ಹಳೆ ಗೋರಿಯನ್ನು ಅಗೆದು ಹೊಸ ಹೆಣಗಳನ್ನು ಹೂತ ಕಾಲದಿಂದ ತೊಡಗಿ…

0
971

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

ಕೊರೋನೋತ್ತರ ಜಗತ್ತು ಹೇಗಿರಬಹುದು?

ಇದು ಬರೇ ಪ್ರಶ್ನೆಯಲ್ಲ. ಈ ಜಗತ್ತನ್ನು ಕೊರೋನಾಕ್ಕಿಂತ ಮೊದಲು ಹಲವು ಕಾಯಿಲೆಗಳು ಆಳಿವೆ. ಅವೆಲ್ಲ ಹಾಗೆ ಬಂದು ಹೀಗೆ ಹೋದದ್ದಿಲ್ಲ. ತಕ್ಷಣದ ಬದಲಾವಣೆಗೆ ಅದು ಕಾರಣವಾಗಿಲ್ಲದಿದ್ದರೂ ನಿಧಾನಕ್ಕೆ ಅದೊಂದು ಕ್ರಾಂತಿಕಾರಿ ಬದಲಾವಣೆಗೆ ಹೇತುವಾಯಿತು ಎಂದು ಅಂದಾಜಿಸುವವರಿದ್ದಾರೆ. ಕೊರೋನಾಕ್ಕಿಂತ ಮೊದಲು ಈ ಜಗತ್ತನ್ನು ಇನ್‍ಫ್ಲುವೆಂಜಾ, ಕಾಲರಾ, ಸಿಡುಬು, ಪ್ಲೇಗ್ ಇತ್ಯಾದಿ ಮಹಾ ಕಾಯಿಲೆಗಳು ಕಾಡಿವೆ. ಊರಿಗೆ ಊರೇ ನಾಶವಾಗಿವೆ.

1940ರಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಮಲೆ ಮಹದೇಶ್ವರನ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು ಇವರಲ್ಲಿ 20ರಿಂದ 30 ಸಾವಿರದಷ್ಟು ಮಂದಿ ಭಕ್ತರು ಕಾಲರಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಅನ್ನುವ ವರದಿಯಿದೆ. ದೀಪಾವಳಿಯ ಸಮಯದಲ್ಲಿ ಈ ಜಾತ್ರೆ ನಡೆದಿದ್ದು, ಧಾರಾಕಾರ ಮಳೆ ಸುರಿದಿದೆ. ಮಳೆ ನೀರಿನೊಂದಿಗೆ ಬೆರೆತ ಕಸ-ಕಡ್ಡಿ, ಮಲ-ಮೂತ್ರ ಇತ್ಯಾದಿ ಹರಿದು ಬಂದು ಕೆರೆಗೆ ಸೇರಿಕೊಂಡಿದ್ದು, ಅದೇ ನೀರನ್ನು ಜನರು ಕುಡಿದ ಪರಿಣಾಮ ಕಾಲರಾ ಕ್ಷಣಮಾತ್ರದಲ್ಲಿ ಹರಡಿದೆ. 1899ರಲ್ಲಂತೂ ಇಡೀ ಮೈಸೂರು ಮಹಾರಾಜರ ಕುಟುಂಬವನ್ನೇ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. 1898 ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಪ್ಲೇಗ್, ಬಳಿಕ ಮೈಸೂರಿಗೂ ಕಾಲಿಟ್ಟಿತು. ಮೈಸೂರಿನ ಮಹಾರಾಜ ಕುಟುಂಬವನ್ನು ಪ್ರತ್ಯೇಕಿಸಿ (ಕ್ವಾರಂಟೈನ್) ಜಗನ್ಮೋಹನ್ ಅರಮನೆಗೆ ಸ್ಥಳಾಂತರಿಸಲಾಯಿತು. ಈ ಕ್ವಾರಂಟೈನ್ ಅವಧಿಯ ನಿಯಮಗಳು ಈಗಿನ ಕೊರೋನಾ ಕಾಲದ ನಿಯಮ ಗಳಂತೆಯೇ ಇತ್ತು. ರಾಜಕುಟುಂಬದ ಸೇವಕರು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಹೋಗಬಾರದು, ರಾಜಮಾತೆಯ ವಾಸಸ್ಥಳದ ಹತ್ತಿರವೇ ಅವರಿಗಾಗಿ ಸಣ್ಣ ಮಾರುಕಟ್ಟೆಯನ್ನು ನಿರ್ಮಿಸಬೇಕು ಮತ್ತು ಅರಮನೆಯ ಎಲ್ಲ ಸೇವಕರು ರಾತ್ರಿ 9 ಗಂಟೆಗೆ ತಂತಮ್ಮ ಕೋಣೆಯಲ್ಲಿದ್ದಾರೆ ಹಾಗೂ ಮರುದಿನ ಬೆಳಿಗ್ಗೆ 6 ಗಂಟೆಗೆ ಪುನಃ ಅಲ್ಲೇ ಇದ್ದಾರೆಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂಬ ಆದೇಶವಿತ್ತು. ಅಲ್ಲದೇ, ಸೇವಕರ ಉಡುಗೆ ಶುದ್ಧವಾಗಿರಬೇಕು ಮತ್ತು ಪ್ರತಿದಿನವೂ ಅವರು ತಪ್ಪದೇ ಸ್ನಾನ ಮಾಡಬೇಕು ಎಂದೂ ರಾಜಕುಟುಂಬದ ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿತ್ತು.

