತ ಹರಡುತ್ತಲೇ ಇದೆ. ಆದ್ದರಿಂದ ದಿನಗಳು, ವರ್ಷ, ವರ್ಷಗಳೇ ಉರುಳುತ್ತಿದ್ದರೂ ಪ್ರವಾದಿ ಉಪದೇಶ- ಮಾರ್ಗದರ್ಶನಗಳು ಸರ್ವತ್ರ ಪ್ರಸಕ್ತ ಮತ್ತು ಪ್ರಶಸ್ತವಾಗುತ್ತಾ ಸಾಗುತ್ತಿದೆ. ಪ್ರವಾದಿ ಶಿಕ್ಷಣಗಳಂತೆ ನಾವು ಬದುಕೋಣ, ಅದುವೇ ಅವರಿಗೆ ಸಲ್ಲಿಸುವ ಬಹುದೊಡ್ಡ ಪ್ರೀತ್ಯಾದರವಾಗಿದೆ.