ಆರೆಸ್ಸೆಸ್ ಆಹ್ವಾನಕ್ಕೆ ತಿರಸ್ಕಾರವೇ ಉತ್ತರವೇ?

0
444

ಏ ಕೆ ಕುಕ್ಕಿಲ

ಅಸಹಿಷ್ಣು, ಅತಾರ್ಕಿಕ, ಅಪ್ರಾಯೋಗಿಕ ಮತ್ತು ಅಸಾಂವಿಧಾನಿಕವಾದ ಸಿದ್ಧಾಂತವನ್ನು ಆಶ್ರಯಿಸಿಕೊಂಡಿರುವ ಸಂಘಟನೆಯೊಂದರ ಆಹ್ವಾನವನ್ನು ಸ್ವೀಕರಿಸಬೇಕೇ ಬೇಡವೇ? ಅದು ಆಯೋಜಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸಕನಾಗಿ ಭಾಗವಹಿಸುವುದು ಉಚಿತವೋ ಅನುಚಿತವೋ?

ಇತ್ತೀಚೆಗೆ ಈ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ. ರಾಷ್ಟ್ರೀಯ ಸ್ವಯಂ ಸೇವಕ (ಆರೆಸ್ಸೆಸ್) ಸಂಘವು ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಗೆ ಉಪನ್ಯಾಸಕರಾಗಿ ಮುಖರ್ಜಿ ಯನ್ನು ಆಹ್ವಾನಿಸಿದ್ದು ಮತ್ತು ಅವರು ಆ ಆಹ್ವಾನವನ್ನು ಸ್ವೀಕರಿಸಿದ್ದು ಚರ್ಚೆಯ ಹುಟ್ಟಿಗೆ ಕಾರಣವಾಗಿತ್ತು. ಜೂನ್ 7ರ ಆ ಸಭೆಯಲ್ಲಿ ಮುಖರ್ಜಿಯವರು ಭಾಗವಹಿಸಬಾರದು ಎಂದು ಕಾಂಗ್ರೆಸ್‍ನ ಹಲವು ಪ್ರಮುಖ ನಾಯಕರೇ ಅಭಿಪ್ರಾಯ ಪಟ್ಟರು. ಕೆಲವರು ಮೌನವಾದರು. ಹಲವರು ಬೆಂಬಲಿಸಿದರು. ಆರೆಸ್ಸೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಮ್ ಲೀಗ್‍ನ ಸದಸ್ಯರಾಗದಂತೆ  ‘ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ’ (AICC) ಸದಸ್ಯರಾಗಿರುವವರಿಗೆ ನಿಷೇಧ ವಿಧಿಸಿ ಸ್ವಾತಂತ್ರ್ಯಪೂರ್ವದ 1934ರಲ್ಲೇ  (ಆಗಿನ್ನೂ ರಾಜಕೀಯ ಪಕ್ಷವಾಗಿರಲಿಲ್ಲ) ನಿಯಮ ಮಾಡಿರುವುದನ್ನು ಕೆಲವರು ನೆನಪಿಸಿದರು. ಇದೇವೇಳೆ, ಪ್ರಣವ್ ಮುಖರ್ಜಿಯವರ ಮಗಳು ಶರ್ಮಿಷ್ಟಾ ಮುಖರ್ಜಿಯವರು ಅಪ್ಪನ ನಿಲುವನ್ನು ಪ್ರಶ್ನಿಸಿ ಚರ್ಚೆಗೆ ಇನ್ನಷ್ಟು ಕಾವು ಕೊಟ್ಟರು. ಆರೆಸ್ಸೆಸ್‍ನ ಆಹ್ವಾನವನ್ನು ಅಪ್ಪ ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದರು. ಒಂದುವೇಳೆ, ಅಪ್ಪ ಆ ಸಭೆಯಲ್ಲಿ ಭಾಗವಹಿಸಿದರೆ, ಅದು ಸುಳ್ಳು ಸುದ್ದಿಯನ್ನು ಹರಡಲು ಆರೆಸ್ಸೆಸ್ ಮತ್ತು ಬಿಜೆಪಿಗೆ ನೆರವಾಗಲಿದೆ ಎಂದು ಖಾರವಾಗಿಯೇ ಬರೆದರು. ಮಾತ್ರವಲ್ಲ, ಅಪ್ಪ ಅಲ್ಲಿ ಆಡುವ ಮಾತುಗಳು ಮುಂದಿನ ದಿನಗಳಲ್ಲಿ ಮರೆತು ಹೋಗಲಿದ್ದು, ಅವರು ಭಾಗವಹಿಸಿದ ಚಿತ್ರಗಳಷ್ಟೇ ಶಾಶ್ವತವಾಗಿ ಉಳಿದುಕೊಳ್ಳಲಿವೆ ಎಂದೂ ಹೇಳಿದರು. ವಿಶೇಷ ಏನೆಂದರೆ,