1874ರಲ್ಲಿ ಈ ದೇಶದಲ್ಲಿ ದಿಕ್ಕುದೆಸೆಯಿಲ್ಲದೇ ಮಳೆ ಸುರಿದುದರಿಂದಾಗಿ ಅತಿವೃಷ್ಟಿ ಉಂಟಾಯಿತು. ಬೆಳೆ-ಧವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದುವು. ದುರಂತ ಏನೆಂದರೆ, 1976-78ರ ನಡುವೆ ಬರಗಾಲ ಎದುರಾಯಿತು. ಜೊತೆಗೇ ಕಾಲರಾ ಮತ್ತು ಪ್ಲೇಗ್‍ಗಳೂ ದಾಳಿಯಿಟ್ಟವು. ರಾಜ್ಯದ ಬಿಜಾ ಪುರ, ಬಳ್ಳಾರಿ, ಕೋಲಾರ, ಹಾವೇರಿ ಮುಂತಾದ ಕಡೆ ಈ ಬರಗಾಲದ ತೀವ್ರತೆ ಎಷ್ಟಿತ್ತೆಂದರೆ, ಆಹಾರವಿಲ್ಲದೇ ಜನರು ಬಡಕಲಾದರು. ಅವರ ದೇಹದ ಎಲುಬುಗಳನ್ನು ಎಣಿಸಬಹು ದಾದಷ್ಟು ಅವರು ಎಲುಬುಗೂಡಿನಂತಾಗಿದ್ದರು ಎಂದು ಹೇಳ ಲಾಗುತ್ತದೆ. ಇದರ ಜೊತೆಗೇ ಪ್ಲೇಗ್ ಮತ್ತು ಕಾಲರಾ ದಾಳಿಯಿಟ್ಟಿದ್ದರಿಂದ ಬ್ರಿಟಿಷ್ ಸರಕಾರವು ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿಗೆ ಇಂಗ್ಲೆಂಡಿನಿಂದ 28ರ ಹರೆಯದ ಇಂಜಿನಿಯರ್ ಎಡ್ಮಂಡ್ ಸಿಬ್ಸನ್‍ರನ್ನು ಕರೆತಂದಿತು. ಆತ ಹೃದಯವಂತ. ಆಹಾರವಿಲ್ಲದೇ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಜನರನ್ನು ಕಂಡು ಮಮ್ಮಲ ಮರುಗಿದ ಆತ ಪರಿಸ್ಥಿತಿಯನ್ನು ಬದಲಾಯಿಸಲು ಶಕ್ತಿಮೀರಿ ಯತ್ನಿಸಿದ. ವಿಪರ್ಯಾಸ ಏನೆಂದರೆ, 1877 ಎಪ್ರಿಲ್‍ನಲ್ಲಿ ಸ್ವತಃ ಆತ ನೇ ಕಾಲರಾ ರೋಗಕ್ಕೆ ತುತ್ತಾದ ಮತ್ತು ಸಾವಿಗೀಡಾದ. ಶಿಗ್ಗಾಂವಿಯ ಬಿ.ಬಿ. ದೇಸಾಯಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ಮೌಲಾಯಿ ನಗರದ ಸ್ಮಶಾನದಲ್ಲಿ ಇವತ್ತೂ ಆತನ ಸಮಾಧಿ ಕಾಣುವಂತೆ ಇದೆ.

ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’ ಎಂಬ ಆತ್ಮ ಕಥನವು ಬಾಲ್ಯಕಾಲದ ಜ್ವರದ ಘಟನೆಯೊಂದನ್ನು ವಿವರಿಸುತ್ತದೆ.

ಒಂದು ಸಂಜೆ ಚೆಂಡಾಟ ಮುಗಿಸಿ ಹುಡುಗರೆಲ್ಲ ಮೈದಾನದಲ್ಲಿ ಗುಂಪು ಕುಳಿತು ಹರಟೆ ಹೊಡೆಯುತ್ತಿದ್ದಾಗ ಒಬ್ಬ ಹೇಳಿದ, “ಇಲ್ಲಿ ಕೇಳಿ. ಜರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ. ಬೀಸು ಬಡಿಗೆ ಜ್ವರ ಅಂತಾರೆ. ಬೀಸು ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೋ ಹಂಗೆ ಸಾಯ್ತಾರಂತೆ ಜನ ಈ ಜ್ವರ ಬಂದರೆ. ಆದರೆ ದೊಡ್ಡೋರಿಗೆ ಅಂತೆ ಕಣೋ ಅದು ಹೆಚ್ಚಾಗಿ ಬಡಿಯೋದು. ನಮ್ಮ ಹಂಗಿರುವ ಹುಡುಗರಿಗೆ ಬೆಳಿಗ್ಗೆ ಜ್ವರ ಬಂದು, ಒಂದು ದಿನ ಇದ್ದು ಬಿಟ್ಟು ಹೋಗ್ತದಂತೆ.”

