ಕಿರುಕುಳಕ್ಕಿಂತ ಕಿರುಕುಳ ಪೋಸ್ಟ್ ಗೆ ಸಿಕ್ಕ ಲೈಕ್‌ಗಳೇ ಮುಖ್ಯವಾಗುವ ಕಾಲ

0
546

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

ಇತ್ತೀಚೆಗೆ ಮಂಗಳೂರಿನ ತರುಣಿಯೋರ್ವಳು ಇನ್‌ಸ್ಟಾ ಗ್ರಾಮ್‌ನಲ್ಲಿ ತನಗಾದ ಅನುಭವವೊಂದನ್ನು ಹಂಚಿಕೊಂಡಿದ್ದಳು. ನಗರದ ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಧ್ಯ ವಯಸ್ಕ ವ್ಯಕ್ತಿ ನೀಡಿದ ಕಿರುಕುಳವನ್ನು ಆತನ ಫೋಟೋ ಸಹಿತ ಹಂಚಿಕೊಂಡಿದ್ದಳು. ‘ನಿನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವೆ’ ಎಂದು ಬೆದರಿಸಿದಾಗ ಆತ ಮಾಸ್ಕ್ ಸರಿಸಿ ಲಕ್ಷಣವಾಗಿ ಪೋಸು ಕೊಟ್ಟ ಎಂದೂ ಹೇಳಿದ್ದಳು. ಮಾತ್ರವಲ್ಲ, ಇನ್ನೊಂದು ಗಂಭೀರ ಪ್ರಶ್ನೆಯೂ ಆಕೆಯ ಪೋಸ್ಟ್ ನಲ್ಲಿತ್ತು. ಆತನ ಕಿರುಕುಳವನ್ನು ವಿರೋಧಿಸಿ ತಾನು ದೊಡ್ಡ ದನಿಯಲ್ಲಿ ಪ್ರತಿಭಟಿಸಿದರೂ ಬಸ್‌ನಲ್ಲಿರುವವರಾಗಲಿ, ಚಾಲಕ, ನಿರ್ವಾಹಕರಾಗಲಿ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದೂ ಹೇಳಿಕೊಂಡಿದ್ದಳು. ನಿಜವಾಗಿ,

ಆಕೆಯ ಪೋಸ್ಟ್ ನಲ್ಲಿದ್ದ ಮೊದಲ ಭಾಗಕ್ಕಿಂತ ಆಘಾತಕಾರಿಯಾಗಿರುವುದು ಆ ಪೋಸ್ಟ್ ನ ಈ ಎರಡನೇ ಭಾಗ. ಈಕೆ ಜೋರು ದನಿಯಲ್ಲಿ ಪ್ರತಿಭಟಿಸಿದ ಹೊರತಾಗಿಯೂ ಬಸ್ ನಲ್ಲಿದ್ದವರಿಂದ ಸಿಗಬೇಕಾದ ಬೆಂಬಲ ಏಕೆ ಸಿಗಲಿಲ್ಲ? ಚಾಲಕ, ನಿರ್ವಾಹಕರು ತಕ್ಷಣ ಆ ತರುಣಿಯ ಬೆಂಬಲಕ್ಕೆ ಏಕೆ ನಿಲ್ಲಲಿಲ್ಲ?

ಇಲ್ಲಿ ಇನ್ನೊಂದು ಘಟನೆಯನ್ನೂ ಪ್ರಸ್ತಾಪಿಸಬಹುದು.