ಆರೆಸ್ಸೆಸ್‍ನ ಸಭೆಯಲ್ಲಿ ಭಾಗವಹಿಸಿದ ಪ್ರಣವ್ ಮುಖರ್ಜಿಯವರ ಚಿತ್ರಗಳನ್ನು ಮಾಧ್ಯಮಗಳು, ಬಿಜೆಪಿ ಮತ್ತು ಅದರ ಬೆಂಬಲಿಗರು ಆ ಬಳಿಕ ಧಾರಾಳವಾಗಿ ಬಳಸುತ್ತಿದ್ದಾರೆ. ಅದರ ಜೊತೆಗೇ, “ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಲು ನಾನಿಲ್ಲಿಗೆ ಬಂದಿರುವೆ” ಎಂದು ವಿಸಿಟರ್ಸ್ ಪುಸ್ತಕದಲ್ಲಿ ಅವರು ಬರೆದಿರುವುದನ್ನೂ ಉಪಯೋಗಿಸುತ್ತಿದ್ದಾರೆ. ಆರೆಸ್ಸೆಸ್ ಸಂಸ್ಥಾಪಕ ಸರಸಂಘಚಾಲಕ ಕೇಶವ ಬಲಿರಾಂ ಹೆಡಗೇವಾರ್ ಅವರ ಜನ್ಮಸ್ಥಳಕ್ಕೆ ಭೇಟಿ ಕೊಡುವ ವೇಳೆ ಮುಖರ್ಜಿ ಹೀಗೆ ಬರೆದಿರುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲಿಗರು ತಮಗೆ ಸಿಕ್ಕ ಮಾನ್ಯತೆಯೆಂಬಂತೆ ಇವತ್ತು ಬಿಂಬಿಸುತ್ತಿದ್ದಾರೆ. ಮುಖರ್ಜಿಯವರ ಭೇಟಿಯ ನಂತರದಲ್ಲಿ ಈ ಬೆಳವಣಿಗೆ ನಡೆದಿರುವುದರಿಂದ, ಆರೆಸ್ಸೆಸ್‍ನ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಚರ್ಚೆಗೆ ಇದು ಇನ್ನಷ್ಟು ಮಹತ್ವವನ್ನು ಒದಗಿಸಿದೆ.

ಇದಕ್ಕೆ ಹತ್ತಿರವಾಗಿರುವ ಇನ್ನೊಂದು ಘಟನೆಯನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು.

