ಆಡಂಬರದ ಮಸೀದಿಯಲ್ಲಿ ಸರಳತೆಯ ಭಾಷಣ!

0
498
ಸಾಂದರ್ಭಿಕ ಚಿತ್ರ

ಆತ್ಮಸಂಸ್ಕರಣೆ


@ ಕೆ.ಪಿ. ಇಸ್ಮಾಈಲ್
ಒಮ್ಮೆ ಕಪ್ಪು ವರ್ಣದ ವ್ಯಕ್ತಿ ಪ್ರಾರ್ಥಿಸಲು ಒಂದು ಚರ್ಚ್‍ಗೆ ಒಳ ಪ್ರವೇಶಿಸಿದನು. ಬಿಳಿಯರು ಆತನನ್ನು ಹೊಡೆದೋಡಿಸಿದರು. ಕನಸಲ್ಲಿ ಬಂದ ಯೇಸು ಕ್ರಿಸ್ತನೊಂದಿಗೆ ಆತ ದೂರು ನೀಡಿದನು. ದೂರನ್ನು ಆಲಿಸಿದ ಯೇಸು ಕ್ರಿಸ್ತ “ನಾನು ಹೋಗದೇ ಇರುವ ಚರ್ಚಿಗೆ ನೀನೇಕೆ ಹೋದೆ” ಎಂದು ಮರು ಪ್ರಶ್ನಿಸಿದನು. ಧರ್ಮಗಳನ್ನು ಜನರು ಯಾವೆಲ್ಲಾ ರೀತಿಯಲ್ಲಿ ವಿಕೃತಗೊಳಿಸುತ್ತಾರೆಂಬುದಕ್ಕೆ ಈ ಕತೆ ಸಣ್ಣ ಉದಾಹರಣೆಯಾಗಿದೆ. ಬಣ್ಣ, ಕುಲ, ಹಣ, ಸಂಪತ್ತು ಮನೆತನ ಇವೆಲ್ಲವೂ ಢಂಬಾಚಾರದ ಚಿಹ್ನೆಗಳಾಗಿ ಜ್ಞಾನದ ಈ ಸುವರ್ಣ ಕಾಲದಲ್ಲಿಯೇ ಮನುಷ್ಯರಲ್ಲಿ ತುಂಬಿ ತುಳುಕುತ್ತಿದೆ.
ಧಾರ್ಮಿಕ ವಿಶ್ವಾಸವೆಂಬುದು ದೇವನು ನೀಡಿದ ಉಡುಗೊರೆಯಾಗಿದೆ ಎಂಬುದು ಜನರ ಸಾಮಾನ್ಯ ಭಾವನೆಯಾಗಿದೆ. ಆದರೆ ಎಲ್ಲ ಧರ್ಮಗಳಲ್ಲಿಯೂ ಮನುಷ್ಯತ್ವದ ಕೊರತೆ ಇರುವ ಜನರನ್ನು ಕಾಣಬಹುದು. ಧರ್ಮದ ಹೆಸರಲ್ಲಿ ನಡೆಯುವ ಪ್ರದರ್ಶನಗಳೆಲ್ಲಾ ಜನರು ಗದ್ದಲ ಗಳಲ್ಲಿ ಆಚರಿಸುತ್ತಿರುವ ಪೊಳ್ಳು ಉತ್ಸವಗಳಾಗಿವೆ. ಧರ್ಮ ಮತ್ತು ಸಿದ್ಧಾಂತಗಳನ್ನು ಯಾವ ರೀತಿಯಲ್ಲಿ ವಿಕೃತಗೊಳಿಸುವರು ಎಂಬುದಕ್ಕೆ ಧಾರಾಳ ಉದಾಹರಣೆಗಳಿವೆ. ಅಹಿಂಸೆಯು ಬೌದ್ಧ ಧರ್ಮದ ಸಿದ್ಧಾಂತವಾಗಿದೆ. ಆದರೆ ಮ್ಯಾನ್ಮಾರ್‍ನಲ್ಲಿ ಬೌದ್ಧ ಧರ್ಮದ ಅನು ಯಾಯಿಗಳು ನಡೆಸಿದ ಕೊಲೆ ಅನ್ಯಾಯ ಅಕ್ರಮಗಳು ವಿಶ್ವದಲ್ಲೇ ಕುಪ್ರಸಿದ್ಧವಾಗಿದೆ.
