ಪರಸ್ಪರ ವೈರತ್ವವನ್ನೇ ಹೊಂದಿರದ ಅವರೇಕೆ ಹಂತಕರಾಗುತ್ತಾರೆ?

0
1393

ಏ ಕೆ ಕುಕ್ಕಿಲ

ದೆಹಲಿಯ ಭಾಗೀರಥಿ ವಿಹಾರ್,

ಮುಸ್ತಫಾಬಾದ್‍ನ ಸಮೀಪವಿರುವ ಈ ಕಾಲನಿಯಲ್ಲಿ ನನ್ನ ಮತ್ತು ಸಹೋದರನ ಮನೆಯನ್ನು ಬಿಟ್ಟರೆ ಉಳಿದೆಲ್ಲ ಮನೆಗಳೂ ಹಿಂದೂಗಳದ್ದು. ನಾವು ಈ ಭಾಗೀರಥಿ ವಿಹಾರ್ ನಲ್ಲಿ ಕಳೆದ 10-12 ವರ್ಷಗಳಿಂದಲೂ ವಾಸವಾಗಿದ್ದೇವೆ. ನೆರೆಯ ಹಿಂದೂಗಳ ಜೊತೆಗಿನ ನಮ್ಮ ಸಂಬಂಧವೂ ಅತ್ಯುತ್ತಮವಾಗಿದೆ. ರಾತ್ರಿಯ ಸುಮಾರು 7 ಗಂಟೆ. ಹೊರಗಡೆ ಭಾರೀ ಗಲಾಟೆಯ ಸದ್ದು. ಏನೆಂದು ನೋಡಿದೆ. ಒಂದು ದೊಡ್ಡ ಗುಂಪು ನಮ್ಮ ಮನೆಯತ್ತ ಬರುತ್ತಿರುವುದು ಕಾಣಿಸಿತು. ಆ ಗುಂಪು ನಮ್ಮ ಮನೆಯ ಬಾಗಿಲ ಬಳಿ ಬಂದು ನಿಂತಿತು. ನನ್ನ ಮಕ್ಕಳು ಅಳತೊಡಗಿದರು. ‘ಅಮ್ಮ ಅವರು ನಮ್ಮನ್ನು ಏನಾದ್ರೂ ಮಾಡಿಯಾರೋ’ ಎಂದು ಮಕ್ಕಳು ಅಳುತ್ತಾ ಪ್ರಶ್ನಿಸತೊಡಗಿದರು. ನಾನು ಅವರನ್ನು ಬಲವಾಗಿ ಅಪ್ಪಿ ಹಿಡಿದು ಅಳುವಿನ ದನಿ ಹೊರಗೆ ಕೇಳಿಸದಿರಲಿ ಎಂದು ತಡೆದೆ. ನಮ್ಮ ಮನೆಯಲ್ಲಿ ನಾನು, ಗಂಡ, ನನ್ನಿಬ್ಬರು ಮಕ್ಕಳು, ನನ್ನ ಸಹೋದರಿ, ಸಹೋದರ ಮತ್ತು ಅಮ್ಮ ಸೇರಿದಂತೆ ತುಂಬು ಕುಟುಂಬ ವಾಸವಿತ್ತು. ಮೇಲೆ ಮತ್ತು ಕೆಳಗಿನ ಅಂತಸ್ತಿನಲ್ಲಿ ನಮ್ಮ ಬದುಕು ಸಾಗುತ್ತಿತ್ತು. ಮೇಲಿನಂತಸ್ತಿನಲ್ಲಿದ್ದ ಗಂಡ ಹೊರಗೆ ಬಂದರು. 