ಜನವರಿ 3ರಂದು ನಡೆದ ಘಟನೆ ಇದು. ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕ್ಯಾವಾಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯನ್ನು ದೇವಾಲಯದ ಅರ್ಚಕ ಸತ್ಯನಾರಾಯಣ ಮತ್ತು ಇಬ್ಬರು ಗೆಳೆಯರು ಸೇರಿಕೊಂಡು ಬರ್ಬರವಾಗಿ ಅತ್ಯಾಚಾರ ಮಾಡುತ್ತಾರೆ ಮತ್ತು ಆ ರಾತ್ರಿ ಆಕೆಯನ್ನು ಆಕೆಯ ಮನೆಯ ಹತ್ತಿರ ಎಸೆದು ಹೋಗುತ್ತಾರೆ. ಕ್ಯಾವಾಲಿ ಗ್ರಾಮದ ಹತ್ತಿರದ ಮೇವ್ಲಿ ಗ್ರಾಮದಲ್ಲಿರುವ ತಾಕೂರ್ಜಿ ದೇವಾಲಯಕ್ಕೆ ಈ ಮಧ್ಯವಯಸ್ಕ ಮಹಿಳೆ ಹೋಗಿದ್ದರು. ಸಂಜೆಯ ಹೊತ್ತು. ಈ ಮಹಿಳೆಯ ತಾಯಿಯ ಗ್ರಾಮವೂ ಅದುವೇ. 5 ಮಕ್ಕಳ ತಾಯಿಯಾದ ಆಕೆಗೆ ಆ ದೇವಾಲಯ ಹೊಸತೂ ಆಗಿರಲಿಲ್ಲ. ಊರಿನ ಮಂದಿ ಆ ದೇವಾಲಯಕ್ಕೆ ಹೋಗಿ ಆಶೀರ್ವಾದ ಪಡಕೊಂಡು ಬರುವುದು ಸಾಮಾನ್ಯವಾಗಿತ್ತು. ಮಕ್ಕಳು ಮತ್ತು ದಂಪತಿಗಳು ದೇವಾಲಯಕ್ಕೆ ನಡಕೊಳ್ಳುವವರ ಪೈಕಿ ಹೆಚ್ಚಿದ್ದರು. ವಿಷಾದ ಏನೆಂದರೆ,
ಈ ಘಟನೆಗೆ ಊರವರು ಮತ್ತು ಪೊಲೀಸರಿಂದ ವ್ಯಕ್ತವಾದ ಪ್ರತಿಕ್ರಿಯೆ.

ಈ ಮಹಿಳೆಯ ಗುಪ್ತಾಂಗವನ್ನು ಘಾಸಿಗೊಳಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಳು. ಆದರೆ, ಅರ್ಚಕ ಒಂದು ಕತೆ ಕಟ್ಟಿದ. ಆಕೆ ದೇವಾಲಯದ ಸಮೀಪದ ಬಾವಿಗೆ ಬಿದ್ದ ಕಾರಣದಿಂದಾಗಿ ಹೀಗಾಗಿದೆ ಎಂದು ವೀಡಿಯೋ ಮೂಲಕ ಹೇಳಿದ. ಊರವರು ನಂಬಿದರು. ಪೊಲೀಸರೂ ನಂಬಿದರು. ಎಲ್ಲಿಯ ವರೆಗೆಂದರೆ, ಮೃತದೇಹದ ಪೋಸ್ಟ್ ಮಾರ್ಟಂ ನಡೆದಿದ್ದೇ ಜನವರಿ 5ರಂದು. ಅದನ್ನು ವೀಡಿಯೋ ಕೂಡ ಮಾಡಲಾಗಿಲ್ಲ. ಆರಂಭದಲ್ಲಿ ಕೇಸು ದಾಖಲಿಸುವುದಕ್ಕೂ ಪೊಲೀಸರು ಮುಂದಾಗಲಿಲ್ಲ. 48 ಗಂಟೆಗಳ ಬಳಿಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದರು. ಮಾತ್ರವಲ್ಲ, ಅರ್ಚಕನನ್ನು ಗ್ರಾಮದ ಪ್ರಧಾನರೇ ಪೊಲೀಸರಿಂದ ಅಡಗಿಸಿಟ್ಟಿದ್ದರು ಎಂಬ ಆರೋಪ ಇದೆ. ಆತ ಅದೇ ಊರಲ್ಲಿದ್ದರೂ ಪೊಲೀಸರು ಪಕ್ಕದ ಜಿಲ್ಲೆಯಲ್ಲಿ ಆತನ ಪತ್ತೆಗಾಗಿ ಹುಡುಕಾಡುತ್ತಿದ್ದರು. 3 ದಿನಗಳ ಬಳಿಕ ಆತನ ಬಂಧನವಾಯಿತು.

ಒಂದುವೇಳೆ, ಜೀವಂತ ಇರುತ್ತಿದ್ದರೆ ಇವತ್ತು ಆಕೆ ಕೊರೋನಾ ವ್ಯಾಕ್ಸಿನ್ ಅಭಿಯಾನದ ಭಾಗವಾಗಿರುತ್ತಿದ್ದಳು.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಯುವತಿ ಎತ್ತಿರುವ ಪ್ರಶ್ನೆ ಮತ್ತು ಬದೌನ್‌ನಲ್ಲಿ ನಾಗರಿಕರು ತೋರಿರುವ ಪ್ರತಿಕ್ರಿಯೆಯು ಕೆಲವು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

1. ಹೆಣ್ಣಿನ ಮೇಲೆ ದಾಳಿಯಾಗುತ್ತಿದ್ದರೂ ನಾಗರಿಕ ಪ್ರಜ್ಞೆಯನ್ನು ಅದು ಬಡಿದೆಬ್ಬಿಸದೇ ಇರುವುದಕ್ಕೆ ಕಾರಣ ಏನು?

