ಇದು ಮಾಧ್ಯಮ ಧರ್ಮವಲ್ಲ

0
363

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿಯೂ ಆಗಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮೆಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಂಸದ ಕೆ. ಮುನಿಯಪ್ಪ, ಮಾಜಿ ಸಚಿವ ಎಚ್.ಕೆ. ಪಾಟೀಲ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಘಟಾನು ಘಟಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿರುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಂಟಕ ಪ್ರಾಯವಾಗ ಬಲ್ಲ ಮತ್ತು ಅವರನ್ನು ರಾಜ್ಯದ ಮಂದಿ ಅ ನುಮಾನಿಸುವುದಕ್ಕೆ ಕಾರಣವಾಗಬಲ್ಲ ಬಹುದೊಡ್ಡ ಹಗರಣವೊಂದರ ಮಾಹಿತಿ ಯನ್ನು ಒದಗಿಸುತ್ತಾರೆ. ಅಲ್ಲದೇ, ಸುಪ್ರೀಮ್ ಕೋರ್ಟ್‍ನ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಮತ್ತು ತನಿಖೆ ಮುಗಿಯುವ ವರೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸುತ್ತಾರೆ. ಆದರೆ,

ಪ್ರಜಾವಾಣಿ, ವಾರ್ತಾಭಾರತಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಬಿಟ್ಟರೆ ಉಳಿದಂತೆ ಸೆ ಪ್ಟೆಂಬರ್ 24ರ ಯಾವ ಕನ್ನಡ ಪತ್ರಿಕೆಯೂ ಈ ಪತ್ರಿಕಾಗೋಷ್ಠಿಯನ್ನು ಪ್ರಕಟಿಸು ವುದೇ ಇಲ್ಲ.

ನಿಜಕ್ಕೂ, ಇದು ಅಚ್ಚರಿ ಮತ್ತು ಆಘಾತಕಾರೀ ಬೆಳವಣಿಗೆ. ಕಾಂಗ್ರೆಸ್ ರಾಜ್ಯದ ಪ್ರಮುಖ ವಿರೋಧ ಪಕ್ಷ. ಅಲ್ಲದೇ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಮತ್ತು ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಸುರ್ಜೆವಾಲಾ ಅವರು ಜಂಟಿಯಾಗಿ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡುವುದೆಂದರೆ, ಅದು ಮಾಧ್ಯಮಗಳ ಪಾಲಿಗೆ ಬಹುಮುಖ್ಯ ಸುದ್ದಿ. ಮಾತ್ರ ವಲ್ಲ, ಈ ಪತ್ರಿಕಾಗೋಷ್ಠಿಯಲ್ಲಿ ಎತ್ತಲಾಗಿರುವ ಪ್ರಶ್ನೆಗಳೂ ಪರಿಣಾಮದ ದೃಷ್ಟಿಯಿಂದ ಬಹಳ ಪ್ರಮುಖವಾದವು. ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತಾಡಿದ್ದೇ ಭ್ರಷ್ಟಾಚಾರದ ಬಗ್ಗೆ. ಸಿದ್ದರಾಮಯ್ಯ ಸರಕಾರವನ್ನು ಅವರು ಟೆನ್ ಪರ್ಸೆಂಟ್ ಸರಕಾರ ಎಂದು ಟೀಕಿಸಿದ್ದರು. ನಾ ಖಾವೂಂಗಾ, ನಾ ಖಾನೇ ದೂಂಗಾ ಎಂಬ ಅವರ ಡಯಲಾಗು ಜನಪ್ರಿಯವೂ ಆಗಿತ್ತು. ಹೀಗಿರುವಾಗ, ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಪ್ರಮುಖ ವಿರೋಧ ಪಕ್ಷವು ಪತ್ರಿಕಾಗೋಷ್ಠಿ ಕರೆದು ಭ್ರಷ್ಟಾಚಾರದ ಆರೋಪ ಹೊರಿಸುವುದೆಂದರೆ, ಅದು ರಾಜ್ಯದ ಮಟ್ಟಿಗೆ ಗಮನಾರ್ಹ ಸಂಗತಿ. ಹಾಗಂತ,