50ರಷ್ಟಿದ್ದ ಗುಂಪು ಅವರನ್ನು ಎಳೆದುಕೊಂಡು ಹೋಯಿತು. ಗುಂಪಿನ ದಾಳಿಗೆ ಬೆದರಿ ನನ್ನ ಸಹೋದರ ಮಂಚದ ಕೆಳಗೆ ಅವಿತು ಕೂತಿದ್ದ. ಆತನನ್ನು ಗುಂಪು ಎಳೆದು ಎತ್ತಿಕೊಂಡು ಹೋಯಿತು. ಥಳಿಸ್ಬೇಡಿ, ನಾನು ನಿಮ್ಮ ಸಹೋದರ ಎಂದಾತ ಪದೇಪದೇ ಬೇಡಿಕೊಳ್ಳುತ್ತಿದ್ದ. ‘ಕೂಲಿ ಕೆಲಸ ಮಾಡಿ ಕುಟುಂಬ ಸಾಗಿಸುತ್ತಿದ್ದೇನೆ’ ಎಂದು ಹೇಳಿದರೂ ಗುಂಪು ಹೊಡೆಯುವುದನ್ನು ನಿಲ್ಲಿಸದೇ ಕೆಳಗೆ ಎಳೆದುಕೊಂಡು ಹೋಯಿತು. ನಾನು ಬಾಗಿಲು ಹಾಕಿಕೊಂಡೆ. ಗುಂಪು ಬಾಗಿಲಿಗೆ ಬಡಿಯತೊಡ ಗಿತು. ಬಾಗಿಲು ತೆರೆಯದಿದ್ದರೆ ಬೆಂಕಿ ಕೊಡುವುದಾಗಿ ಬೆದರಿಕೆ ಹಾಕಿತು. ಬಾಗಿಲು ತೆರೆಯುವೆ, ದಯವಿಟ್ಟು ಬೆಂಕಿ ಕೊಡಬೇಡಿ ಎಂದು ಒಳಗಿನಿಂದಲೇ ಅಂಗಲಾಚಿದೆ. ಈ ನಡುವೆ ಅವರು ವಿದ್ಯುತ್ ಸಂಪರ್ಕ ತಪ್ಪಿಸಿದರು. ಒಳಗೆಲ್ಲಾ ಕತ್ತಲೆ. ನಾನು ಬಾಗಿಲು ತೆಗೆಯಲೆಂದು ಕೀ ಹಾಕಲು ಪ್ರಯತ್ನಿಸಿದರೂ ಕೈ ನಡುಗುತ್ತಿರುವ ಕಾರಣ ಸಾಧ್ಯವಾಗಲಿಲ್ಲ. ನಡುಕ ಎಷ್ಟಿತ್ತೆಂದರೆ ಕೀ ಒಂದು ಬಾರಿ ಕೆಳಗೆ ಬಿತ್ತು. ಹೊರಗಿನಿಂದ ಫರೀನ್, ಫರೀನ್ ಎಂಬ ಕೂಗು ಕೇಳಿಸತೊಡಗಿದಾಗ ಬಾಗಿಲು ತೆರೆದೆ. ನಜ್ಜುಗುಜ್ಜಾಗಿದ್ದ ಗಂಡ ಎದುರಿದ್ದ. ಸಹೋದರ ಎಲ್ಲಿದ್ದಾನೆ ಎಂದು ಪ್ರಶ್ನಿಸಿದ. ನನಗಾದರೂ ಹೇಗೆ ಗೊತ್ತು? ಆತನನ್ನು ಅವರು ಎತ್ತಿಕೊಂಡು ಹೋಗಿದ್ದರಲ್ಲವೇ? ಸಹೋದರನನ್ನು ಹುಡುಕುವುದಕ್ಕಾಗಿ ನಾವೆಲ್ಲರೂ ಮನೆಯಿಂದ ಹೊರಗಿಳಿದೆವು. ನಮಗೆ ಬೇರೆ ದಾರಿಯಿರಲಿಲ್ಲ. ಆತ ಏನಾಗಿದ್ದಾನೆ, ಎಲ್ಲಿದ್ದಾನೆ ಎಂಬುದು ಗೊತ್ತಿರಲಿಲ್ಲ. ಈ ನಡುವೆ ಆ ಗುಂಪು ಆತನನ್ನು ಎತ್ತಿಕೊಂಡು ಹೋಗಿ ಹತ್ಯೆ ಮಾಡಿರುವುದಾಗಿ ನೆರೆಯವರು ತಿಳಿಸಿದರು.

ನಮಗಲ್ಲಿ ನಿಲ್ಲಲಾಗಲಿಲ್ಲ. ಸುರಕ್ಷಿತತೆಯ ದೃಷ್ಟಿಯಿಂದ ನಾವಲ್ಲಿಂದ ತೆರಳಲೇಬೇಕಿತ್ತು. ನೆರೆಯವರಲ್ಲಿ ನಮ್ಮ ತೀರ್ಮಾನವನ್ನು ತಿಳಿಸಿದೆವು. ಆದರೆ ಅವರು ಸುತಾರಾಂ ಒಪ್ಪಲಿಲ್ಲ. ನೀವು ಈಗ ಹೋಗಬೇಡಿ, ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದರು. ನಿಮಗೆ ಹೀಗೆ ಒಂಟಿಯಾಗಿ ಹೋಗುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದರು. ಧೈರ್ಯದ ಪ್ರಶ್ನೆಯಲ್ಲ, ನಮಗೆ ಬೇರೆ ದಾರಿಯಿಲ್ಲ ಎಂದಾಗ ಅವರು ಹೋಗಬೇಡಿ ಎಂದು ಕಣ್ಣೀರು ಹಾಕಿದರು. ಕೊನೆಗೆ ನೀವು ಹೋಗುವುದಾದರೂ ಮುಸ್ಲಿಮ್ ವೇಷದೊಂದಿಗೆ ಹೋಗಬೇಡಿ ಎಂದು ವಿನಂತಿಸಿದರು. ನೀವು ಮುಸ್ಲಿಮರೆಂದು ಗೊತ್ತಾದರೆ ದಾರಿಯಲ್ಲಿ ನೀವು ಆಕ್ರಮಣಕ್ಕೆ ಒಳಗಾಗಬಹುದು ಎಂದರಲ್ಲದೇ ಒಳಗೆ ಹೋಗಿ ಸಿಂಧೂರ ಮತ್ತು ಲಿಪ್‍ಸ್ಟಿಕ್ ತಂದು ನಮಗೆ ಹಚ್ಚಿದರು. ಬುರ್ಖಾವನ್ನು ತೆಗೆದಿಟ್ಟು ತಾತ್ಕಾಲಿಕವಾಗಿ ಹಿಂದೂ ಮಹಿಳೆಯರ ವೇಷ ತೊಡಿ ಎಂದು ವಿನಂತಿಸಿದರು. ಸುರಕ್ಷತೆಯ ದೃಷ್ಟಿಯಿಂದ ನಮಗದು ಅನಿವಾರ್ಯವಾಗಿತ್ತು. ನಾವು ಹಿಂದೂಗಳಾಗಿ ಹೊರಟೆವು. ನಮ್ಮ ಮನೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿ ಕೊಟ್ಟೆವು. ಜೊತೆಗೆ ಅವರೂ ನಮ್ಮ ಜೊತೆ ಬಂದರು. ತುಸು ದೂರ ಸಾಗಿದ ಕೂಡಲೇ ದೊಡ್ಡದೊಂದು ಗುಂಪು ಕಂಡಿತು. ನನ್ನ ಗಂಡ ನಮ್ಮ ಜೊತೆ ಇರುವುದು ಅಪಾಯವೆಂದರಿತು ನೆರೆಯವರ ಜೊತೆ ಹಿಂದಕ್ಕೆ ಕಳುಹಿಸಿ ನಾವು ಹೊರಟೆವು. ನಿರೀಕ್ಷೆಯಂತೆ ಗುಂಪು ನಮ್ಮನ್ನು ತಡೆದು ಪ್ರಶ್ನಿಸತೊಡಗಿತು. ನಾವು ಹಿಂದೂಗಳು ಎಂದು ನೆರೆಯಾಕೆ ಹೇಳಿದರೂ ಗುಂಪಿಗೆ ನಂಬಿಕೆ ಬರಲಿಲ್ಲ. ಹಿಂದೂವಾಗಿದ್ದರೆ ನೀವೇಕೆ ಮನೆ ಬಿಟ್ಟು ಹೋಗುತ್ತಿರುವಿರಿ ಎಂದು ಪ್ರಶ್ನಿಸಿತು. ಅನಿವಾರ್ಯತೆ ಇದೆ ಎಂದು ಹೇಳಿದಾಗ ಗುಂಪಿನಲ್ಲಿದ್ದ ಮಹಿಳೆ ಸಂಶಯ ವ್ಯಕ್ತಪಡಿಸಿತು. ಸ್ಪಷ್ಟವಾಗಿ ಹೇಳಿ ಎಂದು ಬೆದರಿಸಿತು. ಹಿಂದೂ ಎಂದು ಹೇಳಿರುವುದು ಸುಳ್ಳೆಂದಾದರೆ ನಿಮ್ಮೆಲ್ಲರನ್ನೂ ಇಲ್ಲೇ ಬೆಂಕಿ ಕೊಟ್ಟು ಸುಡುವುದಾಗಿ ಭಯ ಹುಟ್ಟಿಸಿತು. ನನ್ನ ತೋಳಿನಲ್ಲಿದ್ದ ಪುಟ್ಟ ಗಂಡು ಮಗುವಿನ ಪ್ಯಾಂಟು ಬಿಚ್ಚಿ ನೀವು ಸ್ಪಷ್ಟಪಡಿಸಿಕೊಳ್ಳಬಹುದೆಂದು ನಾವು ಹೇಳಿದೆವು. ಪುಟ್ಟ ಮಗುವಾಗಿರುವ ಕಾರಣ ನಾವು ಸುನ್ನತಿ (ಮುಂಜಿ) ಮಾಡಿರಲಿಲ್ಲ. ಅವರು ಮಗುವಿನ ಪ್ಯಾಂಟು ಬಿಚ್ಚಿ ಪರೀಕ್ಷಿಸಿದರು. ಆ ಬಳಿಕ ಗುಂಪಿನ ವರ್ತನೆಯಲ್ಲಿ ಬದಲಾವಣೆ ಉಂಟಾಯಿತು. ಈ ಸಂದರ್ಭದಲ್ಲಿ ಹೋಗದಿರುವುದೇ ಉತ್ತಮ, ಆ ಕಡೆ ಪಾಕಿಸ್ತಾನವಿದೆ ಎಂದು ಗುಂಪು ಕಾಳಜಿ ತೋರಿತು. ನಾವು ಹೋಗಲು ಮುಂದಾದಾಗ, ನಮಗೆ ಬೆಂಗಾವಲಾಗಿ ಓರ್ವ ವ್ಯಕ್ತಿಯನ್ನು ಗುಂಪು ಭಾಗೀರಥಿ ಗಡಿಯ ಕೊನೆಯ ವರೆಗೆ ಕಳುಹಿಸಿಕೊಟ್ಟಿತು. ಕೊನೆಗೆ ನಾವು ಸೀಲಂಪುರಕ್ಕೆ ತಲುಪಿದಾಗ ರಾತ್ರಿ 12 ಗಂಟೆ…

ಹಸನುಲ್ ಬನ್ನಾ ಅನ್ನುವ ಮಲಯಾಳಂ ಪತ್ರಿಕೆಯ ಪತ್ರಕರ್ತನ ಜೊತೆ ಫರೀನ್ ಹೀಗೆ ಹೇಳುತ್ತಾ ಹೋಗುತ್ತಾರೆ.