2. ಕಿರುಕುಳ ನೀಡುವವರಲ್ಲಿರುವ ಭಂಡ ಧೈರ್ಯಕ್ಕೂ ನಾಗರಿಕರ ಈ ಮೌನ ವೀಕ್ಷಣೆಗೂ ಸಂಬಂಧ ಇದೆಯೇ?

3. ಹೆಣ್ಣಿನ ಕುರಿತಾದ ಅಸಡ್ಡೆ ಭಾವ ಪುರುಷರ ಈ ನಿರ್ಲಕ್ಷ್ಯ ಧೋರಣೆಗೆ ಕಾರಣವೇ?

4. ಇಂಥ ಸ್ಥಿತಿಯನ್ನು ಬದಲಿಸುವುದಕ್ಕೆ ಕಾನೂನುಗಳಿಂದ ಸಾಧ್ಯವೇ?

ಇಂಥ ಪ್ರಶ್ನೆಗಳು ಇನ್ನೂ ಇವೆ.

ಮಂಗಳೂರಿನ ತರುಣಿಯಾಗಲಿ, ಬದೌನ್‌ನ ಮಹಿಳೆಯಾಗಲಿ ಇಬ್ಬರೂ ಒಂದು ಮನಸ್ಥಿತಿಯ ಬಲಿಪಶುಗಳು. ಮಂಗಳೂರಿನಲ್ಲಿ ಆತ ತರುಣಿಗೆ ಕಿರುಕುಳ ಕೊಟ್ಟಿರುವುದಷ್ಟೇ ಅಲ್ಲ, ಆತನಲ್ಲಿ ಆ ಬಗ್ಗೆ ಯಾವ ಭಯವೂ ಇರಲಿಲ್ಲ. ಪಶ್ಚಾತ್ತಾಪವೂ ಇರಲಿಲ್ಲ. ಆ ಕಾರಣದಿಂದಲೇ ಆತ ನಿರ್ಲಜ್ಜೆಯಿಂದ ಫೋಟೋಕ್ಕೆ ಪೋಸು ಕೊಟ್ಟಿದ್ದ. ತಾನು ಮಾಡುತ್ತಿರುವುದು ತಪ್ಪು ಎಂಬ ಭಾವ ಓರ್ವನ ಲ್ಲಿದ್ದರೆ ಕನಿಷ್ಠ ಅದಕ್ಕಾಗಿ ಆತ ಹೆಮ್ಮೆ ಪಡುವುದಕ್ಕೋ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಭಾವದಲ್ಲಿ ವರ್ತಿಸುವುದಕ್ಕೋ ಸಾಧ್ಯವಿಲ್ಲ. ಇಲ್ಲಿ ಆ ವ್ಯಕ್ತಿಯಲ್ಲಿ ಆ ಭಾವ ವ್ಯಕ್ತವಾಗಿಲ್ಲ. ಇದಕ್ಕೆ ಎರಡು ಕಾರಣಗಳಿರಬಹುದು.

1. ಒಂದೋ ಆತ ಇಂಥ ಕಿರುಕುಳದಲ್ಲಿ ಪಳಗಿದ್ದಾನೆ. ಈ ಮೊದಲೂ ಇಂಥ ಎಷ್ಟೋ ಕಿರುಕುಳವನ್ನು ನೀಡಿದ್ದಾನೆ.

2. ಈತ ಈ ಹಿಂದೆ ಇಂಥ ಕಿರುಕುಳವನ್ನು ಕೊಟ್ಟಾಗಲೂ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರತಿಭಟಿಸಿಲ್ಲ. ಇದುವೇ ಆತನನ್ನು ಇಂಥದ್ದೊಂದು ಧೈರ್ಯಕ್ಕೆ ಪ್ರೇರೇಪಿಸಿದೆ.