ಈ ಇಡೀ ಹೇಳಿಕೆಯು ಕೊರೋನಾಕ್ಕೆ ಸಂಪೂರ್ಣ ಹೋಲುತ್ತದೆ. ಕೊರೋನಾವು ಸಣ್ಣ ಮಕ್ಕಳು ಮತ್ತು 60ರ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು ಅನ್ನುವುದನ್ನು ಕುವೆಂಪು ಕಾಲದ ಜ್ವರದೊಂದಿಗೆ ಹೋಲಿಸಿದರೆ, ಸಾಮಾನ್ಯವಾಗಿ ಸಾಂಕ್ರಾಮಿಕ ಕಾಯಿಲೆಗಳ ಲಕ್ಷಣಗಳು ಏಕಪ್ರಕಾರ ಅನ್ನುವುದು ಸ್ಪಷ್ಟವಾಗುತ್ತದೆ. ಕಾಲರಾ, ಪ್ಲೇಗ್ ಇತ್ಯಾದಿ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜನರು ಮಾಡಿಕೊಳ್ಳುತ್ತಿದ್ದ ರಕ್ಷಣಾ ಕಾರ್ಯಗಳು ಏನೋ ಅದನ್ನೇ ಈ ಕೊರೋನಾ ಕಾಲದಲ್ಲೂ ಮಾಡಲಾಯಿತು ಅನ್ನುವುದು ಆಧುನಿಕ ಕಾಲದಲ್ಲಿ ಒಂದು ಸೋಜಿಗ. ಪ್ರಾಚೀನ ವೈದ್ಯಗ್ರಂಥಗಳಲ್ಲಿ ತೊನ್ನು ಮತ್ತು ಕುಷ್ಠರೋಗದ ಬಗ್ಗೆ ಇರುವ ವಿವರವಾದ ಮಾಹಿತಿಗಳು ಮತ್ತು ಔಷಧೀಯ ವಿವರಗಳು ಸಾಂಕ್ರಾಮಿಕ ರೋಗದ ಕುರಿತಂತೆ ಇಲ್ಲ. ಇವುಗಳಿಗೆ ಮದ್ದುಗಳೇನು ಅನ್ನುವ ವಿವರಗಳೂ ಇಲ್ಲ ಎಂಬುದಾಗಿ ತಜ್ಞರು ಹೇಳುತ್ತಾರೆ. ಇಂಥ ರೋಗಗಳು ಬಾಧಿಸಿದಾಗ ಗ್ರಾಮಗಳಲ್ಲಿ ಇದ್ದ ಏಕೈಕ ಪರಿಹಾರ ಏನೆಂದರೆ, ಊರು ಬಿಡುವುದು. ಈ ರೋಗಗಳು ತಾತ್ಕಾಲಿಕ ಅಂತ ಊರವರಿಗೆ ಗೊತ್ತಿರುತ್ತದೆ ಮತ್ತು ಅದು ವರ್ಷ ವರ್ಷವೆಂಬಂತೆ ದಾಳಿಯಿಡು ತ್ತಲೂ ಇರುತ್ತದೆ. ಕೆಲವು ಸಮಯದ ಬಳಿಕ ಕುಟುಂಬಗಳು ಮರಳಿ ಊರು ಸೇರುತ್ತವೆ. ಇದರಾಚೆಗೆ ಸಾಂಕ್ರಾಮಿಕ ರೋಗ ಗಳಿಗೆ ಹಿಂದಿನ ಕಾಲದಲ್ಲಿ ಪರಿಹಾರ ಇರಲಿಲ್ಲ. ಸೀಲ್‍ಡೌನ್, ಕ್ವಾರಂಟೈನ್, ಲಾಕ್‍ಡೌನ್ ಇತ್ಯಾದಿ ಆಧುನಿಕ ಪದಗಳು ಸೂಚಿಸುವುದು ಹಳೆ ಕಾಲದ ಪರಿಹಾರಗಳನ್ನೇ.
ವಿಶೇಷ ಏನೆಂದರೆ,