ಹೊರಿಸಿದ ಆರೋಪಗಳಲ್ಲಿ ಕಾಳೆಷ್ಟು-ಜೊಳ್ಳೆಷ್ಟು ಎಂಬುದೆಲ್ಲಾ ಸೆಕೆಂಡರಿ. ಆರೋಪ ಹೊರಿಸಿದ್ದು ಯಾರು, ಎಲ್ಲಿ ಮತ್ತು ಹೇಗೆ ಹೊರಿಸಿದರು ಎಂಬುದು ಈ ಸಂದರ್ಭದಲ್ಲಿ ಮುಖ್ಯವಾಗು ತ್ತದೆ. ಹಾಗೆಯೇ, ಯಾವುದೋ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪ ಹೊರಿಸುವುದಕ್ಕೂ ಪತ್ರಿಕಾಗೋಷ್ಠಿ ಕರೆದು ಆರೋಪ ಹೊರಿಸುವುದಕ್ಕೂ ವ್ಯತ್ಯಾಸ ಇದೆ. ಚುನಾವಣಾ ಆರೋಪಗಳು ಚುನಾವಣಾ ಸಮಯವನ್ನು ದಾಟಿದರೆ ಮತ್ತೆ ಚರ್ಚೆಯಾಗುವುದಿಲ್ಲ. ಜನರನ್ನು ಸೆಳೆಯುವುದಕ್ಕಾಗಿ ಬಗೆಬಗೆಯ ಆರೋಪಗಳನ್ನು ಹೊರಿಸುವುದು ಮತ್ತು ಆ ಬಳಿಕ ಅಂಥ ಆರೋಪಗಳನ್ನು ಹೊರಿಸಿದವರು ಆ ಬಗ್ಗೆ ಗೊತ್ತೇ ಇಲ್ಲದಂತೆ ಬದುಕುವುದೆಲ್ಲ ಸಾಮಾನ್ಯ ಸಂಗತಿ. ಪ್ರಧಾನಿ ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟೆನ್ ಪರ್ಸೆಂಟ್ ಸರಕಾರ ಎಂದು ಟೀಕಿಸಿದ್ದರೂ ಅದು ಆ ಬಳಿಕ ಚರ್ಚೆಗೆ ಒಳಗಾಗಲಿಲ್ಲ. ಪ್ರಧಾನಿಯು ತನ್ನ ಆರೋಪಕ್ಕೆ ಪುರಾವೆಯಾಗಿ ದಾಖಲೆಗಳನ್ನೂ ಬಿಡುಗಡೆಗೊಳಿಸಿರಲಿಲ್ಲ. ಅದೊಂದು ಚುನಾವಣಾ ಸ್ಟಂಟ್. ಆದರೆ, ಮೊನ್ನೆ ಸುರ್ಜೆವಾಲ ಮತ್ತು ಕಾಂಗ್ರೆಸ್ ನಾಯಕರು ಆಡಿರುವ ಮಾತುಗಳು ಚುನಾವಣಾ ಪ್ರಚಾರ ಸಭೆಯಲ್ಲಿ ಆಡಿದ್ದಲ್ಲ. ಆದರೂ,
ಕನ್ನಡ ಪತ್ರಿಕೆಗಳೇಕೆ ನಿರ್ಲಕ್ಷಿಸಿದುವು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿದ್ದಾರೆ ಎಂಬುದು ಆರೋಪದ ಮುಖ್ಯಾಂಶ. ಯಡಿಯೂರಪ್ಪ ಅವರ ಮಗ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಾಡಿ ಮತ್ತು ಅಳಿಯ ವಿರೂಪಾಕ್ಷ ಮರಾಡಿಯವರು ಈ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ಆರೋಪಿಸಲಾಗಿದೆ. ಬಿಡಿಎ ಆಯುಕ್ತರು ಮುಖ್ಯಮಂತ್ರಿ ಮತ್ತು ಅವರ ಮಗನ ಹೆಸರಲ್ಲಿ 12 ಕೋಟಿ ಲಂಚ ಪಡೆದಿದ್ದುದು ಇವರಿಬ್ಬರಿಗೂ ಗೊತ್ತಿದೆ, ಆದರೂ ಆಯುಕ್ತರ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ, ಸೋರಿಕೆಯಾಗಿರುವ ವಾಟ್ಸಾಪ್ ಮತ್ತು ಆಡಿಯೋ ವಿವರಗಳ ದಾಖಲೆಗಳು ನಮ್ಮಲ್ಲಿವೆ, ಜೂನ್ 25 ಮತ್ತು ಜುಲೈ 16ರಂದು ಬಿಡಿಎ ಗುತ್ತಿಗೆದಾರ ಮತ್ತು ಮುಖ್ಯಮಂತ್ರಿ ಮೊಮ್ಮಗ ಶಶಿಧರ್ ನಡುವಣ ವಾಟ್ಸಾಪ್ ಸಂದೇಶದಲ್ಲಿ 7.40 ಕೋಟಿ ಹಣವನ್ನು ಶಶಿಧರ್ ಖಾತೆಗೆ ವರ್ಗಾವಣೆ ಮಾಡಲಾಗಿದೆ.. ಇತ್ಯಾದಿ ಆರೋಪಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹೊರಿಸಲಾಗಿದೆ. ಮಾತ್ರವಲ್ಲ, ವಿಜಯೇಂದ್ರ ಅವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿಯೂ ಇದ್ದಾರೆ. ನಿಜವಾಗಿ,