ಈ ಎರಡೂ ಕಾರಣಗಳಲ್ಲಿ ಯಾವುದಿದ್ದರೂ ಅವು ಗಂಭೀರವೇ. ಹಾಗಂತ,

ಇಂಥ ಮನಸ್ಥಿತಿ ಬರೇ ಒಂದು ಪ್ರದೇಶಕ್ಕೋ ಒಂದು ರಾಜ್ಯಕ್ಕೋ ಸೀಮಿತವಾಗಿಲ್ಲ ಎಂಬುದನ್ನು ಬದೌನ್ ಘಟನೆ ಸಾಬೀತು ಪಡಿಸುತ್ತಿದೆ. ಅಲ್ಲೂ ನಾಗರಿಕ ಪ್ರಜ್ಞೆಗೆ ಏನೂ ಆಗಿಲ್ಲ. ಆರೋಪಿಗಳನ್ನೇ ರಕ್ಷಿಸುವ ಮಟ್ಟಿಗೆ ಆ ಪ್ರಜ್ಞೆ ಸತ್ತು ಹೋಗಿದೆ. ಸದ್ಯ ದುರಸ್ತಿ ಕಾರ್ಯ ನಡೆಯಬೇಕಿರುವುದು ಇಲ್ಲೇ.

ಮಹಿಳೆಯರ ಸುರಕ್ಷಿತತೆಯ ದೃಷ್ಟಿಯಿಂದ ರಚನೆಯಾದ ಕಾನೂನುಗಳನ್ನು ಪಟ್ಟಿ ಮಾಡಲು ಕುಳಿತರೆ ಕೈಯೇ ಸೋಲಬಹುದು. ಕಾನೂನುಗಳ ಕೊರತೆಯೇನೂ ಈ ದೇಶದಲ್ಲಿಲ್ಲ. 2012ರ ನಿರ್ಭಯ ಘಟನೆಯ ಬಳಿಕವಂತೂ ಹೆಣ್ಣಿನ ಸುರಕ್ಷಿತತೆಯ ಬಗ್ಗೆ ಟನ್ನುಗಟ್ಟಲೆ ಬರಹಗಳು, ಭಾಷಣ, ವೀಡಿಯೋಗಳೂ ಪ್ರಸಾರ ವಾದುವು. ಟಿ.ವಿ. ಚಾನೆಲ್‌ಗಳಲ್ಲಿ ಅಸಂಖ್ಯ ಡಿಬೇಟ್‌ಗಳು ನಡೆದುವು. ಕಾನೂನಿನ ಹಲ್ಲುಗಳಿಗೆ ಮತ್ತಷ್ಟು ತೀವ್ರತೆಯನ್ನು ತುಂಬಲಾಯಿತು. ಮಾತ್ರವಲ್ಲ, ನಿರ್ಭಯ ಪ್ರಕರಣದ ಆರೋಪಿಗಳನ್ನು ಗ ಲ್ಲಿಗೇರಿಸಿದ್ದೂ ನಡೆಯಿತು. ಇಷ್ಟೆಲ್ಲಾ ಆಗಿಯೂ ಈ ದೇಶದಲ್ಲಿ ಹೆಣ್ಣು ಸುರಕ್ಷಿತಳೇ ಎಂದು ಪ್ರಶ್ನಿಸಿದರೆ, ನಿರಾಸೆಯ ಉತ್ತರವನ್ನಲ್ಲದೇ ಹೌದು, ಸುರಕ್ಷಿತೆ ಎಂದು ಹೇಳುವ ಯಾವ ವಾತಾವರಣವೂ ಇಲ್ಲ. ಹೆಣ್ಣು ರಾತ್ರಿ ಹೊರ ಹೋಗುವುದು ಸುರಕ್ಷಿತವಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೇ ಹೇಳುವಷ್ಟು ಹೆಣ್ಣು ಅಸುರಕ್ಷಿತೆ. ಅಂದಹಾಗೆ,

