ಆಕೆ ಮಗುವಿಗೆ ಮುತ್ತಿಕ್ಕಿದಳು, ಅಮ್ಮ ಸಿಟ್ಟಾದಳು: ದುಬೈ ಏರ್ ಪೋರ್ಟಲ್ಲಿ ನಡೆದ ನೈಜ ಘಟನೆ

0
2306

ಅಸ್ಮಾ

ದುಬೈ ಏರ್ಪೋರ್ಟೆಂದರೆ ಜನನಿಬಿಡ ಸ್ಥಳ. ದಿನವೂ ಸಾವಿರಾರು ರೀತಿಯ ಜನರನ್ನು ಕಾಣುವ ಅವಕಾಶ ಅಲ್ಲಿರುವ ನನ್ನಂತಹ ಉದ್ಯೋಗಿಗಳಿಗಿರುತ್ತದೆ. ಬೇರೆ ಬೇರೆ ರೀತಿಯ ಅನುಭವಗಳು. ಕೆಲವೊಮ್ಮೆ ಸಿಟ್ಟು ಬರಿಸುವ, ಒಂದೊಮ್ಮೆ ನಕ್ಕುನಗಿಸುವ ಹಾಗೂ ಮನಸಿಗೆ ನೋವಾಗಿಸುವ ಘಟನೆಗಳು ಸಾಮಾನ್ಯವೆಂಬಂತೆ ಘಟಿಸುತ್ತಲೇ ಇರುತ್ತವೆ. ಹೆಚ್ಚಾಗಿ ಪ್ರತಿಯೊಬ್ಬರ ಚಲನವಲನಗಳನ್ನು ಗಮನಿಸುತ್ತಿರುವ ನನಗೆ ಈಗೀಗ ಭಾವನೆಗಳೇ ಸತ್ತುಹೋಗಿವೆಯೇನೋ ಎಂದನಿಸುವಷ್ಟು ಭಾವನಾರಹಿತಳಾಗಿ ಇರಲೂ ಕಲಿಸಿದೆ ಈ ಸ್ಥಳ.
ಮೊನ್ನೆ ಕೌಂಟರಿನಲ್ಲಿ ಕೂತಿದ್ದೆ. ಒಬ್ಬ ವಯಸ್ಸಾದ ಮಹಿಳೆ ಹಾಗೂ ಮೂವತ್ತೈದರ ಆಸುಪಾಸಿನ ಪುರುಷ ನನ್ನ ಪಕ್ಕದ ಕೌಂಟರಿಗೆ ಎಕ್ಸೆಸ್ ಬ್ಯಾಗೇಜ್ ನ ಹಣ ಕಟ್ಟಲೆಂದು ಬಂದಿದ್ದರು. ತುಂಬ ವಯಸ್ಸಾಗಿದ್ದ ಆ ಮಹಿಳೆಯ ಮುಖವಂತೂ ನೋವುಂಡು ಮಾಗಿದಂತೆ ತೋರುತ್ತಿತ್ತು. ಎಲ್ಲ ನೋವುಗಳನ್ನೂ ಅನುಭವಿಸಿ ಸುಸ್ತಾದಂತಹ ಮುಖಭಾವವಿತ್ತು. ಅದೇ ಸಮಯ ಒಬ್ಬ ಯುವತಿ ನನ್ನ ಕೌಂಟರ್ ಬಳಿ ಬಂದಿದ್ದಳು. ಕೈಯ್ಯಲ್ಲಿ ಒಂದೆರಡು ವರ್ಷದ ಮುದ್ದಾದ ಗಂಡುಮಗುವೊಂದಿತ್ತು. ಆ ಯುವತಿಯು ಮಗುವನ್ನೆತ್ತಿಕೊಂಡು ಅದಕ್ಕೆ ಕಚಗುಳಿಯಿಟ್ಟು ನಗಿಸುತ್ತಾ ಮುದ್ದಿಸುತ್ತಿದ್ದಳು. ನನ್ನ ಕಣ್ಣುಗಳು ಆ ಇಬ್ಬರು ಮಹಿಳೆಯರನ್ನೂ ಗಮನಿಸುತ್ತಿತ್ತು. ಯುವತಿಯು ಮಗುವನ್ನು ಮುದ್ದಿಸುವುದನ್ನು ಕಂಡಾಗ ಯಾರ ಮುಖದಲ್ಲಾದರೂ ಅಪ್ರಯತ್ನವಾಗಿ ನಗುಮೂಡಬೇಕಿತ್ತು. ವೃದ್ಧೆಯ ಬಳಿಯಲ್ಲಿದ್ದ ಯುವಕನೂ ಅಮ್ಮ ಮಗನ ಆಟಕ್ಕೆ ಮುಗುಳ್ನಕ್ಕರು. ನಮಗೂ ಒಂಥರಾ ಸಂತಸವಾಗಿತ್ತು. ನಾನಾಗ ಆ ವೃದ್ಧೆಯ ಮುಖಭಾವವನ್ನು ಗಮನಿಸಿದೆ, ಅದೊಂಥರಾ ಭಾವನಾರಹಿತವಾಗಿತ್ತು. ಎಷ್ಟೇ ಮಾಡಿದರೂ ಇಷ್ಟೇ ಎಂಬಂತಹ ನಿರಾಶಾದಾಯಕ ಮುಖಭಾವ.
