ಆ ತಂದೆ ಮತ್ತು ಮಗ ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?

0
410

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

#HyderabadHorrror, #RIPDisha, #HyderabadPolice, #HyderabadMurder… ಇತ್ಯಾದಿ ಹ್ಯಾಶ್‍ಟ್ಯಾಗ್‍ಗಳು 2019, ಡಿಸೆಂಬರ್ 6ರಂದು ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನೀವು ನೋಡಿಯೇ ಇರುತ್ತೀರಿ. ‘This morning I wake up to the news and Justice has been served…’ ಎಂದು ಖ್ಯಾತ ತೆಲುಗು ಚಿತ್ರ ನಟ ನಾಗಾರ್ಜುನ ಅಕ್ಕಿನೇಣಿ ಟ್ವೀಟ್ ಮಾಡಿದ್ದನ್ನೂ ನೀವು ಬಲ್ಲಿರಿ.

ದಿಶಾಳಿಗೆ ನ್ಯಾಯ ಲಭಿಸಿದೆ ಎಂಬುದಾಗಿ ಆ ದಿನದಂದು ಬಿಎಸ್‍ಪಿಯ ಮಾಯಾವತಿ ಯವರೂ ಖುಷಿಪಟ್ಟಿದ್ದರು. ಸೆಲೆಬ್ರಿಟಿಗಳು, ರಾಜಕಾರಣಿಗಳು, ಪತ್ರಕರ್ತರು, ಸಾರ್ವಜನಿಕರು.. ಹೀಗೆ ಅಸಂಖ್ಯ ಮಂದಿ ನಾಗಾರ್ಜುನರಂತೆಯೇ ಖುಷಿ ಪಟ್ಟಿದ್ದರು. ಹೈದರಾಬಾದ್‍ನ ಶಾದ್ ನಗರದ ನೂರಾರು ನಾಗರಿಕರು ಎನ್‍ಕೌಂಟರ್ ನಡೆದ ಸ್ಥಳಕ್ಕೆ ತೆರಳಿ ಘೋಷಣೆ ಕೂಗಿದ್ದರು. ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಕಾರಣ, ಶಾದ್ ನಗರ ಪೊಲೀಸ್ ಠಾಣೆಯ ಸೈಬರ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರ ನೇತೃತ್ವದಲ್ಲಿ ನಡೆದ ಎನ್‍ಕೌಂಟರ್.

ದಿಶಾ ಎಂಬ 25ರ ಹರೆಯದ ಹೈದರಾಬಾದ್‍ನ ವೈದ್ಯೆಯನ್ನು ಚನ್ನಕೇಶವುಲು, ಮುಹಮ್ಮದ್ ಆರಿಫ್, ನವೀನ ಮತ್ತು ಶಿವ ಎಂಬ ನಾಲ್ವರು ತಮ್ಮ ಲಾರಿಯಲ್ಲಿ ಅಪಹರಿಸಿ, ಅತ್ಯಾಚಾರ ಮಾಡಿ, ಹತ್ಯೆ ಮಾಡಿದ್ದರು. ಆ ಬಳಿಕ ಶವವನ್ನು ಶಾದ್ ನಗರದ ಫ್ಲೈ ಓವರ್‍ನ ಅಡಿಯಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ನವೆಂಬರ್ 27ರಂದು ಈ ನಾಲ್ವರ ಬಂಧನವಾಗಿತ್ತು. ಡಿಸೆಂಬರ್ 6ರಂದು ಮುಂಜಾನೆ 5.30ರ ಸುಮಾರಿಗೆ ಈ ನಾಲ್ವರನ್ನು ಶವ ಸುಟ್ಟ ಜಾಗಕ್ಕೆ ಮಹಜರಿಗೆಂದು ಕೊಂಡೊಯ್ಯಲಾಗಿತ್ತು. ಆ ಬಳಿಕ ಆ ನಾಲ್ವರನ್ನೂ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‍ಕೌಂಟರ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಸಜ್ಜನರ್ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ಪತ್ರಿಕೆಗಳಲ್ಲಿ ಕೂಡ ಸಜ್ಜನರ್ ಅವರ ಎನ್‍ಕೌಂಟರನ್ನು ಬೆಂಬಲಿಸಿ ಬರಹಗಳು ಪ್ರಕಟವಾದುವು. ಆದರೆ,