ಈ ಅಸುರಕ್ಷಿತತೆಗೆ ಕಾಡುಪ್ರಾಣಿಗಳೋ ಪ್ರಕೃತಿ ಮುನಿಸುವಿಕೆಯೋ ಕಾರಣ ಅಲ್ಲ. ಹೆಣ್ಣು ಮನೆಯಿಂದ ಹೊರಗಿಳಿದರೆ ಪ್ರಕೃತಿ ಆಕೆಯನ್ನು ಅಟ್ಟಾಡಿಸಿ ಮಳೆ ಸುರಿಸುವುದಿಲ್ಲ. ಸಿಡಿಲು ಸಿಡಿಯುವುದಿಲ್ಲ. ಆಕೆಯನ್ನೇ ಗುರಿಯಾಗಿಸಿಕೊಂಡು ಪ್ರಕೃತಿ ವಿಕೋಪಗಳು ನಡೆಯುವುದೂ ಇಲ್ಲ. ಅಲ್ಲದೇ, ಕಾಡಿನಿಂದ ಪ್ರಾಣಿಗಳು ಬಂದು ಹೆಣ್ಣಿನ ಮೇಲೆ ದಾಳಿ ಮಾಡುವುದೂ ಇಲ್ಲ. ಆಕೆಯ ಅಸುರಕ್ಷಿತತೆಗೆ ಶಾರೀರಿಕ ರೂಪದಲ್ಲಿ ತುಸು ಭಿನ್ನವಾಗಿರುವ ಆಕೆಯಂಥ ಜೀವಿಯೇ ಕಾರಣ. ಮಾತ್ರವಲ್ಲ,

ಇದನ್ನು ತಡೆಗಟ್ಟುವುದಕ್ಕೆ ಬರೇ ಕಾನೂನುಗಳಿಂದ ಮಾತ್ರ ಸಾಧ್ಯವಾಗದು ಎಂಬುದಕ್ಕೆ ಈವರೆಗಿನ ಘಟನಾವಳಿಗಳೇ ಸಾಕ್ಷಿ. ಕಾನೂ ನು ಎಷ್ಟೇ ಬಲವಾಗಿದ್ದರೂ ಅದಕ್ಕೊಂದು ಮಿತಿಯಿದೆ. ಆ ಮಿತಿಯಾಚೆ ಅದು ಕೆಲಸ ಮಾಡಲಾರದು. ತಪ್ಪೆಸಗಿದವನಿಗೆ ಶಿಕ್ಷೆಯನ್ನಷ್ಟೇ ಅದು ಕೊಡಬಲ್ಲುದು. ತಪ್ಪೆಸಗಿದರೂ ತಪ್ಪಿಸಿ ಕೊಳ್ಳುವುದಕ್ಕೆ ಕೆಲವೊಮ್ಮೆ ಅದರದ್ದೇ ಆದ ನಿಯಮಗಳು ಅವಕಾಶ ಮಾಡಿಕೊಡುವುದೂ ಇದೆ. ಆದ್ದರಿಂದ ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಕಾನೂನಿನ ಮೊರೆ ಹೋಗುವುದೊಂದೇ ಪರಿಹಾರ ಅಲ್ಲ. ಹೆಣ್ಣು ಅಸುರಕ್ಷಿತವಾಗಿದ್ದರೆ ಅದು ಗಂಡಿನಿಂದ. ಈ ಹಿನ್ನೆಲೆಯಲ್ಲಿ ಗಂಡಿನ ಮನಸ್ಥಿತಿಯನ್ನು ಬದಲಿಸುವ ಕ್ರಮಗಳು ಅಭಿಯಾನ ರೂಪದಲ್ಲಿ ನಡೆಯಬೇಕು. ಮನೆಯಿಂದ ಪ್ರಾರಂಭವಾಗಬೇಕಾದ ಈ ಅಭಿಯಾನ ಮಸೀದಿ, ಮಂದಿರ, ಚರ್ಚ್, ಸ್ತೂಪಗಳ ಮೂಲಕ ದೇಶದ ಮೂಲೆಮೂಲೆಗೂ ತಲುಪಬೇಕು. ಹೆಣ್ಣು ಮತ್ತು ಗಂಡಿನ ಮೊದಲ ತರಬೇತಿ ಸ್ಥಳವೇ ಮನೆ. ಮೊದಲ ಗುರುವೇ ಹೆತ್ತವರು. ಈ ಮನೆಯಲ್ಲಿ ಹೆಣ್ಣು ಯಾವ ರೀತಿಯ ವ್ಯಾಖ್ಯಾನಕ್ಕೆ ಒಳಗಾಗುತ್ತಾಳೆ ಎಂಬುದ ರಿಂದ ಆಕೆ ಸುರಕ್ಷಿತಳೋ ಅಲ್ಲವೋ ಎಂಬುದು ನಿರ್ಧಾರ ವಾಗುತ್ತದೆ. ಗಂಡಿನ ಗುಲಾಮೆ ಹೆಣ್ಣು ಎಂದೋ ಆಕೆ ಗಂಡಿನ ಆಜ್ಞೆಯಂತೆ ಮತ್ತು ಆತನಿಗೆ ತಗ್ಗಿ-ಬಗ್ಗಿ ನಡೆಯಬೇಕು ಎಂದೋ ಕಲಿಸುವ ವಾತಾವರಣ ಮನೆಯಲ್ಲಿದ್ದರೆ, ಅಲ್ಲಿಂದ ಹೊರ ಬರುವ ಪ್ರತಿ ಗಂಡೂ, ಹೆಣ್ಣಿನ ಬಗ್ಗೆ ತಾತ್ಸಾರ ಭಾವವನ್ನು ಹೊಂದಿರಬಲ್ಲ. ಹಾಗೆಯೇ ಆ ಮನೆಯ ಹೆಣ್ಣು ಮಗಳಲ್ಲಿ ಕಿರುಕುಳವನ್ನು ಸಹಿಸುವ ಮತ್ತು ಪ್ರತಿ ಆಡದಿರುವ ಭಾವವು ಸಹಜವಾಗಿಯೇ ಇರಬಲ್ಲುದು.