ಅಮೇರಿಕದ ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿಯನ್ನು ಪ್ರಥಮವಾಗಿ ಆಯೋಜಿಸಿದ್ದು ಅಧ್ಯಕ್ಷ ಬಿಲ್ ಕ್ಲಿಂಟನ್. ಅಮೇರಿಕ ದಲ್ಲಿರುವ ವಿವಿಧ ಮುಸ್ಲಿಮ್ ರಾಷ್ಟ್ರಗಳ ರಾಯಭಾರಿಗಳು, ಅಮೇರಿಕದ ಮುಸ್ಲಿಮ್ ವಿದ್ವಾಂಸರು, ಆ್ಯಕ್ಟಿವಿಸ್ಟ್‍ಗಳು, ಸಾಮಾಜಿಕ ಹೋರಾಟಗಾರರು ಮುಂತಾದವರನ್ನು ಈ ಇಫ್ತಾರ್ ಪಾರ್ಟಿಗೆ ಅವರು ಆಹ್ವಾನಿಸಿದ್ದರು. 1990ರಿಂದ ಆರಂಭವಾದ ಈ ಕಾರ್ಯ ಕ್ರಮವನ್ನು ಮುರಿದವರು ಈಗಿನ ಅಧ್ಯಕ್ಷ ಟ್ರಂಪ್. 2017ರಲ್ಲಿ ಶ್ವೇತಭವನವು ಇಫ್ತಾರ್ ಪಾರ್ಟಿ ಆಯೋಜಿಸದೇ ಸುಮ್ಮನಾಯಿತು. ಅದು ತೀವ್ರ ಚರ್ಚೆಗೂ ಕಾರಣವಾಯಿತು. ಟ್ರಂಪ್ ಅವರ ತೀವ್ರ ಬಲಪಂಥೀಯ ವಿಚಾರಧಾರೆಯ ಪ್ರತಿಬಿಂಬ ಇದು ಎಂಬ ಟೀಕೆಯೂ ವ್ಯಕ್ತವಾಯಿತು. ತನ್ನ ಚುನಾವಣಾ ಭಾಷಣಗಳಲ್ಲಿ ಮುಸ್ಲಿಮ್ ವಿರೋಧಿ ನಿಲುವನ್ನು ವ್ಯಕ್ತಪಡಿಸುವ ಮೂಲಕವೇ ಪ್ರಚಾರಕ್ಕೆ ಬಂದಿದ್ದ ಟ್ರಂಪ್‍ರ ಮೇಲೆ ಮತ್ತಷ್ಟು ಆರೋಪಗಳನ್ನು ಹೊರಿಸಲು ಇದು ಅವಕಾಶ ಒದಗಿಸಿತು. ಅದೇವೇಳೆ, ಅವರ ಬೆಂಬಲಿಗರು ಟ್ರಂಪ್‍ರ ನಿಲುವನ್ನು ಸಮರ್ಥಿಸಿಕೊಳ್ಳತೊಡಗಿದರು. ಆದರೆ, 2018ರಲ್ಲಿ ಇದೇ ಟ್ರಂಪ್ ಶ್ವೇತಭವನದಲ್ಲೇ  ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿದರು. ಮಾತ್ರವಲ್ಲ, ಬಿಲ್ ಕ್ಲಿಂಟನ್ ಅವರ ಇಫ್ತಾರ್ ಪಾರ್ಟಿ ಹೇಗಿತ್ತೋ ಅದೇ ಮಾದರಿಯನ್ನು ಈ ಪಾರ್ಟಿಗೂ ಅಳವಡಿಸಿಕೊಂಡರು. ಸೌದಿ ರಾಯಭಾರಿ ಖಾಲಿದ್ ಬಿನ್ ಸಲ್ಮಾನ್, ಜೋರ್ಡಾನ್ ರಾಯಭಾರಿ ರಿನಾ ಕವಾರ್ ಸೇರಿದಂತೆ ಇಂಡೋನೇಶಿಯಾ, ಯುಎಇ, ಟುನೀಷ್ಯಾ, ಕತಾರ್, ಬಹ್ರೈನ್, ಮೊರಾಕ್ಕೊ, ಅಲ್ಜೀರಿಯಾ, ಲಿಬಿಯಾ, ಕುವೈತ್, ಝಾಂಬಿಯಾ, ಇತಿಯೋಪಿಯಾ, ಇರಾಕ್, ಬೋಸ್ನಿಯಾ ಮುಂತಾದ ದೇಶಗಳ ರಾಯಭಾರಿಗಳು ಭಾಗವಹಿಸಿದ ಆ ಇಫ್ತಾರ್ ಪಾರ್ಟಿಯೂ ವಿವಾದಮುಕ್ತ ಆಗಿರಲಿಲ್ಲ. ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿ ನಡೆಯುತ್ತಿದ್ದರೆ ಹೊರಗೆ ಅಮೇರಿಕದ ಆ್ಯಕ್ಟಿವಿಸ್ಟ್‍ಗಳು, ನಾಗರಿಕ ಹಕ್ಕು ಹೋರಾಟಗಾರರು, ಪ್ರೊಫೆಸರ್‍ಗಳೂ ಸೇರಿದಂತೆ ಅನೇಕಾರು ಮಂದಿ ‘Not Trumps Iftar’  ಎಂಬ ಘೋಷಣೆಯೊಂದಿಗೆ ಪ್ರತಿಭಟಿಸುತ್ತಿದ್ದರು. ಸಿರಿಯಾದ ವಲಸೆಗಾರರನ್ನು ‘ಅಪಾಯಕಾರಿ ಹಾವು’ ಎಂದು ಅವರು ಚುನಾವಣಾ ಪ್ರಚಾರದ ವೇಳೆ ಹೇಳಿರುವುದನ್ನು ಮತ್ತು ಐದು ಮುಸ್ಲಿಮ್ ರಾಷ್ಟ್ರಗಳ ನಾಗರಿಕರಿಗೆ ಅವರು ಪ್ರವೇಶ ನಿಷೇಧಿಸಿರುವುದನ್ನು ಅವರು ಪ್ರಶ್ನಿಸುತ್ತಿದ್ದರು. ಹಾಗಂತ,