ಮಾದರಿ ಜೀವನ ಹೇಗಿರಬೇಕೆಂದು ಕುರ್‍ಆನ್ ಮತ್ತು ಹದೀಸ್ ಆಧಾರ ಸಹಿತವಾಗಿ ಸವಿವರವಾಗಿ ವಿವರಿಸಿದೆ. ಶಾಂತಿ, ಸುವ್ಯವಸ್ಥೆ ಯಿಂದ ಕೂಡಿದ ಸಮಾಜ ಸ್ಥಾಪನೆ ಹೇಗೆ ಎಂಬುದನ್ನು ಪ್ರವಾದಿ(ಸ) ಮತ್ತು ಅವರ ಅನುಚರರು ಚೆನ್ನಾಗಿ ಕಲಿಸಿಕೊಟ್ಟಿದ್ದಾರೆ. ಸಹ ಧರ್ಮೀಯರೊಂದಿಗೆ ಅಸಹಿಷ್ಣುತೆಯಿಂದ ವರ್ತಿಸುವುದನ್ನು, ಅವರನ್ನು ಕೆರಳಿಸುವುದನ್ನು ಬಹಳ ಕಠಿಣ ಶಬ್ದಗಳಲ್ಲಿ ಅದರಲ್ಲಿ ಖಂಡಿಸಲಾಗಿದೆ. ಈ ಸಮಗ್ರವಾದ ಉಡುಗೊರೆಯನ್ನು ನೀಡಿದ ಬಳಿಕ “ನೀವು ಮಾನವ ಕುಲಕ್ಕೆ ಮಾದರಿ ಸಮುದಾಯವಾಗಿದ್ದೀರಿ” ಎಂಬ ಅಂಗೀ ಕಾರವನ್ನು ಮುಸ್ಲಿಮ್ ಸಮುದಾಯಕ್ಕೆ ನೀಡಲಾಗುತ್ತದೆ.
ದೇವನ ಈ ಪ್ರಸ್ತಾಪವನ್ನು ಮುಂದಿರಿಸಿ ಕೊಂಡು ಇಂದಿನ ಮುಸ್ಲಿಮ್ ಸಮುದಾಯವನ್ನು ಪರಾಮರ್ಶಿಸಬೇಕಾಗಿದೆ. ಅತ್ಯಂತ ಖೇದಕರವಾದ ರೀತಿಯಲ್ಲಿ ಅವರು ಪರಸ್ಪರ ಗುಂಪುಗಾರಿಕೆ ಮತ್ತು ವಿಭಜನೆಯಲ್ಲಿ ಮುಳುಗಿದ್ದಾರೆ. ಪರಸ್ಪರ ಹೋರಾಡುತ್ತಿದ್ದಾರೆ. ಹಣದ ಅಮಲು ಅವರನ್ನು ಬೇಟೆಯಾಡುತ್ತಿದೆ. “ನೀವು ಭಿನ್ನ ಭಿನ್ನರಾಗಬೇಡಿ ಕಲಹದಲ್ಲಿ ಏರ್ಪಡಬೇಡಿರಿ, ದುವ್ರ್ಯಯ ಮಾಡ ಬೇಡಿ ಎಂದು ಕುರ್‍ಆನ್ ತಾಕೀತು ನೀಡಿಯೂ ಕೂಡಾ ಸಮುದಾಯ ನಿರ್ಲಕ್ಷ್ಯದಿಂದ ಬದುಕುತ್ತಿದೆ.
