ಕೊನೆಗೂ ಎ ಪಿ ಅಬ್ದುಲ್ಲ ಕುಟ್ಟಿ ಬಿಜೆಪಿಗೆ

0
1067

ಹೊಸದಿಲ್ಲಿ, ಜೂ. 24: ಕಾಂಗ್ರೆಸ್‍ನಿಂದ ಅಮಾನತುಗೊಂಡ ಕೇರಳದ ಕಣ್ಣೂರಿನ ಮಾಜಿ ಸಂಸದ ಎಪಿ ಅಬ್ದುಲ್ಲ ಕುಟ್ಟಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿದ್ದು ಬಿಜೆಪಿಗೆ ಸೇರ್ಪಡೆಯಾಗಲು ಮೋದಿ ಹೇಳಿರುವರೆಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಪಾರ್ಲಿಮೆಂಟಿನಲ್ಲಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುರಿತ ವಿವರಗಳನ್ನು ಮೋದಿಗೆ ತಿಳಿಸಿದ್ದೇನೆ ಎಂದು ಅಬ್ದುಲ್ಲ ಕುಟ್ಟಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಕೂಡ ಅಬ್ದುಲ್ಲ ಕುಟ್ಟಿ ಭೇಟಿಯಾಗಲಿದ್ದಾರೆ. ಮೋದಿಯನ್ನು ಹೊಗಳಿದ್ದಕ್ಕಾಗಿ 2009ರಲ್ಲಿ ಸಿಪಿಎಂ ಅವರನ್ನು ಪಕ್ಷದಿಂದ ಹೊರಹಾಕಿತ್ತು. ಕಣ್ಣೂರಿನ ಬಲಾಢ್ಯ ನಾಯಕ ಎನ್ನುವ ಲೆಕ್ಕಾಚಾರದಲ್ಲಿ ಅವರನ್ನು ನಂತರ ಕಾಂಗ್ರೆಸ್ ಸ್ವಾಗತಿಸಿತ್ತು. ಕೆ.ಸುಧಾಕರನ್ ಲೋಕಸಭೆಗೆ ಚುನಾಯಿತರಾದ ನಂತರ ಕಣ್ಣೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟು ನೀಡಿ ಅಬ್ದುಲ್ಲ ಕುಟ್ಟಿಯನ್ನು ಕಾಂಗ್ರೆಸ್ ಶಾಸಕರನ್ನಾಗಿಯೂ ಮಾಡಿತ್ತು. ಆದರೆ ಕೆಲವು ಆರೋಪಗಳಿಂದಾಗಿ ಅಬ್ದುಲ್ ಕುಟ್ಟಿಯವರಿಗೆ 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ ಟಿಕೆಟ್ ನೀಡಿರಲಿಲ್ಲ. ನಂತರ ಅವರು ಕಾಂಗ್ರೆಸ್ಸಿನಿಂದ ದೂರವಾಗಿದ್ದರು. ಕಾಸರಗೋಡು ಕ್ಷೇತ್ರಕ್ಕೆ ಅಬ್ದುಲ್ಲಕುಟ್ಟಿ ಪ್ರಯತ್ನಿಸಿದರೂ ಟಿಕೆಟ್ ಲಭಿಸಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್‍ನ ವಿರುದ್ಧ ಅವರು ಹೇಳಿಕೆ ನೀಡಿ ಕಾಂಗ್ರೆಸ್‍ನಿಂದ ಅಮಾನತುಗೊಂಡಿದ್ದರು.