ಈ ನಡೆಯನ್ನು ಆರೆಸ್ಸೆಸ್‍ಗೆ ಹೋಲಿಸುತ್ತಿಲ್ಲ. ಟ್ರಂಪ್ ಜನ ಪ್ರತಿನಿಧಿ. ಆರೆಸ್ಸೆಸ್ ಒಂದು ಖಾಸಗಿ ಸಂಘಟನೆ. ಸಮಾನ ರೀತಿಯ ಎರಡು ಘಟನೆಗಳು ಎಂಬುದನ್ನು ಸೂಚಿಸುವುದಕ್ಕಷ್ಟೇ ಈ ಉಲ್ಲೇಖ.

ಸದ್ಯ ಆರೆಸ್ಸೆಸ್ ಮತ್ತೆ ಸುದ್ದಿಯಲ್ಲಿದೆ. ದೆಹಲಿಯಲ್ಲಿ ಅದು ಆಯೋಜಿಸಿರುವ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಪರ-ವಿರೋಧಿಗಳೆಲ್ಲರನ್ನೂ ಅದು ಆಹ್ವಾನಿಸಿದೆ. ರಾಹುಲ್ ಗಾಂಧಿಯಿಂದ ಹಿಡಿದು ಕಮ್ಯುನಿಸ್ಟ್ ಸೀತಾರಾಂ ಯೆಚೂರಿಯ ವರೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಮುಸ್ಲಿಮ್ ಸಮುದಾಯದ ಪ್ರಮುಖರು ಆಹ್ವಾನಿತರಾಗಿದ್ದಾರೆ. ಮತ್ತದೇ ಪ್ರಶ್ನೆ- ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ? Will he dare to or will he not  ಎಂದು ರಾಹುಲ್ ಗಾಂಧಿಯನ್ನು ಪ್ರಚೋದಿಸುವ ರೀತಿಯಲ್ಲಿ ಮಾಧ್ಯಮಗಳು ಶೀರ್ಷಿಕೆ ಬರೆದಿವೆ. ಹಾಗಂತ,

ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿಗೆ ನೆಲವನ್ನು ಹದಗೊಳಿಸಿ ಕೊಡುವುದು ಆರೆಸ್ಸೆಸ್‍ನ ಉದ್ದೇಶ ಎಂಬುದು ಸ್ಪಷ್ಟವೇ ಆಗಿದ್ದರೂ ಅಷ್ಟಕ್ಕೇ ಈ ಆಹ್ವಾನವನ್ನು ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಈ ಆಹ್ವಾನದಲ್ಲಿ ಒಂದು ಜಾಣತನವಿದೆ. ತನ್ನ ಬಗ್ಗೆ ಅನುಕಂಪ ಭಾವವನ್ನು ಸಾಮಾಜಿಕವಾಗಿ ಸೃಷ್ಟಿಸುವುದೂ ಇದರಲ್ಲಿ ಒಂದು. ‘ತನ್ನ ವಿಚಾರಧಾರೆಯನ್ನು ಒಪ್ಪದವರೊಂದಿಗೆ ಮಾತಾಡಲು ಮತ್ತು  ಅವರ ಮಾತುಗಳನ್ನು ಕೇಳಿಸಿಕೊಳ್ಳಲು ತಾನು ಸಿದ್ಧನಿದ್ದೇನೆ, ಆದರೆ ಅವರೇ ಸಿದ್ಧರಿಲ್ಲ, ಸೈದ್ಧಾಂತಿಕವಾಗಿ ಅವರು ಪುಕ್ಕಲರು…’ ಎಂಬ ಸಂದೇಶವನ್ನು ಸಾರುವುದೂ ಈ ಆಹ್ವಾನದಲ್ಲಿ ಸೇರಿದೆ ಎಂದೇ ಅನಿಸುತ್ತದೆ. ಅಷ್ಟಕ್ಕೂ,

ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸುವುದರಿಂದ ಆರೆಸ್ಸೆಸ್‍ಗೆ ಮಾತ್ರ ಲಾಭ, ಭಾಗವಹಿಸಿದವರಿಗೆ ಯಾವ ಪ್ರಯೋಜನವೂ ಇಲ್ಲ ಎಂಬ ನಿಲುವು ಎಷ್ಟು ಸರಿ? ಈ ಬಗೆಯ ವಾದವನ್ನು ಒರೆಗೆ ಹಚ್ಚಿ ನೋಡಲಾಗಿದೆಯೇ? ಅಥವಾ ಬರಿದೇ ಭಯವೇ? ತನ್ನ ವಿಚಾರಧಾರೆಯಲ್ಲಿ ಸ್ಪಷ್ಟತೆ ಹೊಂದಿರುವ ಮತ್ತು ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋದರೂ ಮುಸ್ಲಿಮ್ ಲೀಗ್ ಸಭೆಗೆ ಹೋದರೂ ವಿಚಲಿತನಾಗಲಾರ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಿ, ಅಲ್ಲಿ  ಸೇರಿರುವ 5 ಸಾವಿರ ಮಂದಿಯ ಎದುರು- ಭಾರತದ ಬಹುತ್ವ, ಸಂವಿಧಾನದ ಅಗತ್ಯ, ಜಾತ್ಯತೀತ ತತ್ವದ ಉಳಿವು, ಭಿನ್ನಾಭಿಪ್ರಾಯಕ್ಕೆ ಸಿಗಬೇಕಾದ ಮನ್ನಣೆ, ಆರೆಸ್ಸೆಸ್‍ನೊಂದಿಗೆ ತನಗಿರುವ ಭಿನ್ನಾಭಿಪ್ರಾಯ, ಅದಕ್ಕಿರುವ ಕಾರಣಗಳು, ಸಮರ್ಥನೆಗಳು, ದೇಶದ ಒಳಿತಿನ ದೃಷ್ಟಿಯಿಂದ ಆರೆಸ್ಸೆಸ್ ಕೈ ಬಿಡಬೇಕಾದ ಸಂಗತಿಗಳು… ಇತ್ಯಾದಿ ಇತ್ಯಾದಿಗಳ ಕುರಿತಂತೆ ಪ್ರಬುದ್ಧ ಭಾಷಣವನ್ನು ಮಾಡಿದರೆ ಅದು ಪರಿಣಾಮ ಬೀರದು ಎಂದು ನಾವೇಕೆ ಭಾವಿಸಬೇಕು? ಆರೆಸ್ಸೆಸ್ಸಿನಲ್ಲಿ ಒಂದು ಸಿದ್ಧಾಂತವಿದೆ. ರಾಹುಲ್ ಗಾಂಧಿಯವರಲ್ಲಿ ಅದಕ್ಕೆ ಪ್ರತಿ ಸಿದ್ಧಾಂತವಿದೆ. ಈ ಎರಡೂ ಸಿದ್ಧಾಂತಗಳು ಪರಸ್ಪರ ಮುಖಾಮುಖಿಯಾಗದೇ ತಪ್ಪಿಸಿಕೊಳ್ಳುತ್ತಾ ಎಲ್ಲಿಯ ವರೆಗೆ ಸಾಗಬಹುದು? ಅದರಿಂದ ಯಾರಿಗೆ ಲಾಭ? ಅಂದಹಾಗೆ,