ಪ್ರವಾದಿವರ್ಯರ(ಸ) ನಿರ್ದೇಶ ಆದೇಶಗಳಿಗೆ ಬದಲಾಗಿ ಅನೇಕ ಅನಗತ್ಯ ಅನಾಚಾರಗಳನ್ನು ಧರ್ಮದಲ್ಲಿ ಬೆರೆಸುತ್ತಾರೆ. ಗುಲಾಮಗಿರಿಗಿಂತ ಕೀಳಾಗಿ ಮಹಿಳೆಯರನ್ನು ದಮನಿಸಲಾಗುತ್ತದೆ. ವರದಕ್ಷಿಣೆಯಂತಹ ಕಂದಾಚಾರಗಳನ್ನು ಸಮಾಜ ದಲ್ಲಿ ತುರುಕಿಸಿ ಇಡೀ ಸಮಾಜವನ್ನೇ ನರಕ ಸದೃಶಗೊಳಿಸಲಾಗುತ್ತಿದೆ. “ಧರ್ಮದಲ್ಲಿ ಸಂಕೀರ್ಣ ತೆಯಿಲ್ಲ” ಎಂದು ಕುರ್‍ಆನ್ ನಮ್ಮನ್ನು ಸಾಂತ್ವನ ಪಡಿಸುತ್ತಿರುವಾಗ ಧರ್ಮದ ವಕ್ತಾರರಂತೆ ಪೋಸು ನೀಡುವ ಕೆಲವರು ಜನರ ದಾರಿ ತಪ್ಪಿಸಿ ದ್ರೋಹ ಬಗೆದು ಕಂದಾಚಾರ, ಅನಾಚಾರಗಳನ್ನು ತುರುಕಿಸುತ್ತಿದ್ದಾರೆ. ಸಮಕಾಲೀನ ಜೀವನದಲ್ಲಿ ಹುಡುಕಿದರೆ ಪರಿಶುದ್ಧವಾದ ಪವಿತ್ರ ಇಸ್ಲಾಮ್ ಕಾಣ ಸಿಗದು. ಬದಲಾಗಿ ಅನೇಕ ಕಂದಾಚಾರ ಗಳನ್ನು ಬೆರೆಸಿ ಕಲಸಿದವುಗಳನ್ನು ಕಾಣಬಹುದು.
ಪ್ರವಾದಿಗಳ ಮತ್ತು ಸಹಾಬಿಗಳ ಜೀವನವು ಸಮಾನತೆಯ ಸಾಮಾಜಿಕ ಜೀವನದಿಂದ ಬೆಳಗಿತ್ತು. ಅಲ್ಲಿ ಎಂತಹಾ ಸಮಸ್ಯೆಗಳೂ ಪರಿಹಾರವಾಗುತ್ತಿದ್ದವು. ಸಂಪತ್ತಿನ ವಿಚಾರದಲ್ಲಿ ಏರಿಳಿತಗಳು ಇದ್ದರೂ ಅಲ್ಲಿ ದುವ್ರ್ಯಯವಿರಲಿಲ್ಲ. ಎಲ್ಲರ ಜೀವನದ ಅಗತ್ಯಗಳು ಪೂರೈಸಲ್ಪಡುತ್ತಿದ್ದವು. ಪ್ರವಾದಿವರ್ಯರೊಂದಿಗೆ ತಮ್ಮ ಸಮಸ್ಯೆಗಳನ್ನು ಭಿನ್ನವಿಸಿದರೆ ಸಾಕು ಕೂಡಲೇ ಅದಕ್ಕೆ ಪರಿಹಾರ ನೀಡುತ್ತಿದ್ದರು. ಆದರೆ ಇಂದಿನ ಸ್ಥಿತಿ ತೀರಾ ಭಿನ್ನವಾಗಿದೆ. ಖೇದಕರವಾಗಿದೆ. ಮಾದರಿ ಸಮು ದಾಯ ಎಂದು ಹೇಳಲು ಮುಸ್ಲಿಮ್ ಸಮುದಾಯಕ್ಕೆ ಅರ್ಹತೆಯಿದೆಯೇ? ಆರ್ಥಿಕವಾದ ಉಚ್ಚ ನೀಚತೆಗಳು ಅತ್ಯಂತ ಕಳವಳಕಾರೀ ಹಂತವನ್ನು ತಲುಪಿದೆ. ಬಡವರನ್ನೂ ದುರ್ಬಲ ರನ್ನೂ ನೋಡಿಯೂ ನೋಡದಂತೆ ವರ್ತಿಸ ಲಾಗುತ್ತಿದೆ. ಅಂತಹ ಮನಸುಗಳನ್ನು ಬೆಳೆಸ ಲಾಗುತ್ತಿದೆ. ಸಾಹೋದರ್ಯತೆಯ ಉನ್ನತವಾದ ಸಂದೇಶಗಳು ಬರಹಗಳಿಗೆ ಸೀಮಿತವಾಗಿದೆ. ಅದು ಜೀವನದಲ್ಲಿ ಪರಸ್ಪರ ಭೇದ-ಭಾವಗಳನ್ನು ಸೃಷ್ಟಿಸುವುದನ್ನು ಕಾಣಬಹುದು. ಯುದ್ಧ ಭೂಮಿ ಯಲ್ಲಿ ಮರಣಾಸನ್ನರಾಗಿ ಮಲಗಿರುವಾಗಲೂ ಹತ್ತಿರದಲ್ಲಿ ಮಲಗಿದ ಸಹೋದರನ ಬಾಯಾರಿಕೆ ತಣಿಸಲು ಮುಂದಾದ ಸಹಾಬಿಗಳ ಅನುಯಾಯಿ ಗಳು ತನ್ನ ಸಹೋದರನ ರಕ್ತ ಹರಿಸಲೂ ಹಿಂಜರಿಯುವುದಿಲ್ಲ. ಬಡ ಕುಟುಂಬಗಳಿಗೆ ಖಲೀಫಾ ಉಮರ್‍ರವರು ಆಹಾರ ದಾನ್ಯಗಳ ಮೂಟೆಗಳನ್ನು ಹೊತ್ತು ತಲುಪಿಸಿದ ಉದಾ ಹರಣೆಗಳು ಇತಿಹಾಸದಲ್ಲಿದೆ. ಆದರೆ ಕರುಣೆಯ ಒಂದಂಶವೂ ಇಲ್ಲದಂತಹ ರೀತಿಯಲ್ಲಿ ಸಮು ದಾಯವು ಜೀವಿಸುತ್ತಿದೆ. “ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರು” ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರಾದರೂ ಬಡವರು ದುರ್ಬಲರು ಎಂಜಲಿನಲ್ಲಿ ಅನ್ನ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಉದ್ಯೋಗ ರಂಗದಲ್ಲಿಯೂ ಅನೈತಿಕತೆಗಳು ಸಾರ್ವತ್ರಿಕವಾಗಿವೆ. ವ್ಯಾಪಾರದಲ್ಲಿ, ವಹಿವಾಟಿನಲ್ಲಿ ಸತ್ಯಸಂಧತೆ ಕಂಡುಬರುವುದಿಲ್ಲ. ತೆರಿಗೆ ವಂಚನೆ ಯನ್ನು ಹಕ್ಕು ಎಂಬಂತೆ ಮಾಡುತ್ತಿರುತ್ತಾರೆ. ಮಾಲಿಕನನ್ನು ವಂಚಿಸಿ ಹಣ ಗಳಿಸುವುದನ್ನು ಅಳವಡಿಸಿಕೊಂಡಿರುತ್ತಾರೆ. ಅಂತಹ ಸಂಪಾದನೆ ಗಳಲ್ಲಿ ಭಾಗಿಯಾಗಿ ಸಮಾಜವು ಸಂತೋಷ ದಲ್ಲಿರುತ್ತದೆ. ಜನರನ್ನೂ ಸಮಾಜವನ್ನೂ ಹಾಳುಗೆಡಹುವಂತಹ ಮಾದಕ ಪದಾರ್ಥಗಳನ್ನು ಕಳುಹಿಸಲು, ಮಾರಾಟ ಮಾಡಲು ಯುವಕರು ಮುಗಿ ಬೀಳುತ್ತಾರೆ.