ಪ್ರಜಾತಂತ್ರದ ಸೋಲು ಗೆಲುವು ಮಾಧ್ಯಮ ಧೋರಣೆಯನ್ನೂ ಹೊಂದಿಕೊಂಡಿದೆ. ಪ್ರಜಾತಂತ್ರದ ಕಾವಲುನಾಯಿ ಎಂಬ ಕಿರೀಟವೊಂದು ಮಾಧ್ಯಮಕ್ಕೆ ದಕ್ಕಿದ್ದರೆ ಅದು ಪುಕ್ಸಟ್ಟೆ ಅಲ್ಲ. ಪ್ರಜಾತಂತ್ರವನ್ನು ಕಾಯುವ ಕೆಲಸವನ್ನು ಮಾಧ್ಯಮಗಳು ನಿರ್ವಹಿಸಬೇಕು. ಕಾವಲು ಕಾಯುವುದೆಂದರೆ, ಸಂವಿಧಾನ ಪುಸ್ತಕದ ಸುತ್ತ ಬಂದೂಕು ಹಿಡಿದು ನಿಲ್ಲುವುದಲ್ಲವಲ್ಲ. ಭ್ರಷ್ಟಾಚಾರ, ಹಿಂಸೆ, ಕೋಮುವಾದ, ಸುಳ್ಳು, ಅನ್ಯಾಯ ಎಲ್ಲವೂ ಪ್ರಜಾತಂತ್ರದ ವೈರಿಗಳು. ಇವು ಬಲಿಷ್ಠವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ. ಈ ಹಿಂದಿನ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದದ್ದೇ ಮಾಧ್ಯಮಗಳು. 2ಜಿ ಸ್ಪೆಕ್ಟ್ರಮ್ ಹಗರಣದ ಬಗ್ಗೆ ಪತ್ರಕರ್ತ ಗೋಪಾಲ ಕೃಷ್ಣನ್ ಸರಣಿ ಲೇಖನಗಳನ್ನು ಬರೆದು ನಾಗರಿಕರ ಗಮನ ಸೆಳೆದಿದ್ದರು. ರಫೇಲ್ ಖರೀದಿ ವ್ಯವಹಾರದ ಮೇಲೆ ಅನು ಮಾನವನ್ನು ವ್ಯಕ್ತಪಡಿಸಿ ದ ಹಿಂದೂ ಪತ್ರಿಕೆಯ ಎನ್. ರಾಮ್ ಅವರು ಸರಣಿ ಲೇಖನಗಳನ್ನು ಬರೆಯುವ ಮೂಲಕ ದೇಶದ ಗಮನ ಸೆಳೆದಿದ್ದರು. ಬೋಫೋರ್ಸ್ ಹಗರಣ ಬೆಳಕಿಗೆ ಬಂದದ್ದೂ ಪತ್ರಕರ್ತರಿಂದಲೇ. ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ದ ಹಿಂದೂ ಪತ್ರಿಕೆಗಳು ಬೋಫೋರ್ಸ್ ವ್ಯವಹಾರದ ಕಳ್ಳ ನಡೆಯನ್ನು ದೇಶದ ಮುಂದಿಟ್ಟವು. ರಕ್ಷಣಾ ಹಗರಣದ ಬಗ್ಗೆ ತೆಹಲ್ಕಾ ಪತ್ರಿಕೆ ನಡೆಸಿದ ತನಿಖಾ ಪತ್ರಿಕೋದ್ಯಮವಂತೂ ವಿಶಿಷ್ಟವಾದುದು. ಈ ದೇಶಕ್ಕೆ ಸ್ಟಿಂಗ್ ಆ ಪರೇಶನ್ ಮಾದರಿ ಯನ್ನು ಪರಿಚಯಿಸಿದ್ದೇ ತೆಹಲ್ಕಾ. ಶಸ್ತ್ರಾಸ್ತ್ರ ಖರೀದಿಯಲ್ಲಿ ತುದಿಯಿಂದ ಬುಡದ ವರೆಗೆ ಹೇಗೆಲ್ಲಾ ಅವ್ಯವಹಾರಗಳು ನಡೆಯಬಲ್ಲುದು ಮತ್ತು ಸೇನೆಯಲ್ಲಿರುವ ಪ್ರಮುಖರೇ ಹೇಗೆ ಅದರಲ್ಲಿ ಭಾಗಿಯಾಗುವರು ಎಂಬ ಬಗ್ಗೆ ದಿಗ್ಭ್ರಮೆ ಮೂಡಿ ಸುವ ವಿವರಗಳನ್ನು ತೆಹಲ್ಕಾ ತನಿಖಾ ಬರಹ ದೇಶದ ಮುಂದಿಟ್ಟಿತು. ಆದ್ದರಿಂದಲೇ,

