ಕ್ಯಾಂಪಸ್ ಅಧಿಕಾರಿಗಳ ಅನುಮತಿ ಇಲ್ಲದೇ ಅಲಿಘರ್ ವಿವಿ ಪ್ರವೇಶಿಸಿದ ರಿಪಬ್ಲಿಕ್ ಟಿವಿ ತಂಡ

0
331

ಹೊಸದಿಲ್ಲಿ: ಅಲಿಗಡ ಮುಸ್ಲಿಮ್ ಯುನಿವರ್ಸಿಟಿಯ ಕ್ಯಾಂಪಸ್‍ಗೆ ಬಂದ ರಿಪಬ್ಲಿಕ್ ಟಿವಿಯ ಸಿಬ್ಬಂದಿಗಳನ್ನು ತಡೆದಿದ್ದ ಘಟನೆಯಲ್ಲಿ ಹದಿನಾಲ್ಕು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಕೇಸು ಹಾಕಲಾಗಿದೆ. ಬಿಜೆಪಿ ಯುವಮೋರ್ಚಾ ಜಿಲ್ಲಾ ನಾಯಕ ಮುಕೇಶ್ ಲೋಧಿಯ ದೂರಿನಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು “ಕ್ಯಾಂಪಸ್‍ನಲ್ಲಿ ವರದಿ ಮಾಡಲು ಹೋದ ಪತ್ರಕರ್ತರಿಗೆ ಹಲ್ಲೆ ಮಾಡಿ ಪಾಕಿಸ್ತಾನ್‍ ಪರ ಘೋಷಣೆ , ದೇಶ ವಿರೋಧಿ ಘೋಷಣೆ ಕೂಗಿದ್ದಾರೆ” ಎಂದು ಕೇಸು ದಾಖಲಾಗಿದೆ. ಘಟನೆಯಲ್ಲಿ ಈಗ ಗುರುತಿಸಲು ಸಾಧ್ಯವಾಗಿರುವ ಹದಿನಾಲ್ಕು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಆರೋಪವನ್ನು ಹೊರಿಸಲಾಗಿದೆ.

ಕ್ಯಾಂಪಸ್ ನಲ್ಲಿ ವರದಿಗೆ ತೆರಳಿದ್ದ ಪತ್ರಕರ್ತೆ ನಳಿನಿ ಶರ್ಮಾ, “ಭಯೋತ್ಪಾದಕರ ವಿಶ್ವವಿದ್ಯಾನಿಲಯ” ಎಂದು ವಿಶ್ಲೇಷಿಸಿದಾಗ ವಿದ್ಯಾರ್ಥಿ ಮತ್ತು ಪತ್ರಕರ್ತರ ನಡುವೆ ವಿವಾದ ಭುಗಿಲೆದ್ದ ಘಟನೆಯು ಮಂಗಳವಾರ ಸಂಜೆ ಘಟನೆ ನಡೆದಿತ್ತು.

ಪತ್ರಕರ್ತೆ ವಿದ್ಯಾರ್ಥಿಗಳನ್ನು ಅವಮಾನಿಸುವ ರೀತಿಯಲ್ಲಿ ಪ್ರಶ್ನೆ ಕೇಳಿದ್ದರು. ಅಲಿಘರ್ ಮುಸ್ಲಿಂ ಯುನಿವರ್ಸಿಟಿ ದೇಶ ವಿರೋಧಿ ಚಟುವಟಿಕೆಗಳ ಕೇಂದ್ರ ಎಂಬ ರೀತಿಯಲ್ಲಿ ಪತ್ರಕರ್ತೆ ನಳಿನಿ ಶರ್ಮಾ ವಿದ್ಯಾರ್ಥಿಗಳೊಂದಿಗೆ ವರ್ತಿಸಿದ್ದಾರೆ ಎಂದು ಅಲಿಘರ್ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಲ್ಮಾನ್ ಇಮ್ತಿಯಾಝ್ ತಿಳಿಸಿದ್ದಾರೆ.

“ವಿದ್ಯಾರ್ಥಿಗಳೊಂದಿಗೆ ನಿಮ್ಮ ಪತ್ರಿಕಾ ರೀತಿಯು ಮರ್ಯಾದೆಯುತ ವಾಗಿರಬೇಕು. ಕ್ಯಾಂಪಸ್ ನಲ್ಲಿ ವರದಿ ಮಾಡಲು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ಪೂರ್ವ ಅನುಮತಿ ಪಡೆದಿರಬೇಕೆಂದು” ತಿಳಿಸಿದಾಗ ಪತ್ರಕರ್ತೆ ಗರಂ ಆಗಿದ್ದು “ವಿದ್ಯಾರ್ಥಿಗಳ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವೆ” ಎಂದು ಬೆದರಿಸಿದ್ದು ತದನಂತರ ವಾಗ್ವಾದ ನಡೆದಿತ್ತು.

ಬಿಜೆಪಿ ಯುವ ಮೋರ್ಚಾ ನಾಯಕ ಮುಖೇಶ್ ಲೋಧಿ ಘರ್ಷಣೆ ನಡೆಯುವಾಗ ಕ್ಯಾಂಪಸ್ಸಿನಲ್ಲಿದ್ದರು. ವಿದ್ಯಾರ್ಥಿಗಳು ತಮ್ಮ ವಾಹನಕ್ಕೆ ಮುತ್ತಿಗೆ ಹಾಕಿ ತನಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನುಮತಿಯಿಲ್ಲದೆ ಪತ್ರಕರ್ತರು ಕ್ಯಾಂಪಸ್‍ಗೆ ಪ್ರವೇಶಿಸಿದ್ದಾರೆ. ಕಾನೂನು ವ್ಯವಸ್ಥೆ ಕೆಡಲು ಕಾರಣವಾಗಿದೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಎರಡು ದೂರು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ನಿಂದಿಸಿದ ಆರೋಪ ನಿರಾಧಾರವಾಗಿದ್ದು ಅಪಹಾಸ್ಯಕರವಾಗಿ ಏನೂ ಕೇಳಿಲ್ಲ ಎಂದು ನಳಿನಿ ಶರ್ಮ ಟ್ವೀಟ್ ಮಾಡಿದ್ದಾರೆ.