ಪ್ರವಾದಿಗಳ ಕಾಲದಲ್ಲಿ ವಿಶ್ವಾಸವೆಂಬುದು ಜೀವನವನ್ನು ಶುದ್ಧೀಕರಿಸುವ ಮಾರ್ಗವಾಗಿತ್ತು. ಈಗ ವಿಶ್ವಾಸವೆಂಬುದು ಜಾತಿಯಾಗಿದೆ. ಅದು ಜನ್ಮತಃ ಸಂದರ್ಭದಲ್ಲಿ ಬಂದದ್ದಾಗಿದೆ. ಜ್ಞಾನ ಮತ್ತು ಒಳಿತಿಗೆ ಅದರಲ್ಲಿ ಸ್ಥಾನವಿಲ್ಲ. ಸಂಪಾದನೆಯೆಂಬುದು ಪರಮ ಧ್ಯೇಯವಾಗಿದೆ. ಅದಕ್ಕಾಗಿ ಯಾವ ಹಂತಕ್ಕೂ ಇಳಿಯಲಾಗುತ್ತದೆ. ಅವರ ವೀರ ಸಾಹಸದ ಕತೆ, ತಂತ್ರಗಳನ್ನು ಕೇಳಿ ಅವರ ಆಪ್ತರು ಸಂತೋಷ ಭರಿತರಾಗುತ್ತಾರೆ. ಜ್ಞಾನವೆಂಬುದು ಹೃದಯದ ಸಂಸ್ಕರಣೆಗಿಂತ ಉದ್ಯೋಗಗಳಿಸುವ ಮಾರ್ಗವಾಗಿದೆ.
ದುಂದು ವೆಚ್ಚವೆಂಬುದು ಆಡಂಬರ ಪ್ರದರ್ಶನ ವಾಗಿದೆ. ಒಂದು ವಿವಾಹ ಸಮಾರಂಭಕ್ಕೆ ಹೋಗಿ ಒಮ್ಮೆ ನೋಡಿರಿ. ಧಾರ್ಮಿಕವಾದ ಚಟುವಟಿಕೆಗಳು ಅಲ್ಲಿ ಕಂಡು ಬರದು. ಬಣ್ಣ ಬಣ್ಣದ ಶೃಂಗಾರದ ದೀಪಗಳಿಂದ ಚಪ್ಪರವು ಮಿನುಗುತ್ತಿರುತ್ತದೆ. ಇದು ಢಂಬಾಚಾರದ ಪ್ರದರ್ಶನವಾಗಿದೆ. ಆಹಾರದ ಹಾಲ್‍ನತ್ತ ತೆರಳಿದಾಗ ವಿವಿಧ ಬಗೆಯ ಆಹಾರಗಳ ಉತ್ಸವ. ವಿವಿಧ ಆಹಾರಗಳಿಗೆ ವಿವಿಧ ದ್ವಾರಗಳು. ತಿನ್ನಿರಿ ಉಳಿದದ್ದನ್ನು ಹಾಳು ಮಾಡಿರಿ ಎಂಬುದು ಮದುವೆಯ ಧ್ಯೇಯವಾಕ್ಯವಾಗಿರುತ್ತದೆ.
ಕೆಲವು ಧಾರ್ಮಿಕ ಕೇಂದ್ರಗಳು ಸ್ವರ್ಣ ದಿಂದಲೇ ಹೊದಿಸಿರುತ್ತವೆ. ಸರಳತೆಯ ಮಾದರಿ ಪಾಠವನ್ನು ನೀಡಬೇಕಿದ್ದ ಧಾರ್ಮಿಕ ಕಾರ್ಯ ಚಟುವಟಿಕೆಗಳು ಆಡಂಬರಗಳಿಂದ ಕೂಡಿರುತ್ತವೆ. ಬಡವರು, ದುರ್ಬಲರು ಬಹಳ ಭಕ್ತಿಯಿಂದ ಬಂಗಾರದ ಗಟ್ಟಿಗಳ ಮುಂದೆ ನಿಲ್ಲುತ್ತಾರೆ. ಸಮಾಜದ ಪ್ರಬಲರು, ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಸಿದ್ಧಗೊಳಿಸುತ್ತಾರೆ. ಬಡವರು ಅವರ ಮುಂದೆ ಪ್ರಶ್ನಿಸದೆ ಭಕ್ತಿ ಪ್ರಕಟಿಸುತ್ತಾರೆ. ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೆ ಪುರೋ ಹಿತರು ಧರಿಸುವ ವೇಷ ವಿನ್ಯಾಸಗಳೂ ಸಭೆ ಯಲ್ಲಿನ ಅಲಂಕೃತ ಶೃಂಗಾರಗಳೂ ಏಕೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ.
