ಅಭಿಮನ್ಯುವಿನ ಹಿನ್ನೆಲೆಯಲ್ಲಿ: ಕ್ಯಾಂಪಸ್ ಚಳುವಳಿಗಳು ಸಾಗುತ್ತಿರುವ ಹಾದಿ ಮತ್ತು ಸಾಗಬೇಕಾದ ಹಾದಿ- ಸಂವಾದ

0
2273

ಇದು ಸಂವಾದವೊಂದರ ಆರಂಭ.

ಎಸ್ ಎಫ್ ಐ ( ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯ) ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅಭಿಮನ್ಯು ಎಂಬ ವಿದ್ಯಾರ್ಥಿಯನ್ನು ಕೇರಳದ ಮಹರಾಜಾಸ್ ಕಾಲೇಜಿನಲ್ಲಿ ವಾರಗಳ ಹಿಂದೆ ಹತ್ಯೆ ಮಾಡಲಾಗಿತ್ತು. ಆ ಹತ್ಯೆಯ ಆರೋಪದಲ್ಲಿ ಸಿ ಎಫ್ ಐ (ಕ್ಯಾ೦ಪಸ್ ಫ್ರ೦ಟ್ ಆಫ್ ಇಂಡಿಯ) ವಿದ್ಯಾರ್ಥಿ ಸಂಘಟನೆಯ ಹಲವರನ್ನು ಬಂಧಿಸಲಾಗಿದೆ. ಗೋಡೆ ಬರಹದ ವಿಚಾರದಲ್ಲಿ ಹುಟ್ಟಿಕೊಂಡ ವಿವಾದವು ಹತ್ಯೆಯ ತನಕ ತಲುಪಿತು ಎಂದು ಹೇಳಲಾಗುತ್ತಿದೆ. ಈ ಹತ್ಯೆಯ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಎಸ್ ಎಫ್ ಐ, ಸಿ ಎಫ್ ಐ ಮತ್ತು ಎಸ್ ಐ ಓ ವಿದ್ಯಾರ್ಥಿ ಸಂಘಟನೆಗಳ ನಡುವೆ ಚರ್ಚೆಯೂ ನಡೆದಿದೆ. ಆ ಚರ್ಚೆಯನ್ನು ವೈಚಾರಿಕ ನೆಲೆಯಲ್ಲಿ ಮುಂದುವರಿಸುವ ಪ್ರಯತ್ನ ಇಲ್ಲಿನದು. ಕ್ಯಾ೦ಪಸ್ ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಅಗತ್ಯ ಇದೆಯೇ, ಇದ್ದರೆ ಅದು ಹೇಗಿರಬೇಕು, ಬೇಡವೆಂದರೆ ಯಾಕೆ, ವಿದ್ಯಾರ್ಥಿಗಳ ನಡುವೆ ದ್ವೇಷ, ವೈರತ್ವವನ್ನು ಪ್ರಚೋದಿಸುವ ಮಟ್ಟಕ್ಕೆ ವಿದ್ಯಾರ್ಥಿ ಸಂಘಟನೆಗಳು ತಲುಪಿರುವುದು ಯಾವ ಕಾರಣದಿಂದ, ಇದಕ್ಕೆ ಪರಿಹಾರಗಳೇನು… ಇತ್ಯಾದಿಗಳ ಸುತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿನದು. ಈ ಚರ್ಚೆಗೆ ಎಸ್ ಐ ಓ ರಾಷ್ಟ್ರೀಯ ಕಾರ್ಯದರ್ಶಿ ಲಬೀದ್ ಆಲಿಯ ಇಲ್ಲಿ ಚಾಲನೆಯನ್ನು ನೀಡಿದ್ದಾರೆ… ಸಂಪಾದಕ

ಲಬೀದ್ ಆಲಿಯಾ

