ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಮುತ್ತಲಾಕ್, ಅಸ್ಸಾಂ ನಾಗರಿಕ ಮಸೂದೆ ಮಂಡಿಸುವಲ್ಲಿ ಕೇಂದ್ರ ಸರಕಾರ ವಿಫಲ

0
243

ಹೊಸದಿಲ್ಲಿ: ಬಜೆಟ್ ಸಮ್ಮೇಳನಕ್ಕೆ ಸೇರಿದ್ದ ರಾಜ್ಯಸಭಾ ಅಧಿವೇಶನವನ್ನು ಅನಿಶ್ಚಿತ ಕಾಲಕ್ಕೆ ಮುಂದೂಡಲಾಗಿದೆ. ಆದ್ದರಿಂದ ಕೇಂದ್ರ ಸರಕಾರಕ್ಕೆ ವಿವಾದಿತ ಎರಡು ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸು ಮಾಡಲು ಸಾಧ್ಯವಾಗಿಲ್ಲ. ಲೋಕಸಭೆಯಲ್ಲಿ ಪಾಸಾಗಿದ್ದ ವಿವಾದಿತ ಮುತ್ತಲಾಕ್ ಮಸೂದೆ ಮತ್ತು ಅಸ್ಸಾಂ ನಾಗರಿಕತೆ ಮಸೂದೆ ರಾಜ್ಯಸಭೆಯಲ್ಲಿ ಮಂಡಿಸಲು ಕೂಡ ಅವಕಾಶ ದೊರಕಿಲ್ಲ.

ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್‍ರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿದುದನ್ನು ವಿರೋಧಿಸಿ ಸಮಾಜವಾದಿ ಪಾರ್ಟಿ ಸಂಸದರು ಮತ್ತು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿ ಪ್ರತಿಭಟನೆ ನಡೆಸಿದ್ದರಿಂದ ಸರಕಾರಕ್ಕೆ ಅಸ್ಸಾಂ ನಾಗರಿಕ ಮಸೂದೆಯನ್ನು ಮಂಡಿಸಲು ಸಾಧ್ಯವಾಗಿಲ್ಲ.ಇದಲ್ಲದೇ ವಿವಿಧ ವಿಷಯಗಳನ್ನೆತ್ತಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ್ದರಿಂದ ಮುತ್ತಲಾಕ್ ಮಸೂದೆಯನ್ನು ರಾಜ್ಯಸಭೆಗೆ ತರಲು ಕೇಂದ್ರ ಸರಕಾರದಿಂದ ಸಾಧ್ಯವಾಗಿಲ್ಲ.

ವಿವಾದಿತ ಮುತ್ತಲಾಕ್ ನಿಷೇಧ ಮಸೂದೆಯು ಎಲ್ಲ ವಿರೋಧವನ್ನು ಲೆಕ್ಕಿಸದೆ 11ರ ವಿರುದ್ದ 245 ಮತಗಳ ಅಂತರದಲ್ಲಿ ಪಾರ್ಲಿಮೆಂಟಿನಲ್ಲಿ ಪಾಸಾಗಿತ್ತು. ಒಂದೇ ಬಾರಿ ಮೂರು ತಲಾಕ್ ನೀಡಿ ಮದುವೆಯನ್ನು ಮುರಿಯುವ ಸಂಪ್ರದಾಯವನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿದ ಮಸೂದೆಯಲ್ಲಿ ಕ್ರಿಮಿನಲ್ ಅಪರಾಧ ಮತ್ತು ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಮಸೂದೆಯನ್ನು ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ಸಂರಕ್ಷಣೆ ಮಸೂದೆ-2017 ಎಂದು ಹೆಸರಿಸಲಾಗಿದ್ದು ಮಸೂದೆ ಕಾನೂನಾಗಿ ರೂಪಾಂತರ ಗೊಂಡರೆ ಮುತ್ತಲಾಕ್ ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಲಿದ್ದು ಪತಿಯು ಶಿಕ್ಷೆ ಅನುಭವಿಸುವ ಜೊತೆಗೆ ಪತ್ನಿ,ಮಕ್ಕಳಿಗೆ ಜೀವನಾಂಶ ನೀಡಬೇಕಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳ ಮುಸ್ಲಿಮೇತರರಿಗೆ ಭಾರತೀಯ ನಾಗರಿಕತೆ ನೀಡುವ ಮಸೂದೆಯು ಪ್ರತಿಪಕ್ಷಗಳ ಭಾರೀ ವಿರೋಧದಲ್ಲಿ ಪಾರ್ಲಿಮೆಂಟಿನಲ್ಲಿ ಪಾಸಾಗಿತ್ತು. ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಈಶಾನ್ಯ ರಾಜ್ಯಗಳ ಬಿಜೆಪಿ ಸಖ್ಯಪಕ್ಷಗಳು ಮತ್ತು ಕಾಂಗ್ರೆಸ್, ಸಿಪಿಎಂ ವಿರೋಧಿಸಿದ್ದವು. 1955ರ ಪೌರ ಕಾನೂನಿನಲ್ಲಿ ತಿದ್ದುಪಡಿ ತಂದು ನಾಗರಿಕತೆ(ತಿದ್ದುಪಡಿ) ಮಸೂದೆ 2019ನ್ನು ಸರಕಾರ ತಂದಿದೆ. ನೆರೆಯ ದೇಶಗಳಿಂದ ಪೀಡನೆಗೆ ತುತ್ತಾಗಿ ಪಲಾಯನ ಮಾಡಿ ಬರುವ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬುದ್ಧ,ಜೈನ, ಪಾರ್ಸಿ, ಕ್ರೈಸ್ತ ವಿಭಾಗಗಳಿಗೆ ರಕ್ಷಣೆ ನೀಡುವ ಕಾನೂನನ್ನು ಜಾರಿಗೆ ತರಲು ಮೋದಿ ಸರಕಾರ ಬಯಸಿತ್ತು.