‘ಹುಮ್’ ಎಂದು ನಿಟ್ಟುಸಿರು ಬಿಟ್ಟ ಆ ತಾಯಿಯ ಮನದಲ್ಲಿ ಏನಿರಬಹುದು ಎಂಬ ಕುತೂಹಲ ನನ್ನಲ್ಲಿ ಮೂಡಿ ಮಾಯವಾಯ್ತು. ಆದರೆ ಅನಾವಶ್ಯಕವಾಗಿ ಯಾರೊಂದಿಗೂ ಹರಟೆಹೊಡೆಯುವ ಅವಕಾಶ ನಮಗಿಲ್ಲ. ಆದರೆ ಆ ಮಗರಾಯ ಅಮ್ಮನ ಮುಖ ನೋಡಿ ‘ಯಾಕೆ ಏನಾಯ್ತು? ನೀನು ಹೀಗೆ ದುರುಗುಟ್ಟಿಕೊಂಡು ನೋಡಿದ್ರೆ ಅಮ್ಮ ಮಗನಿಗೆ ದೃಷ್ಟಿಯಾದೀತು’ ಅಂದ. ಆಗ ಆ ವೃದ್ಧೆ ‘ಹೌದು ನಮಗೂ ದೃಷ್ಟಿಯಾಗಿರಬೇಕು‌. ನಾನು ನಿನ್ನನ್ನು ಇದಕ್ಕಿಂತಲೂ ಹೆಚ್ಚಿಗೆ ಮುದ್ದಿಸ್ತಾ ಇದ್ನಲ್ಲ, ಅಪ್ಪ ಇಲ್ಲದಿದ್ರೂ ಸುಖವಾಗಿ ಬೆಳೆಸಿದ್ನಲ್ಲ. ಆದರೀಗ ಹೆತ್ತ ಮಕ್ಕಳಿಗೆ ಭಾರವಾಗಿ ಬದುಕ್ತಾ ಇದ್ದೀನಲ್ಲ, ಬಹುಷಃ ಯಾರದೋ ಕೆಟ್ಟದೃಷ್ಟಿ ಬಿದ್ದಿರ್ಬೇಕು’ ಅಂದರು ಹಿಂದಿಯಲ್ಲಿ. ‘ಪಾಪ ಆ ತಾಯಿ ಮಗುವಿಗೆ ಯಾರ ದೃಷ್ಟಿಯೂ ತಾಕದಿರಲಿ ಇಂದು ಅವಳು ಆ ಮಗುವನ್ನು ಮುದ್ದಿಸುವಂತೆ, ಲಾಲಿಸುವಂತೆ ಆ ಮಗು ದೊಡ್ಡವನಾದ ಮೇಲೆ ಆ ತಾಯಿಯನ್ನೂ ಹಾಗೇ ಲಾಲಿಸಲಿ ಅಂದರು ಸುತ್ತಮುತ್ತಲಿನವರಿಗೆ ಕೇಳಿಸ್ತಾ ಇದೆ ಎಂಬ ಪರಿಜ್ಞಾನವಿಲ್ಲದೆ. ಮಗನ ಮುಖ ಮಂಕಾಯ್ತು. ಬಹುಶಃ ತನ್ನ ತಾಯಿಯ ಆರೈಕೆಯಲ್ಲಿ ತನ್ನಿಂದ ತಪ್ಪಾಗಿದೆ ಎಂಬ ಭಾವನೆ ಮೂಡಿತೋ ಏನೋ, ಆತ ಆ ವೃದ್ಧೆಯ ಕೈಹಿಡಿದು ತುಟಿಗೊತ್ತಿಕೊಂಡು,
‘ಅಮ್ಮ, ಇನ್ಯಾವತ್ತೂ ನಿನ್ನ ನೋಯಿಸಲ್ಲ, ಇದೇ ಕೊನೆ. ಮುಂದೆಂದೂ ನೀವು ಅವರಿವರ ಮನೆ ಎಂದು ಸುತ್ತಾಡಲು ಅವಕಾಶ ನೀಡಲ್ಲ. ನಿಮ್ಮಾಣೆ ಎಂದ ಭಾವುಕನಾಗಿ. ಆ ವೃದ್ಧೆಯು ಸಂತಸದಿಂದ ಮಗನ ತಲೆನೇವರಿಸಿ ಸುಖೀ ರಹೋ ಬೇಟಾ ಎಂದಾಗ ಅಮ್ಮ ಮಗನ ಪುನರ್ಮಿಲನದ ಅಪೂರ್ವ ಕ್ಷಣಕ್ಕೆ ಒಂದರ್ಥದಲ್ಲಿ ನಾವು ಸಾಕ್ಷಿಯಾಗಿದ್ದೆವು. ಒಂದು ಚಿಕ್ಕ ಘಟನೆ, ಹಾಗೂ ಅಮ್ಮನ ಮನತೆರೆದ ಮಾತುಗಳು ಬದಲಾವಣೆಯೊಂದಕ್ಕೆ ಮುನ್ನುಡಿಯಾಗಿತ್ತು. ಅಮ್ಮನ ಕೈಯ್ಯನ್ನು ಹಿಡಿದುಕೊಂಡು ಪ್ರೀತಿಯಿಂದ ನಡೆದುಹೋದಾಗ ಇದಕ್ಕೆಲ್ಲಾ ಪ್ರೇಕ್ಷಕರಾದ ನಮ್ಮ ಮನವೂ ತುಂಬಿತ್ತು. ಕಾರಣೀಭೂತಳಾದ ಆ ಯುವತಿಯು ಸಂತಸದಿಂದ ತನ್ನ ಕಂದನನ್ನು ತಬ್ಬಿಹಿಡಿದು ನಗುತ್ತಾ ನಡೆದಳು.