ರಾಜಕೀಯ ಪಕ್ಷವಾಗಿ ಕಾಂಗ್ರೆಸ್‍ಗೂ ಖಾಸಗಿ ಸಂಘಟನೆಯಾದ ಆರೆಸ್ಸೆಸ್‍ಗೂ ನಡುವೆ ವ್ಯತ್ಯಾಸ ಇದೆ ಎಂಬುದು ನಿಜವೇ ಆಗಿದ್ದರೂ ಬಿಜೆಪಿ ಪ್ರತಿನಿಧಿಸುವುದೇ ಆರೆಸ್ಸೆಸ್‍ನ ಸಿದ್ಧಾಂತವನ್ನು ಎಂಬುದನ್ನೂ ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಆರೆಸ್ಸೆಸ್ ಸಭೆಯಲ್ಲಿ ಭಾಷಣ ಮಾಡುವುದೆಂದರೆ, ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡುವುದೆಂದೇ ಅರ್ಥ. ಅಲ್ಲದೇ ಈ ದೇಶದ ಮಂದಿ ಅಂಥ ಭಾಷಣವನ್ನು ಗಮನವಿಟ್ಟು ಆಲಿಸುತ್ತಾರೆ. ಎರಡು ಸಿದ್ಧಾಂತಗಳ ನಡುವಿನ ಮುಖಾಮುಖಿ ಎಂಬ ನೆಲೆಯಲ್ಲಿ ಅಂಥ ಭಾಷಣಕ್ಕೆ ದೇಶದಾದ್ಯಂತ ಕುತೂಹಲವೂ ಇರುತ್ತದೆ. ಆದ್ದರಿಂದ, ಆರೆಸ್ಸೆಸ್‍ನ ಆಹ್ವಾನ ತಂತ್ರಕ್ಕೆ ರಾಹುಲ್ ಗಾಂಧಿಯು ಸ್ವೀಕಾರ ಎಂಬ ಪ್ರತಿತಂತ್ರವನ್ನು ಯಾಕೆ ಬಳಸಿಕೊಳ್ಳಬಾರದು? ಇದೊಂದು ಸವಾಲಿನ ನಡೆ ಎಂಬುದು ನಿಜ. ಆದರೆ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿದರೆ ಅದರಿಂದಾಗಿ ಬಿಜೆಪಿಯ ವರ್ಚಸ್ಸು ಕುಗ್ಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್‍ಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ ಮತ್ತು ಅದು ಪ್ರತಿಪಾದಿಸುವ ಸಿದ್ಧಾಂತವು ಬಿಜೆಪಿಯ ಸಿದ್ಧಾಂತಕ್ಕಿಂತ ಹೆಚ್ಚು ಪ್ರಾಯೋಗಿಕವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದೂ ಇದರಿಂದ ಸಾಧ್ಯವಾಗಬಹುದು. ಅಂದಹಾಗೆ,

