ಆತ ಕಣ್ಣೀರು ಹರಿಸಿದ, ಅತ್ತೆ ಸಮಾಧಾನಿಸಿದರು..

0
1987

ದಿನದ ಮಿಂಚು- 86

ಏ ಕೆ ಕುಕ್ಕಿಲ

ಆ ಸುಸಜ್ಜಿತ ಆಸ್ಪತ್ರೆಯ ಹೊರಗಡೆ ಆತ ಒಂಟಿಯಾಗಿ ಕುಳಿತುಕೊಂಡಿದ್ದ. ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು. ವೈದ್ಯ ವೃತ್ತಿಯ ಸುದೀರ್ಘ 15 ವರ್ಷಗಳ ಅವಧಿಯಲ್ಲಿ ನಡೆದ ವಿವಿಧ ಪ್ರಕರಣಗಳು ಆತನ ಮುಂದೆ ತೇಲಿ ಬರತೊಡಗಿದುವು. ಎಲ್ಲವೂ ಗರ್ಭಪಾತದ ದೃಶ್ಯಗಳು. ಆಸ್ಪತ್ರೆಯೆ೦ಬ ನಾಲ್ಕು ಗೋಡೆಗಳ ಒಳಗೆ ಆತ ಅನೇಕಾರು ಗರ್ಭಪಾತಗಳನ್ನು ನಡೆಸಿದ್ದ. ಹೊಟ್ಟೆಯಲ್ಲೇ ಶಿಶುಗಳನ್ನು ಕೊಂದು ಬ್ಯಾ೦ಕ್ ಬ್ಯಾಲೆನ್ಸ್ ಹೆಚ್ಚಿಸಿಕೊಂಡಿದ್ದ. ಯಾಕೋ ಆತನೆದುರು ಮಾಂಸದ ಮುದ್ದೆಯಂತಿದ್ದ ಶಿಶುಗಳು ವಿಲವಿಲ ಒದ್ದಾಡುತ್ತಿರುವಂತೆ ಅನಿಸತೊಡಗಿತು. ನಿಧಾನಕ್ಕೆ ಕಣ್ಣು ತುಂಬತೊಡಗಿತು. ಒಂದುವೇಳೆ,
ಮೂರನೇ ಬಾರಿಗೆ ಗರ್ಭಪಾತವಾಗಿ ಒಳಗೆ ಮಲಗಿರುವ ತನ್ನ ಪತ್ನಿಗೆ ನನ್ನ ಈ ವಿಷಯ ಗೊತ್ತಾದರೆ, ಏನಂದಾಳು? ನನ್ನನ್ನು ಬಿಟ್ಟು ಹೋದಾಳೆ? ಮೂರು ವರ್ಷಗಳಲ್ಲಿ ಮಗು ಆಗದೆ ಇರುವುದಕ್ಕೂ ಸತತ ಗರ್ಭಪಾತವಾಗುತ್ತಿರುವುದಕ್ಕೂ ನೀವೇ ಕಾರಣ ಎಂದು ಹೇಳಿಯಾಳೆ? ನನ್ನ ಬಗ್ಗೆ ಅಸಹ್ಯಪಟ್ಟಾಳೆ… ?

ಮಗಾ…

ಅತ್ತೆ ಬೆನ್ನು ಸವರಿದರು. ಆತ ಸಾವರಿಸಿ ಕುಳಿತುಕೊಂಡ. ಪತ್ನಿಯ ಕೋಣೆಯಲ್ಲಿದ್ದ ಅತ್ತೆ ಬಂದದ್ದು, ತನ್ನ ಬಳಿ ನಿಂತದ್ದು ಯಾವುದೂ ಆತನ ಗಮನಕ್ಕೆ ಬಂದೇ ಇರಲಿಲ್ಲ. ಆತ ಬಿಕ್ಕಿ ಬಿಕ್ಕಿ ಅಳತೊಡಗಿದ. ಅತ್ತೆ ಸಮಾಧಾನಿಸಿದರು.

“ಪತ್ನಿ ಚೆನ್ನಾಗಿದ್ದಾಳೆ, ದುಃಖಿಸಬೇಡ” ಎಂದು ಮತ್ತೆ ಮತ್ತೆ ಹೇಳುತ್ತಲೇ ಇದ್ದಳು…