ಯು.ಆರ್. ಅನಂತಮೂರ್ತಿಯವರ ಸಂಸ್ಕಾರ, ರಾವ್ ಬಹಾದ್ದೂರ್‍ರ ಗ್ರಾಮಾಯಣದಲ್ಲಿ ಪ್ಲೇಗ್ ರೋಗದ ಉಲ್ಲೇಖಗಳಿವೆ. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯಲ್ಲಿ ಪ್ಲೇಗ್ ಮುಖ್ಯ ಭೂಮಿಕೆಯಲ್ಲಿ ಇಲ್ಲದಿದ್ದರೂ ಅದೊಂದು ಗಮನೀಯ ವಸ್ತುವಾಗಿ ಕಾದಂಬರಿ ಉದ್ದಕ್ಕೂ ಕಾಡುತ್ತದೆ. ಕಾದಂಬರಿಯ ಪಾತ್ರವಾದ ನಾರಣಪ್ಪನು ಶಿವಮೊಗ್ಗಕ್ಕೆ ಹೋಗಿ ಸೋಂಕು ತಗು ಲಿಸಿಕೊಂಡು ಬಂದು ಅಗ್ರಹಾರದಲ್ಲಿ ಪ್ಲೇಗ್‍ಗೆ ಬಲಿಯಾದ ಮೊದಲ ವ್ಯಕ್ತಿಯಾಗುತ್ತಾನೆ. ಬಳಿಕ ಅಗ್ರ ಹಾರದಲ್ಲಿ ಇಲಿಗಳು ಸತ್ತು ಬೀಳುವುದರಿಂದ ಹಿಡಿದು ಮಾನವ ಸಾವಿನ ವರೆಗೆ ಕಾದಂಬರಿಯು ಪ್ಲೇಗ್ ಮತ್ತು ಮಾನವ ಸೃಷ್ಟಿಯಾದ ಮಡಿ ಮೈಲಿಗೆಯ ಸಂಕಟವೊಂದನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಸಿದ್ಧ ಕಾದಂಬರಿಗಾರ್ತಿ ಮಹಾಶ್ವೇತಾ ದೇವಿಯವರ ರುಡಾಲಿ ಎಂಬ ಕಾದಂಬರಿಯಲ್ಲಿ ಕಾಲರಾದ ಸನ್ನಿವೇಶ ಇದೆ ಎಂದು ವಿಮರ್ಶಕರು ವಿವರಿಸಿದ್ದಾರೆ. ಬಡವರಾಗಿದ್ದ ಶನಿಚರಿ ಮತ್ತು ಅವಳ ಗಂಡ ಜಾತ್ರೆಗೆ ಬರುವುದು ಮತ್ತು ಅಲ್ಲಿ ವಿಗ್ರಹಕ್ಕೆ ಎರೆದ ಹಾಲನ್ನೇ ಪ್ರಸಾದವಾಗಿ ಸ್ವೀಕರಿಸಿದ ಶ ನಿಚರಿಯ ಗಂಡನಿಗೆ ಕಾಲರಾ ಬರುವುದು ಹಾಗೂ ಅಧಿಕಾರಿಗಳು ಒಂದು ಬೇಲಿ ಹಾಕಿಸಿ ಕಾಲರಾ ಬಂದಿರುವವರನ್ನು ಆ ಬೇಲಿಯೊಳಗೆ ಕ್ವಾರಂಟೈನ್ ಮಾಡುವುದು ನಡೆಯುತ್ತದೆ. ಗ್ರಾಮಾಯಣ ಕೃತಿಯಂತೂ ಕಾಲರಾ ರೋಗದ ಭೀಕರತೆಗೆ ಕನ್ನಡಿ ಹಿಡಿಯುವಂತಿದೆ. ಸಾಯುತ್ತಲೇ ಇರುವ ಜನರನ್ನು ಹೂಳಲು ಸ್ಥಳವಿಲ್ಲದೇ ಗೋರಿ ಗಳನ್ನೇ ಅಗೆದು ಅದರೊಳಗಿನ ಅಸ್ತಿಪಂಜರಗಳನ್ನು ಹೊರಕ್ಕೆಸೆದು ಹೊಸ ಹೆಣಗಳಿಗೆ ಜಾಗ ಮಾಡಿಕೊಡಲಾಗುತ್ತದೆ. ಶವ ಹೂಳಲು ಗುಂಡಿ ಅಗೆಯುತ್ತಿರುವವರು, ‘ಅಗೆದೂ ಅಗೆದೂ ಸಾಕಾಗಿದೆ, ಇವತ್ತು ಇನ್ನು ಯಾರೂ ಸಾಯದೇ ಇರಲಿ’ ಎಂದು ಹೇಳಿ ಕೊಳ್ಳುತ್ತಾರೆ. ‘ಗ್ರಾಮಾಯಣ’ದ ಇಂಥದ್ದೊಂದು ಸನ್ನಿವೇಶವನ್ನು ಡಾ| ಎಂ.ಎಸ್. ಆಶಾದೇವಿಯವರು ಚೆನ್ನಾಗಿ ವಿವರಿಸಿದ್ದಾರೆ.