ಇಂಥ ಸನ್ನಿವೇಶದಲ್ಲೂ ಅಸಂಖ್ಯ ಮಂದಿ ಈ ಬಗೆಯ ಸಂಭ್ರಮವನ್ನು ಪ್ರಶ್ನಿಸಿದರು. ನ್ಯಾಯಾಂಗೇತರ ಹತ್ಯೆಯನ್ನು ಸಮರ್ಥಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದರು. ಇವರಲ್ಲಿ ಕಮ್ಯುನಿಸ್ಟ್ ನೇತಾರ ಸೀತಾರಾಮ್ ಯೆಚೂರಿ ಮತ್ತು ಲೋಕಸತ್ತಾ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಕೂಡಾ ಸೇರಿದ್ದರು. ಅದರಲ್ಲೂ ನಾರಾಯಣ್ ಅವರು,

‘Extra Judicial Killings will only make innocent people victims overtime. Due process protects all of us’ ಎಂದು ಡಿ. 6, 2019ರಂದು ಟ್ವೀಟ್ ಮಾಡಿದ್ದರು.

ಇದೀಗ ತಮಿಳುನಾಡಿನ ತೂತುಕುಡಿಯ ಸಟ್ಟಕುಲಂ ಪೊಲೀಸ್ ಠಾಣೆಯು ಮುಗ್ಧರಿಬ್ಬರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶನ್ ಸೇರಿದಂತೆ ಕೆಲವು ಪೊಲೀಸರ ಬಂಧನವಾಗಿದೆ. ಹತ್ಯೆಗೀಡಾಗಿರುವುದು ತಂದೆ ಮತ್ತು ಮಗ. ಮಗ ಬೆನಿಕ್ಸ್ ಗೆ ಕಳೆದ ಮೇಯಲ್ಲಿ ಮದುವೆ ನಿಗದಿಯಾಗಿತ್ತು. ಕೊರೋನಾದಿಂದಾಗಿ ಆ ಮದುವೆಯನ್ನು ಡಿಸೆಂಬರ್ ಗೆ ಮುಂದೂಡಲಾಗಿತ್ತು. ತಂದೆಯ ಬಂಧನವನ್ನು ಪ್ರಶ್ನಿಸಿ ಬೆನಿಕ್ಸ್ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದೇ ಈ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳನ್ನು ಹೇಳಿದ್ದಾರೆ. ಕ್ರೌರ್ಯದ ಪರಮಾವಧಿ ಏನೆಂದರೆ,

ಈ ತಂದೆ-ಮಗನ ಬಂಧನವಾದದ್ದು ಜೂನ್ 19ರಂದು. ಸಾವಿಗೀಡಾದದ್ದು ಜೂನ್ 22ರಂದು. ಅದೂ ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿನ ಜೈಲು ಆಸ್ಪತ್ರೆಯಲ್ಲಿ. ಸಟ್ಟಕುಲಂನಿಂದ ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿಗೆ 100 ಕಿಲೋಮೀಟರ್ ದೂರವಿದೆ. ಆದರೆ, ಈ ಜೈಲಿ ಗಿಂತ ತೀರಾ ಹತ್ತಿರದಲ್ಲಿ ಪೆರೂರಾನಿ ಮತ್ತು ಶ್ರೀ ವೈಕುಂಡಂ ಎಂಬೆರಡು ಸಬ್ ಜೈಲುಗಳಿವೆ. ಸಟ್ಟಕುಲಂನಿಂದ ಈ ಎರಡು ಸಬ್ ಜೈಲುಗಳಿಗಿರುವ ದೂರ ಬರೇ 40 ಕಿಲೋ ಮೀಟರ್. ಹೀಗಿದ್ದೂ ಈ ಇಬ್ಬರನ್ನು ಅಷ್ಟು ದೂರದ ಜೈಲಿಗೆ ಹಾಕಿರುವುದೇಕೆ ಅನ್ನುವ ಪ್ರಶ್ನೆ ಅಸಹಜವಲ್ಲ. ಅಷ್ಟಕ್ಕೂ, ಇಲ್ಲಿಗೇ ಈ ಸಂಕಟ ಮುಗಿದಿಲ್ಲ.