ಸಂವಾದ

ಸಂದೇಹ

ಭಿನ್ನಾಭಿಪ್ರಾಯ

ಇವು ಮೂರೂ ಅಪಾಯಕಾರಿಗಳಲ್ಲ. ಮಾತ್ರವಲ್ಲ, ಈ ಮೂರಕ್ಕೆ ಎಲ್ಲಿ ಅವಕಾಶಗಳಿರುವುದಿಲ್ಲವೋ ಅಂತಹ ವಾತಾವರಣ ಖಂಡಿತ ಅಪಾಯಕಾರಿ. ಈ ದೇಶದಲ್ಲಿ ಈ ಮೂರಕ್ಕೂ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ವಾತಾವರಣವನ್ನು ಕೆಡಿಸಲು ಪ್ರಯತ್ನಗಳು ನಡೆಯುತ್ತಿವೆಯಾದರೂ ಅದಕ್ಕೆ ಅದಕ್ಕಿಂತ ತೀವ್ರಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಂವಾದ ಎಂಬುದು ಸಂದೇಹ ಮತ್ತು ಭಿನ್ನಾಭಿಪ್ರಾಯಗಳು ಇದ್ದಾಗಲಷ್ಟೇ ಸಾಧ್ಯ. ಶೂನ್ಯದಲ್ಲಿ ಸಂವಾದ ಹುಟ್ಟುವುದಿಲ್ಲ. ಆರೆಸ್ಸೆಸ್ ಇಂಥದ್ದೊಂದು  ಸಂವಾದಕ್ಕೆ ಸಿದ್ಧ ಎಂದು ಇವತ್ತು ತೋರಿಸಿಕೊಳ್ಳತೊಡಗಿದೆ. ಈ ತೋರಿಕೆಗೆ ತಿರಸ್ಕಾರವನ್ನೇ ಉತ್ತರವಾಗಿ ನೀಡುವಷ್ಟು ದಿನ ಅದರ ತೋರಿಕೆಯು ಬಲ ಪಡೆಯುತ್ತಲೇ ಹೋಗುತ್ತದೆ. ‘ತಾನು ಸದಾ ಮುಕ್ತವಾಗಿದ್ದೇನೆ’ ಎಂದು ಅದು ಪದೇ ಪದೇ ಹೇಳಿಕೊಳ್ಳುವ ಮೂಲಕ ತನ್ನ ವ್ಯಾಪ್ತಿಗೆ ಇನ್ನಷ್ಟು ಮಂದಿಯನ್ನು ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯಾವಾಗ ಅದರ ಸಂವಾದ ಆಹ್ವಾನವನ್ನು ಸ್ವೀಕರಿಸಲಾಗುತ್ತದೋ ಆವಾಗ ಅದು ನಿಜವಾದ ಸವಾಲನ್ನು ಎದುರಿಸ ತೊಡಗುತ್ತದೆ. ಮಾತ್ರವಲ್ಲ, ಇದರಿಂದಾಗಿ ಕೆಲವೊಮ್ಮೆ ತನ್ನ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಷ್ಟು ಮಾರ್ಪಾಟು ಮಾಡಿಕೊಳ್ಳ ಬೇಕಾದ ಒತ್ತಡಕ್ಕೂ ಅದು ಒಳಗಾಗಬಹುದು. ಸಂವಾದ ಎಂಬುದು ಯಾವಾಗಲೂ ಹಾಗೆಯೇ. ಅದು ಎರಡು ಅಲಗಿನ ಕತ್ತಿ. ಸಂವಾದಕ್ಕೆ ಆಹ್ವಾನಿಸಿದವರೇ ಅದರಲ್ಲಿ ಮೇಲುಗೈ ಪಡೆಯ ಬೇಕೆಂದಿಲ್ಲ. ಅತಿಥಿಯೂ ಜನರ ಮನಸ್ಸನ್ನು ಗೆಲ್ಲಬಲ್ಲ.