ದೆಹಲಿಯ ಕರುಳು ಹಿಂಡುವ ನೂರಾರು ಕತೆಗಳಲ್ಲಿ ಇದೂ ಒಂದು. ಫರೀನ್ ಕುಟುಂಬಕ್ಕೂ ಅವರ ಮೇಲೆ ಕ್ರೂರವಾಗಿ ದಾಳಿಗೈದವರಿಗೂ ಯಾವ ಪರಿಚಯವೂ ಇಲ್ಲ. ದಾರಿಮಧ್ಯೆ ಅವರನ್ನು ತಡೆದು ನಿಲ್ಲಿಸಿ ಧರ್ಮ ಪರೀಕ್ಷೆ ನಡೆಸಿದವರಲ್ಲಿ ಇವರ ಪರಿಚಿತರು ಒಬ್ಬರೂ ಇಲ್ಲ. ಕನಿಷ್ಠ ನೆರೆಮನೆಯವರ ಪರಿಚಿತರೂ ಇಲ್ಲ. ಹಾಗಿದ್ದರೆ ಇಂಥದ್ದೊಂದು ಗುಂಪು ದಿಢೀರ್ ಆಗಿ ತಯಾರಾಗುವುದು ಹೇಗೆ? ಅವರಿಗೆ ಮುಸ್ಲಿಮ್ ಮನೆಗಳ ವಿಳಾಸ ಸಿಗುವುದು ಎಲ್ಲಿಂದ? ಭಾಗೀರಥಿ ವಿಹಾರ್ ನಲ್ಲಿ ಇರುವ ಅಷ್ಟೂ ಮನೆಗಳ ಮಧ್ಯೆ ಎರಡೇ ಎರಡು ಮುಸ್ಲಿಮ್ ಮನೆಗಳನ್ನು ಪತ್ತೆ ಹಚ್ಚುವುದಕ್ಕೆ ಆ ಗುಂಪಿಗೆ ಹೇಗೆ ಸಾಧ್ಯವಾಯಿತು? ಅವರೇಕೆ ತಮಗೆ ಸಂಬಂಧವೇ ಇಲ್ಲದ ಮತ್ತು ವೈರತ್ವವನ್ನೇ ಹೊಂದಿರದ ನಿಷ್ಪಾಪಿ ಮನುಷ್ಯರನ್ನು ಕೊಲ್ಲುತ್ತಾರೆ? ಅದಕ್ಕೆ ಧರ್ಮ ಕಾರಣವೇ?

ದೆಹಲಿಯಲ್ಲಿರುವ ಗೆಳೆಯ ರಘುವಿಗೆ ಕರೆ ಮಾಡಿದೆ. ಬಾಲ್ಯದ ದಿನಗಳನ್ನು ನಾವಿಬ್ಬರೂ ಮೆಲುಕು ಹಾಕಿಕೊಂಡೆವು. ಒಟ್ಟಿಗೆ ಆಟ ಆಡಿದ ವರ್ಷಗಳೆಷ್ಟೋ ಗೊತ್ತಿಲ್ಲ. ಹಬ್ಬ-ಹರಿದಿನಗಳಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಪರಸ್ಪರರ ಮನೆಗೆ ತೆರಳಿ ಊಟ ಮಾಡಿ, ದಣಿವಾರಿಸಿಕೊಂಡು ಬರುತ್ತಿದ್ದ ದಿನಗಳನ್ನು ಗೆಳೆಯ ನೆನಪಿಸಿಕೊಂಡ. ಆತನಲ್ಲೂ ಆತಂಕವಿತ್ತು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿದ. ನಿಜವಾಗಿ,

ಇದು ಕೇವಲ ಓರ್ವ ಗೆಳೆಯನ ಚಿಂತೆಯಲ್ಲ. ದೆಹಲಿ ಹಿಂಸಾಚಾರವನ್ನು ವೀಕ್ಷಿಸಿದ ಮತ್ತು ಅಲ್ಲಿನ ಕರುಣಾಜನಕ ಕತೆಗಳನ್ನು ಆಲಿಸಿದ ಮನುಷ್ಯರಾದ ಪ್ರತಿಯೊಬ್ಬರಲ್ಲೂ ಇಂಥ ಆತಂಕವಿದೆ. ಹಾಗಂತ, ದೆಹಲಿ ಎಂಬುದು ಸಾಮಾನ್ಯ ನಗರ ಅಲ್ಲ. ದೇಶದ ಬೇರೆ ಬೇರೆ ಕಡೆಯಿಂದ ವಲಸೆ ಹೋಗಿರುವವರೇ ತುಂಬಿರುವ ನಗರ ಅದು. ಅಲ್ಲಿ ವಿದ್ಯಾವಂತರೇ ಹೆಚ್ಚು. ಓದಿಕೊಂಡಿರೋರು, ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಪಾಡಿಗೆ ತಾವು ಎಂಬಂತೆ ಇರೋರೇ ಅಧಿಕವಿರುವುದರಿಂದ ಈ ಹಿಂಸಾಚಾರದ ಬಗ್ಗೆ ಅಚ್ಚರಿಯಾಗುತ್ತದೆ. ವಿದ್ಯಾವಂತರು, ಬುದ್ಧಿವಂತರು ಮತ್ತು ಉತ್ತಮ ನೌಕರಿಯಲ್ಲಿರುವವರು ಬಹಳ ಸಂಖ್ಯೆಯಲ್ಲಿರುವ ನಗರದಲ್ಲಿ ಕೋಮು ಹಿಂಸಾಚಾರ ಉಂಟಾಗಲು ಕಾರಣವೇನು? 1984ರಲ್ಲಿ ಸಿಕ್ಖ್ ವಿರೋಧಿ ಜನಾಂಗೀಯ ಹತ್ಯಾಕಾಂಡ ನಡೆದಿರುವುದೂ ದೆಹಲಿಯಲ್ಲೇ. ಇದಕ್ಕೆ ಎರಡು ಕಾರಣಗಳನ್ನು ಕಂಡುಕೊಳ್ಳಬಹುದು.

1. ಈ ವಿದ್ಯಾವಂತರಾದ ಮಂದಿ ತಮ್ಮ ಪಾಡಿಗೆ ತಾವಿರುತ್ತಾರೆ. ಧರ್ಮ ಮತ್ತು ಜನಾಂಗದ ಹೆಸರಲ್ಲಿ ನಡೆಯುತ್ತಿರುವ ಧ್ರುವೀಕರಣವನ್ನಾಗಲಿ ಪ್ರಚೋದನಕಾರಿ ಭಾಷಣ ಮತ್ತು ಬರಹಗಳನ್ನಾಗಲಿ ಇವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ತಮ್ಮ ಸುರಕ್ಷಿತತೆಗಷ್ಟೇ ಅವರು ಆದ್ಯತೆ ನೀಡುತ್ತಾರೆ.

ಅಥವಾ

2. ಈ ವಿದ್ಯಾವಂತ ಬಹಳ ಬೇಗ ಧರ್ಮಾಂಧರಾಗುತ್ತಾರೆ. ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗವನ್ನು ಪಡಕೊಂಡವರಲ್ಲಿ ಸಾಮಾಜಿಕ ಮನ್ನಣೆಯ ತುಡಿತವೊಂದಿರುತ್ತದೆ. ಸಮಾಜವು ತಮ್ಮನ್ನು ಗುರುತಿಸಬೇಕು ಅನ್ನುವ ಅಭಿಲಾಷೆ ಇರುತ್ತದೆ. ಧರ್ಮಾಂಧತೆಯನ್ನು ಮೈಗೂಡಿಸಿಕೊಂಡ ಗುಂಪುಗಳು ಇಂಥವರನ್ನು ಸುಲಭವಾಗಿ ಕೈವಶ ಮಾಡಿಕೊಳ್ಳುತ್ತವೆ. ಕ್ರಮೇಣ ಇವರು ಧರ್ಮದ ಅತ್ಯಂತ ಅಪಾಯಕಾರಿ ವ್ಯಾಖ್ಯಾನಕ್ಕೆ ಇಳಿಯುತ್ತಾರೆ. ತನ್ನ ಪಕ್ಕದಲ್ಲಿ ವಾಸಿಸುವ ಆದರೆ ತನ್ನ ಧರ್ಮದವನಲ್ಲದ ವ್ಯಕ್ತಿಯು ಎಷ್ಟೇ ಉತ್ತಮನಾಗಿದ್ದರೂ ಇವರಿಗೆ ಆತನ ಧರ್ಮ ಕಾಣಿಸುತ್ತದೆಯೇ ಹೊರತು ಗುಣಗಳಲ್ಲ. ಇದೊಂದು ಬಗೆಯ ಗೀಳು.