ಅಷ್ಟೇ ಅಲ್ಲ,

ಒಂದುವೇಳೆ, ಮನೆಯಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಬೇಧ ಭಾವ ನಡೆಯುತ್ತಿದ್ದರೂ ಶಾಲೆಯಲ್ಲಿ ಸೂಕ್ತ ತರಬೇತಿ ಸಿಗುವಂತಿದ್ದರೆ ಅದೂ ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಕಾರಣವಾಗಬಹುದು. ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಶಾಲೆಯ ಪಾತ್ರವೂ ಸಣ್ಣದಲ್ಲ. ಆದರೆ, ಶಾಲೆಯಲ್ಲಿ ಹೇಳಲಾಗುವ ಇತಿಹಾಸದ ಕತೆಗಳಲ್ಲಿ ಪುರುಷ ಪಾತ್ರ ಹೇಗಿದೆ ಮತ್ತು ಸ್ತ್ರೀ ಪಾತ್ರ ಹೇಗಿರುತ್ತದೆ ಎಂಬುದು ಮುಖ್ಯ. ಕೆಲವೊಮ್ಮೆ ಶಿಕ್ಷಕರು ಗ್ರಹಿಸದ ಪಾಠವನ್ನು ಇತಿಹಾಸದ ಕತೆಗಳಿಂದ ಮಕ್ಕಳು ಗ್ರಹಿಸುವ ಸಾಧ್ಯತೆ ಇರುತ್ತದೆ. ಹಾಗೆ ಅವರು ಗ್ರಹಿಸುವಾಗ ಗಂಡು ವಿಜೃಂಭಿಸಬಲ್ಲ. ಹೆಣ್ಣು ಅಬಲೆಯಂತೆ ಕಾಣಿಸಬಲ್ಲಳು. ಆದ್ದರಿಂದ ಶಾಲೆಯಲ್ಲಿ ಸಿಗುವ ಪಾಠವು ವಿದ್ಯಾರ್ಥಿಗಳ ಗ್ರಹಿಸುವಿಕೆಯ ಸಾಮರ್ಥ್ಯವನ್ನು ಹೊಂದಿಕೊಂಡೂ ಇರುತ್ತದೆ. ಕೆಲವೊಮ್ಮೆ ಶಿಕ್ಷಕರ ಪಾಠವನ್ನು ಬೇರೆ ಬೇರೆ ವಿದ್ಯಾರ್ಥಿಗಳು ಬೇರೆ ಬೇರೆ ರೂಪದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಮನೆಯಲ್ಲಿ ಯಾವ ವಾತಾವರಣ ಇದೆಯೋ ಅದಕ್ಕೆ ಪೂರಕವಾಗಿ ಅವರು ಅದನ್ನು ಓದಿಕೊಳ್ಳುವುದಕ್ಕೂ ಅವಕಾಶ ಇದೆ. ಸದ್ಯ ತುರ್ತಾಗಿ ಇಲ್ಲೆಲ್ಲೋ ಗಮನ ಹರಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ,

ಕಿರುಕುಳ ಪೋಸ್ಟ್ಗೆ ಎಷ್ಟು ಲೈಕ್‌ಗಳು ಬಿದ್ದವು, ಎಷ್ಟು ಶೇರ್ ಆದುವು ಎಂಬುದು ಕಿರುಕುಳಕ್ಕಿಂತ ಮುಖ್ಯ ಸುದ್ದಿಯಾಗಿಬಿಟ್ಟೀತು.