ಸದ್ಯದ ಸವಾಲು ಏನೆಂದರೆ, ಪ್ಲೇಗ್, ಕಾಲರಾ ನಂತರದಲ್ಲಿ ಸಾಮಾಜಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ಆದಂತೆಯೇ ಕೊರೋನಾ ನಂತರದ ಜಗತ್ತಿನಲ್ಲಿ ಅಂಥದ್ದೊಂದನ್ನು ನಿರೀಕ್ಷಿಸಲು ಸಾಧ್ಯವೇ? 14ನೇ ಶತಮಾನ ಮತ್ತು ಆ ಬಳಿಕ ಜಗತ್ತನ್ನು ಪ್ಲೇಗ್, ಕಾಲರಾ ಮತ್ತು ಇನ್‍ಫ್ಲುವೆಂಜಾಗಳು ತೀವ್ರವಾಗಿ ಕಾಡಿದುದರಿಂದಾಗಿ ಗ್ರಾಮಕ್ಕೆ ಗ್ರಾಮಗಳೇ ನಾಶವಾದದ್ದಿದೆ. ಇದರಿಂದಾಗಿ ಕಾರ್ಮಿಕ ಕೊರತೆಯ ಸವಾಲು ಎದುರಾಯಿತು. ಜಮೀನ್ದಾರಿಕೆ ಪದ್ಧತಿಯನ್ನು ನಿರ್ಮೂಲನಗೊಳಿಸಿದ್ದೇ ಈ ಕಾಯಿಲೆಗಳು ಎಂದೂ ಹೇಳಲಾಗುತ್ತದೆ. ಕಾರ್ಮಿಕರ ಕೊರತೆ ಎದು ರಾದದ್ದರಿಂದ ಜಮೀನ್ದಾರರು ಏನು ಮಾಡಿದರೆಂದರೆ, ಇರುವ ಕಾರ್ಮಿಕರಿಗೆ ಉತ್ತಮ ವೇತನ, ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಮುಂದಾದರು. ಅವರನ್ನು ಕೆಲಸ ಬಿಟ್ಟು ಹೋಗದಂತೆ ತಡೆಯಬೇಕಾದ ಮಾರ್ಗೋಪಾಯಗಳನ್ನು ಹುಡುಕತೊಡಗಿದರು. ಕಾರ್ಮಿಕರು ಅವರ ಪಾಲಿಗೆ ಅಮೂಲ್ಯ ಎನಿಸಿಕೊಂಡದ್ದು ಕಾರ್ಮಿಕರಿಗೂ ಮನದಟ್ಟಾಗತೊಡಗಿದಾಗ ಅವರು ತಮ್ಮ ಹಕ್ಕು, ಸ್ವಾತಂತ್ರ್ಯಗಳ ಬಗ್ಗೆ ಜಾಗೃತರಾಗುವುದಕ್ಕೂ ಮಾತಾಡುವುದಕ್ಕೂ ಕಾರಣವಾಯಿತು. ಕ್ರಮೇಣ ಭೂಮಾಲಿಕರೆಂದರೆ ಅಲುಗಾಡಿಸಲಾಗದ ಕಂಭವಲ್ಲ ಎಂಬ ಸಂದೇಶ ಕಾರ್ಮಿಕರ ನಡುವೆ ರವಾನೆಯಾಗತೊಡಗಿತು. ಕಾರ್ಮಿಕರಿಲ್ಲದೇ ಭೂಮಾಲಿಕರಿಲ್ಲ ಎಂಬುದು ದಿನಗಳೆದಂತೆ ಸ್ಪಷ್ಟವಾಗತೊಡಗಿತು. ಕ್ರಮೇಣ ಕಾರ್ಮಿಕ ಸ್ನೇಹಿ ಕಾಯ್ದೆಗಳು ಬಂದುವು. ಎಲ್ಲಿಯ ವರೆಗೆಂದರೆ,