ಜನಸಾಮಾನ್ಯರ ಜೀವನದೊಂದಿಗೆ ಅವರಿಗೆ ಸಂಬಂಧವಿರುವುದಿಲ್ಲ. ಹಸಿವಿನಿಂದ ಜೀವಿಸುವವ ರನ್ನು ಅಣಕಿಸುವಂತಹ ಢಂಬಾಚಾರದ ಪ್ರದರ್ಶನಗಳು. ದೇವನ ಹೆಸರಿನಲ್ಲಿ ನಡೆಯುವ ಈ ದುಂದುವೆಚ್ಚದ ಢಂಬಾಚಾರಗಳು ದೇವನಿಂದ ನಿರ್ದೇಶಿತವಾದುದಲ್ಲ. ದೊಡ್ಡ ದೊಡ್ಡ ಚರ್ಚು ಗಳನ್ನು ನಿರ್ಮಿಸಿ ಬಳಿಕ ಜನರೊಂದಿಗೆ ಯೇಸು ಕ್ರಿಸ್ತರ ಸರಳತೆಯ ಬಗ್ಗೆ ಹೇಳುವುದು ಸಲ್ಲದು ಎಂದು ಪಾದ್ರಿಯೊಬ್ಬರು ಈ ಹಿಂದೆ ಲೇಖನ ವೊಂದರಲ್ಲಿ ಬರೆದಿದ್ದರು. ಆಡಂಬರ ಭರಿತವಾದ ಮಸೀದಿ ನಿರ್ಮಿಸಿ ಪ್ರವಾದಿವರ್ಯರ(ಸ) ಸರಳತೆಯ ಬಗ್ಗೆ ಉಪನ್ಯಾಸ ನೀಡುವುದರಲ್ಲಿ ಅರ್ಥವಿದೆಯೇ? ತೇಪೆ ಹಾಕಿದ ವಸ್ತ್ರ ಧರಿಸಿ ಸಿರಿಯ ಸಂದರ್ಶಿಸಿದ ಖಲೀಫ ಉಮರ್‍ರನ್ನು(ರ) ನೋಡಿದಾಗ ಜನರಿಗೆ ಅವರ ಗುರುತು ಹಿಡಿಯಲಾಗಲಿಲ್ಲ. ಇವರೇ ಖಲೀಫರು ಎಂದರಿತಾಗ ಅವರು ಮೂಕ ವಿಸ್ಮಿತರಾದರು. ಜನರನ್ನು ಭೇಟಿಯಾಗಲು ಸಿದ್ಧಪಡಿಸಲಾದ ಆಡಂಬರದಿಂದ ಕೂಡಿದ ಕುದುರೆಯನ್ನು ಉಮರ್(ರ) ಉಪಯೋಗಿಸಿಲ್ಲ. ಒಂದು ಸಾಮಾನ್ಯವಾದ ಕುದುರೆಯನ್ನೇರಿ ಹೊರಟರು.
ಶ್ರೇಷ್ಠವಾದ ಒಂದು ಆದರ್ಶದ ಅನುಯಾಯಿಗಳಾಗಿದ್ದುಕೊಂಡು ಅಪಕ್ವತೆಯಿಂದ ಕೂಡಿದ ಜೀವನ ರೀತಿಯು ದೈವಿಕ ಸಂದೇಶಗಳ ಮೇಲೆ ಎಷ್ಟರ ಮಟ್ಟಿಗೆ ಹೇರಲಾಗಿದೆ! ಹಣ, ಒಣ ಪ್ರತಿಷ್ಠೆಯಿಂದ ಜೀವನವನ್ನು ಪವಿತ್ರಗೊಳಿಸಿ ಪರಿಶುದ್ಧಗೊಳಿಸಲಾಗದು. ಒಣ ಪ್ರತಿಷ್ಠೆ, ಅಹಂಕಾರದಲ್ಲಿ ಮುಳುಗಿದ ಸಮುದಾಯದಿಂದ ಇತರರಿಗೆ ಏನೂ ನೀಡಲು ಸಾಧ್ಯವಾಗದು.