ಭಿನ್ನಾಭಿಪ್ರಾಯವನ್ನು ದಮನಿಸುವ ಮನಃಸ್ಥಿತಿಯೊಂದು ದೇಶದ ಒಂದು ಯುವ ಗುಂಪಿನಲ್ಲಿ ಬಲಪಡೆಯುತ್ತಿರುವಾಗ ಆ ಗುಂಪಿನ ಬಲವನ್ನು ತಗ್ಗಿಸುವುದಕ್ಕೆ ಯಾವುದರಿಂದ ಸಾಧ್ಯ ಎಂಬ ಬಗ್ಗೆ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಗಂಭೀರ ಚಿಂತನೆಯೊಂದು ನಡೆಯಬೇಕು. ಸಂವಾದ ಸ್ನೇಹಿ ವಾತಾವರಣವು ಸಂವಾದ ದ್ವೇಷಿ ವಾತಾವರಣಕ್ಕಿಂತ ಎಷ್ಟೋ ಉತ್ತಮ. ವೈರಿಯ ಜೊತೆಗೂ ಸಂವಾದ ಸಾಧ್ಯ ಎಂಬ ವಾತಾವರಣದ ನಿರ್ಮಾಣ ಇವತ್ತಿನ ಅಗತ್ಯ. ಅಷ್ಟಕ್ಕೂ, ಬಿಜೆಪಿಯಲ್ಲಿರುವವರೂ ಕಾಂಗ್ರೆಸ್‍ನಲ್ಲಿರುವವರೂ ಎಲ್ಲರೂ ಮನುಷ್ಯರೇ. ಸಂಘಟನೆಗಳಿಗೂ ಇದೇ ಮಾತು ಅನ್ವಯ. ರಾಜಕೀಯ ಅಧಿಕಾರ, ಸಾಮಾಜಿಕ ಮನ್ನಣೆ ಮತ್ತು ತಪ್ಪಾದ ಓದು ಇತ್ಯಾದಿಗಳು ಈ ಮನುಷ್ಯರಲ್ಲಿ ಹಲವರನ್ನು ಕ್ರೂರಿಗಳನ್ನಾಗಿಯೂ ಮನುಷ್ಯ ವಿರೋಧಿಗಳನ್ನಾಗಿಯೂ ಮಾಡಿಬಿಟ್ಟಿದೆ. ಇಂಥವರೊಂದಿಗೆ ಶಾಶ್ವತ ಗೋಡೆ ಕಟ್ಟಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ಗೋಡೆಯನ್ನು ಬೀಳಿಸಬೇಕು ಮತ್ತು ಸಂವಾದವನ್ನು ಸಾಧ್ಯವಾಗಿಸಬೇಕು- ಇದುವೇ ಸರಿಯಾದ ದಾರಿ. ಒಂದೊಮ್ಮೆ ಸಂವಾದವು ವೈರಿಯನ್ನೂ ಮಿತ್ರರನ್ನಾಗಿಸ ಬಹುದು. ಅದಲ್ಲದಿದ್ದರೆ ವೈರಿಯ ದ್ವೇಷದ ಮಟ್ಟವನ್ನು ತಗ್ಗಿಸಬಹುದು ಅಥವಾ ದ್ವೇಷವನ್ನೇ ಕಿತ್ತೊಗೆಯಬಹುದು. ಇವು ಏನಿದ್ದರೂ ಸ್ವಾಗತಾರ್ಹವೇ.ಅಂದಹಾಗೆ,

ಮನುಷ್ಯಪ್ರೇಮಿ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತು ಸದಾ ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಯಾವ ಸಭೆಯಲ್ಲಿ ಮಾತಾಡಿದರೂ ಆ ಮಾತುಗಳು ಸುದ್ದಿ ಮಾಡುತ್ತಲೇ ಇರುತ್ತದೆ, ಬರೇ ಚಿತ್ರಗಳಲ್ಲ.