ಜಮೀನ್ದಾರರಿಂದ ಬಲ ವಂತವಾಗಿ ಜಮೀನನ್ನು ಕಸಿದು ಕಾರ್ಮಿಕರಲ್ಲಿ ಹಂಚುವ ವರೆಗೆ ಈ ಪಲ್ಲಟಗಳು ನಿಧಾನಕ್ಕೆ ನಡೆಯತೊಡಗಿದುವು. ಉಳುವವನೇ ಹೊಲದೊಡೆಯ ಎಂಬ ಕಾಯ್ದೆ ನಮ್ಮಲ್ಲೂ ಜಾರಿಗೆ ಬಂದು ಎಂಥೆಂಥ ಜಮೀನ್ದಾರರು ರಾತೋರಾತ್ರಿ ಭೂರಹಿತವಾದುದರ ಹಿಂದೆ ಸಾಂಕ್ರಾಮಿಕ ರೋಗಗಳು ಸೃಷ್ಟಿಸಿದ ಕ್ರಾಂತಿಕಾರಿ ಬದಲಾ ವಣೆಗಳಿಗೆ ಪಾತ್ರವಿದೆ. ಭೂಮಾಲಿಕರ ಕುರಿತಾದ ಭೀತಿಯ ಚಿತ್ರವನ್ನು ಕಾರ್ಮಿಕರಿಂದ ಹೊಡೆದೋಡಿಸಿದ್ದೇ ಸಾಂಕ್ರಾಮಿಕ ರೋಗಗಳು. ಇದೀಗ ಕೊರೋನಾ ಈ ಜಗತ್ತನ್ನು ಆವರಿಸಿಕೊಂಡಿದೆ. ಇದರಿಂದ ಬಿಡುಗಡೆಗೊಂಡ ನಂತರ ಜಗತ್ತಿನ ಸ್ಥಿತಿ ಹೇಗಿರಬಹುದು? ಇದು ಆಸ್ತಿಗೆ ಮಹತ್ವ ಇದ್ದ 19ನೇ ಶತಮಾನ ಅಲ್ಲವಲ್ಲ. ಆರೋಗ್ಯ, ಶಿಕ್ಷಣ, ಸಮಾನತೆ, ಸಂಪತ್ತಿನ ಸಮಾನ ಬಳಕೆ ಇತ್ಯಾದಿಗಳು ಮುನ್ನೆಲೆಗೆ ಬಂದಿರುವ ಶತಮಾನ. ಜಗತ್ತಿನ ಸಂಪತ್ತನ್ನೆಲ್ಲ ಕೆಲವೇ ಕೆಲವು ಶ್ರೀಮಂತರು ತಮ್ಮ ಬಳಿ ಇಟ್ಟು ಕೊಂಡಿರುವುದಕ್ಕೆ ಕಾರಣ ವಾಗಿರುವ ಈಗಿನ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಪಲ್ಲಟಕ್ಕೆ ಕೊರೋನಾ ಕಾರಣವಾಗಬಹುದೇ? ತನ್ನ ಕಂಪೆನಿಯ ಉದ್ಯೋಗಿಯ ವೇತ ನಕ್ಕಿಂತ ಸಾವಿರ ಪಟ್ಟು ಅಧಿಕ ವೇತನ ಪಡೆಯುವ ಅದೇ ಕಂಪೆನಿಯ ಸಿಇಓನ ಬಗ್ಗೆ ತಕರಾರು ತೆಗೆಯುವುದಕ್ಕೆ ಇದು ಸನ್ನಿವೇಶ ಸೃಷ್ಟಿಸಬಹುದೇ? ಶ್ರೀಮಂತರ ಬಳಿ ಜಮೆಯಾಗುವ ಅಪರಿಮಿತ ಸಂಪತ್ತಿನ ಲಾಭವನ್ನು ಬಡವರಿಗೂ ಹಂಚಿಕೆಯಾಗುವಂತೆ ಮಾಡಲು ಮತ್ತು ಈಗಿನ ಅರ್ಥವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಪ್ರೇರಣೆಯೊದಗಿಸಬಹುದೇ?

ವಲಸೆ ಕಾರ್ಮಿಕರ ಪಾದಗಳು ಬೀದಿಯಲ್ಲಿ ಕುದಿಯುತ್ತಿರುವಾಗ ಅವರನ್ನು ಬೀದಿಗೆ ಬಿಟ್ಟವರು ಯಾವ ಸಂವೇದನೆಯೂ ಇಲ್ಲದೆ ಆರಾಮ ಕೋಣೆಯಲ್ಲಿ ಕುಳಿತರಲ್ಲ, ಅವರನ್ನು ಸೃಷ್ಟಿಸಿದ ವ್ಯವಸ್ಥೆ ಯನ್ನು ಬದಲಿಸಲು ಕೊರೋನಾ ಶಕ್ತವಾಗಬಹುದೇ?

ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.