ಕಾಂಗ್ರೆಸ್‍ನ ಪತ್ರಿಕಾಗೋಷ್ಠಿಯ ಬಗ್ಗೆ ಮಾಧ್ಯಮ ಧೋರಣೆ ಪ್ರಶ್ನಾರ್ಹವೆನಿಸುವುದು.

ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಎರಡು ಪ್ರಮುಖ ವಿಪಕ್ಷಗಳಿರುತ್ತವೆ. ಒಂದು- ಜನರಿಂದ ಆಯ್ಕೆಯಾದ ಪ್ರತಿನಿಧಿಗಳಾದರೆ ಇನ್ನೊಂದು, ಮಾಧ್ಯಮ. ಆಡಳಿತ ಪಕ್ಷದ ಪ್ರತಿ ನಡೆಯನ್ನೂ ಹ ದ್ದಿನ ಕಣ್ಣಿನಿಂದ ವೀಕ್ಷಿಸುವ ಗುರುತರ ಜವಾ ಬ್ದಾರಿ ಈ ಎರಡೂ ವಿಪಕ್ಷಗಳ ಮೇಲಿದೆ. ಆಡಳಿತ ಪಕ್ಷದ ಜನಸ್ನೇಹಿ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯು ವುದು ಮತ್ತು ವಿರೋಧ ಪಕ್ಷಗಳ ವಿರೋಧದ ಅಭಿಪ್ರಾಯವನ್ನು ಜನರ ಮುಂದಿಡುವುದು- ಇವು ಏಕಕಾಲದಲ್ಲಿ ನಡೆಯು ತ್ತಿರಬೇಕಾಗಿದೆ. ವಿರೋಧ ಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಮಾಧ್ಯಮಗಳು ಮಹತ್ವ ಕೊಡದೇ ಹೋದರೆ ಅದು ಆಡಳಿತದಲ್ಲಿರುವವರನ್ನು ನಿರಂಕುಶತೆಯೆಡೆಗೆ ಕೊಂಡೊಯ್ಯ ಬಲ್ಲುದು. ಮ ನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ನಿರ್ಭಯ ಪ್ರಕರಣವನ್ನು ಮತ್ತು ಲೋಕ್‍ಪಾಲ್ ಚಳವಳಿ ಯನ್ನು ಜನರ ಬಳಿಗೆ ಕೊಂಡೊಯ್ದದ್ದೇ ಮಾಧ್ಯಮಗಳು. ವಿರೋಧ ಪಕ್ಷಗಳ ದನಿಗೆ ಜ ನಮಾನ್ಯತೆ ಆ ಸಂದರ್ಭದಲ್ಲಿ ಲಭಿಸಿದ್ದರೆ, ಅದರ ಹಿಂದೆ ಮಾಧ್ಯಮ ಶ್ರಮ ಬಹಳಷ್ಟಿದೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಇದ್ದರೂ ಬಿಜೆಪಿ ಇದ್ದರೂ ಮಾಧ್ಯಮ ಬೆಂಬಲ ದೊರಕದೇ ಹೋದರೆ ಜನಬೆಂಬಲ ಸಿಗುವ ಸಾಧ್ಯತೆ ತೀರಾ ಕಡಿಮೆ. ಈ ಪಕ್ಷಗಳು ಏನು ಹೇಳುತ್ತವೆ ಎಂಬುದನ್ನು ಮಾಧ್ಯಮಗಳು ಜನರಿಗೆ ಮುಟ್ಟಿಸಬೇಕಾಗುತ್ತದೆ. ಹಾಗೆ ಮುಟ್ಟಿಸುವುದರಿಂದ ಆಗುವ ಪರಿಣಾಮಗಳು ಎರಡು.