ಸದ್ಯ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಎಲ್ಲ ದ್ವೇಷಗಳಿಗೂ ಇಂಥದ್ದೊಂದು ಗೀಳು ಕಾರಣ. ತನ್ನ ಧರ್ಮ ಇಲ್ಲವೇ ಜಾತಿಯಲ್ಲಿ ಸೇರಿರದ ವ್ಯಕ್ತಿಯನ್ನು ಇನ್ನೋರ್ವ ದ್ವೇಷಿಸುವುದಕ್ಕೆ ಆ ವ್ಯಕ್ತಿ ಕೆಟ್ಟವ ಎಂಬುದು ಕಾರಣ ಅಲ್ಲ, ಆತ ತನ್ನ ಧರ್ಮ ಅಥವಾ ಜಾತಿಗೆ ಸೇರಿಲ್ಲ ಅನ್ನುವುದೇ ಮುಖ್ಯ ಕಾರಣ. ಇಂತಿಂಥ ಧರ್ಮದವರು ಇಷ್ಟಿಷ್ಟು ಅಪಾಯಕಾರಿಗಳು, ಅವರ ಜನಸಂಖ್ಯೆ ಈಗ ಎಷ್ಟಿದೆ, ಮುಂದೆ 50 ವರ್ಷ ಆಗುವಾಗ ಎಷ್ಟಾಗುತ್ತೆ ಮತ್ತು ಮುಂದೆ ಏನಾಗಬಹುದು ಎಂದೆಲ್ಲಾ ಲೆಕ್ಕ ಹಾಕುತ್ತಾ ಬರಿದೇ ಭಯ ಬಿತ್ತುವುದು ಇದರ ಭಾಗ. ಭಾರತವೆಂಬ ಈಗಿನ ಚೌಕಟ್ಟು ಇಲ್ಲದ ಮತ್ತು ಪ್ರಜಾತಂತ್ರವಿಲ್ಲದ ದೇಶವನ್ನು ಮುಸ್ಲಿಮ್ ರಾಜರು 800 ವರ್ಷ ಆಳಿದ್ದಾರೆ. 200 ವರ್ಷಗಳ ಕಾಲ ಬ್ರಿಟಿಷರು ಆಳಿದ್ದಾರೆ. ಸ್ವತಂತ್ರ ಭಾರತದಲ್ಲಿ ನಮ್ಮನ್ನು ನಾವೇ ಆಳುವುದಕ್ಕೆ ಪ್ರಾರಂಭಿಸಿ 70 ವರ್ಷಗಳಾಗಿವೆ. ಹಾಗಿದ್ದೂ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಬರೇ 15% ಅಷ್ಟೇ ಇದೆ. ಸುಮಾರು 1000 ವರ್ಷಗಳ ಪೈಕಿ 800 ವರ್ಷಗಳಷ್ಟು ದೀರ್ಘ ಅವಧಿವರೆಗೆ ಮುಸ್ಲಿಮ್ ರಾಜರೇ ಆಳಿದ ದೇಶದ ಸ್ಥಿತಿ ಇದು. ಹೀಗಿರುವಾಗ ಜನಸಂಖ್ಯೆಯ ಹೆಸರಲ್ಲೋ ಧರ್ಮದ ಹೆಸರಲ್ಲೋ ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದಕ್ಕೆ ಏನರ್ಥವಿದೆ? 