ಈ ಕ್ರೌರ್ಯದ ಬಗ್ಗೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ಮದ್ರಾಸ್ ಹೈಕೋರ್ಟು ಆದೇಶಿಸುತ್ತದೆ. ಕೋವಿಲ್ ಪಟ್ಟಿ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಭಾರತೀ ರಾಜನ್ ಅವರು ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಆದರೆ, ಸಟ್ಟಕುಲಂ ಪೊಲೀಸ್ ಠಾಣೆ ಅವರನ್ನು ಕ್ಯಾರೇ ಅನ್ನುವುದಿಲ್ಲ. ಮಾತ್ರವಲ್ಲ, ಇಡೀ ಘಟನಾವಳಿಗೆ ಸಾಕ್ಷ್ಯವಾಗಬಹುದಾಗಿದ್ದ ಸಿಸಿಟಿವಿ ಫೂಟೇಜ್‍ಗಳನ್ನೇ ಅಳಿಸಿ ಹಾಕುತ್ತದೆ. ಈ ಸಂಗತಿಯನ್ನು ಮ್ಯಾಜಿಸ್ಟ್ರೇಟ್‍ರು ಮದ್ರಾಸ್ ಹೈಕೋರ್ಟ್‍ನ ಮುಂದೆ ಇಟ್ಟಾಗ ಅದು ಇಬ್ಬರು ನ್ಯಾಯಾಧೀಶರ ಆಯೋಗವನ್ನು ನೇಮಿಸಿತಲ್ಲದೇ, ಪ್ರಕರಣವನ್ನು ಸಿಬಿಐ ವಹಿಸಿ ಕೊಳ್ಳುವವರೆಗೆ ಸಿಬಿ- ಸಿಐಡಿ ವಹಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ. ಆ ಬಳಿಕ ಪೊಲೀಸಧಿಕಾರಿಗಳ ಬಂಧನ ಮತ್ತು ಅವರ ವಿರುದ್ಧ ಹತ್ಯಾ ಪ್ರಕರಣ ದಾಖಲಾಗುತ್ತದೆ. ಅಂದಹಾಗೆ,

ಈ ದೇಶದಲ್ಲಿ ಪೊಲೀಸ್ ದೌರ್ಜನ್ಯಗಳು ಹೊಸತಲ್ಲ. ಕಸ್ಟಡಿ ಸಾವುಗಳೂ ಹೊಸತಲ್ಲ. ದೇಶದ ಮಾನವ ಹಕ್ಕು ಆಯೋಗಕ್ಕೆ (NHRC) ಕಳೆದ ಮೂರು ವರ್ಷಗಳಲ್ಲಿ 5,300 ಕಸ್ಟಡಿ ಸಾವುಗಳ ದೂರುಗಳು ಬಂದಿವೆ. ಇನ್ನು, ದೂರುಗಳೇ ದಾಖಲಾಗದ ಸಾವುಗಳು ಎಷ್ಟಿರಬಹುದು? ಈ ದೇಶದಲ್ಲಿ ಪೊಲೀಸರನ್ನು ಎದುರು ಹಾಕಿಕೊಳ್ಳುವುದು ಸಣ್ಣ ಸವಾಲಲ್ಲ. ಒಮ್ಮೆ ಪೊಲೀಸರ ವಿರೋಧ ಕಟ್ಟಿಕೊಂಡರೆ, ಆ ಬಳಿಕ ಯಾವುದಾದರೊಂದು ಕೇಸಿನಲ್ಲಿ ಫಿಕ್ಸ್ ಆಗುವ ಭೀತಿ ಇದ್ದೇ ಇರುತ್ತದೆ. ಒಂದುವೇಳೆ, ಗುಜರಾತ್‍ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಪ್ರಭುತ್ವದ ವಿರುದ್ಧ ಬಂಡಾಯ ಏಳದೇ ಇರುತ್ತಿದ್ದರೆ ಅವರು ಈಗ ಎದುರಿಸುತ್ತಿರುವ ಕಸ್ಟಡಿ ಸಾವು ಪ್ರಕರಣವು ಈಗಿನ ಮಾದರಿಯಲ್ಲಿ ಅವರನ್ನು ಕಾಡುತ್ತಿತ್ತೇ?

ಅವರು ಜಾಮ್ ನಗರ ಪೊಲೀಸ್ ಸುಪರಿಂಟೆಂಡೆಂಟ್ ಆಗಿದ್ದ ವೇಳೆ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ 150 ಮಂದಿಯನ್ನು ಬಂಧಿಸಿದ್ದರು. ಅದೂ 1990ರಲ್ಲಿ. ಅಡ್ವಾಣಿಯವರ ರಥಯಾತ್ರೆಗೆ ಸಂಬಂಧಿಸಿ ಆ ಘರ್ಷಣೆ ಉಂಟಾಗಿತ್ತು. ಬಂಧಿತರಲ್ಲಿ ಪ್ರಭು ದಾಸ್ ವೈಷ್ಣಾನಿ ಎಂಬವ ಆ ಬಳಿಕ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದ. ಅದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಪ್ರಭುದಾಸ್‍ನ ಸಹೋದರ ಕೇಸು ದಾಖಲಿಸಿದ್ದರು. ಆದರೆ, ಈ ಕುರಿತಾದ ವಿಚಾರಣೆಗೆ ಗುಜರಾತ್ ಸರಕಾರ ಅನುಮತಿ ಕೊಟ್ಟಿರಲಿಲ್ಲ. ಆದ್ದರಿಂದ, ಪ್ರಕರಣ ಇದ್ದಲ್ಲಿಯೇ ಇತ್ತು. ಯಾವಾಗ ಅವರು ಪ್ರಭುತ್ವದ ವಿರುದ್ಧ ತಿರುಗಿ ಬಿದ್ದರೋ ತಕ್ಷಣ ಪ್ರಕರಣ ಮತ್ತೆ ಬೂದಿಯಿಂದ ಎದ್ದು ಬಂತು. ಗುಜರಾತ್ ಸರಕಾರ ತನಿಖೆಗೆ ಅನುಮತಿ ನೀಡಿತು. ಕಳೆದ ವರ್ಷ ಜಾಮ್‍ನಗರ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತು. ಅಂದಹಾಗೆ,

ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರ ವಿರುದ್ಧ ಸಂಜೀವ್ ಭಟ್ ಅವರು 2011ರಲ್ಲಿ ಸುಪ್ರೀಮ್ ಕೋರ್ಟಿಗೆ ಅಫಿದವಿತ್ ಸಲ್ಲಿಸದೇ ಇರುತ್ತಿದ್ದರೆ, ಅವರ ಆ ಕಸ್ಟಡಿ ಸಾವು ಪ್ರಕರಣಕ್ಕೆ ಮರುಜೀವ ಸಿಗುತ್ತಿತ್ತೇ? ಇಲ್ಲ ಎಂದಾದರೆ, ಇಂಥ ಮುಚ್ಚಿ ಹೋಗುತ್ತಿರುವ ಪ್ರಕರಣಗಳು ಈ ದೇಶದಲ್ಲಿ ಎಷ್ಟಿರಬಹುದು? ರಾಜಕೀಯ ಪಕ್ಷಗಳ ಕೃಪೆಯಿಂದ ಎಷ್ಟು ಕಸ್ಟಡಿ ಸಾವುಗಳು ಸಹಜ ಸಾವುಗಳಾಗಿಯೋ ಕೇಸುಗಳೇ ದಾಖಲಾಗದೆಯೋ ಸತ್ತು ಹೋಗಿರಬಹುದು? 2000ದಿಂದ 2018ರ ನಡುವೆ 1722 ಕಸ್ಟಡಿ ಸಾವುಗಳು ಸಂಭವಿಸಿದ್ದರೂ ಬರೇ 26 ಪೊಲೀಸರಿಗಷ್ಟೇ ಶಿಕ್ಷೆಯಾಗಿದೆ ಎಂಬುದು ಏನನ್ನು ಸೂಚಿಸುತ್ತದೆ?

ದಿಶಾ ಪ್ರಕರಣದಲ್ಲಿ ವಿ.ಸಿ. ಸಜ್ಜನರ್ ಮತ್ತು ಅವರ ತಂಡ ಏನನ್ನು ಹೇಳಿತ್ತೋ ಅದನ್ನು ಮನಸಾರೆ ಒಪ್ಪಿಕೊಂಡಿದ್ದವರೇ ಮತ್ತು ಅವರಿಗಾಗಿ ಚಪ್ಪಾಳೆ ತಟ್ಟಿದವರೇ ಇವತ್ತು ಸಟ್ಟಕುಲಂ ಪೆÇಲೀಸರ ಮಾತನ್ನು ಒಪ್ಪಿಕೊಳ್ಳುತ್ತಿಲ್ಲ. ದಿಶಾ ಪ್ರಕರಣದಲ್ಲಿ ಎನ್‍ಕೌಂಟರನ್ನು ಸಂಭ್ರಮಿಸಿದವರು ಮತ್ತು ಪೊಲೀಸರು ಕೊಟ್ಟ ವರದಿಯನ್ನು ಕಣ್ಣು ಮುಚ್ಚಿ ಅನುಮೋದಿಸಿದವರೇ ಇವತ್ತು ದಿಗ್ಮೂಢರಾಗಿದ್ದಾರೆ. ಹಾಗಂತ, ತೆಲಂಗಾಣ ಮತ್ತು ತಮಿಳ್ನಾಡು ಬೇರೆ ಬೇರೆ ರಾಜ್ಯಗಳಾಗಿರಬಹುದು. ಪೊಲೀಸ್ ಠಾಣೆಗಳೂ ಬೇರೆ ಬೇರೆ ಆಗಿರಬಹುದು. ಆದರೆ,

