ಆಡಿಯೋ ಪ್ರಕರಣ: ಸಿದ್ದರಾಮಯ್ಯನವರ ಹಠವೇ ಎಫ್ ಐ ಆರ್ ದಾಖಲಾತಿಗೆ ಕಾರಣವೇ?

0
563

ಯಡಿಯೂರಪ್ಪರದ್ದೆಂದು ಹೇಳಲಾದ ಆಡಿಯೋ ಪ್ರಕರಣವು ಇದೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ದೋಸ್ತಿ ಸರಕಾರದಲ್ಲಿ ಭಿನ್ನಮತಕ್ಕೆ ಕಾರಣವಾಗುವ ಸಾಧ್ಯತೆಗಳನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎಸ್ ಐ ಟಿ ಗೆ ವಹಿಸಿಕೊಟ್ಟಿದ್ದರೂ ಅದು ಅವರದ್ದೋ ಅಥವಾ ಸಭಾಧ್ಯಕ್ಷ ರಮೇಶ್ ಕುಮಾರಾರದ್ದೋ ಬಯಕೆಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಠವೇ ಪ್ರಕರಣವನ್ನು SIT ಗೆ ವಹಿಸಿಕೊಡಲು ಕಾರಣ ಎಂದು ಮೂಲಗಳು ಹೇಳುತ್ತಿವೆ.

ಈ ಆಡಿಯೋ ಬಯಲಿಗೆ ಬಂದ ಬಳಿಕ ಸರಣಿ ಚರ್ಚೆಗಳು ನಡೆದಿವೆ. ಮೊದಲು ಮಾತುಕತೆಗೆ ಮುಂದಾದದ್ದೇ ರಾಜ್ಯಸರ್ಕಾರ. ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸುವುದಕ್ಕೆ ಕುಮಾರಸ್ವಾಮಿಯವರಿಗೆ ಒಲವಿತ್ತು ಎನ್ನಲಾಗುತ್ತಿದೆ. ಸಭಾಧ್ಯಕ್ಷರೂ ಅದನ್ನೇ ಬಯಸಿದ್ದರು ಎಂದೂ ಹೇಳಲಾಗುತ್ತದೆ. ಆ ದೃಷ್ಟಿಯಿಂದಲೇ ಮಾತುಕತೆಯನ್ನು ಆಯೋಜಿಸಲಾಗಿತ್ತು. ಮಾತುಕತೆಯಲ್ಲಿ ಯಾರ್ಯಾರು ಇರಬೇಕೆಂದು ಸಭಾಧ್ಯಕ್ಷರು ತೀರ್ಮಾನಿಸಿದ್ದರು. ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್, ಯಡಿಯೂರಪ್ಪ, ಅಶೋಕ್, ಜಗದೀಶ್ ಶೆಟ್ಟರ್ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ SIT ಯ ಬಗ್ಗೆ ಕುಮಾರಸ್ವಾಮಿಯವರಿಗೆ ಒಲವು ಇದ್ದಿರಲಿಲ್ಲವಾದರೂ ಸಿದ್ದರಾಮಯ್ಯ ಜಿದ್ದಿಗೆ ಬಿದ್ದವರಂತೆ ಹಠ ಹಿಡಿದು ಪ್ರಕರಣವನ್ನು SIT ಗೆ ಒಪ್ಪಿಸುವಲ್ಲಿ ಯಶಸ್ವಿಯಾದರು. ಯಡಿಯೂರಪ್ಪರ ಮೇಲೆ ಎಫ್ ಐ ಆರ್ ದಾಖಲಾಗುವುದು ದೇವೇಗೌಡರಿಗೂ ಇಷ್ಟವಿರಲಿಲ್ಲವಾದರೂ ಸಿದ್ದರಾಮಯ್ಯನವರು ಪಟ್ಟು ಹಿಡಿದುದರಿಂದ ಪ್ರಕರಣ SIT ಗೆ ಹೋಯಿತು ಎಂಬ ಮಾತಿದೆ. ಇದೀಗ ಈ ವಿಷಯದಲ್ಲಿ ಜೆಡಿಎಸ್ ಕಾಂಗ್ರೆಸ್ ಎಂದು ವಿಭಜನೆಗೊಂಡು ತಿಕ್ಕಾಟಕ್ಕೆ ಕಾರಣವಾಗುತ್ತೋ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.