800 ವರ್ಷಗಳ ರಾಜರ ಆಡಳಿತದಲ್ಲೇ ಸಂಖ್ಯೆ ವೃದ್ಧಿಸಿಕೊಳ್ಳದ ಮುಸ್ಲಿಮರು ಪ್ರಜಾತಂತ್ರ ರಾಷ್ಟ್ರದಲ್ಲಿ ಹೇಗೆ ಸಂಖ್ಯೆ ವೃದ್ಧಿಸಿಕೊಳ್ಳುತ್ತಾರೆ? ಹೇಗೆ ಇನ್ನೊಂದು ಧರ್ಮಕ್ಕೆ ಅಪಾಯಕಾರಿಗಳಾಗುತ್ತಾರೆ? ತೀರಾ ಜುಜುಬಿ ಸಂಖ್ಯೆಯಲ್ಲಿರುವ ಸಮುದಾಯವೊಂದನ್ನು ಬೃಹದಾಕಾರವಾಗಿರುವ ಸಮುದಾಯದ ಪಾಲಿಗೆ ಬೆದರಿಕೆಯಾಗಿ ಬಿಂಬಿಸುವುದರ ಹಿನ್ನೆಲೆಯಾದರೂ ಏನು?ನಿಜವಾಗಿ,

ಯಾವುದೇ ಒಂದು ಧರ್ಮ ಇನ್ನೊಂದು ಧರ್ಮದ ಪಾಲಿಗೆ ಎಂದೂ ಅಪಾಯಕಾರಿಯಾಗಿ ಇರುವುದೇ ಇಲ್ಲ. ಆದರೆ, ಯಾರು ಧರ್ಮದ ಮಾನವೀಯ ಮೌಲ್ಯವನ್ನು ಪಾಲಿಸುವುದಿಲ್ಲವೋ ಅವರು ಧರ್ಮಕ್ಕೂ ಸಮಾಜಕ್ಕೂ ಅಪಾಯಕಾರಿಗಳಾಗಿರುತ್ತಾರೆ. ದುರಂತ ಏನೆಂದರೆ, ಅವರೇ ಧರ್ಮ, ಸಂಸ್ಕೃತಿ ಇತ್ಯಾದಿಗಳನ್ನು ಕಾಪಾಡುವ ಗುತ್ತಿಗೆಯನ್ನು ಪಡೆದುಕೊಳ್ಳುತ್ತಿರುವುದು. ಅವರಿಂದಲೇ ಧರ್ಮ, ಸಂಸ್ಕೃತಿ, ಸೌಹಾರ್ದಕ್ಕೆ ಅಪಾಯವಿದ್ದರೂ ಅನ್ಯ ಧರ್ಮವನ್ನೇ ಅವರು ಆ ಅಪಾಯದ ಪಟ್ಟಿಯಲ್ಲಿಟ್ಟು ಹಂಚಿಕೊಳ್ಳುತ್ತಿರುತ್ತಾರೆ. ಸಮಾಜ ಅದನ್ನೇ ನಂಬುತ್ತದೆ. ಎಲ್ಲಿಯ ವರೆಗೆಂದರೆ, ಆ ಅನ್ಯ ಧರ್ಮದವರ ಹತ್ಯಾಕಾಂಡವನ್ನೂ ನಿರ್ಭಾವುಕತೆಯಿಂದ ಅದು ಸಹಿಸಿಕೊಳ್ಳುತ್ತದೆ. ನಿಜವಾಗಿ,
ಫರೀನಳ ಸಂಕಟ ಮತ್ತು ಗೆಳೆಯನ ಆತಂಕವೇ ಸದ್ಯದ ಭಾರತ.