ನ್ಯಾಯಾಂಗದ ಕೆಲಸವನ್ನು ಪೊಲೀಸರು ವಹಿಸಿಕೊಂಡರೆ ಮತ್ತು ಅದನ್ನು ನಾಗರಿಕರು ಬೆಂಬಲಿಸಿದರೆ ಅದು ವಿಪರೀತ ಪರಿಣಾಮಕ್ಕೆ ಕಾರಣವಾಗುವ ಭಯ ಇದ್ದೇ ಇರುತ್ತದೆ. ಇಂಥ ಬೆಳವಣಿಗೆಗಳು ಪೊಲೀಸರಿಗೆ ಅಪರಿಮಿತ ಧೈರ್ಯವನ್ನು ತಂದು ಕೊಡುತ್ತದೆ. ತಮ್ಮ ಜೊತೆ ನಾಗರಿಕರಿದ್ದಾರೆ ಎಂಬ ಭಂಡ ಧೈರ್ಯದಲ್ಲಿ ಅನ್ಯಾಯ ನಡೆದು ಬಿಡುವುದಕ್ಕೂ ಅವಕಾಶ ಇದೆ. ಸಿಎಎ ವಿರೋಧಿ ಪ್ರತಿಭಟನೆ ಮತ್ತು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಪೆÇಲೀಸರು ನಡೆದುಕೊಂಡ ರೀತಿಯಲ್ಲೂ ಇದಕ್ಕೆ ಉತ್ತರ ಇದೆ. ಮಂಗಳೂರಿನಿಂದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವರೆಗೆ, ಶಾಹೀನ್ ಬಾಗ್‍ನಿಂದ ಜೆಎನ್‍ಯು ವರೆಗೆ- ಪೊಲೀಸ್ ದೌರ್ಜನ್ಯದ ನೂರಾರು ವೀಡಿಯೋಗಳು, ವರದಿಗಳು ಮಾಧ್ಯಮಗಳಲ್ಲಿ ಧಾರಾಳ ಪ್ರಕಟವಾಗಿವೆ. ಲಾಕ್‍ಡೌನ್ ಸಂದರ್ಭದಲ್ಲಂತೂ ಪೊಲೀಸ್ ಲಾಠಿಗಳು ಯದ್ವಾತದ್ವಾ ಚಲಿಸಿವೆ.

ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ಪೊಲೀಸರು ನ್ಯಾಯಾಂಗವನ್ನು ಲೆಕ್ಕಿಸದೆಯೇ ರಾಜಾರೋಷವಾಗಿ ಹೀಗೆ ಕಾನೂನು ಉಲ್ಲಂಘನೆ ಮಾಡಲು ಹೇಗೆ ಧೈರ್ಯ ಬಂತು? ಪ್ರಭುತ್ವ ಬೆನ್ನಿಗಿದೆ ಎಂಬ ಧೈರ್ಯ ಇಲ್ಲದೇ ಇರುತ್ತಿದ್ದರೆ, ಈ ಮಟ್ಟದಲ್ಲಿ ಕಾನೂನು ಉಲ್ಲಂಘನೆಗೆ ಅವರು ಮುಂದಾಗುತ್ತಿದ್ದರೇ? ಸಿಸಿಟಿವಿ ಕ್ಯಾಮರಾ ಗಳಲ್ಲಿ ತಮ್ಮ ಕೃತ್ಯ ದಾಖಲಾಗುತ್ತಿದೆ ಎಂಬುದರ ಅರಿವಿದ್ದೂ ಮತ್ತು ಮೊಬೈಲ್‍ಗಳಲ್ಲಿ ಪ್ರತಿ ಚಟುವಟಿಕೆಗಳೂ ದಾಖಲಾಗುವ ಅಪಾಯ ಗೊತ್ತಿದ್ದೂ ಜಾಮಿಯಾದಲ್ಲಿ, ಜೆಎನ್‍ಯುನಲ್ಲಿ ಮತ್ತು ಮಂಗಳೂರಿನಂಥ ಹಲವಾರು ಕಡೆಗಳಲ್ಲಿ ಎಗ್ಗಿಲ್ಲದೇ ದೌರ್ಜನ್ಯ ನಡೆಸುವುದಕ್ಕೆ ಸಾಧ್ಯವಾದದ್ದು ಹೇಗೆ? ನಿಜವಾಗಿ,

ಕಾನೂನನ್ನು ಮೀರಿ ಪೊಲೀಸ್ ಇಲಾಖೆ ಕೈಗೊಳ್ಳುವ ಯಾವುದೇ ಎನ್‍ಕೌಂಟರ್, ಕಾರ್ಯಾಚರಣೆ, ವಿಚಾರಣೆಗಳು ನಾಗರಿಕ ಸೌಖ್ಯದ ದೃಷ್ಟಿಯಿಂದ ಅಪಾಯಕಾರಿ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೇ ಮಾಡಬೇಕು. ಅವರು ನ್ಯಾಯಾಧೀಶರಾಗ ಬಾರದು. ಅವರು ನ್ಯಾಯಾಧೀಶರಂತೆ ಮಾತಾಡಿದರೆ ಅವರನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲೂ ಬಾರದು. ದಿಶಾಳನ್ನು ಬರ್ಬರವಾಗಿ ಹತ್ಯೆಗೈದವರು ಇವರೇ ಎಂದು ವಿ.ಸಿ. ಸಜ್ಜನರ್ ಅವರು ನಾಲ್ವರನ್ನು ತೋರಿಸಿ ಹೇಳಿದಾಗ ನಾವು ಒಪ್ಪಿಕೊಂಡೆವು. ಆದರೆ ನ್ಯಾಯಾಂಗ ಇನ್ನೂ ಒಪ್ಪಿಕೊಂಡಿರಲಿಲ್ಲ. ಆ ನಾಲ್ವರು ದಿಶಾಳನ್ನು ಹೇಗೆ ಅಪಹರಿಸಿದರು ಮತ್ತು ಹೇಗೆ ಬರ್ಬರವಾಗಿ ಹತ್ಯೆ ಮಾಡಿದರು ಎಂಬುದನ್ನು ಸಜ್ಜನರ್ ಮಾಹಿತಿ ನೀಡಿದಾಗಲೂ ನಾವು ಒಪ್ಪಿಕೊಂಡೆವು. ಆದರೆ, ನ್ಯಾಯಾಂಗ ಆಗಲೂ ಒಪ್ಪಿ ಕೊಂಡಿರಲಿಲ್ಲ. ಅವರ ಎನ್‍ಕೌಂಟರ್ ಗೆ ಕಾರಣವಾದ ಸ ನ್ನಿವೇಶವನ್ನು ಸಜ್ಜನರ್ ಹೇಳಿಕೊಂಡರು. ನಾವು ಚಪ್ಪಾಳೆ ತಟ್ಟಿ ಸಂಭ್ರಮಿಸಿದೆವು. ಆಗಲೂ ನ್ಯಾಯಾಲಯ ಅದನ್ನು ಒಪ್ಪಿಕೊಂಡಿರಲಿಲ್ಲ. ಹಾಗಂತ,

ಈ ನಾಲ್ವರೇ ಅಪರಾಧಿಗಳಾಗಿರಲೂ ಬಹುದು. ಆದರೆ ಅದನ್ನು ಹೇಳಬೇಕಾದುದು ಮತ್ತು ಶಿಕ್ಷೆ ನಿರ್ಧರಿಸಬೇಕಾದುದು ಸಜ್ಜನರ್ ಅಲ್ಲ, ನ್ಯಾಯಾಲಯ. ನ್ಯಾಯಾಲಯದ ಹೊರಗಿನ ವ್ಯಕ್ತಿಗಳು ಅದನ್ನು ತೀರ್ಮಾನಿಸುವುದು ಅನ್ಯಾಯದ ಮಾದರಿ ಯೊಂದಕ್ಕೆ ಅಡಿಗಲ್ಲು ಹಾಕಿದಂತಾಗುತ್ತದೆ. ಮಾತ್ರವಲ್ಲ, ಅದನ್ನು ಸಮರ್ಥಿಸುವುದರಿಂದ ಹಾಗೆ ಮಾಡುವವರಲ್ಲಿ ಧೈರ್ಯ ಉಂಟಾಗುತ್ತದೆ. ಅಂದಹಾಗೆ,
ಜಯರಾಜ್ ಮತ್ತು ಬೆನಿಕ್ಸ್- ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.