ವಿದ್ಯಾರ್ಥಿ ರಾಜಕೀಯ ಎಂದಿಗೂ ಹಿಂಸೆಯ ಬುನಾದಿಯಲ್ಲಾಗಬಾರದು. ದ್ವೇಷ ಮತ್ತು ರಕ್ತದ ಭಾಷೆ ಅವರಿಗೆ ಅನ್ಯವಾಗಿರಬೇಕು. ಹಾಗಾದರೆ ಮಾತ್ರ ನಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಸ್ನೇಹ ಮತ್ತು ಸೌಹಾರ್ದದ ತಳಹದಿಯಲ್ಲಿ ಕಟ್ಟುತ್ತಿದ್ದೇವೆ ಎಂಬುದನ್ನು ಖಾತ್ರಿಪಡಿಸಬಹುದು. ಫ್ರೆಂಚ್ ಕ್ರಾಂತಿ, ಇರಾನ್ ಕ್ರಾಂತಿ ಅಷ್ಟೇ ಏಕೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ನರನಾಡಿಗಳಲ್ಲಿ ವಿದ್ಯಾರ್ಥಿ ಶಕ್ತಿ ಇತ್ತು ಎಂಬ ವಾಸ್ತವವನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಅದನ್ನು ಕ್ರಿಯಾತ್ಮಕ ರೂಪದಲ್ಲಿ ಮುನ್ನಡೆಸಬೆಕೆಂದಷ್ಟೇ. ಎನ್.ಡಿ.ಟಿವಿಯ ನಿರೂಪಕ ರವೀಶ್ ಕುಮಾರ್ ಹೇಳುವ ಒಂದು ಮಾತು ಇಲ್ಲಿ ಉದ್ದರಿಸಲು ಇಷ್ಟ ಪಡುತ್ತೇನೆ. “ಸಮಾಜಘಾತುಕ ಶಕ್ತಿಗಳು ಒಬ್ಬ ಅಮಾಯಕನನ್ನು ಕೊಂದಾಗ ಸಾಮಾಜಿಕ ತಾಣಗಳಲ್ಲಿ ಕೆಲವು ಹುಡುಗರು ಅದನ್ನು ಸಮರ್ಥಿಸುತ್ತಾರೆ. ನಾನು ಅವರ ತಂದೆ ತಾಯಿಯರೊಂದಿಗೆ ಕಳಕಳಿಯಿಂದ ವಿನಂತಿಸುವುದೆನೆಂದರೆ, ನಿಮ್ಮ ಮಗ ಸಾಮಾಜಿಕ ತಾಣಗಳಲ್ಲಿ ಏನು ಬರೆಯುತ್ತಾನೆ, ಯಾವುದನ್ನು ಸಮರ್ಥಿಸುತಾನೆ ಎಂಬುವುದನ್ನು ಈಗಲಾದರೂ ಅರಿಯುವ ಪ್ರಯತ್ನ ಮಾಡಿರಿ. ಇಲ್ಲದಿದ್ದರೆ ಒಂದು ದಿನ ಇದೇ ಕೃತ್ಯವನ್ನು ಮಾಡಿ ಆತ ನಿಮ್ಮ ಮುಂದೆ ನಿಂತಾಗ ನೀವು ಅಸಹಾಯಕರಾಗುವಿರಿ.”

ಅಭಿಮನ್ಯು ಒಬ್ಬ ಆದಿವಾಸಿ ಹುಡುಗ. ಮಹರಾಜಾಸ್ ಕ್ಯಾಂಪಸ್‍ನ ಅಚ್ಚುಮೆಚ್ಚಿನ ನಾಯಕ. ಒಬ್ಬ ಆದಿವಾಸಿ ಹುಡುಗನೆಂಬ ನೆಲೆಯಲ್ಲಿ ಆತನ ಹೋರಾಟವನ್ನು ನಾವು ಅಭಿನಂದಿಸಲೇಬೇಕು. ಆತನ ರಕ್ತಕ್ಕೆ ಯಾವುದೇ ಬದಲಿಲ್ಲ. ಆತನ ತಾಯಿಯ ಕಣ್ಣೀರಿಗೆ ಯಾವುದೇ ಪರಿಹಾರವಿಲ್ಲ. ಮಾತ್ರವಲ್ಲ ಒಂದು ಕುಟುಂಬದ ಒಡೆದು ಹೋದ ಕನಸುಗಳನ್ನು ಯಾರಿಂದಲೂ ಜೋಡಿಸಲು ಸಾಧ್ಯವಿಲ್ಲ. ಪ್ರಿನ್ಸಿ ಪಾಲ್‍ರವರ ದೂರಿನ ಮೇರೆಗೆ ಮಹರಾಜಾಸ್ ನಲ್ಲಿ ಎಡಪಂಕ್ತೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಇರುವ ಹಾಸ್ಟೇಲ್ ರೂಮಿನಿಂದ ಮಾರಕ ಆಯುಧಗಳನ್ನು ಪೊಲೀಸರು ಈ ಹಿಂದೆ ವಶಪಡಿಸಿಕೊಂಡ ವಾರ್ತೆ ನಮಗೆಲ್ಲರಿಗೂ ತಿಳಿದಿದೆ. ನಂತರ ದೂರು ನೀಡಿದ ಪ್ರಾಂಶುಪಾಲೆಯ ಕುರ್ಚಿಗೆ ಬೆಂಕಿ ಹಚ್ಚಿ ಇದೇ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಈ ಘಟನೆಗಳು ಇಂದು ಮೊನ್ನೆ ನಡೆದ ಬೆಳವಣಿಗೆಯಲ್ಲ. ಬಲಪಂಥಿಯರಾಗಿರಲಿ ಎಡಪಂಥಿಯರಾಗಿರಲಿ ತಮಗೆ ಆಧಿಪತ್ಯವಿರುವ ಕಡೆಗಳಲ್ಲಿ ಇನ್ನೊಂದು ಸಂಘಟನೆಗೆ ಅವಕಾಶ ಕೊಡುತ್ತಿರಲಿಲ್ಲವೆಂಬ ಮಾತಿನಲ್ಲಿ ಸತ್ಯಾಂಶವಿದೆ. ವೈಚಾರಿಕವಾಗಿ ಸಂವಾದಿಸುವ, ಸೈದ್ಧಾ೦ತಿಕವಾಗಿ ಭಿನ್ನತೆ ತಾಳುವ, ಪರಸ್ಪರ ಆರೋಗ್ಯಕರ ಚರ್ಚೆಗಳನ್ನು ಹುಟ್ಟುಹಾಕುವ ಕ್ಯಾಂಪಸ್‍ಗಳು ಬೆಳೆದು ಬರಬೇಕು. ಪ್ರಜಾತಾಂತ್ರಿಕ ವ್ಯವಸ್ಥೆಯು ನಮಗೆ ಕೊಟ್ಟಿರುವ ಎಲ್ಲಾ ಕಾನೂನು ಬದ್ಧವಾದ ಸ್ವಾತಂತ್ರ್ಯವನ್ನು ಪರೀಕ್ಷಿಸುವ ವೇದಿಕೆಯಾಗಬೇಕು ನಮ್ಮ ಶಾಲಾ ಕಾಲೇಜುಗಳು. ಈ ನಿಟ್ಟಿನಲ್ಲಿ ಜೆ.ಎನ್.ಯು ಕ್ಯಾಂಪಸ್ ಒಂದು ಒಳ್ಳೆಯ ಉದಾಹರಣೆಯಾಗಿತ್ತು. ಆದರೆ ಇತ್ತೀಚೆಗೆ ಅದೂ ಕೂಡ ನಮಗೆ ನಷ್ಟವಾಗುತ್ತಿದೆ. ಅಲ್ಲೂ ಇಂದು ಹೊಡೆದಾಟ ಸಾಮಾನ್ಯವಾಗಿ ಬಿಟ್ಟಿದೆ. ನಜೀಬ್ ಅಹ್ಮದ್ ಎಂಬ ವಿದ್ಯಾರ್ಥಿಯ ನಾಪತ್ತೆ ಪ್ರಕರಣ ಅದಕ್ಕೊಂದು ಸಣ್ಣ ಉದಾಹರಣೆ. ಜೆ.ಎನ್.ಯು ಕ್ಯಾಂಪಸ್‍ನ ಗೋಡೆಯಲ್ಲಿ “ಪಾಕಿಸ್ತಾನ್ ಮುಲ್ಲ ಗೋ ಬ್ಯಾಕ್” ಎಂದು ಬರೆದಿಟ್ಟಿರುವುದನ್ನು ನಿಮಗೆ ಕಾಣಬಹುದು. ಇವೆಲ್ಲವೂ ಕ್ಯಾಂಪಸ್ ನೊಳಗೆ ಕೋಮುದ್ರುವೀಕರಣ ರಾಜಕೀಯ ನಡೆದಿದೆ ಎಂಬುವುದಕ್ಕೆ ಕೆಲವೊಂದು ಉದಾಹರಣೆಗಳು ಮಾತ್ರ. ಬಹುಮುಖಿ ಚಿಂತನೆಗಳನ್ನು ಸಹನೆಯಿಂದ ಕಾಣುವ ಕಣ್ಣು, ಕೇಳುವ ಕಿವಿ ಮತ್ತು ಗ್ರಹಿಸುವ ಮನಸ್ಸಿನ ಕೊರತೆಯನ್ನು ಇಂದಿನ ಯುವ ವಿದ್ಯಾರ್ಥಿ ತಲೆಮಾರು ಅನುಭವಿಸುತ್ತಿದೆ. ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಕ್ಯಾಂಪಸ್‍ಗಳನ್ನು ಎಲ್ಲಾ ಸರಕಾರವು ಭಯಪಟ್ಟಿತ್ತು. ರೊಹಿತ್ ವೆಮುಲ ಎಂಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಅದು ನೂರರಷ್ಟು ಸತ್ಯವಾದ ಮಾತು. “ನನ್ನ ಜನನವೇ ಅತ್ಯಂತ ದೊಡ್ಡ ಅಪರಾಧ” ಎಂದು ಒಬ್ಬ ವ್ಯಕ್ತಿ ಒಂದು ಸ್ವೇಚಾಧಿಪತ್ಯ ದೇಶದಲ್ಲಿ ಹೇಳಿದರೆ ಅಷ್ಟೊಂದು ಆಶ್ಚರ್ಯಪಡಬೇಕಾಗಿಲ್ಲ. ಆದರೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ದೇಶದಲ್ಲಿ ಒಬ್ಬ ವಿದ್ಯಾರ್ಥಿ ವ್ಯವಸ್ಥೆಯ ದಬ್ಬಾಳಿಕೆಗೆ ಮನನೊಂದು ಈ ರೀತಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವುದಾದರೆ ಅದರ ಹಿಂದಿನ ಕಾಣದ ಕೈಗಳನ್ನು ನಿಮಗೆ ಉಹಿಸಬಹುದಷ್ಟೇ. ಇಂದು ಕ್ಯಾಂಪಸ್ ಗಳಲ್ಲಿ ಇಂತಹ ದೌರ್ಜನ್ಯಗಳು ಸಾಮಾನ್ಯವಾಗಿ ಬಿಟ್ಟಿದೆ. ವಿರೋಧಿಸುವ, ಪ್ರತಿಭಟಿಸುವ ಮತ್ತು ಪ್ರಶ್ನಿಸುವ ಕ್ರಿಯಾತ್ಮಕ ವಿದ್ಯಾರ್ಥಿ ಚಳುವಳಿಗಳನ್ನು ಆಯಾಕಾಲದ ಎಲ್ಲಾ ಕೋಮುವಾದಿ ಶಕ್ತಿಗಳು ಹಿಂಸೆ ಎಂಬ ಆಯುಧದಿಂದ ನಿಯಂತ್ರಿಸಲು ಪ್ರಯತ್ನಿಸಿಸುವುದು ಒಂದು ನಗ್ನ ಸತ್ಯ.
ಕ್ಯಾಂಪಸ್ ನೊಳಗೆ ಹೊರಗಿನ ರಾಜಕೀಯ ಶಕ್ತಿಗಳ ಹಸ್ಥಕ್ಷೇಪ ಅಪಾಯಕಾರಿ. ಅದರ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಜಿನ್ನಾರ ಫೋಟೋ ಇದೆ ಎಂಬ ನೆಪ ಹೇಳಿ ಕ್ಯಾಂಪಸ್ ನೊಳಗೆ ನುಗ್ಗಿ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಭಾಗವಹಿಸಲಿದ್ದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಪ್ರಯತ್ನಿಸುತಾರೆ. ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಗೂಂಡಾಗಳನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ನಂತರ ನಡೆದ ಬೆಳವಣಿಗೆ ನಮಗೆಲ್ಲರಿಗೂ ತಿಳಿದಿದೆ. ಇಲ್ಲಿ ಬಹಳ ಉತ್ತಮವಾದ ಬೆಳವಣಿಗೆ ಏನೆಂದರೆ ಹೊರಗಿನಿಂದ ಬಂದ ಗೂಂಡಾಗಳನ್ನು ಪ್ರತಿರೋಧಿಸುವಲ್ಲಿ ಧರ್ಮಾತೀತವಾಗಿ ಸಂಘಟನಾತೀತವಾಗಿ ವಿದ್ಯಾರ್ಥಿಗಳೆಲ್ಲರೂ ಒಂದಾಗಿ ಮುಂದೆ ಬಂದಿರುವುದಾಗಿದೆ. ಖಂಡಿತವಾಗಿಯೂ ಕ್ಯಾಂಪಸ್‍ನ ಒಳಗೂ ಇಂತಹ ಒಗ್ಗಟ್ಟಿನ ಅಗತ್ಯ ಇದೆ. ಅದಕ್ಕೆ ನಮ್ಮ ವೈಚಾರಿಕ ಭಿನ್ನತೆ ಅಡ್ಡಿಯಾಗಬಾರದು. ಮೀಡಿಯಾ ಒನ್ ನಲ್ಲಿ ಅಭಿಮನ್ಯುವಿನ ಕೊಲೆಯ ವಿಚಾರವಾಗಿ ಡಾ ಮಲ್ಲಿಕ ಸಾಂದರ್ಭಿಕವಾಗಿ ಒಂದು ಘಟನೆಯನ್ನು ಹೇಳುತ್ತಾರೆ. ವಿದ್ಯಾರ್ಥಿ ಸಂಘದ ಚುನಾವಣೆ ನಂತರ ಗೆದ್ದ ಅಭ್ಯರ್ಥಿಗಳಿಗೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಕೊಡಲಾಗುತ್ತದೆ. ಗೆದ್ದ ಅಭ್ಯರ್ಥಿಗಳಲ್ಲಿ ಒಬ್ಬನನ್ನು ಬಿಟ್ಟು ಇತರೆಲ್ಲರೂ ಬೇರೆ ಸಂಘಟನೆಯವರಾದ್ದರಿಂದ ಆತನಿಗೆ ಮಾತನಾಡಲು ಅವಕಾಶವನ್ನು ನಿಷೇಧಿಸಲಾಗಿತ್ತು. ಆಗ ಪ್ರಾಂಶುಪಾಲೆ ಎಂಬ ನೆಲೆಯಲ್ಲಿ ನಾನು ಹೇಳಿದೆ, ನನಗೆ ಎರಡು ನಿಮಿಷ ಸಮಯವನ್ನು ಕೊಡುವುದಾದರೆ ಅದರಲ್ಲಿ ಒಂದು ನಿಮಿಷವನ್ನು ನಾನು ವಾಕ್ ಸ್ವಾತಂತ್ರ್ಯ ನಿಷೇಧಿಸಲ್ಪಟ್ಟ ಈ ಹುಡುಗನಿಗೆ ಕೊಡುತ್ತೇನೆ. ಖಂಡಿತವಾಗಿಯೂ ಕ್ಯಾಂಪಸ್ ನೊಳಗೆ ಹಿಂಸೆಯ ರಾಜಕೀಯ ತಡೆಯಲು ಅಧ್ಯಾಪಕರಿಂದ ಸಾಧ್ಯ ಎಂಬುವುದಕ್ಕೆ ಇದೊಂದು ಉದಾಹರಣೆ ಮಾತ್ರ. ಇಲ್ಲಿ ಪಕ್ಷಾತಿತವಾಗಿ, ಯಾವುದೇ ಪೂರ್ವಗ್ರಹ ಪೀಡಿತರಾಗದೆ ನ್ಯಾಯದ ಪರ ನಿಲ್ಲಲು ನಮ್ಮ ಶಿಕ್ಷಕ ಅಧ್ಯಾಪಕ ವೃಂದಕ್ಕೆ ಸಾಧ್ಯವಾಗಬೇಕು. ಒಂದು ಕಡೆ ಹಿಂಸೆಯ ರಾಜಕೀಯ ಕ್ಯಾಂಪಸ್‍ಗಳಲ್ಲಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಚಡಪಡಿಸುತ್ತಿರುವಾಗ ಮತ್ತೊಂದು ಕಡೆಯಲ್ಲಿ ಕ್ರಿಯಾತ್ಮಕ ವಿದ್ಯಾರ್ಥಿ ಚಳುವಳಿಗಳು ದೇಶದೆಲ್ಲಡೆ ತಲೆ ಎತ್ತಿ ನಿಂತಿರುವುದು ಅಷ್ಟೇ ವಾಸ್ತವ. ಅದಕ್ಕೆ ನಮ್ಮ ಕ್ಯಾಂಪಸ್‍ಗಳು ಸಾಕ್ಷಿಯಾಗಿವೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮರಣಹೊಂದಿದ ಫೆಟರ್ನಿಟಿ ಜಿಲ್ಲಾ ಕಾರ್ಯದರ್ಶಿ ಹಾಗೂ ಎಸ್.ಐ.ಓ ಸದಸ್ಯನಾಗಿದ್ದ ಆಸಿಫ್ ರಿಯಾಝ್ ಕ್ಯಾಂಪಸ್ ರಾಜಕೀಯಕ್ಕೆ ಒಂದು ಒಳ್ಳೆಯ ಮಾದರಿಯನ್ನು ತೋರಿಸಿಕೊಟ್ಟಿದ್ದರು. ಮುಟ್ಟಂ ಪೊಲಿಟೆಕ್‍ನಿಕ್ ಕಾಲೇಜಿನಲ್ಲಿ ಎಸ್.ಫ್.ಐ ವಿರುದ್ಧ ಸ್ಪರ್ಧಿಸಿದ ಎಂಬ ಕಾರಣಕ್ಕಾಗಿ ಆತನನ್ನು ಮರ್ಧಿಸಲಾಯಿತು. ಆದರೆ ಆತ ಮಾಡಿದ ಪ್ರತಿರೋಧ ಏನೆಂದು ತಿಳಿದರೆ ನೀವು ಮೂಗಿನ ಮೇಲೆ ಬೆರಳಿಟ್ಟು ಆಲೋಚಿಸಬಹುದು. ತನಗೆ ಹೊಡೆದ ಸಹಪಾಠಿಗೆ ವಾಹನಾಪಘಾತವಾಗಿ ಐಸಿಯುನಲ್ಲಿದ್ದಾನೆ ಎಂದು ತಿಳಿದ ಕೂಡಲೇ, ಹೊಡೆದ ಗಾಯ ಇನ್ನೂ ಒಣಗದಿದ್ದರೂ ಮಳೆಯನ್ನೂ ಲೆಕ್ಕಿಸದೆ ಆಸ್ಪತ್ರೆಗೆ ಹೋಗಿ ಅವನ ಯೋಗಕ್ಷೇಮವನ್ನು ವಿಚಾರಿಸಿದ್ದ. ಹೌದು ಆಸಿಫ್ ತೋರಿಸಿಕೊಟ್ಟ ವಿದ್ಯಾರ್ಥಿ ರಾಜಕೀಯ ಸ್ನೇಹ ಮತ್ತು ಸಾಮರಸ್ಯತೆಯ ಬುನಾದಿಯ ಮೇಲೆ ನಿಂತಿತ್ತು. ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ಪ್ರತಿರೋಧಿಸು. ನಿಮ್ಮ ಶತ್ರು ಕೂಡ ನಿಮ್ಮ ಆತ್ಮ ಮಿತ್ರನಾಗಿ ಬದಲಾಗುತ್ತಾನೆ ಎಂಬ ಕುರ್ ಆನಿನ ಆಶಯದ ಪ್ರಾಯೋಗಿಕ ರೂಪವಾಗಿತ್ತು ಅದು. ಮಹರಾಜಾಸ್ ಹಾಗು ಇತರ ಕ್ಯಾಂಪಸ್ ಗಳಲ್ಲಿ ಕೆಂಪು ಬಣ್ಣದ ಬಾವುಟದ ಹೊರತು ಬೇರೆ ಯಾವ ಬಾವುಟವನ್ನೂ ಹಾರಿಸಲು ಸಾಧ್ಯವಿಲ್ಲದ ಕಾಲವೊಂದಿತು. ಆದರೆ ಈಗ ಅದು ಬದಲಾಗಿದೆ. ಇಂದು ಅಲ್ಲಿ ಎಲ್ಲಾ ಬಾವುಟಗಳು ತಲೆ ಎತ್ತಿ ಹಾರುವಂತೆ ಮಾಡಿದ್ದೇ ಈ ಕ್ರಿಯಾತ್ಮಕ ವಿದ್ಯಾರ್ಥಿ ಚಳುವಳಿ. ಹಿಂಸೆಯನ್ನೂ ವೈಚಾರಿಕವಾಗಿ ಎದುರಿಸಿದ ಯಶಸ್ವಿ ವಿದ್ಯಾರ್ಥಿ ಚಳುವಳಿ.