1. ಆಡಳಿತ ಪಕ್ಷ ಚುರುಕಾಗುತ್ತದೆ. ತನ್ನ ತಪ್ಪುಗಳನ್ನು ವಿರೋಧ ಪಕ್ಷಗಳು ಪ್ರಶ್ನಿಸತೊಡಗಿವೆ ಮತ್ತು ಮಾಧ್ಯಮಗಳು ಅವನ್ನು ಜನರ ಬಳಿಗೆ ಕೊಂಡೊಯ್ಯುತ್ತಿವೆ ಎಂಬ ಭಯ ಪ್ರಾರಂಭವಾಗುತ್ತದೆ.

2. ವಿರೋಧ ಪಕ್ಷ ಜನರಿಗೆ ಹತ್ತಿರವಾಗುತ್ತದೆ.

ಪ್ರಜಾತಂತ್ರದಲ್ಲಿ ಇವೆರಡಕ್ಕೂ ಮಹತ್ವಪೂರ್ಣ ಸ್ಥಾನವಿದೆ. ವಿರೋಧದ ಧ್ವನಿ ಯಾವಾಗಲೂ ಪ್ರಜಾತಂತ್ರವನ್ನು ಗಟ್ಟಿಗೊಳಿ ಸುವ ಆಯುಧ. ಆಡಳಿತ ಪಕ್ಷದ ತಪ್ಪುಗಳನ್ನು ವಿಪಕ್ಷಗಳು ಜನರ ಬಳಿಗೆ ಕೊಂಡೊಯ್ಯಬೇಕಾದರೆ ಮಾಧ್ಯಮ ಬೆಂಬಲ ಅಗತ್ಯವಾಗಿರುತ್ತದೆ. ಆದ್ದರಿಂದಲೇ, ಕಾಂಗ್ರೆಸ್ ಪತ್ರಿಕಾಗೋಷ್ಠಿಯ ಬಗ್ಗೆ ಕನ್ನಡ ಪತ್ರಿಕೆಗಳ ಗಾಢ ಮೌನವು ಅಚ್ಚರಿಯನ್ನುಂಟು ಮಾಡಿರುವುದು. ಮೂರು ಪತ್ರಿಕೆಗಳನ್ನು ಬಿಟ್ಟರೆ ಉಳಿದೆಲ್ಲ ಪತ್ರಿಕೆಗಳು ಯಾಕೆ ಆ ಪತ್ರಿಕಾಗೋಷ್ಠಿಯ ವಿವರಗಳನ್ನು ಪ್ರಕಟಿಸದೇ ದೂರ ಉಳಿದುವು? ಈ ಪತ್ರಿಕಾಗೋಷ್ಠಿ ಅವುಗಳಿಗೇಕೆ ಮಹತ್ವಪೂರ್ಣ ಅನ್ನಿಸಲಿಲ್ಲ? ದಾಖಲೆ ಬಿಡುಗಡೆ ಮಾಡಿದರಷ್ಟೇ ಆರೋಪಗಳು ಮುಖ್ಯವಾಗುವುದೇ? ಪತ್ರಿಕಾಗೋಷ್ಠಿಯಲ್ಲಿ ಏನೆಲ್ಲ ಆರೋಪಗಳನ್ನು ಹೊರಿಸಲಾಗಿದೆಯೋ ಅದರ ಜವಾಬ್ದಾರಿ ಹೊರಿಸಿದ ಪಕ್ಷದ ಮೇಲಿದೆ. ಅದನ್ನು ಸಾಬೀತುಪಡಿಸದಿದ್ದರೆ ಜನರ ಕಣ್ಣಲ್ಲಿ ಆ ಪಕ್ಷ ಕೇವಲವಾಗುತ್ತದೆ. ಹಾಗಂತ, ಅದು ಹೊರಿಸಿದ ಆರೋಪವನ್ನೇ ನಿರ್ಲಕ್ಷಿಸುವುದೆಂದರೆ, ಪತ್ರಿಕೆಗಳೇ ನ್ಯಾಯಾಧೀಶರ ಪಾತ್ರ ನಿಭಾಯಿಸಿದಂತಾಗುತ್ತದೆ.

ಇದು ಸರಿಯಲ್ಲ.